ಜೋಳದ ರೊಟ್ಟಿ ಮತ್ತು ಕೊಬ್ಬರಿಯೆಣ್ಣೆ (ಇದು ಹುಬ್ಬಳ್ಳಿ ಹೈದನ ಪ್ರೇಮಕಥೆ).
ಲೇಖಕರು : ಅಂಕುರ್ ಕೌಶಲ್.
ಕನ್ನಡಕ್ಕೆ : ಗಣೇಶ ಬರ್ವೆ ಮಣೂರು.
ಕನ್ನಡಕ್ಕೆ : ಗಣೇಶ ಬರ್ವೆ ಮಣೂರು.
ಮಳೆಗಾಲದಲ್ಲಿ, ಸಂಜೆ ಹೊತ್ತಲ್ಲಿ ರಸ್ತೆ ಪಕ್ಕ ಇರುವ ಕಾಫಿ ಶಾಪ್ ನಲ್ಲಿ ಬಿಸಿ ಬಿಸಿ ಕಾಫಿ ಹೀರುವಾಗ ಆಪ್ತ ಗೆಳೆಯ ಹೇಳಿದ ಒಂದು ಇಂಗ್ಲಿಷ್ ಕಥೆ. ಅಂತರ್ಜಾಲದಲ್ಲಿ ಜಾಲಾಡಿ ಕಥೆಯನ್ನು ಹುಡುಕಿ ಓದಿದಾಗ ಅನಿಸಿದ್ದು ಒಂದೇ ಇದನ್ನು ಕನ್ನಡದ ಓದುಗರಿಗೆ ಉಣ ಬಡಿಸಿದರೆ ಹೇಗಿರುತ್ತೆ ಅಂತಾ. ಹತ್ತು ವರ್ಷ ಹಳೆಯ 'ಒನ್ಸ್ ಅಪೋನ್ ಅ ಟೈಂ ಇನ್ ಇನ್ಫೋಸಿಸ್' ಅನ್ನುವ ಇಂಗ್ಲಿಷ್ ಕಥೆಯನ್ನು, ನೈಜತೆಗೆ ಧಕ್ಕೆ ಬರದಂತೆ, ಕನ್ನಡದ ಪರಿಸರಕ್ಕೆ ಹೊಂದುವಂತೆ, ಕನ್ನಡಕ್ಕೆ ಭಾಷಾಂತರಿಸುವ ಸಣ್ಣ ಪ್ರಯತ್ನ. ಬನ್ನಿ ಕಥೆ ಒಳಗೆ ಹೋಗೋಣ.
ಬೆಳ್ಳಗೆ ೧೧ ಗಂಟೆಯ ಸುಮಾರು. ನಾನು ನನ್ನ ಗಂಟು ಮೂಟೆಗಳನ್ನು ಕಟ್ಟಿಕೊಂಡು, ನನ್ನನ್ನು ಗೇಟ್ ತನಕ ಬಿಡಲಿಕ್ಕೆ ಬರುವ ವಾಹನಕೋಸ್ಕರ, ಮೈಸೂರಿನ ಇನ್ಫೋಸಿಸ್ ನಲ್ಲಿ ನನ್ನ ಹಾಸ್ಟೆಲ್ ಎದುರು ಕಾಯ್ತಾ ಇದ್ದೆ. ಹೌದು ನೀವು ಓದಿದ್ದು ಸರಿಯಾಗೇ ಇದೆ. ಇನ್ಫೋಸಿಸ್ ಭಾರತದ ಐಟಿ ದಿಗ್ಗಜಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮೈಸೂರಿನಲ್ಲಿ ಇನ್ಫೋಸಿಸ್ ನ ಭವ್ಯವಾದ ಕಲಿಕಾ ಕೇಂದ್ರ ಇರುವುದು ನಮಗೆಲ್ಲಾ ತಿಳಿದ ವಿಚಾರ. ಭಾರತದ ಯಾವ ಮೂಲೆಯಲ್ಲಿ ಇನ್ಫೋಸಿಸ್ ಗೆ ಆಯ್ಕೆ ಆದರೂ ಮೈಸೂರಿನ ಈ ಕಲಿಕಾ ಕೇಂದ್ರಕ್ಕೆ ಪಾದಾರ್ಪಣೆ ಮಾಡಲೇ ಬೇಕೆನ್ನುವುದು ಗೊತ್ತಿರುವ ಸಂಗತಿಯೇ.
ಸುತ್ತಲೂ ನೋಡಿದರೆ ಒಂದು ನರ ಪಿಳ್ಳೆಗಳ ಓಡಾಟ ವಿಲ್ಲದೇ ರಸ್ತೆಗಳು ಬಿಕೋ ಅನ್ನುತ್ತಿದ್ದವು. ಭಗವಾನ್ ಭಾಸ್ಕರ ನೆತ್ತಿ ಸುಡಲು ಅಣಿಯಾಗುತ್ತಿದ್ದ. ತನ್ನ ಸಂಗಾತಿಗಳಿಲ್ಲದೇ, ಒಂಟಿಯಾಗಿ, ಸವಾರನ ಬರುವಿಕೆಗಾಗಿ ಸೈಕಲ್ ಸ್ಟ್ಯಾಂಡ್ ನಲ್ಲಿ ಒಂದೇ ಸೈಕಲ್ ಕಾಯ್ತಾ ಇತ್ತು. ತಂಪಾಗಿ ಬೀಸಿದ ಗಾಳಿ ಕೆಲಸದವರು ಗುಡಿಸಿ ಬದಿಗೊತ್ತಿದ ಎಲೆಗಳನ್ನು ಮತ್ತೆ ರಸ್ತೆ ತುಂಬಾ ಚದುರಿಸಿತು. ಎರಡು ಹಕ್ಕಿಗಳು ತಮದೇ ಲೋಕದಲ್ಲಿ ವಿಹರಿಸುತ್ತಾ, ಒಂದು ಮರದಿಂದ ಇನ್ನೊಂದಕ್ಕೆ ಹಾರುತ್ತಾ ನಲಿಯುತ್ತಿದ್ದವು. ನನ್ನೆಲ್ಲಾ ಗೆಳೆಯರು ಜೀವನವೆಂಬ ರಥದ ಕುದುರೆಯನ್ನು ಆಗಷ್ಟೇ ಜಗ್ಗಿ, ತಮ್ಮ ತಮ್ಮ ತರಗತಿಗಳಲ್ಲಿ ಕಳೆದು ಹೋಗಿದ್ದರು. ಆದರೆ ನಾನು ಒಬ್ಬಂಟಿಗನಾಗಿದ್ದೆ, ಆ ಸೈಕಲ್ ತರಹ. ಅಷ್ಟರಲ್ಲಿ ಒಬ್ಬ ಬಂದು ಆ ಸೈಕಲ್ ಅನ್ನು ಕರೆದುಕೊಂಡು ಹೋದ. ಬೀಸೋ ಗಾಳಿ, ಮೇಲಿರೋ ಸೂರ್ಯ, ಆ ಹಕ್ಕಿಗಳು ಎಲ್ಲಾ ನನ್ನ ಅಣಕವಾಡುವಂತಿತ್ತು. ನನ್ನ ಕಣ್ಣಂಚಲ್ಲಿ ಬಂದ ನೀರು ಭುವಿ ಮುಟ್ಟಿತ್ತು. ಕಣ್ಣೀರು ತರಿಸುವ ನೋವಿನ ಪರಿಚಯ ನಿನ್ನೆ ರಾತ್ರಿ ಪೂರ್ತಿ ಕೂತು ಅತ್ತಾಗಲೇ ತಿಳಿದಿದ್ದು. ಏನೇ ಆದರೂ ನಾನು ಮೈಸೂರನ್ನು ಬಿಡಲೇಬೇಕು. ಹಾಗಂತಾ ಅದೊಂದೇ ವಿಷಯ ಕಣ್ಣೀರಿಗೆ ಕಾರಣವಾಗಿರಲಿಲ್ಲಾ. ವಿಷಯ ಬೇರೇನೇ ಆಗಿತ್ತು. ನಾನು ನನ್ನ ತರಬೇತಿಯನ್ನು ಮುಗಿಸಿ ಮೈಸೂರನ್ನು ಬಿಡುತ್ತಾ ಇರಲಿಲ್ಲಾ, ಬದಲಾಗಿ ನಾನು ಕಂಪೆನಿಯನ್ನೇ ಬಿಟ್ಟು ಹೋಗ್ತಾ ಇದ್ದೆ. ನಿಜ ಹೇಳಬೇಕಾದ್ರೆ ಕಂಪೆನಿಯಿಂದಲೇ ನನ್ನನು ಕಿತ್ತು ಒಗೆದಿದ್ದರು. ಅಷ್ಟೋತ್ತಿಗಾಗಲೇ ನನನ್ನು ಕರೆದುಕೊಂಡು ಹೋಗಲಿಕ್ಕೆ ಇನ್ಫೋಸಿಸ್ ನ ನಿಯೋಜಿತ ವಾಹನ ಬರುತ್ತಿರುವುದು ಕಣ್ಣಿಗೆ ಬಿತ್ತು. ಅದು ನಾನು ಇನ್ಫೋಸಿಸ್ ಗೆ ಸೇರಿದ ಮೊದಲ ದಿನಗಳಿಗೆ ಹಾಗೇ ಕರೆದುಕೊಂಡು ಹೋಯಿತು.
ಎಂತಹಾ ಸಂಜೆ ಅದು. ಕನಸುಗಳ ಮೂಟೆಯನ್ನು ಬೆನ್ನ ಮೇಲೆ ಹೊತ್ತು, ಭೂಲೋಕದ ಸ್ವರ್ಗದಂತಿದ್ದ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಗೆ ಅವತ್ತು ಪಾದಾರ್ಪಣೆ ಮಾಡಿದ್ದೆ. ನನ್ನ ಮುಂದಿನ ದಿನಗಳನ್ನು ಕಾಣುವ ಕುತೂಹಲ ನನ್ನ ಕಣ್ಣುಗಳಿಗಿತ್ತು. ನನ್ನ ಭವಿಷ್ಯದ ಬಗ್ಗೆ ಸಾವಿರಾರು ಕನಸುಗಳನ್ನು ಹೊತ್ತವನು ನಾನಾಗಿದ್ದೆ. ಕ್ಯಾಂಪಸ್ ಗೆ ಕಾಲಿಟ್ಟ ಮೊದಲ ಕ್ಷಣ ನನಗನಿಸಿದ್ದು ಒಂದೇ ಯಾವೆಲ್ಲಾ ಸ್ಥಳಗಳನ್ನು ನಾನು ಗೂಗಲ್ ನ ಚಿತ್ರಗಳಲ್ಲಿ ನೋಡಿದ್ದೇನೋ ಅವನ್ನೆಲ್ಲಾ ಇಂದೇ ಕಣ್ಣಾರೆ ನೋಡಬೇಕೆಂದು. ಇನ್ಫೋಸಿಸ್ ನ ಗೇಟ್ ಬಳಿಯೇ ಸೆಕ್ಯುರಿಟಿಗಳು ಇಲ್ಲಿನ ಶಿಸ್ತಿನ ಪರಿಚಯ ಮಾಡಿಸಿದ್ರು. ನನ್ನೆಲ್ಲಾ ಲಗೇಜ್ ಗಳನ್ನು ಸೆಕ್ಯುರಿಟಿ ಚೆಕ್ ಮಾಡಿಸಿ ಲಗೇಜ್ ಗಾಡಿಯಲ್ಲಿ ಕಳುಹಿಸಿಕೊಡಲಾಯಿತು. ನನ್ನನ್ನು ಕರೆದುಕೊಂಡು ಹೋಗಲು ಬಂದ ಗಾಲ್ಫ್ ಕಾರ್ಟ್ ನಲ್ಲಿ ಕೂತು ಇಲ್ಲಿನ ಸ್ವಚ್ಛಂದ ರಸ್ತೆಯಲ್ಲಿ ಸಾಗುವ ಮೂಲಕ ನನ್ನ ಇನ್ಫೋಸಿಸ್ ಪಯಣ ಆರಂಭವಾಯಿತು.
ರಸ್ತೆಯಲ್ಲಿ ಸಾಗ್ತಾ ಇದ್ದ ಹಾಗೆ ರಸ್ತೆಯ ಬಲಬದಿಯಲ್ಲಿ ಮೊದಲು ನನಗೆ ಕಣ್ಣಿಗೆ ಬಿದ್ದಿದ್ದು ಕಾಲ್ಚೆಂಡಿನ ತರಹ ಕಾಣುತ್ತಿದ್ದ ಒಂದು ಕಟ್ಟಡ. ಹಚ್ಚ ಹಸಿರಿನಿಂದ ಕೂಡಿದ ಕ್ರಿಕೆಟ್ ಅಂಗಳದ ಹಿಂಬದಿಯಲ್ಲಿ ಇದು ಕಂಗೊಳಿಸುತ್ತಿತ್ತು. ಹೇಳಬೇಕೆಂದರೆ ಇದೊಂದೇ ಕಟ್ಟಡ ನಾನು ಗೂಗಲ್ ನಲ್ಲಿ ಇನ್ಫೋಸಿಸ್ ಎಂದು ತಡಕಾಡಿದಾಗ ಅತೀ ಹೆಚ್ಚು ಬಾರಿ ಕಣ್ಣಿಗೆ ಬೀಳುತ್ತಿದ್ದುದು. ರಸ್ತೆಯ ಎಡಬದಿಯಲ್ಲಿ ಒಂದು ಕಟ್ಟಡ ಇನ್ನು ಕೆಲಸ ನಡೆಯಿತ್ತಿರುವ ಸ್ಥಿತಿಯಲ್ಲಿತ್ತು. ಇದು ನನಗೆ ರೋಮ್ ನ ಕೊಲೊಸಿಯಂ ಅನ್ನು ನೆನಪಿಸಿತು. ಹಾಗೆ ಮುಂದೆ ಸಾಗ್ತಾ ಕಣ್ಣಿಗೆ ಬಿದ್ದಿದ್ದು ಅಮೆರಿಕದ ಶ್ವೇತ ಭವನವನ್ನು ನೆನಪಿಸುವ ಒಂದು ಕಟ್ಟಡ. ಆದರೆ ಇದು ಶ್ವೇತ ವರ್ಣದಲ್ಲಿ ಇರಲಿಲ್ಲಾ. ವಾಹನದಲ್ಲಿ ನನ್ನ ಜೊತೆಗಿದ್ದವನಿಂದ ತಿಳಿಯಿತು ಇದು 'ಗ್ಲೋಬಲ್ ಎಜುಕೇಷನ್ ಸೆಂಟರ್' ಎಂದು. ನನ್ನ ಇನ್ಫೋಸಿಸ್ ನ ತರಬೇತಿಗಳಿಗೆ ಇದು ಸಾಕ್ಷಿಯಾಗಲಿದೆ ಎಂಬುದು ತಿಳಿದು ಬಂತು.
ರಿಸೆಪ್ಶನ್ ನಲ್ಲಿ ನಮಗೆಲ್ಲಾ ಐಡಿ ಕಾರ್ಡ್, ರೂಮ್ ಕೀ ಗಳನ್ನು ನೀಡಿ ನಮ್ಮ ನಮ್ಮ ಹಾಸ್ಟೆಲ್ ಬಳಿ ನಮ್ಮನು ಹಾಗೆ ನಮ್ಮ ಲಗೇಜ್ ಗಳನ್ನು ಇಳಿಸಿ, ನನ್ನಂತಹ ಇನ್ನೂ ಅನೇಕರ ಇನ್ಫೋಸಿಸ್ ಪಯಣಕ್ಕೆ ಸಾಕ್ಷಿಯಾಗಲು ವಾಹನ ಹೊರಟು ನಿಂತಿತು. ನನಗೆ 'ಗ್ಲೋಬಲ್ ಎಜುಕೇಶನ್ ಸೆಂಟರ್' ಅನ್ನು ಪರಿಚಯಿಸಿದ, ನನ್ನೊಂದಿಗೆ ಪಯಣಿಸಿದವನೆ ನನ್ನ ರೂಮ್ ಮೇಟ್ ಆಗಿದ್ದ. ಅವನ ಹೆಸರು ವರುಣ್, ಪಂಜಾಬ್ ಹುಡುಗ. ತನ್ನ ಎತ್ತರವಾದ ಹಾಗೂ ಸಪೂರವಾದ ಮೈಕಟ್ಟು, ವರ್ಷಗಳಿಂದ ಶೇವ್ ಮಾಡದ ಅವನ ಗಡ್ಡದಿಂದ ಅವನೊಬ್ಬ ಪಂಜಾಬಿ ಎಂದು ನಿರೂಪಿಸುತ್ತಿದ್ದ. ಅವನನ್ನು ನೋಡಿ ನನಗನಿಸಿದ್ದು ಒಂದೇ ಹೇಗೆ ನನ್ನಂತಹ ಹುಬ್ಬಳ್ಳಿ ಹುಡುಗ ಒಬ್ಬ ವರ್ಷಗಟ್ಟಲೆ ಶೇವ್ ಮಾಡದೇ ಇರುವವನ ಜೊತೆ ಇರುವುದು ಅಂತಾ. ಹಾಸ್ಟೆಲ್ಗೆ ಹೋದ ಮೇಲೆ ತಿಳಿದು ಬಂದ ಎರಡು ಖುಷಿಯ ಸಂಗತಿಗಳು ಅಂದ್ರೆ, ಒಂದು ನಮ್ಮ ಹಾಸ್ಟೆಲ್ ಫುಡ್ ಕೋರ್ಟ್ ಸಮೀಪ ಇತ್ತು, ಮತ್ತೇ ನಮ್ಮ ಹಾಸ್ಟೆಲ್ ಪಕ್ಕ ಇದ್ದಿದ್ದು ಹುಡುಗಿಯರ ಹಾಸ್ಟೆಲ್ ಆಗಿತ್ತು. ಈ ವಿಷಯ ಗೊತ್ತಾಗಿದ್ದೆ ತಡ ಪಂಜಾಬಿ ಮೈಸೂರು ಪೇಟೆಗೆ ಹೋಗಿ ಬೈನಾಕ್ಯುಲರ್ ತರಲಿಕ್ಕೆ ತಯಾರಾಗಿಬಿಟ್ಟಿದ್ದ.
ಯಾವಾಗ ಕೀ ಇಂದ ರೂಮ್ ಬಾಗಿಲನ್ನು ತೆಗೆದನೋ ನನ್ನ ಕಣ್ಣಲ್ಲಿ ನನಗೆ ನಂಬಲಾಗದ ಹಾಗಾಯಿತು. ನನ್ನ ಜೀವನದಲೇ ಅಂತಹಾ ರೂಮ್ ಅನ್ನು ನೋಡಿರಲಿಲ್ಲಾ. ಎಲ್.ಸಿ.ಡಿ. ಟಿವಿ, ಎಸಿ, ಸ್ಕ್ರೀನ್ ಸರಿಸಿದರೆ ಆಕಾಶಕ್ಕೆ ಮುತ್ತಿಡುವ ನೋಟ, ಯಾಕಂದ್ರೆ ನಮ್ಮ ರೂಮ್ ಕೊನೆಯ ಅಂತಸ್ತಿನಲ್ಲಿತು. ಆದರೆ ಇಷ್ಟು ಒಳ್ಳೆಯ ರೂಮಿನಲ್ಲಿ ಇಂತಹ ಪಂಜಾಬಿ ಜೊತೆ ಕೆಲವು ತಿಂಗಳು ಇರಬೇಕಲ್ಲಾ ಅನ್ನೋದೇ ಬೇಸರದ ಸಂಗತಿ ಆಗಿತ್ತು. ಆದರೆ ಎಲ್ಲಾ ಪಂಜಾಬಿ ಹುಡುಗರ ತರಹ ವರುಣ್ ಕೂಡ ಮನಸ್ಸಿನಿಂದ ತುಂಬಾ ಒಳ್ಳೆಯವನ ತರಹ ಕಂಡು ಬಂದ. ನಮ್ಮ ನಮ್ಮ ಲಗೇಜ್ ಅನ್ನು ರೂಮಿನಲ್ಲಿ ಇಟ್ಟು, ಇಡೀ ಕ್ಯಾಂಪಸ್ ಅನ್ನು ಸುತ್ತಾಡಿ ಬಿಟ್ವಿ. ಪಚ್ಚೆ ಹಸಿರು ನೀರಿನಿಂದ ಕಂಗೊಳಿಸುತ್ತಿದ್ದ ಈಜುಕೊಳ, ವ್ಯಾಯಾಮ ಶಾಲೆ, ಕೆಲಸದ ಬೇಸರವನ್ನು ಹೋಗಲಾಡಿಸಲು ಇದ್ದಂತಹ ಮನರಂಜನಾ ಕೇಂದ್ರ. ಇಲ್ಲಿ ಆಡಬಹುದಾದ ಟೇಬಲ್ ಟೆನ್ನಿಸ್, ಬೌಲಿಂಗ್, ಬಾಡ್ಮಿಂಟನ್, ಪೂಲ್, ಕೇರಂ ಇನ್ನು ಅನೇಕ, ದಿನ ನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳನ್ನು ಕೊಳ್ಳಲು ಇರುವ ಶಾಪಿಂಗ್ ಸೆಂಟರ್, ಹಾಗೆ ಸಲೂನ್, ಇಲ್ಲೇ ಪಂಜಾಬಿ ತನ್ನ ವರ್ಷಗಳ ಗಡ್ಡಕ್ಕೆ ಮುಕ್ತಾಯ ಹೇಳಿದ.
ಮುಂದಿನ ದಿನದಿಂದ ತರಬೇತಿ ತರಗತಿಗಳು ಆರಂಭವಾಯಿತು. ನಾನು ಕಾಲೇಜಿನಲ್ಲೂ ನೋಡಿರದಂತಹ ಅತೀ ದೊಡ್ಡ ತರಬೇತಿ ಕೊಠಡಿ, ದೊಡ್ಡದಾದ ಬಿಳಿ ಹಲಗೆ ಹಾಗೆ ಮೂರು, ನಾಲ್ಕು ಪ್ರೊಜೆಕ್ಟ್ರ್ ಸ್ಕ್ರೀನ್ ಗಳು. ಅದರ ಎದುರು ನೂರಾರು ಕುರ್ಚಿಗಳು, ಹಾಗೆ ಪ್ರತಿ ಕುರ್ಚಿಯ ಎದುರು ಒಂದೊಂದು ಕಂಪ್ಯೂಟರ್ ಸಿಸ್ಟಮ್. ನನ್ನನು ಮೂರನೆಯ ಸಾಲಿನಲ್ಲಿ ಕುಳ್ಳಿರಿಸಲಾಯಿತು, ಅದು ಇಬ್ಬರು ಹುಡುಗಿಯರ ಮಧ್ಯ. " ನೀನು ಕಲಿಯಲಿಕ್ಕೆ ಬಂದಿದ್ದು, ಪ್ರೀತಿ ಪ್ರೇಮ ನಿನಗ್ಯಾಕೆ, ನೀನು ಮೋಹವನ್ನು ಗೆಲ್ಲು" ಅಂತಾ ಒಂದು ಮನಸ್ಸು ಹೇಳಿದ್ರೆ. ಇನ್ನೊಂದು ಮನಸ್ಸು ಕಳ್ಳ ನನ್ನಮಗಂದು "ಇಬ್ಬರೂ ಒಂದು ಸಾರಿ ನೋಡಿದರೆ, ಇನ್ನೊಂದು ಸಾರಿ ನೋಡಬೇಕು ಅನ್ನುವ ಹಾಗೆ ಇಲ್ಲಾ ಮಗಾ" ಅಂತಾ ಹೇಳಿತು. ಆದ್ರೂ ಇರಲಿ ಒಂದು ಕಡೆ ಬೇಕಾದ್ರೆ ನೋಡಿಕೊಳ್ಳೋಣ ಅಂತಾ ನಾನೇ ಹೋಗಿ ಪರಿಚಯ ಮಾಡಿಕೊಂಡೆ. ಆಮೇಲೆ ಗೊತ್ತಾಯ್ತು ಇದು ನನ್ನ ಲಕ್ ಅಲ್ಲಾ ಅಲ್ಪಾ ಭೇಟಿಕಲ್ ಆರ್ಡರ್ ಅಲ್ಲಿ ನಮ್ಮನು ಕೂರಿಸಿದ್ದಾರೆ ಎಂದು. ಒಬ್ಬಳು ಪಂಜಾಬಿ ಕುಡಿ ಗನ್ ಮೀತ್, ಇನ್ನೊಬ್ಬಳು ಅಚ್ಚ ಕನ್ನಡದ ಮಂಗಳೂರು ಮೀನು ಗೀತಾ. ಇವರಿಬ್ಬರ ಮಧ್ಯ ಸಾಂಡ್ ವಿಚ್ ಆದ ಹುಬ್ಬಳ್ಳಿ ಹುಡುಗ ಗೌರವ್ ಹಿರೇಮಠ್ ಅಂದ್ರೆ ಸಾಕ್ಷಾತ್ ನಾನೇ.
ಹೌದ್ರಿ...ನಂದು ಹುಬ್ಬಳ್ಳಿ ಆಗತೈತಿ...ಮಾತು ಹುಬ್ಬಳ್ಳಿ ಊಟದಾಂಗ್ ಸ್ವಲ್ಪ ಖಾರ...ಆದ್ರೆ ಮನಸ್ಸಾಂಗ್ ಅಗದಿ...ಚಲೋ ಮನಶ ಅದೀನಿ...ಬಿವಿಬಿ ಕಾಲೇಜ್ದಾಗ ನಾ ಇಂಜಿನಿಯರಿಂಗ್ ಮುಗಸಿದೆನ್ರಿ...ನಮ್ಮ ಕಾಲೇಜ್ದಾಗ ಇನ್ಫೋಸಿಸ್ ನ ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ಅಂತಾರ...ಯಾಕಂದ್ರ ಇನ್ಫೋಸಿಸ್ ಕ್ಯಾಂಪಸ್ ಪ್ಲೇಸ್ ಮೆಂಟ್ಗೆ ಬಂತಂತಂದ್ರೆ...ಇರೋ ಬರೋರನ್ನೆಲ್ಲಾ ತುಂಬ್ ಕೊಂಡ್ ಹೋಗತೈತಿ...ಅದೇ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ಹತ್ತಕೊಂಡೇ ನಾನ್ ಬಂದೇನ್ ರೀ...
ಒಂದು ಕಡೆ ಉತ್ತರ ಭಾರತ, ಇನ್ನೊಂದು ಕಡೆ ದಕ್ಷಿಣ ಭಾರತ, ಮಧ್ಯ ಈ ಉತ್ತರ ಕರ್ನಾಟಕದ ಹೈದನ ಸ್ಥಿತಿ ಹೇಗಪ್ಪಾ ಅಂತಾ ಯೋಚಿಸ್ತಾ ಇದ್ದೆ. ಗನ್ಮೀತ್ ಸ್ವಲ್ಪ ಸಿಂಪಲ್ ಹುಡುಗಿ ತರಹ ಕಂಡ್ರೆ, ಗೀತಾ ಸ್ಟೈಲಿಶ್ ಆಗಿ ಮೊಡರ್ನ್ ಹುಡುಗಿ ತರಹ ಕಂಡಳು. ಗನ್ಮೀತ್ ತುಂಬಾ ಮೌನಿ, ಮಾತನಾಡಿಸಿದ್ರೆ ಮಾತ್ರ ಮಾತಾಡ್ತಾ ಇದ್ಲು. ಆದ್ರೆ ಪ್ರೋಗ್ರಾಮಿಂಗ್ ವಿಷಯದಲ್ಲಿ ಅವಳು ತುಂಬಾ ಬುದ್ಧಿವಂತೆ ಆಗಿದ್ಲು. ಆದ್ರೆ ಗೀತಾ ಇದಕ್ಕೆ ತದ್ವಿರುದ್ದ. ಒಂದು ದಿನಾ ಅವಳ ಸಿ ಲಾಂಗ್ವೇಜ್ ಅಸೈನ್ಮೆಂಟ್ ಅಲ್ಲಿ ಬರುತ್ತಿದ್ದ ಎರರ ಅನ್ನು ಸರಿಪಡಿಸಲು ನನ್ನಲ್ಲಿ ಕೇಳಿಕೊಂಡಳು. ಈ ಕೊಬ್ಬರಿ ಎಣ್ಣೆ ನಾಡಿನ ಬುದ್ಧಿವಂತೆಯ ಬುದ್ಧಿಮತ್ತೆ ಅವಾಗ್ಲೇ ಗೊತ್ತಾಯ್ತು, ಯಾಕಂದ್ರೆ ಮೈನ್ ಸ್ಟೇಟ್ಮೆಂಟ್ ಒಳಗೆ ಇಂಕ್ಲುಡ್ ಸ್ಟೇಟ್ಮೆಂಟ್ ಬರೆದು ಪರದಾಡ್ತಾ ಇದ್ಲು. ಇನ್ನೂ ಶಾಕ್ ಆದ ವಿಷಯ ಏನಂದ್ರೆ ಅವಳು ಇಂಜಿನಿರಿಂಗ್ ಅಲ್ಲಿ ಕಂಪ್ಯೂಟರ್ ಸೈನ್ಸ್ ಬ್ರಾಂಚ್ ಅಂತೆ. ಒಂದು ಮಾತಿದೆ ಚೆಂದ ಇರುವವರು ಏನು ತಪ್ಪು ಮಾಡಿದರೂ ನಡೆಯುತ್ತಂತೆ, ಇನ್ನೂ ಚೆಂದ ಇರುವ ಹುಡುಗಿ ತಪ್ಪು ಮಾಡಿದ್ರೆ ಕೇಳ್ಬೇಕಾ... ಅವಳ ಕ್ಯೂಟ್ ಸ್ಮೈಲ್, 'ಗೌರವ್ ಸ್ವಲ್ಪ ಎರರ್ ಬರ್ತಾ ಇದೆ ನೋಡ್ತೀರಾ...?' ಅನ್ನೋ ಮಾತು ಅವಳ ತಪ್ಪೆಲ್ಲಾ ಮರೆಸಿ ಮತ್ತೆ ಮತ್ತೆ ತಪ್ಪು ಮಾಡ್ತಾನೆ ಇರಲಿ ಅನಿಸ್ತಾ ಇತ್ತು. ಸಹಾಯ ಮಾಡ್ತಾ ಮಾಡ್ತಾ ನಾನು ಮತ್ತೆ ಗೀತಾ ತುಂಬಾ ಹತ್ತಿರ ಆದ್ವಿ. ಇನ್ಫೋಸಿಸ್ ಮೈಸೂರಿನಾಗಿದ್ದರೂ ಕನ್ನಡದವರು ಸಿಗೋದು ತುಂಬಾ ಕಷ್ಟ, ಇನ್ನು ಪಕ್ಕದಲ್ಲೇ ಕೂತಿರಬೇಕಾದರೆ ಕೇಳ್ಬೇಕಾ. ಒಟ್ಟಿಗೆ ಊಟಕ್ಕೆ ಹೋಗಲಿಕ್ಕೆ ಶುರು ಮಾಡಿದ್ವಿ. ಒಟ್ಟಿಗೆ ಒದ್ತಾ ಇದ್ವಿ. ವೀಕೆಂಡ್ ನಲ್ಲಿ ಕ್ಯಾಂಪಸ್ ಒಳಗೆ ಇದ್ದಂತಹ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡ್ತಾ ಇದ್ವಿ. ಒಟ್ಟಿಗೆ ಮೈಸೂರು ಸುತ್ತುತ್ತಾ ಇದ್ವಿ. ಮನೆಗೆ ಹೋದಾಗ ಮಂಗಳೂರು ಫೇಮಸ್ ಕೋರಿ ರೊಟ್ಟಿ ಅವಳು ತರ್ತಾ ಇದ್ಲು. ನಾನು ಹುಬ್ಬಳ್ಳಿಯಿಂದ ಧಾರವಾಡ ಪೇಡ, ಜೋಳದ ರೊಟ್ಟಿ, ಶೇಂಗಾ ಚಟ್ನಿ ಎಲ್ಲ ತಂದು ಅವಳ ಕಣ್ಣಲ್ಲಿ ನೀರು ತರಿಸ್ತಾ ಇದ್ದೆ. ಗೀತಾ ಸಣ್ಣ ವಯಸ್ಸಿನಿಂದ ಮಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದರಿಂದ ಹುಬ್ಬಳ್ಳಿ ಖಾರ ಸ್ವಲ್ಪ ಜಾಸ್ತಿನೇ ಖಾರ ಹತ್ತಿಸ್ತು.
ಅವಳು ಸಿ ಲ್ಯಾಂಗ್ವೇಜ್ ಎಕ್ಸಾಮ್ನಲ್ಲಿ ಫೇಲ್ ಆದಾಗ ನಮ್ಮ ಗೆಳೆತನ ಇನ್ನೂ ಜಾಸ್ತಿಯಾಯಿತು. ಯಾಕಂದ್ರೆ ನಾನು ಮತ್ತೆ ಗನ್ ವಿತ್ ಎ ಗ್ರೇಡ್ ತೆಗೆದು ಪಾಸ್ ಆಗಿದ್ವಿ. ಹಾಗೆ ನನ್ ರೂಮೇಟ್ ವರುಣ್ ಕೂಡಾ ಕಾಲು ಎತ್ತಿಕೊಂಡಿದ್ದ. ಹಾಗಾಗಿ ಗೀತಾ ಮತ್ತೆ ವರುಣ್ ಇನ್ನೊಂದು ಬಾರಿ ಪರೀಕ್ಷೆ ಬರೀಬೇಕಿತ್ತು. ಪ್ರತಿದಿನ ನಾನು ಮತ್ತೆ ಗನ್ಮೀತ್ ತರಗತಿಗಳು ಮುಗಿದ ಮೇಲೆ ರಾತ್ರಿ ಹನ್ನೊಂದು ಗಂಟೆಯ ತನಕ ಗೀತಾ ಹಾಗೂ ವರುಣ್ ಗೆ ಅಭ್ಯಾಸ ಮಾಡಿಸೋದು ನಮ್ಮ ದಿನಚರಿಗಳಲ್ಲಿ ಒಂದಾಯಿತು. ನಾವು ನಾಲ್ಕು ಜನ ಒಟ್ಟಿಗೆ ತಿರುಗಾಡ್ಲಿಕ್ಕೆ ಶುರು ಮಾಡಿದ್ವಿ. ನಮ್ಮ ಹಾಗೆ ವರುಣ್ ಮತ್ತೆ ಗನ್ಮೀತ್ ಪಂಜಾಬಿಗಳು ಆಗಿದ್ದರಿಂದ ಬೇಗ ಬೆರೆತು ಹೋದರು.
ಪರೀಕ್ಷೆ ದಿನ ಬಂದೇ ಬಿಡ್ತು ನಾನು ಮತ್ತೆ ಗನ್ಮೀತ್ ಇಬ್ಬರು ಗೀತಾ ಮತ್ತೆ ವರುಣ್ ಗೋಸ್ಕರ ಪರೀಕ್ಷಾ ಕೇಂದ್ರದ ಎದುರು ಕಾಯ್ತಾ ಇದ್ವಿ. ವರುಣ್ ಮೊದಲನೆಯವನಾಗಿ ಹೊರಗೆ ಬಂದ. ಅವನ ಮುಖದ ಮಂದಹಾಸ ಹೇಳ್ತಾ ಇತ್ತು ಪರೀಕ್ಷೆ ತುಂಬಾ ಸುಲಭವಾಗಿತ್ತು ಎಂದು. ಹಾಗೆ ಅವನು ಅದನ್ನು ಚೆನ್ನಾಗಿ ಬರೆದಿದ್ದಾನೆಂದು. ಹಾಗೆ ತುಂಬಾ ಜನ ಹೊರಗಡೆ ಬಂದ್ರು ಆದ್ರೆ ಗೀತಾ ಮಾತ್ರ ಇನ್ನೂ ಹೊರಗಡೆ ಬಂದಿರಲಿಲ್ಲ. ನನಗೆ ಚಿಂತೆ ಶುರುವಾಯಿತು ಯಾಕಂದ್ರೆ ಅವಳು ಪಾಸ್ ಆಗುವ ಅವಕಾಶ ತುಂಬಾ ಕಡಿಮೆ ಇತ್ತೆಂದು ನನಗೊಬ್ಬನಿಗೇ ತಿಳಿದಿತ್ತು. ಆದರೆ ಕೊನೆ ಕ್ಷಣದಲ್ಲಿ ಅವಳು ಓಡ್ತಾ ಹೊರಗಡೆ ಬಂದು ಒಂದು ಮಾತು ಕೂಡ ಆಡದೆ ನನ್ನನ್ನು ಗಟ್ಟಿಯಾಗಿ ಹಿಡಿದು ನನ್ನ ಕೆನ್ನೆಗೆ ಒಂದು ಸಿಹಿ ಮುತ್ತನ್ನಿಟ್ಟಳು. ನನಗೆ ಒಂದು ಸಾರಿ ಏನು ಆಗ್ತಾ ಇದೆ ಎಂದು ತಿಳಿಯಲಿಲ್ಲ. ಅವಳು ಓಡ್ತಾ ಬರುವಾಗ ಏರಲಿಕ್ಕೆ ಶುರುವಾದ ಎದೆ ಬಡಿತ ಅವಳ ಬಿಸಿ ಉಸಿರು ನನ್ನ ಕೆನ್ನೆ ಸೋಕುವಾಗ ಒಂದು ನಿಮಿಷಕ್ಕೆ ಸೆಂಚುರಿ ಮೇಲೆ ಹೊಡೆದಿತ್ತು. ಒಂದು ಸಾರಿ ಶಾಕ್ ಗೆ ನಾನು ಮೂಕ ಸ್ತಬ್ಧನಾದೆ. ಹಾಗೆ ನನ್ನ ಹಾರ್ಟ್ ನಲ್ಲಿ ಸಣ್ಣದಾಗಿ ಗಿಟಾರ್ ಬಾರಿಸಲಿಕ್ಕೆ ಸ್ಟಾರ್ಟ್ ಆಯಿತು.
(ಪದ್ಯವನ್ನು ಕೇಳಲು ಕೆಳಗಿನ ಪದ್ಯದ ಸಾಲುಗಳ ಮೇಲೆ ಕ್ಲಿಕ್ ಮಾಡಿ.)
ಸುತ್ತ ಇರುವವರೆಲ್ಲ ಒಂದು ಸಾರಿ ಮೂಕ ವಿಸ್ಮಿತರಾಗಿ ನಮ್ಮನ್ನೇ ನೋಡ್ತಾ ಇದ್ರು. ಅವರಿಗೆಲ್ಲಾ ತಿಳಿದಿತ್ತು ಏನಾಗಿತ್ತೆಂದು. ನಾನು ಶಾಕ್ ನಿಂದ ಇನ್ನು ಹೊರಗಡೆ ಬಂದಿರಲಿಲ್ಲ. ತನ್ನ ಜೀವನದಲ್ಲಿ ಎಂದೂ ನಡೆಯದ ಘಟನೆ ಆಕಸ್ಮಿಕವಾಗಿ ನಡೆದ ಹೋದಾಗ ಮನಸ್ಸು ಶಾಕ್ ಅನ್ನು ತೆಗೆದು ಜೀರ್ಣಿಸಿಕೊಳ್ಳಲಿಕ್ಕೆ ಸಮಯ ತೆಗೆದುಕೊಳ್ಳುತ್ತಂತೆ, ಅದೂ ಅಲ್ಲದೆ ಹುಡುಗಿಯರ ವಿಷಯದಲ್ಲಿ ಜೀರೊ ಆಗಿರುವ ಹುಡುಗ ಚೆಂದದ ಕರಾವಳಿ ಬೆಡಗಿ ಜೊತೆ ಎಲ್ಲರ ಎದುರು ಮುತ್ತು ತೆಗೆದುಕೊಳ್ಳುವುದೆಂದರೆ ಸುಮ್ನೆನಾ..? ಬರೋಬ್ಬರಿ ಒಂದು ವಾರ ಆದ್ರೂ ಬೇಕಾಗುತ್ತೆ ಶಾಕ್ ನಿಂದ ಹೊರಗೆ ಬರಲಿಕ್ಕೆ. ಆದರೆ ಅವಳು ಮಾತ್ರ ಅದನ್ನು ತುಂಬಾ ಸಹಜವಾಗಿ ತೆಗೆದುಕೊಂಡಳು. ನಾನು ಕೂಡ ಹೃದಯದ ಮೇಲೆ ಉಲ್ಕಾ ಪ್ರಪಾತವಾಗಿ, ಸುನಾಮಿಯಂತಹ ಅಲೆಗಳು ಎದ್ದರೂ ಮುಖದಲ್ಲಿ ಶಾಂತ ಸಾಗರದ ಭಾವ ಸೂಚಿಸಿದೆ. ಅವಳು ಹೇಳಿದ್ಲು 'ಎಕ್ಸಾಮ್ ತುಂಬಾ ಈಸಿ ಇತ್ತು ತುಂಬಾ ಚೆನ್ನಾಗಿ ಮಾಡಿದೆ. ಇದರ ಕಂಪ್ಲೀಟ್ ಕ್ರೆಡಿಟ್ ನಿಂಗೆ ಹೋಗ್ಬೇಕು ಗೌರವ್, ತುಂಬಾ ಥ್ಯಾಂಕ್ಸ್ ಸ್ವೀಟ್ ಹಾರ್ಟ್' ಅಂತ. ಆದರೆ ನಾವಿಬ್ಬರು ಯಾವತ್ತೂ ಯಾವ ತರಹದ ಸಂಬಂಧಗಳನ್ನು ಇರಲಿಲ್ಲ. ಆದರೆ ಸ್ವೀಟ್ ಹಾರ್ಟ್ ಅನ್ನುವ ಪದ ನನ್ನ ಹೃದಯದಲ್ಲಿ ಘಾಸಿ ಮಾಡಿತು. ಆದರೆ ಅವಳು ತನ್ನೆಲ್ಲಾ ಆಪ್ತ ಗೆಳೆಯರಿಗೆ ಹಾಗೇ ಕರೆಯುತ್ತಿದ್ದಳು ಎಂದು ಆಮೇಲೆ ತಿಳಿಯಿತು. ಈ ಘಟನೆ ಆದ ಮೇಲೆ ನಾವು ತುಂಬಾ ಅಂದರೆ ತುಂಬಾ ಸನಿಹವಾದ್ವಿ. ನನ್ನ ಪ್ರತಿಯೊಂದು ಸಣ್ಣ ವಿಷಯದಲ್ಲೂ ಅವಳು ಪಾತ್ರ ನಿರ್ವಹಿಸಲು ಆರಂಭಿಸಿದಳು. ಅಂದ್ರೆ ನನ್ನ ಊಟದ ವಿಚಾರದಲ್ಲಿ, ನಾನು ಹಾಕಿಕೊಳ್ಳುವ ಬಟ್ಟೆ ವಿಚಾರದಲ್ಲಿ, ನಾನು ಎಷ್ಟು ಗಂಟೆಗೆ ಏಳುತ್ತೇನೆ, ಎಷ್ಟು ಗಂಟೆಗೆ ಮಲಗುತ್ತೇನೆ, ಪ್ರತಿಯೊಂದಕ್ಕೂ ಅವಳು ಸಲಹೆ ಕೊಡ್ತಾ ಇದ್ದಳು. ಅವಳು ನನ್ನ ಮೇಲೆ ತೋರಿಸ್ತಾ ಇದ್ದ ಕಾಳಜಿ ನನಗೆ ಇಷ್ಟವಾಗುತ್ತಾ ಹೋಯ್ತು. ನನಗೆ ಹುಡುಗಿಯರ ಬಗ್ಗೆ ತಿಳಿಯದಿದ್ದ ಕೆಲವು ಸೂಕ್ಷ್ಮಗಳನ್ನು ಅವಳು ನನಗೆ ಹೇಳಿದ್ಲು. ಮಾತನಾಡಲು ಏನೂ ವಿಷಯವಿಲ್ಲದಿದ್ದರು ಮನಸ್ಸು ಪದೇ ಪದೇ ಅವಳನ್ನು ನೋಡಬೇಕು, ಅವಳ ಜೊತೆ ಮಾತನಾಡಬೇಕು ಎಂದು ಬಯಸುತಿತ್ತು.
ಮುಂದಿನ ವಾರಾಂತ್ಯದಲ್ಲಿ ಅವಳು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋದಳು. ಅವಳು ಅಲ್ಲೇ ಇಂಜಿನಿಯರಿಂಗ್ ಮಾಡಿದ್ದಂತೆ. ಅವಳ ಕೆಲವು ಗೆಳೆಯರನ್ನು ಪರಿಚಯ ಮಾಡಿಕೊಟ್ಟಳು. ನಾನು ನನ್ನ ಗೆಳೆಯರನ್ನು ಭೇಟಿ ಮಾಡಿದೆ. ಬೆಂಗಳೂರಿನ ಪ್ರಸಿದ್ಧವಾದ ಮಾರ್ಕೆಟ್ ಹಾಗೂ ಮಾಲ್ ಗಳಲ್ಲಿ ನಾವು ಸುತ್ತಾಡಿದ್ವಿ. ಒಂದು ಅವಳ ಬಗ್ಗೆ ತಿಳಿದು ಬಂದ ವಿಷಯ ಏನೆಂದರೆ ಅವಳಿಗೆ ತುಂಬಾ ಒಳ್ಳೆಯ ಗೆಳೆಯರ ಬಳಗವಿತ್ತು. ಅದೇ ದಿನ ರಾತ್ರಿ ನನ್ನನ್ನು ಒಂದು ಪಬ್ ಗೆ ಕರೆದುಕೊಂಡು ಹೋಗಿದ್ಲು. ಅಲ್ಲಿ ನಾವಿಬ್ಬರೂ ಮನ ಬಂದಂತೆ ಜೋಡಿ ಹಕ್ಕಿಗಳ ಹಾಗೆ ಕುಣಿದು ಕುಪ್ಪಳಿಸಿದ್ವಿ. ಇವೆಲ್ಲ ನನ್ನ ಜೀವನದಲ್ಲಿ ಮೊದಲ ಅನುಭವವಾಗಿದ್ದವು, ಆದ್ರೆ ಅವಳಿಗೆ ಇದು ಸರ್ವೇ ಸಾಮಾನ್ಯವಾಗಿತ್ತು. ಮುಂದಿನ ದಿನದ ಸಂಜೆ ನಾವಿಬ್ಬರು ಮೈಸೂರಿಗೆ ಹೊರಟು ನಿಂತ್ವಿ. ಬೆಂಗಳೂರಿನಿಂದ ಮೈಸೂರು ಮೂರು ಗಂಟೆಗಳ ಪಯಣ. ಆದರೆ ಆ ಸಂಜೆಯ ಮೂರು ಗಂಟೆ ನನ್ನ ಜೀವನದಲ್ಲಿ ಮರೆಯಲಾಗದ ಅನುಭವ ನೀಡಿತು.
ಬಸ್ಸಿನಲ್ಲಿ ಬರುವಾಗ ನಾವು ಭೂಮಿ ಮೇಲೆ ಇರುವಂತಹ ಪ್ರತಿಯೊಂದು ಜೀವಿ, ಪಶು, ಪ್ರಾಣಿ, ಪಕ್ಷಿಗಳ ಬಗ್ಗೆಯೂ ಮಾತಾಡಿದ್ವಿ. ಅವಳ ತಲೆಯನ್ನು ನನ್ನ ಭುಜದ ಮೇಲಿಟ್ಟು ಮಲಗಿದಳು. ನಾನು ಸಲುಗೆಯಿಂದ ಅವಳ ಇನ್ನೊಂದು ಭುಜವನ್ನು ಹಿಡಿದುಕೊಂಡು ಕುಳಿತುಕೊಂಡೆ. ಇದನ್ನು ಅರ್ಧ ಅಪ್ಪುಗೆ ಅಂತ ಸಹ ಕರೆಯಬಹುದು. ನಾನು ಯಾವತ್ತೂ ಈ ತರಹ ಒಂದು ಹುಡುಗಿಯ ಜೊತೆ ಕುಳಿತಿರಲಿಲ್ಲ. ಸಿನಿಮಾದಲ್ಲಿ ನೋಡಿದಂತಹ ಕೆಲವು ದೃಶ್ಯಗಳು ನನ್ನ ಜೀವನದಲ್ಲಿ ನಡೆಯುತ್ತಿರುವುದು ನನಗೆ ನಂಬಲಿಕ್ಕೆ ಆಗಲಿಲ್ಲ. ಇದು ಕನಸಾ ನನಸಾ ಎನ್ನುವ ತಳಮಳದಲ್ಲಿ ನಾನಿದ್ದೆ. ಈ ಕ್ಷಣ ಹೀಗೆ ಇರಲಿ ಎಂದು ಮನಸ್ಸು ಬಯಸುತ್ತಿತ್ತು . ಯಾಕಂದ್ರೆ ನಾನು ಅವಳ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೆ ಹೌದು ನನಗೆ ಅವತ್ತು ಅವಳ ಮೇಲೆ ಪ್ರೇಮಾಂಕುರವಾಯಿತು.
ಅವಳು : ಗೌರವ್ ನಾನು ನಿನಗೊಂದು ವಿಷಯ ಹೇಳಲಾ...?
ನಾನು : ಏನ್ ಹೇಳು
ಅವಳು : ನಿನಗೆ ನನ್ನ ಫ್ರೆಂಡ್ ರಾಘವ್ ನೆನಪಿದಾನಾ...? ಅದೇ ನಾವು ಗರುಡಮಾಲ್ನಲ್ಲಿ ಮೀಟ್ ಆದ್ವಲ್ಲಾ..
ನಾನು : ಆ ಗೊತ್ತಾಯ್ತಲ್ಲ ಅದೇ ಆ ಚಷ್ಮಾ ಹಾಕದವನಲ್ಲೆನ್...ಎದಕ್ ಕೆಳಕ್ ಹತ್ತೀ..?
ಅವಳು : ನಾನು ಅವನ ಜೊತೆ ಮೂರು ವರ್ಷದಿಂದ ಲವ್ವಲ್ಲಿ ಇದೀನಿ. ನಾವು ನಿನ್ನೆ ಮದುವೆ ಆಗ್ಬೇಕು ಅಂತ ನಿರ್ಧಾರ ಮಾಡಿದ್ವಿ...
ಈ ಮಾತು ಹೇಳುವಾಗ ಅವಳ ಕೆನ್ನೆ ಕೆಂಪಾಗಿತ್ತು. ಮುಖದಲ್ಲಿ ನಾಚಿಕೆ ನಲಿದಾಡುತ್ತಿತ್ತು. ನನಗೊಂದು ಸಾರಿ ಕಾಲಿಟ್ಟ ನೆಲ ಕುಸಿದ ಅನುಭವವಾಯಿತು. ಅವಳ ಮಾತುಗಳನ್ನು ಜೀರ್ಣಿಸಿ ಕೊಳ್ಳಲಿಕ್ಕೆ ಆಗಲಿಲ್ಲ. ಅವಳನ್ನು ಬಿಟ್ಟು ಸ್ವಲ್ಪ ದೂರ ಕೂತೇ.
ನಾನು : ನೀನು ಇದನ್ನು ನನಗೆ ಮೊದಲೇ ಯಾಕೆ ಹೇಳಲಿಲ್ಲಾ...?
ಅವಳು : ನಾನು ಅವನನ್ನು ನಿನಗೆ ಭೇಟಿ ಮಾಡಿಸಿದ ಮೇಲೆ ಹೇಳೋಣ ಅಂತ ಇದ್ದೆ, ನನ್ನಿಂದ ಏನಾದ್ರೂ ತಪ್ಪಾಯ್ತಾ...?
ನಾನು : ಇಲ್ಲ ಇಲ್ಲ ಹಾಗೆಲ್ಲ ಯಾಕೆ ತಿಳ್ಕೊಳ್ಳಕ್ ಹತ್ತೀ ನಿನ್ನಿಂದ ಏನು ತಪ್ಪಾಗಿಲ್ಲ ಬಿಡ್ ವಿಷಯ ಕೇಳಿ ಬಾಳ ಖುಷಿ ಯಾತ್ ನೋಡ್... ಕಂಗ್ರಾಟ್ಸ್
ಅವಳು : ಥ್ಯಾಂಕ್ಸ್ ಕಣೋ...
ಇಬ್ಬರ ಕಡೆಯಿಂದಲೂ ಒಂದು ರೀತಿಯ ಸೂತಕದ ಮೌನ. ಇಬ್ಬರೂ ಒಂದು ಗಂಟೆಗಳ ಕಾಲ ಏನೂ ಮಾತನಾಡಲಿಲ್ಲ. ಅವಳು ಅವಳ ಐಪ್ಯಾಡ್ ನಲ್ಲಿ ಸಾಂಗ್ ಕೇಳ್ತಾ ಕಳೆದುಹೋಗಿದ್ಲು. ನಾನು ಅವಳ ಕಣ್ಣೆದುರು ಮಾತ್ರ ಪುಸ್ತಕ ಓದುವವನ ತರಹ ಕಾಣಿಸಿಕೊಳ್ಳುತ್ತಿದ್ದೆ. ಒಳ ಹೃದಯ ನೋವಿನಿಂದ ಕರಗುತ್ತಿತ್ತು. ಕೊನೆಗೆ ಅವಳೇ ಮೌನ ಮುರಿದಳು.
ಅವಳು : ಏನಾಯ್ತು ಗೌರವ್ ಯಾಕೆ ಸುಮ್ನಿದ್ದಿಯಾ
ನಾನು : ಏನಿಲ್ಲ ಬಿಡು...
ಅವಳು : ನೀನು ನನಗೆ ಹೇಳ್ತೀಯಾ ಇಲ್ವಾ...?
ನಾನು : ನಾನು ಹೇಳಿಯೂ ಪ್ರಯೋಜನ ಇಲ್ಲ ಅದನ್ನು ತಿಳ್ಕೊಂಡು ನೀನು ಏನು ಮಾಡಕ್ಕಾಗಲ್ಲ.
ಅವಳು : ಹೌದಾ ಹಾಗಾದ್ರೆ ನನಗೆ ಮೂರು ಚಾನ್ಸ್ ಕೊಡು ನಾನೇ ಗೆಸ್ ಮಾಡ್ತೀನಿ.
ನಾನು : ಆಗಲಿ ಅದು ನೋಡೇ ಬಿಡೋಣ
ಅವಳು : ಓಕೆ ನೀನು ನನ್ನ ಜೊತೆ ಬೆಂಗಳೂರಿನಲ್ಲಿ ಎಂಜಾಯ್ ಮಾಡಿಲ್ಲ ಅನ್ಸುತ್ತೆ...?
ನಾನು 'ಅಲ್ಲಾ' ಅನ್ನುವ ತರಹ ತಲೆ ಅಲ್ಲಾಡಿಸಿದೆ. ಹಾಗೆಯೇ ಇಬ್ಬರಿಗೂ ತಿಳಿದಿತ್ತು ಅದು ಕಾರಣವಾಗಲು ಸಾಧ್ಯವೇ ಇಲ್ಲ ಎಂದು.
ಅವಳು : ಹಾಗಾದ್ರೆ ನಿನಗೆ ರಾಘವ್ ಇಷ್ಟ ಆಗಲಿಲ್ವಾ..?
ಇವಾಗ ಅವಳು ವಿಷಯದ ಸಮೀಪ ಬರಲು ಆರಂಭಿಸಿದಳು ಆದರೆ ಇದು ಸರಿಯಾದ ಕಾರಣವಾಗಿರಲಿಲ್ಲ ಆದರೂ ಕಾರಣಕ್ಕೆ ಹತ್ತಿರವಾಗಿತ್ತು.
ನಾನು : ಹೇ ಅವನು ಅಗ್ದಿ ಛಲೋ ಮನುಷ್ಯ ಅದಾನ. ನಿಮ್ಮಿಬ್ಬರದ್ದು ಚಲೋ ಜೋಡಿ ಆಗ್ತೈತ್ ತಗೋ. ಅದು ಅಲ್ದೇ ಇದ್ ನಿನ್ನ ಜೀವನ ಐತಿ ನಾನೇನು ಅವನ್ನ ಲಗ್ನ ಆಗಬೇಕೆನ್. ಇದೆಲ್ಲಾ ಕಾರಣ ಅಲ್ ಬಿಡು. ಲಾಸ್ಟ್ ಒಂದ್ ಚಾನ್ಸ್ ಉಳದೈತ್ ನೋಡ್.
ಅವಳು : ಮತ್ತೆ ನೀನು ನನ್ನ ಇಷ್ಟ ಪಡ್ತಾ ಇದ್ಯಾ...?
ಅಲ್ಲಿಗೆ ನನ್ನ ಕಥೆ ಮುಗೀತು. ಅವಳ ಗೂಗ್ಲಿಗೆ ನಾನು ಕ್ಲೀನ್ ಬೌಲ್ಡ್ ಆಗಿದ್ದೆ. ನನ್ನ ಮುಖ ಕೆಂಪು ಹತ್ತಿತ್ತು. ನಾನು ನನ್ನ ಭಾವನೆಗಳನ್ನು ತುಂಬಾ ತಡೆ ಹಿಡಿಯಲಿಕ್ಕೆ ನೋಡಿದೆ ಆದ್ರೆ ನನ್ನಿಂದ ಸಾಧ್ಯವಾಗಲಿಲ್ಲ.
ನಾನು : ಇಲ್ಲ ನಂಗೆ ಎಂಗೇಜ್ ಆದವರನ್ನು ಇಷ್ಟಪಡುವ ಚಾಳಿ ಇಲ್ಲ ತಗೋ.
ಅವಳು : ಓಹೋ ಮಿಸ್ಟರ್ ಗೌರವ್ ಹಿರೇಮಠ್ ತುಂಬಾ ಚೆನ್ನಾಗಿ ಯೋಚನೆ ಮಾಡಿ ಈ ಮಾತು ಹೇಳ್ತಾ ಇದ್ದೀರಾ...?
ಈಗ ನಾನು ಒಪ್ಪಿಕೊಳ್ಳಲೇಬೇಕಾಯಿತು. ಅವಳು ಜೋರಾಗಿ ನಗಲಿಕ್ಕೆ ಹತ್ತಿದಳು. ನಾನು ಕಾರಣ ಕೇಳಿದೆ ಆದರೆ ಅವಳ ನಗು ನೆತ್ತಿ ಹಿಡಿದಿತ್ತು. ಕೊನೆಗೆ ಅವಳೇ ಮಾತು ಆರಂಭಿಸಿದಳು.
ಅವಳು : ನಾನೇನು ಮಂಗ್ಯಾ ಗತ್ತಿ ಕಾಣಕ್ ಹತ್ತಿ ನೆನ್
ನಾನು : ಏನು...?
ನನ್ನ ಜೊತೆ ಮಾತನಾಡಿ ಮಾತನಾಡಿ ಅವಳ ಬಾಯಲ್ಲೂ ಹುಬ್ಬಳ್ಳಿ ಕನ್ನಡ ನೀರೂರಿತ್ತು.
ಅವಳು : ಅಯ್ಯೋ ಮಂಗ್ಯಾ ನನ್ನ ಮಗನ ನಾನು ಮತ್ತೆ ರಾಘವ್ ಒಳ್ಳೆಯ ಸ್ನೇಹಿತರು ಕಣೋ.
ನನಗೆ ಒಂದು ಸಾರಿ ಆಶ್ಚರ್ಯ ಸಂತೋಷ ಎರಡೂ ಆಯ್ತು. ಇವಳು ನನ್ನ ಸಮಾಧಾನಕ್ಕೆ ಹೇಳ್ತಾ ಇದ್ದಳೋ ಅಥವಾ ನಿಜ ಹೇಳ್ತಾ ಇದ್ದಾಳೋ ಒಂದು ತಿಳಿವಾಲ್ದಾಯಿತು. ನನ್ನ ಮುಖದಲ್ಲೂ ನಗು ಅರಳಲು ಆರಂಭಿಸಿತು, ನಾನು ಅವಳ ಜೊತೆ ನಗಾಡಲಿಕ್ಕೆ ಆರಂಭಿಸಿದೆ. ಇದೇ ಸರಿಯಾದ ಸಮಯ ಎಂದು ನಿರ್ಧರಿಸಿ ಹಾಗೇ ಅವಳ ಎರಡು ಬೆರಳುಗಳನ್ನು ಜೋಡಿಸಿ ನಾನು ಹಿಡಿದುಕೊಂಡೇ.
ನಾನು : ಐ ಲವ್ ಯೂ ಗೀತಾ ನಿನ್ನನ್ನು ತುಂಬಾ ಅಂದ್ರೆ ತುಂಬಾ ಇಷ್ಟ ಪಡ್ತಾ ಇದೀನಿ.
ಅವಳು ಒಂದು ಕ್ಷಣ ಸುಮ್ಮನಾದ್ಲು. ನನ್ನ ಎದೆ ಬಸ್ಸಿನ ವೇಗದ ಜೊತೆ ಢವಢವ ಢವಢವ ಅಂತ ಹೊಡೆದು ಕೊಳ್ತಾ ಇತ್ತು.
ನಾನು : ಪ್ಲೀಸ್ ಏನಾದ್ರೂ ಹೇಳು ಮೌನದಲ್ಲಿ ನನ್ನ ಕೊಲ್ಲಬೇಡ.
ಅವಳು : ನನ್ನ ಕೈ ಬಿಡಿಸಿಕೊಂಡು ಗಟ್ಟಿಯಾಗಿ ನಗಾಡಲಿಕ್ಕೆ ಆರಂಭಿಸಿದ್ಲು... ಆಮೇಲೆ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು.
ಅವಳು : ಐ ಲವ್ ಯು ಲಾಟ್ ಕಣೋ ಮಂಗು. ನೀನು ಅಷ್ಟು ಸುಲಭವಾಗಿ ನಂಗೆ ಪ್ರಪೋಸ್ ಮಾಡಲ್ಲಾ ಅಂತ ಗೊತ್ತಿತ್ತು. ಅದಕ್ಕೆ ಇಷ್ಟೆಲ್ಲಾ ನಾಟಕ ಆಡಬೇಕಾಯಿತು.
ಅವಳ ಬಾಹು ಬಂಧನದಲ್ಲಿ ನಾನು ಕಳೆದುಹೋದೆ. ಇಬ್ಬರ ಕಣ್ಣಂಚಲ್ಲಿ ಹನಿ ನೀರು ಮುಖದಲ್ಲಿ ಮುಗುಳು ನಗು. ಏನನ್ನೋ ತನ್ನದಾಗಿಸಿಕೊಂಡ ಭಾವ. ಬಸ್ಸು ಮೈಸೂರು ತಲುಪದೆ ಪಯಣ ಹೀಗೆ ಸಾಗ್ತಾ ಇರಲಿ ಎಂದು ಮನಸ್ಸು ಬಯಸುತ್ತಿತ್ತು. ಆದರೆ ಪ್ರೀತಿಯೊಂದೇ ಹೊಟ್ಟೆ ತುಂಬಿಸಲ್ಲಾ ಅಲ್ವಾ...?
ನಾನಿಂದು ನಗಿಸುವೆ ಈ ನಿನ್ನನು...
ಇರುಳಲ್ಲು ಕಾಣುವೆ ಕಿರು ನಗೆಯನು,
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು...
ಜೊತೆಯಾಗಿ ನಡೆವೆ ನಾ ಮಳೆಯಲೂ,
ಬಿಡದಂತೆ ಹಿಡಿವೆ ಈ ಕೈಯ್ಯನು....
ಗೆಳೆಯ ಜೊತೆಗೆ ಹಾರಿ ಬರುವೆ,
ಬಾನ ಎಲ್ಲೆ ದಾಟಿ ನಲಿವೆ.
ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ.
ಹೊಸ ಭಾಷೆಯಿದು, ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ...
(ಸಾಹಿತ್ಯ : ಆರ್.ಏನ್. ಜಯಗೋಪಾಲ್,
ಚಿತ್ರ : ಪಲ್ಲವಿ ಅನುಪಲ್ಲವಿ ).
ಮತ್ತೆ ನಮ್ಮ ಮೈಸೂರು ದಿನಗಳು ಆರಂಭವಾದವು. ಆದರೆ ಈ ಬಾರಿ ನಾನು ಅವಳ ಪ್ರೀತಿಯ ಸಾಹುಕಾರನಾಗಿದ್ದೆ. ಕ್ಲಾಸ್ಗಳಿಗೆ ಹೋಗುವುದು, ಅಸೈನ್ಮೆಂಟ್ ಪೂರ್ಣ ಮಾಡುವುದು, ಕ್ಲಾಸ್ ಆದ ಮೇಲೆ ಒಟ್ಟಿಗೆ ಓದುವುದು, ಒಟ್ಟಿಗೆ ಊಟಕ್ಕೆ ಹೋಗುವುದು, ನಮ್ಮ ದಿನ ನಿತ್ಯದ ಕಾಯಕವಾಗಿತ್ತು. ಸಮಯ ಸಿಕ್ಕಾಗೆಲ್ಲ ಲಾಂಗ್ ವಾಕ್ ಹೋಗ್ತಾ ಇದ್ವಿ ಹಾಗೆಯೇ ನಮ್ಮ ತುಟಿಗಳು ಒಂದಾಗುತ್ತಿತ್ತು. ಇಂತಹ ಸುಂದರವಾದ ದಿನಗಳನ್ನು ನೀಡಿದ್ದಕ್ಕೆ ದೇವರಿಗೆ ನಾನು ಯಾವಾಗಲೂ ಋಣಿಯಾಗಿದ್ದೆ. ಪರೀಕ್ಷೆಗಳು ಬಂದು ಹೋಗ್ತಾ ಇದ್ದವು. ನಾನು ಪ್ರೀತಿಯಲ್ಲಿ ಬಿದ್ದರೂ ಎ ಗ್ರೇಡ್ ತೆಗೆದುಕೊಳ್ಳುವುದನ್ನು ಮುಂದುವರಿಸಿದ್ದೇ. ಅವಳು ಹೇಗಾದ್ರೂ ಸಾಹಸ ಮಾಡಿ ಪಾಸ್ ಆಗ್ತಾ ಬಂದಿದ್ದಳು. ನಾನು, ಗೀತಾ, ವರುಣ್ ಮತ್ತು ಗನ್ಮೀತ್ ಊಟಿ, ಮಡಿಕೇರಿ, ಮಂಗಳೂರಿಗೆ ಪ್ರವಾಸ ಕೈಗೊಂಡ್ವಿ. ಗೀತಾ ತನ್ನ ಮನೆಗೆ ನಮ್ಮನ್ನು ಕರೆದುಕೊಂಡು ಹೋಗಿದ್ಲು. ಅವಳ ತಂದೆ ತಾಯಿ ನನಗೆ ತುಂಬಾ ಇಷ್ಟವಾದರು. ಅವಳ ತಂಗಿ ಕೂಡ ಅವಳ ತರಹವೇ ಚೂಟಿ ಆಗಿದ್ಲು.
ಕೊನೆಗೂ ಮೈಸೂರು ಪಯಣದ ಕೊನೆಯ ತಿಂಗಳು ಬಂದೇ ಬಿಡ್ತು. ನಾವು ಅಲ್ಲಿಯವರೆಗೆ ಪಡೆದ ವಿವಿಧ ವಿಷಯಾಧಾರಿತ ತರಬೇತಿಗಳನ್ನು ಒಟ್ಟು ಸೇರಿಸಿ ಒಂದು ಪರೀಕ್ಷೆ ಎದುರಿಸಬೇಕಿತ್ತು. ಈ ಪರೀಕ್ಷೆಯಲ್ಲಿ ಪ್ರಯೋಗಾಧಾರಿತ ಪರೀಕ್ಷೆ ಕೂಡ ಒಂದಾಗಿತ್ತು. ಇದರಲ್ಲಿ ಒಂದು ಪ್ರಾಜೆಕ್ಟನ್ನು ಕೇವಲ ಮೂರು ಗಂಟೆಗಳಲ್ಲಿ ಪೂರ್ಣ ಮಾಡಬೇಕಿತ್ತು ಇದು ಗೀತ ಅಂಥವರಿಗೆ ತುಂಬಾ ತ್ರಾಸದಾಯಕವಾಗಿತ್ತು.
ಪರೀಕ್ಷೆಯ ದಿನ ಬಂದೇ ಬಿಡ್ತು, ನಾವು ಮೂರೂ ಜನ ಪರೀಕ್ಷೆಯನ್ನು ಚೆನ್ನಾಗಿ ಬರೆದು ಪಾಸ್ ಆಗಿದ್ವಿ. ಆದರೆ ಗೀತಾ ಮತ್ತೆ ಅನುತ್ತೀರ್ಣಳಾಗಿದ್ದಳು. ಈಗ ಮತ್ತೆ ಗೀತಾ ಪುನರ್ ಪರೀಕ್ಷೆಯನ್ನು ಎದುರಿಸಬೇಕಿತ್ತು. ಈ ಪರೀಕ್ಷೆಯನ್ನು ಪೂರ್ಣ ಮಾಡದೆ ಮೈಸೂರು ತರಬೇತಿ ಪೂರ್ಣವಾಗುತ್ತಿರಲಿಲ್ಲಾ. ಹಾಗಾಗಿ ಪುನರ್ ಪರೀಕ್ಷೆಯಲ್ಲಿ ತೇರ್ಗಡೆಯಾಗದೇ ಗೀತಾಳಿಗೆ ಬೇರೆ ದಾರಿ ಇರಲಿಲ್ಲ. ಪುನರ್ ಪರೀಕ್ಷೆ ಮುಂದಿನ ದಿನವೇ ನಿಗದಿಯಾಗಿತ್ತು. ನಾನು ಗೀತಾ ರಾತ್ರಿ ಊಟ ಮಾಡಿ ಕ್ಲಾಸ್ ರೂಮ್ಗೆ ಹೋದಾಗ ಅವಳ ಮುಖ ಸಣ್ಣದಾಗಿತ್ತು ಕಣ್ಣಲ್ಲಿ ನೀರು ತುಂಬಿತ್ತು.
ಅವಳು : ಗೌರವ್ ನಾನು ನಿನ್ನನ್ನು ತುಂಬಾ ಇಷ್ಟ ಪಡ್ತಾ ಇದೀನಿ ಕಣೋ.
ನಾನು : ನಾನು ಅಷ್ಟೇ ನಿನ್ನನ್ನು ತುಂಬಾ ಹಚ್ಚಿಕೊಂಡಿದ್ದೇನೆ ಸ್ವೀಟಿ. ಎಲ್ಲಾ ಚಲೋ ಆಗ್ತೈತಿ. ನೀನ್ ಅಳಬೇಡ ಮತ್. ನಾನ್ ಇದ್ದೆನಲ್ಲಾ, ನಿನ್ನಾ ಮತ್ತೆ ಫೇಲ್ ಆಗೋಕೆ ಬಿಡ್ತೀನಿ ಅನ್ಕೊಂಡಿ ಎನ್.
ಅವಳು : ಹಾಗಲ್ಲಾ ನಾನು ಪಾಸಾಗ್ತೀನಿ ಅನ್ನೋದಕ್ಕೆ ಬೇರೆ ಯಾವ ದಾರಿಯೂ ಕಾಣ್ತಾ ಇಲ್ಲಾ. ನಾವು ಬೇರೆ ಬೇರೆ ಆಗ್ತೀವಿ.
ನಾನು : ಇಲ್ಲ ಡಿಯರ್ ಹಾಗೆಲ್ಲಾ ಏನ್ ಆಗಲ್ಲ ತಗೋ.
ಈ ಮಾತು ಹೇಳ್ತಾ ಅವಳನ್ನು ನನ್ನ ಎದೆಗೆ ಒತ್ತಿ ಹಿಡಿದೇ.
ಅವಳು : ಗೌರವ್ ನೀನು ನನಗೋಸ್ಕರ ಒಂದು ಹೆಲ್ಪ್ ಮಾಡ್ತೀಯಾ...?
ನಾನು : ನೀನು ಇಷ್ಟೆಲ್ಲ ಯಾಕ್ ಕೇಳ್ಕೊಳ್ಳಕ್ ಹತ್ತೀ... ಅದೇನ್ ಹೇಳ್.
ಅವಳು : ನೀನು ನಾಳೆ ನನ್ನ ಪಕ್ಕದ ಕಂಪ್ಯೂಟರ್ ನಲ್ಲಿ ಪರೀಕ್ಷೆ ಬರೆಯುವಾಗ ಕುಳಿತುಕೊಳ್ಳಬೇಕು. ನಿನಗೆ ಗೊತ್ತು ತುಂಬಾ ಜನ ಈ ತರಹ ಮಾಡ್ತಾರೆ ಎಂದು. ಕಳೆದ ಸಾರಿ ಮೀನಲ್ ನ ಬಾಯ್ ಫ್ರೆಂಡ್ ಇದೇ ತರಹ ಮಾಡಿ ಅವಳು ಎಕ್ಸಾಂ ಪಾಸ್ ಆಗಿದ್ಲು. ನನಗೊತ್ತು ನಿನ್ನಿಂದ ತುಂಬಾ ಜಾಸ್ತಿ ನಿರೀಕ್ಷಿಸುತ್ತಾ ಇದ್ದೇನೆಂದು. ಆದ್ರೆ ನಾನು ನಿನ್ನ ಕಳೆದುಕೊಳ್ಳಲಿಕ್ಕೆ ಇಷ್ಟಪಡಲ್ಲ ಡಿಯರ್.
ಅವಳ ಮಾತುಗಳನ್ನು ಕೇಳಿ ನಾನು ಆಳವಾದ ಆಲೋಚನೆಗಳಿಗೆ ಇಳಿದೆ. ಯಾಕಂದ್ರೆ ಅದು ತುಂಬಾ ಅಪಾಯಕಾರಿಯಾದ ಕೆಲಸವಾಗಿತ್ತು. ನಾವೆಲ್ಲಾದರೂ ಸಿಕ್ಕಿಬಿದ್ದರೆ ನಮ್ಮನ್ನು ಕಂಪೆನಿಯಿಂದಲೇ ತೆಗೆದು ಹಾಕಬಹುದಿತ್ತು. ಆದ್ರೆ ಇನ್ನೊಂದು ಪಕ್ಕದಲ್ಲಿ ನಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವುದು ಮುಖ್ಯವಾಗಿತ್ತು. ಅವಳಿಲ್ಲದೆ ನಾನೊಬ್ಬನೇ ಕಂಪೆನಿಯಲ್ಲಿ ಮಾಡೋದಾದ್ರೂ ಏನು...? ಯಾಕಂದ್ರೆ ಅವಳು ಅನುತ್ತೀರ್ಣಳಾದರೆ ಕಂಪೆನಿಯಿಂದಲೇ ತೆಗೆದು ಹಾಕ್ತಾ ಇದ್ರು. ಹಾಗಾಗಿ ನಾನು ವಿಷಯವನ್ನು ತುಂಬಾ ಸೂಕ್ಷ್ಮವಾಗಿ ಪರ್ಯಾಲೋಚಿಸಿದೆ. ಒಂದು ತಿಳಿದು ಬಂದ ಸಂಗತಿಯೆಂದರೆ ಪರೀಕ್ಷೆ ಬರೆಯುತ್ತಿರುವವರಲ್ಲಿ ಎಷ್ಟು ಜನ ನಿಜವಾಗಿ ಪರೀಕ್ಷೆ ಬರೆಯಬೇಕಿತ್ತು ಹಾಗೆಯೇ ಎಷ್ಟು ಜನ ಬರೆಯುತ್ತಿದ್ದಾರೆ ಎನ್ನುವ ಗಣತಿಯನ್ನು ಅವರು ಕೈಗೊಳ್ಳುವುದಿಲ್ಲ ಎಂದು. ಹಾಗಾಗಿ ಬೇರೊಂದು ಜಾಗದಲ್ಲಿ ಕೂತು ಪರೀಕ್ಷೆ ಬರೆದು ಗೀತಾಳ ಎಂಪ್ಲಾಯಿ ಐಡಿಯಾ ಮೂಲಕ ಸಬ್ಮಿಟ್ ಮಾಡುವ ನಿರ್ಧಾರ ಕೈಗೊಂಡೆ.
ನಾನು : ಆಗಲಿ ಡಿಯರ್ ನೀನು ಏನು ಯೋಚನೆ ಮಾಡಬೇಡ, ನಾನೆಲ್ಲಾ ನೋಡಿಕೊಳ್ತೇನೆ.... ಇವಾಗ ಆರಾಮವಾಗಿ ಮಲಗಿಕೊ.
ಇರುವೆ ಇಲ್ಲೇ ಏಕೆ ಅಂಜಿಕೆ ..
ರೋಜಾ ಹೂವಿನಂತ ತುಟಿ ಇಂದು ಬೆದರಿ ಒಣಗಿದೆ
ನಾಚಿ ಅದರ ಕೆನ್ನೆ ಏಕೆ ಇಂದು ಬಾಡಿ ಹೋಗಿದೆ
ಕಣ್ಣಿನ ಹನಿಗಳ ಮಣ್ಣಿಗೆ ಚೆಲ್ಲದೆ
ಬಾರೆ ನೀ ಬಾಚಿಕೊ ಹೆದರಿಕೆ ಏತಕೆ?
ಉಹು ಹೆದರಬೇಡ ಎಂದು ನಾವು ಬೇರೆಯಾಗೆವು
ಊಹು ಭಯವು ಬೇಡ ನಿನ್ನ ಬಿಟ್ಟು ದೂರ ಹೋಗೆನು
ನಿನಗೆ ನಾ ಬೇಲಿಯು ಹಾಡುವೆ ಲಾಲಿಯು
ಹಾಯಾಗಿ ಮಲಗಿಕೊ
ಢವ ಢವ ನಡುಕವ ಬಿಡು ನೀ ನಲ್ಲೆ
ಇರುವೆ ಇಲ್ಲೇ ಏಕೆ ಅಂಜಿಕೆ ..
(ಸಾಹಿತ್ಯ : ಉಪೇಂದ್ರ
ಚಿತ್ರ : ಶ್!!! ).
ಪರೀಕ್ಷೆಯ ದಿನ ಬೆಳಗ್ಗೆ ಸ್ವಲ್ಪ ಮುಂಚೆ ಪರೀಕ್ಷಾ ಕೇಂದ್ರಕ್ಕೆ ಹೋದೆ. ಗೀತಳಿಗಿಂತ ಸ್ವಲ್ಪ ದೂರದಲ್ಲಿ ಪರೀಕ್ಷೆ ಬರೆಯಲು ಕೂತೆ. ಪ್ರಶ್ನೆಗಳನ್ನು ನೀಡಲಾಯಿತು ಇದು ನನಗೆ ಯಾವ ರೀತಿಯೂ ಕಷ್ಟಕರವಾಗಿರಲಿಲ್ಲ. ಕೋಡಿಂಗ್ ಮಾಡಲು ಆರಂಭಿಸಿದೆ. ಸ್ವಲ್ಪ ಹೊತ್ತಲ್ಲಿ ಶ್ರೀಕಾಂತ್ ಎಂ ಎನ್ನುವ ನಮ್ಮ ಬ್ಯಾಚ್ ಓನರ್ ಅಂದ್ರೆ ಶಾಲೆಯಲ್ಲಿ ಕ್ಲಾಸ್ಟೀಚರ್ ಇದ್ದ ಹಾಗೆ ಪರೀಕ್ಷೆ ಕೊಠಡಿಗೆ ಧಾವಿಸಿ ಬಂದರು. ಅವರು ಬಂದಾಗ ನನ್ನ ೫೦% ಕೋಡಿಂಗ್ ಪೂರ್ಣಗೊಂಡಿತ್ತು. ಅವರಿಗೆ ಹೇಗೆ ವಿಷಯ ತಿಳಿದು ಬಂತು ಗೊತ್ತಾಗಲಿಲ್ಲ ನಿಜವಾಗಿ ಪರೀಕ್ಷೆ ಬರೆಯ ಬೇಕಿದ್ದವರಿಗಿಂತಾ ಪರೀಕ್ಷೆ ಬರೆಯುತ್ತಿರುವವರ ಸಂಖ್ಯೆ ಅಧಿಕವಾಗಿತ್ತು ಎಂದು. ನನಗೆ ಆ ಸಮಯಕ್ಕೆ ದಿಗಿಲು ಬಡಿದ ಹಾಗಾಯಿತು. ನನ್ನ ವೃತ್ತಿಜೀವನ ಆರಂಭವಾಗುವ ಮುನ್ನವೇ ಕಮರಿ ಹೋಗುವ ಸೂಚನೆ ನೀಡಿತು. ನನ್ನ ಮುಂದಿನ ದಿನಗಳು ಜೀವನದ ಕರಾಳ ದಿನಗಳಾಗುವ ಸೂಚನೆ ಅದಾಗಿತ್ತು. ನಾನು ಗೀತಳ ಮುಖವನ್ನು ಆ ಕ್ಷಣ ನೋಡಿದೆ. ಅವಳ ಮುಖ ಬೇರೆ ಸಮಯದಲ್ಲಿ ಇದ್ದ ಹಾಗೆ ಮುದ್ದಾಗಿ, ಅಮಾಯಕಳ ಹಾಗೆ ಕಂಡಿತು. ಆದರೂ ಅವಳು ಶಾಕ್ ನಲ್ಲಿದ್ದದ್ದು ಭಾಸವಾಗುತ್ತಿತ್ತು. ಆದರೆ ಯಾಕಂತ ಗೊತ್ತಿಲ್ಲಾ ಆ ಸಮಯದಲ್ಲಿ ನಾನು ಹೆದರಲಿಲ್ಲ. ಪ್ರೀತಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಸೇನಾನಿಯ ಧೈರ್ಯವೂ ಅಥವಾ ಏನಾದರಾಗಲಿ ಗೀತಾ ನನ್ನೊಂದಿಗೆ ಇರುತ್ತಾಳೆ ಎನ್ನುವ ಅತಿಯಾದ ಆತ್ಮಸ್ಥೈರ್ಯವೂ ತಿಳಿದಿಲ್ಲ. ಶ್ರೀಕಾಂತ್ಗೆ ನಾನು ೧೦೦/೧೦೦ ಮಾರ್ಕ್ಸ್ ತೆಗೆದುಕೊಳ್ಳುತ್ತಿದ್ದ ಟಾಪರ್ ವಿದ್ಯಾರ್ಥಿ ಆಗಿದ್ದರಿಂದ ನನ್ನನ್ನು ಹಿಡಿಯುವುದು ಅಷ್ಟೇನೂ ಕಷ್ಟವಾಗಲಿಲ್ಲ.
ನನ್ನನ್ನು ತಪ್ಪಿತಸ್ಥನ ಸ್ಥಾನದಲ್ಲಿ ನೋಡಿದಾಗ ಶ್ರೀಕಾಂತ್ಗೆ ಒಂದು ಸಾರಿ ಅವನ ಕಣ್ಣನ್ನು ಅವನಿಗೆ ನಂಬಲಾಗಲಿಲ್ಲ. ಆದರೆ ಶ್ರೀಕಾಂತ್ ಅಸಹಾಯಕನಾಗಿದ್ದ, ಯಾಕೆಂದರೆ ಕಂಪೆನಿ ಚೀಟಿಂಗ್ ಪ್ರಕರಣಗಳ ಬಗ್ಗೆ ತುಂಬಾ ಶಿಸ್ತಿನಿಂದ ವರ್ತಿಸುತ್ತಿತ್ತು. ಶ್ರೀಕಾಂತ್ ನನ್ನನ್ನು ಮತ್ತೆ ಮತ್ತೆ ಪ್ರಶ್ನಿಸಿದ್ದು ಒಂದೇ 'ಹೇಳು ಯಾರಿಗೋಸ್ಕರ ಇಂತಹ ಕೆಲಸ ಮಾಡುತ್ತಿದ್ದೆ' ಆದರೆ ಹೇಗೆ ನನಗೆ ಹೃದಯ ಕೊಟ್ಟವಳ ಹೆಸರನ್ನು ಅಷ್ಟು ಸಲೀಸಾಗಿ ಬಿಟ್ಟುಕೊಡಲಿ...? 'ಇನ್ಫೋಸಿಸ್ ಗೆ ನಿನ್ನಂತಹ ಬುದ್ಧಿವಂತರ ಅವಶ್ಯಕತೆ ಇದೆ ಹೇಳು ಯಾಕೆ ಹೀಗೆ ಮಾಡಿದೆ' ಎಂದು ಶ್ರೀಕಾಂತ್ ಮತ್ತೆ ಮತ್ತೆ ನನ್ನ ಬಾಯಿ ಬಿಡಿಸಲು ಪ್ರಯತ್ನಿಸಿದ. ಆದ್ರೆ ನಾನು ಒಂದು ಮಾತನ್ನು ಆಡದೇ ಮೂಕನಾಗಿ ನಿಂತಿದ್ದೆ. ಕೊನೆಗೆ ಅವನಿಗೂ ಸಾಕಾಗಿ ಎಚ್ಆರ್ ವಿಭಾಗಕ್ಕೆ ವರದಿ ಮಾಡಿದ. ಎಚ್ಆರ್ ಕೂಡ ನನಗೆ ಅದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿ ನನ್ನ ಬಾಯಿ ಬಿಡಿಸಲು ನೋಡಿದರು. ಆದರೆ ಅಲ್ಲೂ ಕೂಡ ನನ್ನದು ನೀರವ ಮೌನ. ಕೊನೆಯದಾಗಿ ನನ್ನ ಕೈಯಾರೆ ರಾಜೀನಾಮೆ ಪತ್ರ ಬರೆಯಲು ಸೂಚಿಸಲಾಯಿತು. ಒಂದು ಕಡೆ ಪ್ರೀತಿಯನ್ನು ಉಳಿಸಿಕೊಂಡ ಸಾರ್ಥಕ ಭಾವವಾದರೆ ಇನ್ನೊಂದು ಕಡೆ ಮೊದಲ ಕೆಲಸ ಕಳೆದುಕೊಂಡು ದುಃಖದಿಂದಲೇ ರಾಜೀನಾಮೆ ಪತ್ರ ಬರೆದು ಹೊರಡಲು ಅಣಿಯಾದೆ.
ಒಂದು ಅಪರಿಚಿತ ಧ್ವನಿ ನನ್ನನ್ನು ಈ ಕಲ್ಪನಾ ಲೋಕದಿಂದ ಹೊರಗಡೆ ಕರೆದುಕೊಂಡು ಬಂತು. ನೋಡಿದರೆ ನಾನಿನ್ನು ಮೈಸೂರು ಇನ್ಫೋಸಿಸ್ ನಾ ಫುಟ್ ಪಾತ್ ನಲ್ಲಿ ಕುಳಿತುಕೊಂಡು ಮರಗಿಡಗಳನ್ನು
ಪಕ್ಷಿಗಳನ್ನು ನೋಡ್ತಾ ಇದ್ದೆ. ಯಾರಪ್ಪ ಕರೆದಿದ್ದು ನೋಡಿದ್ರೆ 'ಬನ್ನಿ ಸಾರ್ ಲಗೇಜ್ ಹಾಕಿ ಆಯ್ತು ಹೋಗೋಣ' ಎನ್ನುವ ನಿಯೋಜಿತ ವಾಹನದ ಚಾಲಕನ ಧ್ವನಿ. 'ಹಾ ಬಂದೆ, ಹೋಗೋಣ' ಎಂದು ಇನ್ಫೋಸಿಸ್ ಗೆ ಶಾಶ್ವತ ವಿದಾಯ ಹೇಳಿದೆ.
ಇವಾಗ ನಿಮ್ಮ ತಲೆಯಲ್ಲಿ ಓಡ್ತಾ ಇರೋದು ಒಂದೇ ಪ್ರಶ್ನೆ ಗೀತಾ ಏನಾದ್ಲು...? ಅಂತಾ ಅಲ್ವಾ...? ಗೀತಾ ತನ್ನ ಪರೀಕ್ಷೆಯನ್ನು ಪಾಸ್ ಮಾಡಿದ್ಲು. ಅವಳಿಗೆ ಹೆಚ್ಚಿನದ್ದನು ಅವಾಗ್ಲೇ ಹೇಳಿಕೊಟ್ಟಿದ್ದೆ. ಉಳಿದಿದ್ದನ್ನು ಅವಳು ಪಕ್ಕದಲ್ಲಿ ಕೂತವನಿಂದ ಕಾಫಿ ಹೊಡೆದಿದ್ಲು. ಈ ಘಟನೆ ಆದ ಮೇಲೆ ನಾನು ಅವಳ ಕಾಲ್ ಗೋಸ್ಕರ ಕಾದು ಕೂತಿದ್ದೆ. ಆದರೆ ಅವಳು ಕಾಲ್ ಮಾಡಲಿಲ್ಲ, ನಾನು ಮಾಡಿದ ಕಾಲನ್ನು ಕೂಡ ಅವಳು ರಿಸೀವ್ ಮಾಡಲಿಲ್ಲ. ಒಂದು ಆಶ್ಚರ್ಯಕರ ವಿಷಯ ಅಂದ್ರೆ ಈ ಘಟನೆ ನಡೆದು ಹತ್ತು ವರ್ಷ ಆಯ್ತು ಇಂದಿಗೂ ಅವಳು ಎಲ್ಲಿದ್ದಾಳೆ...? ಹೇಗಿದ್ದಾಳೆ...? ಎಂದು ನನಗೆ ತಿಳಿದು ಕೊಳ್ಳಲಿಕ್ಕೆ ಆಗಲಿಲ್ಲ. ತಿಳಿದುಕೊಳ್ಳುವ ಮನಸ್ಸನ್ನು ಕೂಡ ನಾನು ಮಾಡಲಿಲ್ಲ.
ನಾ ಕಂಡೆ ಇನಿದಾದ ಸವಿ ರಾಗವ...
ನೀನಲ್ಲಿ ನಾನಿಲ್ಲಿ ಏಕಾಂತದಿ,
ನಾ ಕಂಡೆ ನನ್ನದೇ ಹೊಸ ಲೋಕವ...
ಈ ಸ್ನೇಹ ತಂದಿದೆ ಎದೆಯಲ್ಲಿ,
ಎಂದೆಂದೂ ಅಳಿಸದ ರಂಗೋಲಿ...
ಆಸೆ ಹೂವ ಹಾಸಿ ಕಾದೆ,
ನಡೆ ನೀ ಕನಸಾ ಹೊಸಕಿ ಬಿಡದೆ.
ನಗುವ ನಯನ ಮಧುರ ಮೌನ,
ಮಿಡಿವಾ ಹೃದಯ ಇರೆ ಮಾತೇಕೆ...
(ಸಾಹಿತ್ಯ : ಆರ್.ಏನ್. ಜಯಗೋಪಾಲ್,
ಚಿತ್ರ : ಪಲ್ಲವಿ ಅನುಪಲ್ಲವಿ ).
ಒಟ್ನಲ್ಲಿ ಇದು ನಾನು ನನ್ನ ಫ್ರೆಂಡ್ ನಿಂದ ಕೇಳಿದ ಒಂದು ಸಣ್ಣ ಇಂಗ್ಲಿಷ್ ಕಥೆ. ಎಲ್ಲಾ ಹೇಳಿದ ಮೇಲೆ ನನ್ನ ಗೆಳೆಯ ಕೊನೆಗೆ ಹೇಳಿದ ಏನೇ ಆದರೂ ಮಂಗಳೂರು ಹುಡುಗೀರನ್ನು ನಂಬ ಬಾರದು ಅಂತಾ...? ನನಗೇನೂ ಗೊತ್ತಿಲ್ಲ... ಹೌದಾ..? ನೀವೇನು ಹೇಳ್ತೀರಾ...?
ಹೇಗಿತ್ತು ಕಥೆ...? ನಿಮ್ಮ ಅನಿಸಿಕೆ, ಅಭಿಪ್ರಾಯ,ಕಾಲ್ , ಮೆಸೇಜ್ ಗಳಿಗೆ ಕೆಳಗಿನ ನಂಬರ್ ಅಲ್ಲಿ ಕಾಯ್ತಾ ಇರುತೇನೆ.
ಮೊಬೈಲ್ : +91 9164557268 (whatsapp or call).
-ಬರ್ವೆ
Nice article and neatly translated.
ReplyDeleteThanks
ReplyDeleteEn barithiya guru awesome story keep growing
ReplyDeleteThanks guru...thamma namadeya helidre chanda erthitu
Delete