ಬಹಮನಿ ನಾಡು ಬೀದರ್.
ಕರ್ನಾಟಕದ ಉತ್ತರದ ತುತ್ತ ತುದಿ, ಕರ್ನಾಟಕದ ಕಲಶವೆಂದು ಪ್ರಖ್ಯಾತವಾಗಿರುವುದು ಬೀದರ್ ಜಿಲ್ಲೆ. ಪೂರ್ವದಲ್ಲಿ ತೆಲಂಗಾಣ, ಪಶ್ಚಿಮದಲ್ಲಿ ಮಹಾರಾಷ್ಟ್ರ, ದಕ್ಷಿಣದಲ್ಲಿ ಕಲಬುರಗಿ ಜಿಲ್ಲೆಯೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದು ಔರಾದ್, ಬಸವಕಲ್ಯಾಣ, ಬಾಲ್ಕಿ, ಬೀದರ್ ಮತ್ತು ಹುಮ್ನಾಬಾದ್ ಎನ್ನುವ ೫ ತಾಲ್ಲೂಕುಗಳನ್ನು ಒಳಗೊಂಡಿದೆ.
ಪೌರಾಣಿಕವಾಗಿ ಬೀದರ್ ಜಿಲ್ಲೆಯನ್ನು ನೋಡುವುದಾದರೆ, ಮಹಾಭಾರತದ ವಿದುರಾನಗರ ಇದಾಗಿತ್ತು. ಹಾಗೆಯೇ ನಳದಮಯಂತಿಯರು ಮೊದಲು ಭೇಟಿಯಾದದ್ದು ಇದೇ ಬೀದರ್ ನಲ್ಲಿ. ಇನ್ನು ಇತಿಹಾಸಕ್ಕೆ ಬಂದರೆ ಮೌರ್ಯರು, ಸಾತವಾಹನರು, ರಾಷ್ಟ್ರಕೂಟರು, ಚಾಲುಕ್ಯರು, ಕಾಕತೀಯರು, ಬಹಮನಿ ಸುಲ್ತಾನರು, ಮೊಘಲರು ಹಾಗೂ ಹೈದರಾಬಾದ್ ನಿಜಾಮರು ಬೀದರನ್ನು ಆಳಿದ್ದಾರೆ. ರಾಷ್ಟ್ರಕೂಟರ ಮೊದಲ ರಾಜಧಾನಿಯಾದ ಮಯೂರ ಕಂಡಿ (ಮೊರಖಂಡಿ) ಇವಾಗಿನ ಬೀದರ್. ಚಾಲುಕ್ಯರ ರಾಜಧಾನಿಯಾಗಿದ್ದಂತಹ ಕಲ್ಯಾಣಿ ಇರುವುದು ಸಹ ಇದೇ ಬೀದರ್ ನಲ್ಲಿ. ಬಹಮನಿ ಅರಸರು ರಾಜಧಾನಿಯನ್ನು ಕಲಬುರಗಿಯಿಂದ ಬೀದರಿಗೆ ೧೪೨೫ ರಲ್ಲಿ ಬದಲಿಸಿದರು. ೧೫೧೮ ರವರೆಗೆ ಬೀದರ್ ಬಹಮನಿ ಸುಲ್ತಾನರ ರಾಜಧಾನಿಯಾಗಿ ಮೆರೆದಿತ್ತು.
ಬಹಮನಿ ಸಮಾಧಿ.
ಇನ್ನು ಇತ್ತೀಚಿನ ಇತಿಹಾಸಕ್ಕೆ ಬಂದ್ರೆ ಸ್ವಾತಂತ್ರ್ಯಪೂರ್ವದಲ್ಲಿ ಹೈದರಾಬಾದ್ ನಿಜಾಮರ ಆಡಳಿತದಲ್ಲಿ ಬೀದರ್ ಒಳಪಟ್ಟಿತ್ತು. ೧೭ ಸೆಪ್ಟೆಂಬರ್ ೧೯೪೮ರಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಇಂಡಿಯನ್ ಆರ್ಮಿ ಯೊಂದಿಗೆ ನಡೆಸಿದ “ಆಪರೇಷನ್ ಪೋಲೋ” ದಲ್ಲಿ ಬೀದರ್ ಸ್ವತಂತ್ರವಾಯಿತು. ಭಾಷಾವಾರು ಪ್ರಾಂತ್ಯಗಳ ವಿಭಜನೆಯಾದಾಗ ೧೯೫೬ ರಲ್ಲಿ ಬೀದರ್ ಮೈಸೂರು ರಾಜ್ಯದ ಭಾಗವಾಯಿತು. ಮುಂಚೆ ಇದ್ದಂತಹ ನಾಲ್ಕು ತಾಲ್ಲೂಕುಗಳೊಂದಿಗೆ ಬಸವಕಲ್ಯಾಣ ಹೊಸ ತಾಲ್ಲೂಕಾಗಿ ೧೯೬೫ ರಲ್ಲಿ ಸೇರಿಕೊಂಡಿತು.
ಚೌಕಂಡಿ ಸಮಾಧಿ.
ಇನ್ನು ಬೀದರ್ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದಾದರೆ, ಮೊದಲನೆಯದಾಗಿ ಬೀದರ್ ಕೋಟೆ, ಇದು ಬೀದರ್ ಪಟ್ಟಣದಿಂದ ಅನತಿ ದೂರದಲ್ಲಿದ್ದು, ಬಹಮನಿ ಸುಲ್ತಾನರಿಂದ ನಿರ್ಮಿತವಾಗಿದೆ. ಹಾಗೆಯೇ ಶ್ರೀ ನರಸಿಂಹ ಗುಹಾಂತರ ದೇವಾಲಯ, ಸದಾ ಜಿನುಗುತ್ತಿರುವ ನೀರಿನಲ್ಲಿ ಗುಹೆಯೊಳಗೆ ಸಾಗಿ ಶ್ರೀ ನರಸಿಂಹನ ದರುಶನವನ್ನು ಪಡೆಯಬೇಕಾಗಿದೆ. ಬಹಮನಿ ಸಮಾಧಿ ಬೀದರ್ ನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು, ಹನ್ನೆರಡು ಸಮಾಧಿಗಳನ್ನು ಇದು ಹೊಂದಿದೆ. ಪಾಪನಾಶ ಶಿವ ದೇವಾಲಯ ಬೀದರ್ ನ ಪ್ರಖ್ಯಾತ ದೇವಾಲಯಗಳಲ್ಲಿ ಒಂದು. ಶ್ರೀರಾಮ ಲಂಕೆಯಿಂದ ಹಿಂತಿರುಗುವಾಗ ಈಶ್ವರನನ್ನು ಇಲ್ಲಿ ಪ್ರತಿಷ್ಠಾಪಿಸಿದನು ಎನ್ನುವುದು ಇಲ್ಲಿನ ಪ್ರತೀತಿ. ಹಾಗೆಯೇ ಬೀದರ್ ಕೋಟೆಯೊಳಗಿರುವ ರಂಗಿನ್ ಮಹಲ್, ಬೀದರ್ ಪಟ್ಟಣದ ಹೃದಯ ಭಾಗದಲ್ಲಿರುವ ಚೌಬರಾ ವೀಕ್ಷಣಾ ಗೋಪುರ, ಸೇಲಾ ಕಾಂಬಾ ಮಸೀದಿ, ಮಹಮ್ಮದ್ ಗವಾನ್ ಮದರಸಾ, ಸಿಖ್ಖರ ಗುರುದ್ವಾರ, ಮೊಘಲರ ಧಾರ್ಮಿಕ ಸಲಹೆಗಾರರಾದ ಹಜರತ್ ಖಾಲಿ ಉಲ್ಹಾನಿಗೆ ಸಮರ್ಪಿತವಾದ ಚೌಕಂಡಿ ಸಮಾಧಿ ಪ್ರಖ್ಯಾತವಾದವು.
ಶ್ರೀ ನರಸಿಂಹ ಗುಹಾಂತರ ದೇವಾಲಯ.
ಬೀದರ್ ನ ಪ್ರಖ್ಯಾತ ಕರಕುಶಲ ಕಲೆಗಳಲ್ಲಿ ಬಿದ್ರಿ ಕಲೆ ಪ್ರಮುಖವಾದುದು. ಹದಿನಾಲ್ಕನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆ ಕಾಲದಲ್ಲಿ ಇದು ಪ್ರಾರಂಭವಾಯಿತು. ಭಾರತದ ರಫ್ತಿನಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ. ಸ್ಥಳೀಯವಾಗಿ ಅಷ್ಟೊಂದು ಪ್ರಖ್ಯಾತಿ ಪಡೆಯದಿದ್ದರೂ, ರಾಷ್ಟ್ರೀಯವಾಗಿ, ಅಂತರಾಷ್ಟ್ರೀಯವಾಗಿ ಪ್ರಸಿದ್ಧಿಯಾಗಿದ್ದು ಬೀದರ್ ನ ಗಂಧದ ಕೆತ್ತನೆ. ಬೀದರ್ನ ಬಕ್ ಚೋಡಿ ಗ್ರಾಮ ಈ ಕಲೆಗೆ ಹೆಸರುವಾಸಿಯಾಗಿದೆ. ಇಲ್ಲಿ ರಕ್ತ ಚಂದನದಿಂದ ತಯಾರಿಸಲ್ಪಡುವ ಬುದ್ಧನ ತಲೆ ಹಾಗೂ ಇನ್ನೂ ಅನೇಕ ಕೆತ್ತನೆಗಳು ಯುರೋಪ್ ಹಾಗೂ ಏಷ್ಯಾದ ಅನೇಕ ರಾಷ್ಟ್ರಗಳಿಗೆ ರಫ್ತಾಗುತ್ತಿದೆ.
ಬಿದ್ರಿ ಕಲೆ
ಒಟ್ಟಿನಲ್ಲಿ ಬೀದರ್ ಜಿಲ್ಲೆ ಸರ್ವಧರ್ಮ ಸಹಿಷ್ಣುತೆಯೊಂದಿಗೆ ಭಾರತದ ಆರ್ಥಿಕತೆಗೂ ತನ್ನ ಕೊಡುಗೆಯನ್ನು ನೀಡಿ ಕರ್ನಾಟಕದ ಹೆಮ್ಮೆಯನ್ನು ಹೆಚ್ಚಿಸುತ್ತಿದೆ.
ಆಧಾರ : ವಿಕಿಪೀಡಿಯ
ಕನ್ನಡಕ್ಕೆ : ಗಣೇಶ್ ಬರ್ವೆ ಮಣೂರು.
Comments
Post a Comment