ನಿನ್ನ ಮದುವೆ ಯಾವಾಗ...?



          ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರ ಮದುವೆಗೆ ತೆರಳಿದಾಗ ಒಂದು ಆಶ್ಚರ್ಯ ಕಾದಿತ್ತು. ಇಷ್ಟು ದಿನಾ "ನಿನಗೆ ಮಾರ್ಕ್ ಎಷ್ಟು ?", "ಏನು ಓದುತ್ತಾ ಇರೋದು ?", "ಯಾವ ಕಾಲೇಜು ?", "ಎಲ್ಲಿ ಕೆಲಸ ಮಾಡಿಕೊಂಡಿರೋದು ?", "ಸಂಬಳ ಎಷ್ಟು ?" ಅಂತೆಲ್ಲಾ ಕೇಳುತ್ತಿದ್ದ ಸಂಬಂಧಿಕರ ಪ್ರಶ್ನೆ ಅವತ್ತು ಬೇರೆ ಆಗಿತ್ತು. ಭೇಟಿಯಾದ ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡಪ್ಪ, ದೊಡಮ್ಮ, ಅತ್ತೆ, ಮಾವ ಯಾರು ಸಿಕ್ಕಿದ್ರು "ಮುಂದೆ ನಿಂದೆ ಮದುವೆ", "ನಿನ್ನ ಮದುವೆ ಯಾವಾಗ ?", "ನೀನೆ ನೋಡಿಕೊಂಡಿದ್ಯೋ, ಅಥವಾ ತಂದೆ ತಾಯಿಗೆ ಬಿಟ್ಟಿದ್ಯೋ" ಅನ್ನೋ ಮಾತುಗಳು ಹೆಚ್ಚಾಗಿತ್ತು. ಇಂತಹಾ ಮಾತುಗಳನ್ನು ಕೇಳಿ ಮನಸ್ಸು ಕುಣಿತಾ ಇದ್ರೂ, ತೋರಿಸಿಕೊಳ್ಳಲಿಕ್ಕೆ ಆಗ್ತಾ ಇರಲಿಲ್ಲಾ.

          ಇಂತಹಾ ಪ್ರಶ್ನೆಗಳು ನನಗೆ ಮಾತ್ರ ಅಲ್ಲಾ, ಶಿಕ್ಷಣ ಮುಗಿಸಿ ಒಳ್ಳೆಯ ಕೆಲಸದಲ್ಲಿರುವ, ೨೩ ರಿಂದ ೨೮ ವರ್ಷ ವಯಸ್ಸಿನಲ್ಲಿರುವ ಹುಡುಗ/ಹುಡುಗಿಯರಿಗೆ ಸರ್ವೇ ಸಾಮಾನ್ಯ. ನನ್ನಂತೆ ಈ ವಯೋಮಿತಿಯಲ್ಲಿರುವ ಅನೇಕರಿಗೆ ಕಾಡುತ್ತಿರುವ ಪ್ರಶ್ನೆ ಒಂದೇ "ಮದುವೆ ಆಗಲು ಸರಿಯಾದ ವಯಸ್ಸು ಯಾವುದು ?". ಈ ಸಮಯದಲ್ಲಿ ಶಿಕ್ಷಣ ಮುಗಿಸಿ, ಒಂದು ಕೆಲಸ ಹಿಡಿದು ಒಂದು ಹಂತಕ್ಕೆ ಬಂದ್ವೀ ಅಂತಾ ಹೇಳ್ಬೇಕಾದ್ರೆ "ಮದುವೆ" ಅನ್ನುವ ಪದ ನಮ್ಮ ಜೀವನದಲ್ಲಿ ಹಾಜರಿ ಹಾಕಿರುತ್ತೆ. ಈ ವಿಷಯದಲ್ಲಿ ಹುಡುಗರಕ್ಕಿಂತಾ ಹುಡುಗಿಯರಿಗೆ ಸ್ವಲ್ಪಾ ಕಾಟ ಜಾಸ್ತಿ. ಮನೆಗೆ ಬಂದವರು,ಹೋದವರೆಲ್ಲಾ "ಒಂದೊಳ್ಳೆ ಹುಡುಗ ಇದಾನೇ, ನಿಮ್ಮ ಮಗಳಿಗೆ ಮದುವೆ ಮಾಡ್ತೀರಾ ?", "ನಿಮ್ಮ ಮಗಳಿಗೆ ಎಷ್ಟು ವರ್ಷ ?" ಅಂತಾ ಪದವಿಯ ಕೊನೆಯ ವರ್ಷದಲ್ಲಿರುವಾಗಲೇ ಆರಂಭ ಆಗಿರುತ್ತೇ. "ಆ ಹುಡುಗಿ ಬೇರೆ ಯಾರೋ ಜೊತೆ ಓಡಿ ಹೋದಳಂತೆ", "ಅವನು ಬೇರೆ ಜಾತಿಯವಳನ್ನು ಕಟ್ಟಿಕೊಂಡನಂತೆ" ಅನ್ನೋ ಮಾತುಗಳು ಸಾಮಾನ್ಯವಾಗೇ ತಂದೆ ತಾಯಿಗಳ ತಲೆ ಕೆಡಿಸಿರುತ್ತೆ. ಈ ಕಾಲದ ಹುಡುಗ/ಹುಡುಗಿಯರ ಯೋಚನಾ ಲಹರಿಗಳೇ ವಿಭಿನ್ನವಾಗಿದೆ. ಮದುವೆ ಮುಂಚೆ ಜೀವನದಲ್ಲಿ ಸೆಟಲ್ ಆಗಬೇಕು, ಏನಾದರೂ ಸಾಧಿಸಬೇಕು ಅನ್ನೋ ಯೋಚನೆಗಳು ಅನೇಕ ಯುವಕ/ಯುವತಿಯರಲ್ಲಿ ಮನೆಮಾಡಿದೆ.

          ಹುಡುಗರಿಗೆ ಈ ವಿಷಯದಲ್ಲಿ ಕಾಟ ಸ್ವಲ್ಪ ಕಮ್ಮಿ ಅಂತಾ ಹೇಳಬಹುದಾದ್ರೂ, ತೀರಿಸಬೇಕಾದ ಜವಾಬ್ದಾರಿಗಳು ತುಂಬಾ ಇರುತ್ತವೆ. ಕೆಲವರಿಗೆ ಶಿಕ್ಷಣ ಮುಗಿಸಿದ್ರೂ ಒಳ್ಳೆಯ ಕೆಲಸ ಸಿಕ್ಕಿರುವುದಿಲ್ಲಾ, ಕೆಲವರಿಗೆ ಕೆಲಸ ಸಿಕಿದ್ರೂ ಕಮ್ಮಿ ಸಂಬಳಕ್ಕೆ ದುಡಿಯುತ್ತಿರುತ್ತಾರೆ. ಕೆಲವರಿಗೆ ಮನೆ ಕಟ್ಟಬೇಕಂತ ಇರುತ್ತೆ. ಇನ್ನು ಕೆಲವರಿಗೆ ಅಕ್ಕ/ತಂಗಿ ಮದುವೆ ಮಾಡಬೇಕಂತ ಇರುತ್ತೆ. ಕೆಲವರು ಮೈ ತುಂಬಾ ಸಾಲ ಮಾಡಿಕೊಂಡಿರುತ್ತಾರೆ. " ಈಗಷ್ಟೇ ಕೆಲಸ ಸಿಕ್ಕಿದೆ, ಸ್ವಲ್ಪ ಮಜಾ ಮಾಡೋಣ, ಇಷ್ಟು ಬೇಗ ಸಂಸಾರ ಮಕ್ಕಳು ಎಲ್ಲಾ ಏಕೆ" ಅನ್ನೋರು ಒಂದು ಕಡೆ. ಮದುವೆ ಅನ್ನೋದೆ ಒಂದು ಜವಾಬ್ದಾರಿ, ಈ ಎಲ್ಲಾ ಜವಾಬ್ದಾರಿಗಳನ್ನು ಕಳೆದು ಮದುವೆ ಆಗೋದು ಉತ್ತಮ ಅನ್ನೋದು ನನ್ನ ಅನಿಸಿಕೆ.

          ಇನ್ನು ಮದುವೆ ವಿಷಯಕ್ಕೆ ಬರೋದಾದ್ರೆ, ಕೆಲವರಿಗೆ ಲವ್ ಮ್ಯಾರೇಜ್ ಇಷ್ಟ ಇದ್ರೆ, ಕೆಲವರಿಗೆ ಅರೇಂಜ್ ಮ್ಯಾರೇಜ್ ಇಷ್ಟ ಇರುತ್ತೆ. ಲವ್ ಕಮ್ ಅರೇಂಜ್ ಮ್ಯಾರೇಜ್ ಇತ್ತೀಚೆಗೆ ತುಂಬಾ ಕೇಳಿಬರುತ್ತಿದೆ. ಕೆಲವರು ತಂದೆ ತಾಯಿಗೋಸ್ಕರ ಪ್ರೀತಿ ತ್ಯಾಗ ಮಾಡ್ತಾರೆ, ತಂದೆ ತಾಯಿಯನ್ನು ಎದುರು ಹಾಕ್ಕೊಂಡು ಮದುವೆ ಅಗೋರು ಇದ್ದಾರೆ. ಕೆಲವರು ತಾವು ಪ್ರೀತಿಸಿದವರ ಧರ್ಮ/ಜಾತಿ/ಉಪಜಾತಿ/ಅಂತಸ್ತು ಸಮಸ್ಯೆ ಬಂದು ಬೇರೆಯವರನ್ನು ಮದುವೆ ಆಗಿದ್ದು ಇದೆ. ಕಾಲೇಜು ಜೀವನ ಫುಲ್ ಬೇರೆಯವರ ಜೊತೆ ಪ್ರೀತಿಯ ನಾಟಕವಾಡಿ ಆ ಮೇಲೆ ಇನ್ನೊಬ್ಬರನ್ನು ಕಟ್ಟಿಕೊಂಡೊರು ಇದ್ದಾರೆ. ಇದೆಲ್ಲಾ ಅವರವರ ಯೋಚನಾ ಲಹರಿ, ಅವರ ಮನೆಯೊವರೊಂದಿಗಿನ ಸಂಬಂಧ, ಅವರು ಪ್ರೀತಿಸಿದವರ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಅನ್ನೋದರ ಮೇಲೆ ನಿಂತಿರುತ್ತೆ.

          ಕೆಲವು ಹೆಣ್ಣು ಮಕ್ಕಳು ಮನೆಗೆ ಒಬ್ಬಳೇ ಮಗಳಾಗಿದ್ರೆ, ಅಣ್ಣ-ತಮ್ಮ ಯಾರು ಇಲ್ಲದೇ ಇದ್ರೆ. ಮನೆಯಲ್ಲಿ ಬರೀ ಹೆಣ್ಣು ಮಕ್ಕಳೇ ಇದ್ದರೆ. ಅಂತಹವರಿಗೆ ತಾವು ಮದುವೆ ಆದ ಮೇಲೆ ತಮ್ಮ ತಂದೆ ತಾಯಿಯನ್ನು ಯಾರು ನೋಡಿಕೊಳ್ಳುತ್ತಾರೆ, ಅವರ ಪರಿಸ್ಥಿತಿ ಏನು ಅನ್ನುವ ಯೋಚನೆಗಳು ಇರುತ್ತವೆ. ಮದುವೆ ಆದ ಮೇಲೂ ದುಡಿದು ತಂದೆ ತಾಯಿಯನ್ನು ಸಾಕಬೇಕು ಅನ್ನೋದು ಇರುತ್ತೆ. ಅಂತಹವರು ತಮ್ಮ ಯೋಚನೆಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳುವವರನ್ನು ಮದುವೆ ಆದರೆ ಸುಖವಾಗಿರುತ್ತಾರೆ ಅನ್ನಬಹುದು.

         ಒಟ್ಟಿನಲ್ಲಿ ಹೇಳುವುದಾದ್ರೆ ಹುಡುಗರು ತನ್ನ ಕಾಲಿನ ಮೇಲೆ ನಿಂತಿದ್ದೇನೆ, ಯಾರ ಮೇಲೂ ಅವಲಂಬಿತವಾಗಿಲ್ಲಾ, ಜೀವನದಲ್ಲಿ ಒಂದು ಹಂತಕ್ಕೆ ಬಂದಿದ್ದೀನಿ ಅಂತಾ ಎಣಿಸಿದ ಮೇಲೆ ಮದುವೆ ಆದ್ರೆ ಉತ್ತಮ ಅನ್ನಬಹುದು. ಹಾಗೆಯೇ ಹುಡುಗರು ೩೦ ವರ್ಷದ ಒಳಗೆ ಮದುವೆ ಆಗುವುದು ಒಳ್ಳೆಯದು, ೩೦ ದಾಟಿದರೆ ತಮಗೆ ಹುಟ್ಟುವ ಮಕ್ಕಳು ಮತ್ತು ತಮ್ಮ ನಡುವೆ ತುಂಬಾ ವಯಸ್ಸಿನ ಅಂತರ, ಜನರೇಷನ್ ಗ್ಯಾಪ್  ಆಗಬಹುದು. ಸಂಸಾರ ಸುಖ ಸ್ವಲ್ಪ ಕಳೆದುಕೊಂಡೆ ಅನ್ನೋ ಭಾವನೆ ಬರಬಹುದು. ಹಾಗೆಯೇ ಬ್ರಾಹ್ಮಣ ಹಾಗೂ ಮುಂತಾದ ಮೇಲ್ಜಾತಿಯಲ್ಲಿ ಈಗಾಗಲೇ ಹುಡುಗಿಯರ ಕೊರತೆ ಇರುವುದರಿಂದ ಹುಡುಗಿ ಸಿಗೋದು ಕಷ್ಟ ಆಗಬಹುದು, ಸಿಕಿದ್ರೂ ವಯಸ್ಸಿನ ಅಂತರ ತುಂಬಾ ಇರಬಹುದು. ಹುಡುಗಿಯರಿಗೆ ಜವಾಬ್ದಾರಿಗಳು ಏನು ಇಲ್ಲದೆ ಇದ್ರೆ ೨೬ ವರ್ಷದ ಒಳಗೆ ಮದುವೆ ಆದ್ರೆ ಪ್ರಪಂಚ ತುಂಬಾ ಬಣ್ಣ ಬಣ್ಣವಾಗಿ ಕಾಣುತ್ತೆ. ಆಮೇಲೆ ವಯಸ್ಸು ಜಾಸ್ತಿ ಆಯ್ತು ಅಂತಾ ಹುಡುಗರು ನಿರಾಕರಿಸಬಹುದು. ಇದು ಕೇವಲ ನನ್ನ ಅಭಿಪ್ರಾಯ ಅಷ್ಟೇ, ಅವರವರ ಜೀವನಶೈಲಿ, ಅವಶ್ಯಕತೆಗಳು, ಕಾರಣಗಳಿಗನುಗುಣವಾಗಿ ಇದು ಬೇರೆ ಆಗಿರಲು ಬಹುದು.

          ನಿಮ್ಮ ಪ್ರಕಾರ "ಮದುವೆ ಆಗಲು ಸರಿಯಾದ ವಯಸ್ಸು ಎಷ್ಟು ?" ದಯವಿಟ್ಟು ಕಮೆಂಟ್ ಮಾಡಿ ಕಾರಣಗಳೊಂದಿಗೆ. ನಿಮ್ಮ ಕಾಮೆಂಟಿನ ನಿರೀಕ್ಷೆಯಲ್ಲಿ

-ಗಣೇಶ ಬರ್ವೆ 
ಮಣೂರು

Comments

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ

ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)