ಅ ಪರಿಚಿತ (ಅನೌನ್ ಅನ್ನೋನು)…
ಜೀವನದ ದಾರಿಯಲ್ಲಿ ಪರಿಚಿತರು ಸಿಕ್ತಾರೆ, ಅಪರಿಚಿತರು ಸಿಕ್ತಾರೆ. ನಮ್ಮ ಹುಟ್ಟಿನಿಂದ ನಮ್ಮ ಜೊತೆ ಇರುವ ತಂದೆ-ತಾಯಿ, ತಂದೆ ಕಡೆ ಸಂಬಂಧ, ತಾಯಿ ಕಡೆ ಸಂಬಂಧ, ಇವರಷ್ಟೇ ಪರಿಚಿತರು ಅನ್ನಬಹುದು. ಆಮೇಲೆ ಜೀವನದ ದಾರಿಯಲ್ಲಿ ಯಾರನ್ನೆಲ್ಲ ಭೇಟಿಯಾದೆವು ಅವರೆಲ್ಲ ಅಪರಿಚಿತರೇ ಸರಿ. ಅವರೆಲ್ಲ ನಮ್ಮ ಒಂದು ಗುಣ, ಮಾತು, ಸ್ವಭಾವದಿಂದ ನಮಗೆ ಪರಿಚಿತ ಆಗಿರಬಹುದು. ನನ್ನನ್ನು ತುಂಬಾ ಕಾಡುವ ಒಂದು ಮಾತು “ದೆರ್ ಆರ್ ನೋ ಸ್ಟ್ರೇಂಜರ್ಸ್ ಹಿಯರ್, ಓನ್ಲಿ ಫ್ರೆಂಡ್ಸ್ ಯು ಹೆವಂಟ್ ಮೇಟ್ ಎಟ್” ಹೌದು ಇಲ್ಲಿ ಯಾರೂ ಅಪರಿಚಿತರಿಲ್ಲ, ಎಲ್ಲರೂ ಗೆಳೆಯರೇ ಆದರೆ ನಾವು ಇನ್ನೂ ಅವರನ್ನು ಭೇಟಿಯಾಗಿಲ್ಲ. ನನ್ನ ಅನೇಕ ಕೆಲಸಗಳಿಗೆ ಅನೇಕ ಪ್ರಾರಂಭಗಳಿಗೆ ಈ ಮಾತು ತುಂಬಾ ಸಹಾಯವಾಗಿದೆ.
ದಿನ ಬಸ್ಸಿನಲ್ಲಿ ಹೋಗುವಾಗ ಸಿಗುವ ಕಂಡಕ್ಟರ್, ದಿನ ಊಟಕ್ಕೆ ಹೋದಾಗ ಪ್ರೀತಿಯಿಂದ ಸಪ್ಲೈ ಮಾಡುವ ಹೋಟೆಲ್ ಸಪ್ಲೈಯರ್, ದಿನ ಬೆಳಗ್ಗೆ ಮನೆ ಬಾಗಿಲಿಗೆ ಪೇಪರ್ ಹಾಗೂ ಹಾಲು ಹಾಕುವ ಹುಡುಗರು, ಎಲ್ಲಾದ್ರೂ ಗಡಿಬಿಡಿಯಿಂದ ಹೋಗಬೇಕು ಅಂತ ಅನ್ನಿಸಿದಾಗ ನೆನಪಾಗುವ ರಿಕ್ಷಾ ಡ್ರೈವರ್, ದಿನ ಮಾತನಾಡಿಸುವ ರೇಷನ್ ಅಂಗಡಿಯವರು, ಹುಷಾರಿಲ್ಲದಾಗ ನೆನಪಾಗುವ ನಮ್ಮ ಊರಿನ ಡಾಕ್ಟ್ರು, ಬಸ್ ಅಥವಾ ರೈಲಿನಲ್ಲಿ ದೂರ ಪ್ರಯಾಣ ಮಾಡುವಾಗ ಜೊತೆಯಾಗಿ ಸಿಗುವವರು, ಆಫೀಸ್ ನಲ್ಲಿ ಜೊತೆಯಾಗಿ ಕೆಲಸ ಮಾಡುವವರು ಎಲ್ಲರೂ ಒಂದು ರೀತಿಯ ಪರಿಚಿತ ಇರುವ ಅಪರಿಚಿತರು. ಕೆಲವು ಸಾರಿ ಅವರ ಹೆಸರು ತಿಳಿದಿರುವುದಿಲ್ಲ, ಊರು ತಿಳಿದಿರುವುದಿಲ್ಲ ಆದರೂ ಎಷ್ಟೆಲ್ಲಾ ಅವರ ಜೊತೆ ಹಂಚಿಕೊಂಡಿರುತ್ತವೆ. ಭಾರತದ ಭವ್ಯ ಬುನಾದಿಯೇ ಅದು ನಂಬಿಕೆ, ಬೇರಾವ ದೇಶದಲ್ಲೂ ಈ ಪರಿಯ ಸಂಬಂಧ ಜನರ ನಡುವೆ ಕಾಣ ಸಿಗುವುದಿಲ್ಲ.
ಇತ್ತೀಚಿನ ಸಮಯದಲ್ಲಿ ಸೋಷಿಯಲ್ ಮೀಡಿಯಾಗಳ ಪ್ರಭಾವದಿಂದ ಅಪರಿಚಿತರ ಭೇಟಿ ಹೆಚ್ಚಾಗಿದೆ ಎನ್ನಬಹುದು. ಅವರ ಹೆಸರು, ಊರು ಸರಿಯಾಗಿ ತಿಳಿದಿರುವುದಿಲ್ಲ, ಒಬ್ಬರು ಏನು ತಮ್ಮ ಪ್ರೊಫೈಲ್ ಗಳಲ್ಲಿ ಬರೆದುಕೊಂಡಿರುತ್ತಾರೆ ಅದನ್ನೇ ನಂಬಿ ಮನಸ್ಸುಗಳು ಎಕ್ಸ್ಚೇಂಜ್ ಆಗುತ್ತದೆ, ಪ್ರೀತಿ ಹುಟ್ಟುತ್ತೆ. ಕೆಲವು ಪ್ರಕರಣಗಳು ಮದುವೆಯಲ್ಲಿ ಮುಗಿದದ್ದು ಇದೆ. ಇನ್ನು ಕೆಲವು ಪ್ರೊಫೈಲ್ ಗಳು ರಾತ್ರೋರಾತ್ರಿ ಡಿಲೀಟ್ ಆಗಿದ್ದು ಇದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಹೆಚ್ಚಿನ ಪ್ರೇಮ ಪ್ರಕರಣಗಳು ಫೇಸ್ ಬುಕ್ ನಿಂದ ಆಗುತ್ತಿವೆ ಅನ್ನುವುದು ಗಮನಾರ್ಹ .
ಅಪರಿಚಿತರ ಭೇಟಿ ಅನ್ನುವುದು ನಮ್ಮ ಜೀವನದ ದಾರಿಯನ್ನೇ ಬದಲಾಯಿಸಿ ಒಳಿತನ್ನು ತರಬಹುದು. ಅಥವಾ ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಕೆಡುಕಿನ ದಾರಿಯನ್ನು ಹಿಡಿಯಬಹುದು. ಅಪರಿಚಿತರನ್ನು ನಾವು ಹೇಗೆ ನಂಬುತ್ತೇವೆ ಅವರ ಜೊತೆ ಹೇಗೆ ವ್ಯವಹರಿಸುತ್ತೇವೆ ಅನ್ನುವುದರ ಮೇಲೆ ನಿಂತಿದೆ.
ಅರೆಂಜ್ ಮ್ಯಾರೇಜ್ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಸಂಸಾರ ರಥವನ್ನು ಮುಂದೂಡಲಿಕ್ಕೆ ಅಪರಿಚಿತರನ್ನು ಆಯ್ದು ಕೊಂಡಿರುತ್ತೇವೆ. ಎಷ್ಟೋ ವರ್ಷಗಳಿಂದ ಅರೇಂಜ್ ಮ್ಯಾರೇಜ್ ಭಾರತದಲ್ಲಿ ಚಾಲ್ತಿ ಇದೆ ಎಂದರೆ ನಂಬಿಕೆ ಎನ್ನುವ ಪದಕ್ಕೆ ಅರ್ಥ ನಮ್ಮ ದೇಶದಲ್ಲಿ ಇದೆ ಎಂದಾಯಿತು
ನಾನು ದಿನ ನಮ್ಮ ಆಫೀಸ್ ಪಕ್ಕಾ ಇರುವ ಕ್ಯಾಂಟೀನ್ ಗೆ ಊಟಕ್ಕೆ ಹೋಗ್ತಾ ಇದ್ದೆ. ತುಂಬಾ ದಿನಗಳಿಂದ ಒಬ್ಬ ಹುಡುಗ ಪ್ರೀತಿಯಿಂದ ಮಾತನಾಡಿಸಿ ಸಪ್ಲೈ ಮಾಡ್ತಾ ಇದ್ದ. ಎಷ್ಟೋ ವಿಷಯಗಳನ್ನು ನಾವು ಮಾತಾಡಿದ್ವಿ. ಆದರೆ ತುಂಬಾ ದಿನಗಳು ಆದ್ಮೇಲೆ ಗೊತ್ತಾಯಿತು ನನ್ನ ಹೆಸರು ಅವನಿಗೆ ಗೊತ್ತಿಲ್ಲ, ಅವನ ಹೆಸರು ನನಗೆ ಗೊತ್ತಿಲ್ಲ ಅಂತ.
ಒಟ್ಟಿನಲ್ಲಿ ಎಲ್ಲೋ ಹುಟ್ಟಿದವರು ನಮ್ಮ ಒಳ್ಳೆಯ ಸ್ವಭಾವಗಳಿಂದ ನಮ್ಮ ಆಪ್ತರಾಗ್ತಾರೆ, ನಮ್ಮೊಂದಿಗೆ ಹುಟ್ಟಿ ಬೆಳೆದವರು ಯಾವುದೋ ಸಣ್ಣ ಕಾರಣ ಇಟ್ಟುಕೊಂಡು ದೂರ ಆಗ್ತಾರೆ, ಕೆಲವರು ಅಪರಿಚಿತರಿದ್ದವರು ಪರಿಚಿತರಾಗಿ ಮತ್ತೆ ಅಪರಿಚಿತರಾದವರೂ ಇದ್ದಾರೆ.
ಒಂದು ಸಣ್ಣ ಕಿವಿಮಾತು ನಿಮ್ಮ ದೈನಂದಿನ ಜೀವನದಲ್ಲಿ, ನಿಮ್ಮ ಸುತ್ತಮುತ್ತ ಅದೆಷ್ಟೋ ಪರಿಚಿತ ಇರುವ ಅಪರಿಚಿತರನ್ನು ನೋಡ್ತಾ ಇರುತ್ತೀರಿ ಒಂದು ಸಣ್ಣ ನಗು ಒಂಚೂರು ಮಾತು ಅವರ ಮನಸ್ಸಿಗೆ ಖುಷಿ ನೀಡತಲ್ವಾ…ಏನಂತೀರಿ…?
ಲೇಖಕರು : ಗಣೇಶ ಬರ್ವೆ ಮಣೂರು
Comments
Post a Comment