ಮದುವೆ ಯಾಕಾಗಬೇಕು...!?
"ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯಃ " ಎನ್ನುವ ಮಾತಿನಂತೆ ನಮ್ಮ ಜೀವನದಲ್ಲಿ ಏನೇ ಒಂದು ಒಳ್ಳೆಯ ಘಟನೆ
ನಡೆಯಬೇಕಿದ್ದರೂ ಋಣ ಬೇಕಂತೆ. ಆದರೆ ಬದಲಾದ ಕಾಲಘಟ್ಟದಲ್ಲಿ ಋಣಕ್ಕಿಂತ ಮಿಗಿಲಾಗಿ ವ್ಯಕ್ತಿಯ ವೈಯಕ್ತಿಕ
ಭಾವನೆಗಳಿಂದ, ಇಷ್ಟ-ಕಷ್ಟಗಳಿಂದ, ಅಭಿಪ್ರಾಯಗಳಿಂದ, ನಿರ್ಧಾರಗಳಿಂದ
ಮೇಲೆ ಹೇಳಿದ ಎಲ್ಲವೂ ಅಲ್ಲದಿದ್ದರೂ ಮದುವೆ ವಿಚಾರ ನಿರ್ಧರಿತವಾಗುವುದು ಕಂಡುಬರುತ್ತದೆ. ಮುಂಚೆ ಒಂದು
ಕಾಲ ಇತ್ತು , ಮದುವೆ ವಯಸ್ಸಿಗೆ ಬಂದಾಗ ಮದುವೆಯ
ಕನಸುಗಳು ಬೀಳುತ್ತಿದ್ದವು, ಸಮಾರಂಭಗಳಲ್ಲಿ ಸಂಬಂಧಿಕರು ಯಾರಾದರೂ
“ನಿನ್ನ ಮದುವೆ ಯಾವಾಗ..?” ಅಂತ ಕೇಳಿದಾಗ ಮುಖ ಕೆಂಪಾಗಿ, ಮನಸ್ಸು ಲಡ್ಡು ತಿಂತಿತ್ತು. ಆದರೆ ಇತ್ತೀಚೆಗೆ ಮನೆಯಲ್ಲಿ ಮದುವೆಯ ಮಾತನಾಡಿದರೆ
ಹುಡುಗ ಹುಡುಗಿಯರ ಮುಖ ಸಣ್ಣಗಾಗುತ್ತದೆ. ಕೆಲವು
ವಿದ್ಯಮಾನಗಳಿಂದ ಪ್ರಭಾವಿತನಾಗಿ, ಸ್ವಮನಸ್ಕ
ವಯೋಮಾನದವರ ಮದುವೆ ಬಗೆಗಿನ ತೀರ್ಮಾನವನ್ನು ಆಲಿಸಿ, ಈ
ಲೇಖನವನ್ನು ಬರೆಯುವ ಮನಸ್ಸು ಆಯಿತು.
ಒಂದು ಎಂಟು
ಒಂಬತ್ತು ವರ್ಷದ ಹಿಂದೆ 2016ರ ಆಸು ಪಾಸು, ನಾನು
ನನ್ನ ವಿದ್ಯಾಭ್ಯಾಸವನ್ನು ಮುಗಿಸಿ ವೃತ್ತಿ
ಜೀವನವನ್ನು ಆರಂಭಿಸಿದ ಕಾಲ. ನಮ್ಮ ಸಂಬಂಧಿಕರೊಬ್ಬರು
ಅವರ ಮಗನ ಮದುವೆ ಆಹ್ವಾನಕ್ಕೆ ಎಂದು
ನಮ್ಮ ಮನೆಗೆ ಬಂದಿದ್ದರು. ಅವರ ಮಗ ವಯಸ್ಸಿನಲ್ಲಿ
ನನಗಿಂತ ನಾಲ್ಕು ವರ್ಷ ದೊಡ್ಡವನಿದ್ದ ಅಷ್ಟೇ.
ನನಗೆ ಇನ್ನು ನಾಲ್ಕು ವರ್ಷದಲ್ಲಿ, ನಾನೂ ಅವನ ಸ್ಥಾನದಲ್ಲಿ ನಿಂತುಕೊಳ್ಳಬೇಕಾ...!? ನನ್ನ
ಕನಸುಗಳನ್ನು ಬದಿಗೊತ್ತಿ, ಜವಾಬ್ದಾರಿಗಳನ್ನು ಪೂರೈಸಿ, ಹೇಗೆ ಆ ಹೊಣೆಯನ್ನು ಹೊತ್ತುಕೊಳ್ಳುವುದು ಎನ್ನುವ ಪ್ರಶ್ನೆ
ಕಾಡಲಾರಂಭಿಸಿತು. ಸಹಜ ಕುತೂಹಲದಿಂದ ಅವರಲ್ಲಿ ಕೇಳಿದೆ
"ಮದುವೆಯನ್ನು ಯಾಕಾಗಬೇಕು..?" ನನ್ನ ಪ್ರಶ್ನೆಯನ್ನು ಇನ್ನೂ ಸರಳೀ ಕರಿಸಿ "ಮದುವೆಯನ್ನು
ಜೀವನದ ನಿರ್ದಿಷ್ಟ ಕಾಲಘಟ್ಟದಲ್ಲಿ ಯಾಕಾಗಬೇಕು..? ಮದುವೆಗೆ
ವಯೋಮಿತಿಯ ಮಾನದಂಡ ಯಾಕಾಗಿ ಇದೆ" ಎಂದು ಕೇಳಿದೆ.
ಅದಕ್ಕೆ ಅವರು ಉತ್ತರಿಸಿ "ತಂದೆ ತಾಯಿ ದೃಷ್ಟಿಯಿಂದ ಮಕ್ಕಳಿಗೆ ಮದುವೆ ಯಾಕೆ ಮಾಡಬೇಕು ಅಂತ
ಹೇಳಿದರೆ ಮಕ್ಕಳು ಜೀವನದ ಹಾದಿಯಲ್ಲಿ ದಾರಿ ತಪ್ಪ
ಬಾರದು ಎನ್ನುವ ಒಂದೇ ಕಾರಣಕ್ಕೆ" ಅವರು ನೀಡಿದ ಉತ್ತರ ನನಗೆ ಮದುವೆಯಾಗಿ ಎರಡುವರೆ
ವರ್ಷಗಳ ಸಂಸಾರ ಜೀವನವನ್ನು ಅನುಭವಿಸಿದ ಮೇಲೆ ಸರಿಯೆನಿಸುತ್ತಿದೆ. ಈ ದಾರಿ ತಪ್ಪಬಾರದು ಎನ್ನುವ
ಪದ ಅನೇಕ ಒಳಅರ್ಥಗಳಿಂದ ಮದುವೆ ಯಾಕಾಗಬೇಕು ಎನ್ನುವ ಪ್ರಶ್ನೆಗೆ ಉತ್ತರ ನೀಡುತ್ತದೆ.
ನಮ್ಮ ಅಜ್ಜಿ
ಅಜ್ಜನ ಕಾಲದಲ್ಲಿ "ಮದುವೆ ಎಂದರೆ ಏನು..?" ಎಂದು
ತಿಳಿಯದ ವಯಸ್ಸಿನಲ್ಲಿ ಮದುವೆಯ ಬಂಧನಕ್ಕೆ ಒಳಗಾಗಬೇಕಿತ್ತು. ಇಂತಹ ಒಂದು ಅವೈಜ್ಞಾನಿಕ
ಪದ್ಧತಿಯಿಂದ ಹೊರಗೆ ಬಂದು ಮದುವೆಗೆ ಒಂದು ವಯಸ್ಸಿನ ಮಾನದಂಡವನ್ನು ಸರ್ಕಾರಗಳು ನಿಗದಿಪಡಿಸಿದ ಕಾಲಘಟ್ಟದಲ್ಲಿ, ಸಾಮಾನ್ಯವಾಗಿ ಹುಡುಗನಾದರೆ ವಿದ್ಯಾಭ್ಯಾಸ ಪೂರೈಸಿ ಉದ್ಯೋಗ ಹಿಡಿದು ತನ್ನ ಕಾಲ ಮೇಲೆ ನಿಂತ ಮೇಲೆ ಮದುವೆ ಮಾಡಬಹುದು, ಹುಡುಗಿ
ಆದರೆ ವಿದ್ಯಾಭ್ಯಾಸ ಪೂರೈಸಿದ ಮೇಲೆ ಮದುವೆ
ಮಾಡಬಹುದು ಎನ್ನುವ ವಿಚಾರಕ್ಕೆ ಸಾಮಾನ್ಯ ವರ್ಗ
ಬಂತು. ಆದರೆ ಕೆಲ ಸಂದರ್ಭಗಳಲ್ಲಿ ಮನೆಯಲ್ಲಿ ಅನೇಕ ಮಕ್ಕಳಿದ್ದ ಕಾರಣಕ್ಕೆ, ಅಕ್ಕತಂಗಿಯರ ಮದುವೆ ಆಗಲಿ ಎಂದು, ಕೆಲವು
ಸಾಲಗಳಿದ್ದರೆ ತೀರಲೆಂದು, ಆರ್ಥಿಕ ಪರಿಸ್ಥಿತಿಗಳಿಂದ, ಅಥವಾ ಜಾತಕ ಹೊಂದಾಣಿಕೆಗಳಾಗದೆ ಮದುವೆ
ತಡವಾಗುತ್ತಿತ್ತು. ಇವೆಲ್ಲವೂ 20-30 ವರ್ಷಗಳ
ಹಿಂದಿನ ವಿಚಾರವಾದರೂ ಯಾವುದು ಸಹ ಅಪೇಕ್ಷಿತ
ನಿರ್ಧಾರಗಳಾಗಿರಲಿಲ್ಲ. ಪರಿಸ್ಥಿತಿಗಳಿಗೆ ಗಂಟು
ಬಿದ್ದು, ಕಾಲ ನಿರ್ಣಯದಿಂದ
ನಡೆದವುಗಳಾಗಿರುತ್ತಿದ್ದವು.
ಆದರೆ ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲಿ ಮದುವೆ ಬಗೆಗಿನ ಆಸಕ್ತಿ
ಕುಂದಿರುವುದು ಶೋಚನೀಯ. ಬ್ರಿಟಿಷರ ದಬ್ಬಾಳಿಕೆಯಿಂದ ಭಾರತ ಸ್ವಾತಂತ್ರ್ಯವಾದ ಸಮಯದಲ್ಲಿ, ಜನರ ಆರ್ಥಿಕ ಪರಿಸ್ಥಿತಿ ಅಷ್ಟೇನು ಚೆನ್ನಾಗಿರಲಿಲ್ಲ, ಸಂಸಾರದಲ್ಲಿ
ಅನೇಕ ಸಮಸ್ಯೆಗಳಿರುತ್ತಿತ್ತು. ಮನೆಯಲ್ಲಿ ಅನೇಕ
ಮಕ್ಕಳಿದ್ದ ಕಾರಣ ಅವರ ಮದುವೆಯೇ ತಂದೆ
ತಾಯಿಗಳಿಗೆ ತಲೆ ನೋವಾಗಿತ್ತು. ಆದರೆ ಇಂತಹ ಪರಿಸ್ಥಿತಿ ಇವಾಗಿಲ್ಲ. ನಾವಿಬ್ಬರೂ ನಮಗಿಬ್ಬರು ಎನ್ನುವಲ್ಲಿನಿಂದ ಮನೆಗೊಂದು
ಮಗು ಎನ್ನುವಲ್ಲಿಗೆ ಬಂದಿದ್ದೇವೆ. ಹಾಗಾದರೆ
ಮದುವೆ ಮೇಲೆ ಆಸಕ್ತಿ ಕುಂದಲು ಹೆಚ್ಚಿದ ಜವಾಬ್ದಾರಿಗಳು ಕಾರಣವಾಗುತ್ತಿವೆಯೇ ಅಂತ ಕೇಳಿದರೆ ಹಾಗೇನು
ಇಲ್ಲ, ಒಬ್ಬ ಹುಡುಗ ಅಥವಾ
ಹುಡುಗಿ ವಿದ್ಯಾಭ್ಯಾಸವನ್ನು ಮುಗಿಸಿ ವೃತ್ತಿಯ
ಬದುಕನ್ನು ಆರಂಭಿಸಿದಾಗ, ಮನೆಯ
ಜವಾಬ್ದಾರಿಗಳನ್ನು ಹೊರಬೇಕಾದ ಸನ್ನಿವೇಶಗಳು ತೀರಾ ಕಡಿಮೆ. ಮನೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ
ಇರುವುದರಿಂದ, ಅಕ್ಕತಂಗಿಯರ ಮದುವೆಯ ಸಾಲ
ತೀರಿಸಬೇಕು ಎನ್ನುವ ಸನ್ನಿವೇಶವು ಎದುರಾಗುವುದಿಲ್ಲ.
ಎಂತಹ ಜವಾಬ್ದಾರಿಗಳಿದ್ದರೂ 30 ವರ್ಷದ ಆಸುಪಾಸಿನಲ್ಲಿ ತೀರಿ ಹೋಗುತ್ತವೆ.
ಹಾಗಾದರೆ ಯುವಕ ಯುವತಿಯಲ್ಲಿ ಬೇಗ ಮದುವೆ ಆಗದೆ ಇರಲು ಅಥವಾ ಮದುವೆ ಬಗೆಗಿನ ಒಲವನ್ನು ಕಡಿಮೆ
ಮಾಡಿಕೊಳ್ಳಲು ಕಾರಣ ಏನೆಂದು ನೋಡುತ್ತಾ ಹೋದರೆ
ಸಾಮಾನ್ಯವಾಗಿ ಕಂಡುಬರುವ ಕಾರಣಗಳಲ್ಲಿ ಮೊದಲನೆಯದಾಗಿ ಮೇಲೆ ಹೇಳಿದಂತೆ ಬೆನ್ನ ಮೇಲೆರಿದ
ಜವಾಬ್ದಾರಿಗಳಿಂದ ಮುಕ್ತವಾಗಿ, ತನ್ನ ಕಾಲ ಮೇಲೆ ನಿಂತು ಆಮೇಲೆ ಆಗೋಣ ಅಂತ. ಎರಡನೇ ಸಾಮಾನ್ಯ ಕಾರಣ ಎಂದರೆ ಜಾತಕ
ಹೊಂದಾಣಿಕೆ ಆಗದೆ ಇರುವಂತಹದ್ದು ಅಥವಾ ಜಾತಕದ
ದೋಷಗಳು, ತಮ್ಮ ಅಂತಸ್ತು ಅಥವಾ ತಮ್ಮ ಸ್ಥಿತಿಗತಿಗಳಿಗೆ, ಬೇಡಿಕೆಗಳಿಗೆ ಅನುಗುಣವಾದ ವರ ಅಥವಾ ವಧು ಸಿಗದೇ ಇರುವಂತಹದ್ದು. ಮೂರನೇ ಸಾಮಾನ್ಯ ಕಾರಣದಿಂದ ಮದುವೆ ತಡವಾಗುತ್ತಿಲ್ಲ
ಆದರೆ ಅದರ ಬಗೆಗಿನ ಆಸಕ್ತಿ ಕುಂದುತ್ತಿದೆ.
ಅದೇನೆಂದರೆ ತನ್ನ ಮೇಲೆ ತನಗಿರುವ ಅಪಾರ ಪ್ರೀತಿ,
ತಾನು ಅನುಭವಿಸುತ್ತಿರುವ ಈ
ಜೀವನ, ನನಗೆ ಈಗ
ಇರುವ ಸ್ವಾತಂತ್ರ್ಯ, ಮದುವೆ ಆದ ಮೇಲೆ ಸಿಗುತ್ತದೋ, ಇಲ್ಲವೋ, ಮದುವೆ ಆದ
ಮೇಲೆ ಇನ್ನೊಬ್ಬರ ಅಡಿಯಾಳಾಗಿ ಬದುಕಬೇಕಾಗಬಹುದೇನೋ ?, ಮದುವೆ ಆದ
ಮೇಲೆ ಇವಾಗಿನ ತರಹ ಗೆಳೆಯರ ಜೊತೆ ಹೊರಗೆ ಹೋಗುವುದು, ವಾರಾಂತ್ಯದಲ್ಲಿ ಪಾರ್ಟಿ ಮಾಡಲು ಆಗುತ್ತದೋ, ಇಲ್ಲವೋ..? ಅತ್ತೆ ಮಾವನ ಕಿರುಕುಳ ಅನುಭವಿಸಬೇಕಾಗುತ್ತದೋ..? ಏನೋ..? , ಮದುವೆಯಾಗಿ
ಮಕ್ಕಳನ್ನು ಹೆತ್ತು, ಎಲ್ಲಿ ಸೌಂದರ್ಯ
ಹಾಳಾಗುತ್ತದೋ ಏನೋ...? ನನ್ನ ಜೀವನ ಸಂಸಾರಕ್ಕಾಗಿ
ಮುಡಿಪಾಗಿಡಬೇಕೋ ಏನೋ..?, ನನ್ನ ವೃತ್ತಿ ಜೀವನದ
ಪಾಡೇನು..? , ಹಣಕ್ಕಾಗಿ
ಇತರರ ಬಳಿ ಕೈ ಚಾಚಬೇಕೋ ಏನೋ ...? ಎನ್ನುವ ಹತ್ತಾರು ಪ್ರಶ್ನೆಗಳಿಂದ, ಇತರರ ಜೀವನವನ್ನು ನೋಡಿ, ವಿಚ್ಛೇದನ ಕಥೆಗಳನ್ನು ಕೇಳಿ ಮದುವೆಗೆ ಹಿಂದೇಟು ಹಾಕುತ್ತಿದ್ದಾರೆ. ನಾಲ್ಕನೇ ಕಾರಣ ಎಂದರೆ ಯಾರನ್ನಾದರೂ ಪ್ರೀತಿಸಿ, ಮನೆಯಲ್ಲಿ ಒಪ್ಪದೇ ಎರಡು ಮನೆಯಲ್ಲಿ ಒಪ್ಪಿಸಿ ಆಮೇಲೆ ಆಗೋಣ
ಎಂದು ಅಥವಾ ಪ್ರೀತಿಸಿದ ವ್ಯಕ್ತಿ ದೂರವಾಗಿ ಅವರ
ನೆನಪಲ್ಲೇ ಜೀವನ ಸಾಗಿಸೋಣ ಎಂದು ಅಥವಾ
ಪ್ರೀತಿಸಿದ ವ್ಯಕ್ತಿಯಿಂದ ಮೋಸವಾಗಿ, ಸಂಬಂಧಗಳಲ್ಲೇ
ಆಸಕ್ತಿ ಕಳೆದುಕೊಂಡು ಮದುವೆಯ ತೀರ್ಮಾನದಿಂದ
ದೂರ ಸರಿಯುತ್ತಾರೆ. ಐದನೇ ಸಾಮಾನ್ಯ ಕಾರಣ ಬೇರೆ
ದೇಶಗಳಿಂದ ನಮ್ಮ ದೇಶಕ್ಕೆ ಎರವಲು ಮಾಡಿಕೊಂಡದ್ದು ಎಂದರೆ ತಪ್ಪಾಗಲಾರದು, ವಿರುದ್ಧ
ಲಿಂಗದವರ ಮೇಲೆ ಆಸಕ್ತಿ ಇಲ್ಲದ ಸಲಿಂಗ ಪ್ರೇಮ ಕೂಡ, ಮನೆಯವರಲ್ಲಿ ಹೇಳಲಾಗದೆ ಮದುವೆಯ ವಿಷಯವನ್ನು ಮುಂದೂಡಲು
ಕಾರಣವಾಗುತ್ತದೆ. ಹೀಗೆ ಮದುವೆಯನ್ನು ಮುಂದೂಡಲು, ಮದುವೆಯ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳಲು ನಾನಾ
ಕಾರಣಗಳನ್ನು ಹೆಸರಿಸಬಹುದು.
ಮೇಲೆ ಹೇಳಿದ ಕಾರಣಗಳಲ್ಲಿ ಮೂರನೇ ಕಾರಣ ಸ್ವಲ್ಪ ವಿಸ್ತೃತವಾಗಿ
ನೋಡುತ್ತಾ ಹೋದರೆ.ನಮ್ಮ ಮುಂದಿನ ಪೀಳಿಗೆ ಹಾದಿ ತಪ್ಪುತ್ತಿದೆಯಾ ಎನ್ನುವ ಸಂಶಯ ಬರದೇ ಇರಲಾರದು. ಏಕೆಂದರೆ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ನಮ್ಮ ಜೀವನ ಶೈಲಿಯಲ್ಲಿ
ಆದ ಬದಲಾವಣೆ ಈ ಅಪಭ್ರಂಶಗಳಿಗೆ ಕಾರಣ. ಮದುವೆಯ
ಬಂಧನ ನನಗೆ ಬೇಡ ಆದರೆ ಅದಕ್ಕೆ ತಳುಕು
ಹಾಕಿಕೊಂಡಿರುವ ಸುಂದರ ಜೀವನ ನನಗೆ ಬೇಕು . ಈ ತರಹದ ಯೋಚನೆಗಳಿಂದ
ಹುಟ್ಟಿಕೊಂಡಿದ್ದೇ "ಲಿವ್ ಇನ್
ರಿಲೇಷನ್ಶಿಪ್". ಗಂಡ ಹೆಂಡತಿಯಾಗಿ ಕಳೆಯುವ
ಮಧುರ ಕ್ಷಣಗಳು ನಮಗೆ ಇಷ್ಟ, ಆದರೆ ಅದನ್ನು ಮದುವೆ ಎಂಬ
ಚಪ್ಪರದಡಿ ಕಳೆಯಲು ನಮಗೆ ಇಷ್ಟವಿಲ್ಲ.
ಇನ್ನು ಕೆಲವರ ಅಭಿಪ್ರಾಯ ನೋಡಿದರೆ
ಒಂಟಿಯಾಗಿ ನಾನು ಬದುಕಬಲ್ಲೆನಲ್ಲ, ಮದುವೆ ಆದರೆ ನಾನು ಪೂರ್ಣ ಅಂತ ಅಲ್ಲಾ, ನನ್ನ
ಸಂಪಾದನೆ ನಾನು ಮಾಡಿಕೊಳ್ಳುತ್ತೇನೆ, ನನ್ನ ಕೆಲಸ
ನಾನು ಮಾಡಿಕೊಳ್ಳುತ್ತೇನೆ, ನಾನು ಯಾರ ಮೇಲೂ ಅವಲಂಬಿತನಾಗಿಲ್ಲಾ/ಅವಲಂಬಿತಳಾಗಿಲ್ಲಾ, ನನಗೆ ಬೇಕಾದ ಎಲ್ಲಾ ಸಂತೋಷ ನನ್ನ ಬಳಿ ಇದೆ. ಹಾಗಂದ ಮೇಲೆ
ಜೀವನದ ಪಥದಲ್ಲಿ ಇನ್ನೊಬ್ಬರ ಕೈ ನನಗೇಕೆ ಬೇಕು..? ಕಷ್ಟ ಎಂದಾಗ ಬಂಧುಗಳಿದ್ದಾರೆ, ಗೆಳೆಯರಿದ್ದಾರೆ
ಎನ್ನುವ ಭಾವನೆಗಳಿಂದ ಕಾಲ ಕಳೆಯುತ್ತಾರೆ. ಲಿವ್ ಇನ್ ರಿಲೇಷನ್ಶಿಪ್ ವಿಷಯಕ್ಕೆ
ಬಂದರೆ ಜೀವನ ಸುಂದರವಾಗಿರುತ್ತದೆ ಹೌದು, ಅತ್ತೆ - ಮಾವನ ಕಾಟವಿಲ್ಲ, ನಾದಿನಿ ಅತ್ತಿಗೆಯರ
ಜಗಳವಿಲ್ಲ, ಯಾವಾಗ ಮಗು ಕೊಡುತ್ತೀಯಾ..? ಎನ್ನುವ ತಂದೆ ತಾಯಿಯ ಒತ್ತಡವಿಲ್ಲ. ಆದರೆ ಯಾವುದೇ
ವಿಷಯದಲ್ಲಿ ಬದ್ಧತೆ ಇಲ್ಲದಿದ್ದರೆ
ಅದೊಂದು ಹುಟ್ಟಿಲ್ಲದ ದೋಣಿಯ ಪಯಣವಾಗುತ್ತದೆ. ನಾಳೆ
ಸಂಗಾತಿಯಿಂದ ಮೋಸವಾಗಿ, ದೂರವಾದಾಗ ಭುಜ ಕೊಟ್ಟು ಅಳಲು ಯಾರೂ ಇರುವುದಿಲ್ಲಾ. ಇನ್ನು ನಾನು
ಒಬ್ಬಂಟ್ಟಿಯಾಗಿ ಎಲ್ಲವನ್ನ ಮಾಡಲು ಶಕ್ತನಾಗಿದ್ದೇನೆ/ಶಕ್ತಳಾಗಿದ್ದೇನೆ ಅಂತ ತಿಳಿದರೆ, ಯಾವತ್ತೂ
ಒಂಟಿ ಆಗಿ ನಡೆಯುವುದಕ್ಕಿಂತ, ಜಂಟಿಯಾಗಿ ಮಾತಾಡಿಕೊಂಡು ನಡೆದರೆ ದಾರಿ ಸಾಗುವುದು
ತಿಳಿಯುವುದಿಲ್ಲ. ಹಾಗೆಯೇ ಎಲ್ಲವನ್ನು ಎಲ್ಲರ ಬಳಿ ಹೇಳಲಾಗುವುದಿಲ್ಲ. ನಾವು ಹಂಚಿಕೊಳ್ಳುವುದನ್ನು ಕೇಳುವ ಸಹನೆ ಕೂಡ ಕೆಲವು
ಸಾರಿ ಬಂಧುಗಳಲ್ಲಿ, ಗೆಳೆಯರಲ್ಲಿ ಇರುವುದಿಲ್ಲ. ಒಬ್ಬಂಟಿಗಳಾಗಿ ಇದ್ದು ಎಲ್ಲವನ್ನು
ಮಾಡಬಹುದು, ಆದರೆ ಕೆಲವು ಸಾರಿ ಜೀವನ ಕೂಡ
ಬೇಜಾರಾಗುತ್ತೆ. ಹೆಂಡತಿ - ಮಕ್ಕಳು, ಜವಾಬ್ದಾರಿಗಳು ಕೆಲವು ಸಾರಿ ಈ ಬೇಜಾರಿಗೆ ಸಮಯ ಕೊಡಲ್ಲ. ಮದುವೆ ಆಗಬೇಕಾದ ವಯಸ್ಸಿನಲ್ಲಿ ಒಂಟಿ ಜೀವನ ಚೆನ್ನಾಗಿದೆ ಎಂದು ಎಣಿಸಿದರು, ವರ್ಷ ಉರುಳುತ್ತಿದ್ದ ಹಾಗೆ, ವಯಸ್ಸಾದ ಹಾಗೆ, ಸುತ್ತಲಿನ ಜನ ಬದಲಾದ ಹಾಗೆ, ಸಂಗಾತಿ ಇರಬೇಕಿತ್ತು
ಎಂದೆನಿಸಿದಾಗ ಕಾಲ ಮಿಂಚಿರುತ್ತದೆ. ಕೆಲವು ಸಾರಿ
ವಯಸ್ಸು ಜಾಸ್ತಿ ಆಗಿ ಸೂಕ್ತ ವಧು/ ವರ ಸಿಗದಾಗ, ಇರುವುದರಲ್ಲೇ
ಸೂಕ್ತವಾದವರನ್ನು ಆಯ್ದು ಕೊಳ್ಳುವ ಸಂಧರ್ಭ ಎದುರಾಗುತ್ತದೆ. ತಡವಾಗಿ ಮದುವೆ ಆದಾಗ ತಮಗೆ ಹುಟ್ಟುವ
ಮಕ್ಕಳು ಮತ್ತು ತಮ್ಮ ನಡುವೆ ತುಂಬಾ ವಯಸ್ಸಿನ ಅಂತರ, ಜನರೇಷನ್
ಗ್ಯಾಪ್ ಆಗಬಹುದು.
ಸಂಸಾರ ಸುಖ ಸ್ವಲ್ಪ ಕಳೆದುಕೊಂಡೆ ಅನ್ನೋ ಭಾವನೆ ಬರಬಹುದು. ಸಮಯ ಮೀರಿ “ಮದುವೆ
ಆಗಬೇಕು” ಅಂತಾ ಮದುವೆ ಆದರೆ, ಮುಂದೆ “ಜೀವನ ನಡೆಸಬೇಕು” ಅಂತ ನಡೆಸಿದ ಹಾಗಾಗುತ್ತದೆ. ಮದುವೆಯೊಂದಿಗೆ
ತಳುಕು ಹಾಕಿಕೊಂಡಿರುವ ಜವಾಬ್ದಾರಿಗಳಿಗೆ, ಕೆಲವೊಂದು ಕಷ್ಟಗಳಿಗೆ,
ಪ್ರಸಕ್ತ ಸುಖ - ಭೋಗಗಳಿಗೆ, ಮದುವೆಯಿಂದ ದೂರವಾದರೆ ಅದಕ್ಕಿಂತ ದೊಡ್ಡ ಮೂರ್ಖತನ
ಬೇರೊಂದಿಲ್ಲ. ಯಾಕೆಂದರೆ ಜೀವನ ಯಾವತ್ತೂ ಸದಾ ಸುಖದ ಸೋಪಾನವಲ್ಲ, ಇದು ಏಳು ಬೀಳುಗಳ ಪಯಣ,
ಸುಂದರ ಗುಲಾಬಿಯೊಂದಿಗಿನ
ಮುಳ್ಳು ಬೇಡವೆಂದರೆ ಹೇಗೆ..!?
ಹಾಗಾದರೆ ಜೀವನದಲ್ಲಿ
ಮದುವೆಯ ಬಂಧನಕ್ಕೆ ಒಳಗಾಗುವುದರಿಂದ, ಅದರಲ್ಲೂ ಜೀವನದ ಪ್ರಾರಂಭದ ಹಂತದ ವಯಸ್ಸಿನಲ್ಲಿ ಮದುವೆ
ಆಗುವುದರಿಂದ ಆಗುವ ಪ್ರಯೋಜನಗಳನ್ನು ನೋಡುವುದಾದರೆ, ಎಲ್ಲರಿಗೂ
ಇದು ಕಷ್ಟ ಸಾಧ್ಯ, ಆದರೆ ಆದಷ್ಟು ಬೇಗ ತನ್ನ ಕಾಲ
ಮೇಲೆ ನಿಂತ ಮೇಲೆ, ಮದುವೆಯನ್ನು ಮುಂದೂಡದೆ ಅದರ
ಬಂಧನಕ್ಕೆ ಒಳಗಾಗುವುದರಿಂದ ತುಂಬಾ
ಪ್ರಯೋಜನಗಳಿವೆ. ಆಗಲೇ ಹೇಳಿದಂತೆ ನಾವು ಶಿಕ್ಷಣವನ್ನು
ಪಡೆಯುವ ಜೀವನದ ಹಂತದಲ್ಲಿ ಇದ್ದಾಗ, ನಮ್ಮಲ್ಲಿ ಹಣ ಬಲ ಇರುವುದಿಲ್ಲ. ತಂದೆ ತಾಯಿಯ ನಿಯಂತ್ರಣದಲ್ಲಿ
ಇರುತ್ತೇವೆ. ನಮ್ಮ ಗುರಿಯನ್ನು ಸಾಧಿಸುವುದಷ್ಟೇ
ನಮ್ಮ ಧ್ಯೇಯವಾಗಿರುತ್ತದೆ. ಆದರೆ ಒಂದು ಸಾರಿ ಶಿಕ್ಷಣ ಮುಗಿಸಿ, ಕೆಲಸಕ್ಕೆ ಮನೆಯವರಿಂದ ದೂರವಾಗಿ, ಬೇರೆ ಸ್ಥಳಗಳಲ್ಲಿ ನೆಲೆಸಲು ಆರಂಭಿಸಿದಾಗ. ಹೊಸ ಜಾಗ,ಹೊಸ ಜನ, ತಿಂಗಳು - ತಿಂಗಳು ಕೈ ಸೇರುವ ಹಣ, ಹೊಸ ಅಭ್ಯಾಸಗಳನ್ನು ಪರಿಚಯ ಮಾಡಿಸುತ್ತೆ. ನಾವು ಆಗಷ್ಟೇ
ಗೂಡಿನಿಂದ, ರೆಕ್ಕೆ ಬಲಿತು, ಹಾರಲು ಬಂದ ಪಕ್ಷಿಯಂತೆ
ಜಗತ್ತನ್ನು ನೋಡಲು ಆರಂಭಿಸಿರುತ್ತೇವೆ.
ಯಾವುದು ಸರಿ..?, ಯಾವುದು ತಪ್ಪು..?, ಜಗತ್ತಿನಲ್ಲಿ ಯಾವ ರೀತಿಯ ಜನರಿರುತ್ತಾರೆ, ಯಾವ ತರಹದ
ಅನ್ಯಾಯಗಳು ನಡೆಯುತ್ತವೆ ಎಂದು ಅರ್ಥ
ಮಾಡಿಕೊಳ್ಳುವುದರ ಒಳಗೆ ನಾವು ಯಾವುದಾದರೂ ಚಟದ ದಾಸರಾಗಿರುತ್ತೇವೆ ಅಥವಾ ಬೇರೊಬ್ಬರಿಂದ ಮೋಸ
ಹೋಗಿ ದಾರಿ ತಪ್ಪಿರುತ್ತೇವೆ. ಅನೇಕರ ಪರಿಚಯವಾಗುತ್ತದೆ, ಅದರಲ್ಲಿ ಯಾರಾದರೊಬ್ಬರು ಇಷ್ಟವಾಗುತ್ತಾರೆ, ಅವರೊಂದಿಗೆ
ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತೇವೆ, ಅವರು
ಪ್ರಾಮಾಣಿಕರಾ..? ಅಲ್ಲವಾ..? ಅನ್ನುವ ನಿರ್ಧಾರ ಮಾಡುವ ವಯಸ್ಸು ಅದಾಗಿರುವುದಿಲ್ಲ. ಅವರಿಂದ ಮೋಸವಾದಾಗ ಜೀವನದಲ್ಲಿ ಹೇಳಿಕೊಳ್ಳಲು ಯಾರೂ
ಇಲ್ಲದೇ, ಎಣ್ಣೆ- ಸಿಗರೇಟ್, ಗಾಂಜಾ
ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆ.
ಮನಸ್ಸಿನ ಹಾಗೂ ದೇಹದ ಆರೋಗ್ಯಕ್ಕೆ ಹಾನಿ, ದುಡಿದ ಹಣವೂ
ವ್ಯರ್ಥವಾಗುತ್ತದೆ. ಅದರ ಬದಲು ವೃತ್ತಿ
ಜೀವನದಲ್ಲಿ ನಾನು ಸ್ಥಿರವಾಗಿದ್ದೇನೆ, ನನ್ನ
ಸಂಪಾದನೆಯಿಂದ ನನ್ನ ಸಂಸಾರವನ್ನು ಸಂಭಾಳಿಸಬಲ್ಲೆ
ಎನ್ನುವ ಸಮಯದಲ್ಲಿ, ಸರಿಯಾದ ಸಂಗಾತಿ ಸಿಕ್ಕಿದರೆ ಮದುವೆ ಆಗುವುದು ಉತ್ತಮ, ಏಕೆಂದರೆ
ಜೀವಮಾನಕ್ಕೆ ಆಗುವ ಪ್ರೀತಿ ಯಾವಾಗಲೂ ನಿಮ್ಮ ಮನೆಯಲ್ಲಿ ಸಿಗುತ್ತದೆ. ಸೋತಾಗ ಭುಜ
ಕೊಡುವ ಸಹಪಾಠಿಗೆ, ಧೈರ್ಯ
ತುಂಬುವ ಮಾತುಗಳಿಗೆ ಕಡಿಮೆ ಇರುವುದಿಲ್ಲಾ.
ಜೀವನದಲ್ಲಿ ಎಲ್ಲಾ ಇದೆ ಆದರೆ ತುಂಬಾ ಒಂಟಿ ಅನ್ನಿಸುತ್ತೆ ಅಂತ ತಪ್ಪು ಸಂಬಂಧಗಳು, ಕೆಟ್ಟ ಸಹವಾಸಗಳು, ಕೆಟ್ಟ
ಯೋಚನೆಗಳು, ಕೆಟ್ಟ ಚಟಗಳು, ಹುಟ್ಟುವುದು ತಪ್ಪುತ್ತದೆ. ಜೀವನದಲ್ಲಿ ಅದರಲ್ಲೂ, ವೃತ್ತಿ
ಜೀವನದಲ್ಲಿ ನಮ್ಮ ಗುರಿಯೆಡೆಗೆ ತೀವ್ರವಾದ ಗಮನವನ್ನು ನೆಡಲು ಸಹಕಾರಿಯಾಗುತ್ತದೆ. ಮದುವೆ ಪ್ರೀತಿಯದ್ದಾಗಲಿ, ಮನೆಯವರು ನೋಡಿದ್ದಾಗಲಿ, ಅರ್ಥ ಮಾಡಿಕೊಂಡು ಹೋಗುವ ಸಂಗಾತಿ ಇದ್ದಾಗ ಜೀವನ ಸುಂದರವಾಗುವುದರಲ್ಲಿ ಸಂಶಯವಿಲ್ಲ.
ಒಟ್ಟಿನಲ್ಲಿ ನಾನು ಹೇಳಲಿಕ್ಕೆ ಹೊರಟಿದ್ದಿಷ್ಟೇ, ಮದುವೆಯ ವಿಷಯದಲ್ಲಿ ಯಾವಾಗಲೂ ತಡ ಮಾಡಬೇಡಿ. ಜವಾಬ್ದಾರಿಗಳು ಎಲ್ಲರಿಗೂ ಇರುತ್ತವೆ. ಅದು ಮದುವೆ ಆದ
ಮೇಲೂ ಬಿಟ್ಟು ಹೋಗುವುದಿಲ್ಲ. ನಮ್ಮ ತರಂಗಗಳಿಗೆ ಹೊಂದಿಕೊಳ್ಳುವ ಸಂಗಾತಿ ಸಿಕ್ಕಿದಾಗ ಎಂತಹ ಪರ್ವತಗಳನ್ನೂ ಏರಿಳಿಯಬಹುದು. ಮದುವೆ ಎನ್ನುವುದು
ಎರಡು ಮನಸ್ಸುಗಳ ಮಿಲನವಲ್ಲಾ, ಮೇಲಾಗಿ ಅದು ಎರಡು ಸಂಸಾರಗಳ
ಮಿಲನ. ಎಲ್ಲರಿಗೂ ಮದುವೆ ನಂತರದ ಜೀವನ ಹೂವಿನ ಹಾದಿಯ
ಪಯಣವಾಗಿರುವುದಿಲ್ಲ, ಅಲ್ಲೂ ಮನಸ್ತಾಪಗಳು ಮೂಡುತ್ತವೆ. ಆದರೆ ಅದನ್ನು ಹಾದಿ ತಪ್ಪಲು ಬಿಡದೆ, ಸರಿದಾರಿಗೆ ಎಳೆಯಲು ಸಂಬಂಧಿಕರ, ಅನುಭವಸ್ಥರ ಬೆಂಬಲವಿರುತ್ತದೆ. ಹಣ, ಅಂತಸ್ತು, ಸುಖಭೋಗಗಳು ಶಾಶ್ವತವಲ್ಲ. ಕೆಲವು ಸಾರಿ
ಸಂಬಂಧಗಳನ್ನು ಮಾಡಿಕೊಳ್ಳುವುದರಲ್ಲಿ ದಾರಿ ತಪ್ಪುತ್ತೇವೆ. ಆದರೆ ಅದನ್ನೇ ಜೀವನದ ಕೊರಗಾಗಿಸಿಕೊಳ್ಳುವುದರಲ್ಲಿ ಅರ್ಥವಿಲ್ಲಾ. ಕೆಲವು ಸಾರಿ ನನಗೂ ಯೋಚನೆಗಳು ಬರುತ್ತೆ, ಈ ಮದುವೆ, ಸಂಸಾರ, ಮಕ್ಕಳು
ಎನ್ನುವ ಒಂದು ಜೀವನದ ಮೂಲ ಮಾದರಿಯನ್ನು ನಮ್ಮ
ಪೂರ್ವಜರು ಯಾಕಾಗಿ ಮಾಡಿದರು..? ಯಾಕೆ ನಮ್ಮ ಹಿರಿಯರು ಅದನ್ನು ಅನುಸರಿಸಿಕೊಂಡು ಬಂದರು..? ನಾವು ಯಾಕೆ
ಮುಂದುವರಿಸಬೇಕು..? ಎಂದು. ಆದರೆ ಈ ವ್ಯವಸ್ಥೆ ನಿನ್ನೆ ಮೊನ್ನೆಯದ್ದಲ್ಲಾ, ಇದು ಸಾವಿರ ವರ್ಷಗಳ ಇತಿಹಾಸ. ಈ ವ್ಯವಸ್ಥೆಯನ್ನು ಬದಲಾಯಿಸದೇ ಮನುಷ್ಯ ತನ್ನ ವಿಕಸನದೊಂದಿಗೆ ಜೋಡಿಸಿಕೊಂಡು ಬಂದಿದ್ದರಿಂದ ಇವತ್ತು ನಾವು ನೀವು ಈ
ಲೇಖನವನ್ನು ಓದುತ್ತಿದ್ದೇವೆ. ಈ ವ್ಯವಸ್ಥೆಗೆ
ಒಳಗಾದಾಗಲೇ ಅದರ ಪ್ರಯೋಜನ ಅರ್ಥವಾಗುತ್ತದೆ.
Good blog post, keep it up🙌🏻
ReplyDelete