ನಂಬಿಕೆಯೇ ದೇವರು...!!
ನಂಬಿಕೆಯೇ ದೇವರು...!!
ಎಲ್ಲಿ ಕಣ್ಣು ಹಾಯಿಸಿದರು ನೀರೇ
ತುಂಬಿಕೊಂಡಿರುವ ಸಮುದ್ರದಿಂದ ಕೂಗಳತೆ ದೂರದಲ್ಲಿರುವ ಊರು ನಮ್ಮದು. ಊರ್ ಅಂದ್ಮೇಲೆ ದೇವಸ್ಥಾನ, ದೈವದ ಮನೆ ಸಾಮಾನ್ಯ. ಹಂಗೆ ನಮ್
ಊರಲ್ಲೂ ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವಸ್ಥಾನ ಇತ್ತು. ದೇವಸ್ಥಾನದ ಸುತ್ತ ತೆಂಗಿನ ತೋಟ, ಬದಿಯಲ್ಲಿ ಒಂದು ಪುಷ್ಕರಣಿ, ಪುಷ್ಕರಣಿ ದಂಡೆಯಲ್ಲಿ
ನಾಗನಬನ. ದೇವಸ್ಥಾನದ ಸುತ್ತ ತೋಟ ಆದ ಮೇಲೆ ಹಚ್ಚಹಸಿರಾದ ಗದ್ದೆ. ಗದ್ದೆ ಅಂಚಲ್ಲೇ
ನಡೆದುಕೊಂಡು ಹೋದರೆ ಮೊದಲು ಸಿಕ್ಕುವುದೇ
ದೇವಸ್ಥಾನದ ಭಟ್ರು ಅಡಿಗರ ಮನೆ. ಅಡಿಗರ
ಹೆಂಡತಿ ಕಮಲಮ್ಮ ತುಂಬಾ ದೈವಭಕ್ತೆ. ದಿನಾ ಸಂಜೆ
ಹೊತ್ತಿಗೆ ಗದ್ದೆ ಅಂಚಿನಲ್ಲಿ ನಡೆದುಕೊಂಡು ಹೋಗಿ ನಾಗಬನಕ್ಕೆ ದೀಪ ಇಟ್ಟು ಬರುತ್ತಿದ್ದರು. ಅಡಿಗರ
ಮನೆಯಲ್ಲಿ ಕೈಕಾಲಿಗೆಲ್ಲ ಕೆಲಸದವರು. ಮನೆ ತುಂಬಾ ದನ, ಹೋರಿ, ಎಮ್ಮೆ, ಒಂದು ನಾಯಿ, ಎರಡು ಬೆಕ್ಕು ಎಲ್ಲ ಇತ್ತು. ಗದ್ದೆ ಕೆಲಸ, ತೋಟದ ಕೆಲಸ ಅಂತ ಹೇಳಿ ಮನೆಯಲ್ಲಿ ಎಷ್ಟೊತ್ತಿಗೂ ಜನ ಇರುತ್ತಿದ್ದರು. ಅವರಿಗೆ ಕಾಫಿ, ತಿಂಡಿ ಮಾಡಿಕೊಂಡು
ಮನೆ ನೋಡಿಕೊಳ್ಳುತ್ತಿದ್ದಿದ್ದು ಅಡಿಗಳ ಹೆಂಡ್ತಿ.
ದೇವಸ್ಥಾನದ ಕೆಲಸ ಮುಗಿಸಿ ಮನೆಗೆ
ಬಂದು ಊಟ ಮಾಡಿ, ಒಂದುಗಳಿಗೆ ಮಲಗಿಕೊಂಡು ಎದ್ದರೆ ಮನೆ ತುಂಬಾ ಜನ. ಏನಕ್ ಗೊತ್ತಾ ಅಡಿಗರ ಹತ್ರ ಜಾತಕ ತೋರಿಸಲಿಕ್ಕೆ.
ಅವರು ಹೇಳುವುದು ಹೇಳಿದಂಗೆ ಆಗುತ್ತೆ
ಅಂತ ನಮ್ಮ ಊರಿನವರಲ್ಲದೆ, ಹೊರ ಊರಿನವರು
“ಒಂದು ಸಾರಿ ಅಡಿಗರ ಹತ್ರ ಕೇಳೋಣ”
ಅನ್ಕೊಂಡು ಬೆಳಗಾಗ್ಬೇಕಾದ್ರೆ ಮನೆ ಬಾಗಿಲಿಗೆ ಬಂದು ಕೂತ್ಕೊಳತಿದ್ರು. ಅವರಿಗೂ ಕಾಫಿ, ತಿಂಡಿ ನೋಡಿಕೊಳ್ಳುವುದು ಕಮಲಮ್ಮನ ಹೆಗಲಿಗೆ ಬೀಳುತ್ತಿತ್ತು. ಏನೇ ಆದರೂ “ಅತಿಥಿ ದೇವೋ ಭವ” ಅಂತ ಹೇಳಿ ಬಂದವರಿಗೆ ಒಂದು ಚೂರು ಬೇಜಾರ್ ಆಗದೆ ಇರೋ ಹಾಗೆ
ನೋಡ್ಕೊಳ್ತಿದ್ರು ನಮ್ಮ ಕಮಲಮ್ಮ.
ಒಂದು ದಿನ ಹಾಡಿಮನೆ ಶೆಟ್ರು
ಅವರ ಮಗನ ಕರ್ಕೊಂಡು ಅವನ ಜಾತಕ ಜೊತೆ ಬೆಳಗಾಗಬೇಕಾದರೆ ಅಡಿಗರ ಮನೆ ಬಾಗಿಲಲ್ಲಿ ಇದ್ರು. ಅಡಿಗರು “ನಂಗೆ
ದೇವಸ್ಥಾನಕ್ಕೆ ತಡ ಆಯ್ತು” ಅಂದ್ರು. ಅದಕ್ಕೆ ಶೇಟ್ರು
“ಹೀಗೆ ಅನ್ಬೇಡಿ ಭಟ್ರೆ, ಒಂದು ಕ್ಷಣ, ನಿನ್ನೆ ರಾತ್ರಿ ಇಡೀ ನಿದ್ದೆ
ಇಲ್ಲಾ, ಹುಡ್ಗ ಏನೋ ನೋಡ್ಕೊಂಡು ಹೆದ್ರ್ಕೊಂಡಿದಾನೆ. ಮೊನ್ನೆ ಗದ್ದೆ ಬಯಲಲ್ಲಿ ಆಟ ಆಡ್ಕೊಂಡು ಬರುವಾಗ ತಡ ಆಯಿತು. ಅವತ್ತಿನ ರಾತ್ರಿಯಿಂದ
ಚಳಿ ಜ್ವರ, ನಿನ್ನೆ ರಾತ್ರಿ ಒಂದು-ಎರಡು ಎಲ್ಲಾ ಹಾಸಿಗೆಯಲ್ಲೇ
ಮಾಡಿಕೊಂಡಿದ್ದಾನೆ. ಅದು ಅವತ್ತು ಅಮಾವಾಸ್ಯೆ
ಬೇರೆ. ಏನಾದರೂ ಗಾಳಿ-ಗೀಳಿ ಸೋಕಿದಿಯ ನೋಡ್ತಿರ
ಭಟ್ಟರೆ”. ಅಡಿಗರಿಗೆ ಬೇರೆ ದಾರಿ ಇಲ್ಲ, ಊರಿನವರು ಬೇರೆ, ಹುಡುಗ ಬಾರಿ ಹೆದರಿಕೊಂಡಿದ್ದಾನೆ ಅಂತ ಕೂಡ ಹೇಳ್ತಾ
ಇದ್ದಾರೆ “ತಡ ಆದರೆ ಆಗಲಿ ಒಂದು ಕ್ಷಣ ನೋಡಿ ಹೋಗೊಣ” ಅಂತ ಹೇಳಿ
“ಕಮಲ, ಅಲ್ಲಿ ಮೇಜಿನ ಮೇಲೆ ನನ್ನ ಕವಡೆ ಇದೆ, ಸ್ವಲ್ಪ ತಕೊಂಡ್ ಬಾ” ಅಂತ ಹೇಳಿ ಜಾತಕ ನೋಡಿದ್ರು. “ಏನಿಲ್ಲ ಶೆಟ್ಟರೆ ಹುಡುಗನ ಮನೆಯಲ್ಲಿ ರಾಹು ಬಂದು ಕೂತಿದಾರೆ, ಕೇತು ದೃಷ್ಟಿ ಬೇರೆ ಇದೆ. ಅಮವಾಸ್ಯೆ, ಹುಣ್ಣಿಮೆ ಸಂದರ್ಭದಲ್ಲಿ, ಮಧ್ಯಾಹ್ನದೊತ್ತಿಗೆ, ಸಂಜೆ ಹೊತ್ತಿಗೆ ಜಾಸ್ತಿ ಹೊರಗಡೆ
ತಿರುಗ್ಲಿಕ್ ಬಿಡ್ಬೇಡಿ. ನಾಳೆಯಿಂದ ಏಳು ದಿನ ಗಣಪತಿಗೆ ಕಡ್ಲೆ ತಂದು ಕೊಡಿ, ಪೂಜೆ ಮಾಡಿ ಕೊಡುತ್ತೇನೆ ಎಲ್ಲ ಸರಿ ಆಗ್ತದೆ” ಅಂತ ಹೇಳಿ ಕಳಿಸಿದ್ರು.
ಅಡಿಗರ ಮನೆಗೆ ಕೆಲಸಕ್ಕೆ
ಬರುವವಳು ಗೊಯಿ ಹಾಡಿ ಬಾಬಿ. ಇವಳ ಒಡ್ಡೋಲಗ ಬರುವುದು ಅಡಿಗಳು ಮನೆ ಬಿಟ್ಟ ಮೇಲೆ.
ಮನೆ ಕೆಲಸ ಎಲ್ಲಾ “ಹರ್ಕಿ ಬಲಿ ಮರನ್ ಜಾಗಂಟೆ” ಮಾಡಿ, ಊರ್ ಮೇಲಿರೋ ವಿಷಯ ಎಲ್ಲಾ
ಕಮಲಮ್ಮನ ಹತ್ತಿರ ಪಂಚಾಯಿತಿ ಮಾಡುವುದು ಇವಳ ಮುಖ್ಯ ಕೆಲಸ. “ಹೊಯ್ ಅಮ್ಮ ದೀಪ ಹೆಚ್ಚುಕೆ
ಹೋಗುವಾಗ ಸ್ವಲ್ಪ ಜಾಗೃತೆ. ಗದ್ದೆ ಬದಿಯಲ್ಲಿ ಸಂಜೆ ಹೊತ್ತಿಗೆ ಏನೋ
ಶಬ್ದ ಆಗ್ತಾಯಿದಿಯಂತೆ.
ನನ್ ಮಗ ನಿನ್ನೇ ಕೆಲಸ ಮುಗ್ಸಿ ಬರುವಾಗ ಸ್ವಲ್ಪ ತಡ ಆಯಿತು. ಏನೋ ಬರಬರ ಅಂದುಕೊಂಡು ಹಿಂದೆ
ಬಂದಂಗಾಯ್ತು ಅಂತ ಹೆದರ್ಕೊಂಡಿದ್ದ” “ಹೌದಾ ಬಾಬಿ, ಇವತ್ ಆ ಹಾಡಿಮನಿ ಶೆಟ್ರು
ಅವರ ಮಗನ ಕರ್ಕೊಂಡು ಬಂದಿದ್ದರು” ಅಂತ ಮಾತು ಮುಂದುವರಿಯಿತು.
ದಿನಾ ಅದೇ ದಾರಿಯಲ್ಲಿ
ಹೋಗುತ್ತಿದ್ದ ಕಮಲಮ್ಮಂಗೆ ಅವತ್ಯಾಕೋ ಪುಕ ಪುಕ. ಬೆಳಿಗ್ಗೆ ಬಂದ ಶೆಟ್ರ ಹುಡುಗನ ಸ್ಥಿತಿ, ಹಾಗೆ ಬಾಬಿ ಹೇಳಿದ ಮಾತಿಂದ
ಹೆದರಿಕೆ ಮನೆ ಮಾಡಿತ್ತು. ಹೆಂಗೋ ದೇವರ ನಾಮ ಹೇಳಿಕೊಂಡು ಅವತ್ತು ದೀಪ ಹಚ್ಚಿ ಬಂದರು. ರಾತ್ರಿ
ಗಂಡನ ಹತ್ತಿರ “ನಾ ನಾಳೆಯಿಂದ ದೀಪ ಹಚ್ಚುವುದಕ್ಕೆ ಬರುವುದಿಲ್ಲ, ನೀವೇ ಸಂಜೆ ಪೂಜೆ
ಮುಗಿಸಿಕೊಂಡು ಬರುವಾಗ ಹಚ್ಚಿ ಬನ್ನಿ. ಆ ಗದ್ದೆ ಅಂಚಲ್ಲಿ
ಏನೋ ಶಬ್ದ ಬರುತ್ತಂತೆ. ಆಗುದಿಲ್ವಾ..?” ಅದಕ್ಕೆ ಅಡಿಗ್ರು “ಮತ್ತೇನ್ ಆಗಲ್ವಾ..!? ಧೈರ್ಯ ಮಾಡಿಕೊಂಡು, ದೇವರನ್ನು ನನೆಸಿಕೊಂಡು ಬಾ.
ಏನ್ ಆಗೋದು ಇಲ್ಲ” ಅಂತ ತಿರುಗಿ ಮಲಗಿಕೊಂಡ್ರು. ಅವತ್ಯಾಕೋ ಕಮಲಮ್ಮಂಗೆ ತುಂಬಾ ಹೊತ್ತಿನವರೆಗೆ
ನಿದ್ದೆ ಬರಲಿಲ್ಲ. ಅವರ ಮನೆ ನಾಯಿ ಮತ್ತೆ ಬೆಕ್ಕು ಗದ್ದೆ ಬದಿ ನೋಡ್ಕೊಂಡು ಒಂದೇ ಸಮನೆ ಕೂಗ್ತಾ ಇದ್ವು.
ಮುಂದಿನ ದಿನಾ ಬೆಳಿಗ್ಗೆ
ಅಂಗಳಕ್ಕೆ ನೀರು ಹಾಕಿ, ತುಳಸಿ ಪೂಜೆ ಮಾಡಿ, ಬೆಕ್ಕಿಗೆ ಹಾಲ್ ಇಟ್ಕೊಂಡು
ಕರೆದರೆ ಒಂದು ಮಾತ್ರ ಬಂತು. ಇನ್ನೊಂದು ಎಷ್ಟು ಕರೆದರೂ ಬರಲಿಲ್ಲ. ಅಡಿಗರ ಹತ್ರ ಹೇಳೋಕೆ ಹೋದ್ರೆ
“ನಂಗೆ ತಡ ಆಯ್ತು, ನಾನು ಬರ್ತೀನಿ” ಅಂತ ಹೊರಟೇ ಹೋದರು. ಅವತ್ ದೇವಸ್ಥಾನಕ್ಕೆ ಹಾಡಿಮನಿ ಶೆಟ್ರು ಕಡ್ಲೆ
ತಗೊಂಡು ಬಂದಿದ್ದರು. ಪೂಜೆ ಎಲ್ಲಾ ಆಗಿ ಪ್ರಸಾದ ಕೈಯಲ್ಲಿ ಹಿಡ್ಕೊಂಡು ಕೇಳಿದರು “ಭಟ್ರೆ, ಹೀಗೆಲ್ಲಾ ಮಾಡಿದ್ರೆ ಹುಡುಗ
ಸರಿಯಾಗ್ತಾನ..?” ಭಟ್ರಿಗೆ ಎನ್ ಹೇಳುದ್ ಗೊತ್ತಾಗಲಿಲ್ಲ “ಎಲ್ಲ ಸರಿಯಾಗುತ್ತೆ ಹೋಗ್
ಬನ್ನಿ” ಅಂದ್ರು. ಕಮಲಮ್ಮ ದಿನ ವಿಷ್ಣು ಸಹಸ್ರನಾಮ ಹೇಳಿಕೊಂಡು ಹೋಗಿ ದೀಪ ಹಚ್ಚಿ ಬರ್ತಿದ್ರು.
ಒಂದು ಬೆಕ್ ಇಲ್ಲದೇ ಇನ್ನೊಂದು ಜೋರ್ ಕೂಗ್ತಾ ಇತ್ತು.
ಹೀಗೆ ಆರು ದಿನ ಕಳೆದೊಯ್ತು.
ಶೆಟ್ರು ದಿನ ದೇವಸ್ಥಾನಕ್ಕೆ ಬರುವುದು “ಭಟ್ರೆ ಹುಡುಗ ಹುಷಾರಾಗ್ತಾನ” ಕೇಳುದು, ಬಾಬಿ ಹೊಸ ಹೊಸ ಕಥೆ
ಕಮಲಮ್ಮನ ಕಿವಿಗೆ ತುಂಬುವುದು ನಡೆದೇ ಇತ್ತು. ಆರನೇ ದಿನ ರಾತ್ರಿ ಗದ್ದೆ ಬದಿಯಲ್ಲಿ ದೊಡ್ಡ ಊಳಿಡುವ
ಶಬ್ದ. ಕಮಲಮ್ಮ ಸ್ವಲ್ಪ ಧೈರ್ಯ ಮಾಡಿಕೊಂಡು ಕಿಟ್ಟಿಗೆಯಲ್ಲಿ ಇಣುಕಿದರು, ತುಂಬಾ ಜನ ಕೈಯಲ್ಲಿ ದೊಂದಿ
ಹಿಡಿದುಕೊಂಡು ಹೋಗುವ ಹಾಗೆ ಕಾಣಿಸಿತು, ಅವತ್ತು ರಾತ್ರಿ ಇಡೀ ಅವರಿಗೆ ನಿದ್ದೆ ಬರಲಿಲ್ಲ. ಹಾಗಾಗಿ ಬೆಳಿಗ್ಗೆ
ಏಳುವಾಗ ಸ್ವಲ್ಪ ತಡ ಆಯ್ತು. ಅಡಿಗರು ಹೆಂಡ್ತಿಗೆ ಹುಷಾರಿಲ್ಲ ಅನ್ಕೊಂಡು ಮನೆಯಲ್ಲಿ ಇದ್ದಿದ್ದರು.
ಹೆಂಡ್ತಿ ಏಳಲಿಕ್ಕು “ಏನಾಯ್ತು, ಹುಷಾರ್ ಇದ್ಯಲ್ಲ” ಕಮಲಮ್ಮ “ಹಾ ಹಾ ಹುಷಾರ್ ಇದ್ದೇನೆ ಏನು ಅಗಲಿಲ್ಲಾ”
ಅಂತೇಳಿ ಬಚ್ಚಲ್ ಮನೆ ಕಡೆ ಹೋದರು. ಮುಖ ಎಲ್ಲಾ ತೊಳೆದುಕೊಂಡು ಬಂದ ಮೇಲೆ, ಅಡಿಗ್ರು “ಹೇ ಕಮಲ ಅಲ್ ಕಾಣ್, ಆ ಬಾಬಿ ನಮ್ಮನೆ ಗುಂಬ್ಳನ
ಹಿಡ್ಕೊಂಡು ಬರ್ತಾ ಇದ್ದಾಳೆ, ನೀ ಹೇಳ್ತಾ ಇದ್ದಿಯಲ್ಲ ಮೊನ್ನೆಯಿಂದ ಮನೆಗೆ ಬರಲಿಲ್ಲ ಅಂತ ಹೇಳಿ”. ಬಾಬಿ
ಬಂದು “ಹೌದು, ಇದು ನಮ್ಮನೆಯಲ್ಲಿ ಹೆಗ್ಣ ತಿನ್ಕೊಂಡು ಮಾಳಿಗೆ ಮೇಲೆ ಮಲ್ಕೊಂಡಿತ್ತು. ನಿಮ್ಮನೆದು ಅಂತ
ಗೊತ್ತಾಯ್ತು ಹಾಗಾಗಿ ತೆಗೆದುಕೊಂಡು ಬಂದೆ”. ಅಷ್ಟೊತ್ತಿಗೆ ಆಗಲೇ ಆಚೆ ಈಚೆ ಮನೆವರೆಲ್ಲ ಬಂದರು “ಭಟ್ರೆ
ನಿನ್ನೆ ರಾತ್ರಿ ಕೇಳುವುದು ಬೇಡ. ಗದ್ದೆ ಬದಿಯಲ್ಲಿ ನರಿಗಳ ಕಾಟ. ತುಂಬ ದಿನ ಆಯ್ತು ಅನಿಸುತ್ತೆ.
ಎಲ್ಲಿಂದೊ ಬಂದು ಸೇರ್ಕೊಂಡಿದ್ದಾವೆ. ನಿನ್ನೆ ರಾತ್ರಿ ಯಾರೋ ನೋಡಿದವರು ಹೇಳಿದರು. ಎಲ್ಲ
ಒಟ್ಟಾಗಿ ಓಡಿಸಿದ್ದೇವೆ, ನಿಮ್ಮನ್ನ ಏಳಿಸೋಣ ನೋಡಿದ್ವಿ. ಪಾಪ ಭಟ್ರು ಬೆಳಿಗ್ಗೆ ಬೇಗ ಏಳ್ತಾರೆ, ಜೋರ್ ನಿದ್ದೆ ಇರ್ಬೇಕು ಅಂತ
ಸುಮ್ನೆ ಆಯ್ತು”. ಅದಕ್ಕೆ ಕಮಲಮ್ಮ “ರಾತ್ರಿ ದೊಂದಿ ಹಿಡ್ಕೊಂಡು ಹೋಗಿದ್ದು ನೀವೇನಾ..?”. “ಹೌದು... ಕಾಟ್ ನರಿಗಳು, ಎಲ್ಲವನ್ನೂ ದೂರ ದೂರಿಗೆ
ಓಡಿಸಿ ಬಂದಿದ್ದೇವೆ” ಅದಕ್ಕೆ ಅಡಿಗ್ರು “ಕಂಡ್ಯ ಮೊನ್ನೆ ಗದ್ದೆ ಬದಿಯಲ್ಲಿ ಏನೋ ಶಬ್ದ ಆಗ್ತಿದೆ
ಅಂತಿದ್ಯಲ್ಲ ಇದೆ ಇರಬೇಕು, ಸುಮ್ನೆ ನೀನು ಹೆದರಿಕೊಂಡಿದ್ದು” ಅದಕ್ಕೆ ಬಾಬಿ, “ನಾನು ಅದೇ ಅಮ್ಮಂಗೆ
ಹೇಳುವುದಕ್ಕೆ ಬಂದಿದ್ದು” ಅಡಿಗ್ರು “ಸುಮ್ನೆ ಇರ್ತೀಯಾ, ನೀನೇ ಇದ್ ಬದ್ದಿದೆಲ್ಲ ಅವಳಿಗೆ
ಹೇಳಿ ಅವಳ ತಲೆ ಹಾಳ್ ಮಾಡಿದ್ದು. ಅದಕ್ಕೆ ಹೇಳೋದು ಬ್ಯಾಡ್ದಿದ್ದೆಲ್ಲ ತಲೆಗೆ ಹಾಕೊಳ್ಳಬಾರದು
ಅಂತ. ಇರಲಿ ನಾನು ಒಂದು ಕ್ಷಣ ದೇವಸ್ಥಾನದ್ ಬದಿ ಹೋಗಿ ಬರ್ತೇನೆ” ಅಂತ ಹೊರಟ್ರು.
ಅವತ್ತು ಕಡ್ಲೆ ತಂದ ಶೆಟ್ಟರ
ಮುಖದಲ್ಲಿ ಸಂತೋಷ ಇದ್ದಿತ್ತು. “ಭಟ್ರೆ ಹುಡುಗ ಬೆಟ್ಕಟ್ಟಿ ಮ್ಯಾಚ್ ಆಡಿ ದುಡ್ಡೆಲ್ಲ
ಕಳೆದುಕೊಂಡು ಮನೆಯವರ ಹತ್ರ ಹೇಳಿದರೆ ಹೊಡಿತಾರೆ ಅಂತ ಹೆದರ್ ಕಂಡಿದ್ದ. ಇವನ ಒಟ್ಟಿಗೆ ಹೋದ
ಪಕ್ಕದ್ಮನೆ ಹುಡುಗನಿಗೆ ಹೊಡೆದು ಕೇಳಿದ್ ಮೇಲೆ ಎಲ್ಲ ಬಾಯಿ ಬಿಟ್ಟ. ಕೂಡ್ಸಿ ಬುದ್ದಿ ಹೇಳಿ ಸರಿ
ಮಾಡಿದ್ದೇವೆ. ನೀವು ಹೇಳಿದ ಹಾಗೇ ಏಳನೇ ದಿನಕ್ಕೆ ಎಲ್ಲ ಸರಿ ಆಯ್ತು” ಅದಕ್ಕೆ ಅಡಿಗ್ರು
ಹೇಳಿದ್ರು “ನಂಬಿಕೆಯೇ ದೇವರು”
Comments
Post a Comment