ವಾರಾಂತ್ಯಕ್ಕೊಂದು ಮಲೆನಾಡ ಯಾನ.
ಅವತ್ತು ಭಾನುವಾರ ಸಮಯ ಸಂಜೆ ನಾಲ್ಕರಿಂದ ನಾಲ್ಕು ಮೂವತ್ತು ಆಗಿರಬಹುದು. ನಾನು ಮತ್ತೆ ನನ್ನ ಗೆಳೆಯ ಟಿಟಿ ಇಂಜೆಕ್ಷನ್ ಗೋಸ್ಕರ ಮಂಗಳೂರಿನ ಆಸ್ಪತ್ರೆಗಳಲ್ಲಿ ಓಡಾಡ್ತಾ ಇದ್ವಿ. ಒಂದು ಕಡೆಯಲ್ಲಿ ಎದೆ ಡವಡವ ಅಂತ ಹೊಡೆದು ಕೊಳ್ತಾ ಇತ್ತು, ಯಾಕಂದ್ರೆ ಇಪ್ಪತ್ತ್ನಾಲ್ಕು ಗಂಟೆ ಮುಗಿದು ಹೋಗಲಿಕ್ಕೆ ಇನ್ನು ಕೇವಲ ಹತ್ತಿರ ಹತ್ತಿರ ಎರಡು ಗಂಟೆ ಮಾತ್ರ ಬಾಕಿ ಇತ್ತು. ಹಾಗಾದ್ರೆ ಇಪ್ಪತ್ತ್ನಾಲ್ಕು ಗಂಟೆ ಹಿಂದೆ ನಡೆದ ಘಟನೆ ಆದ್ರೂ ಏನು ಅಂತ ನೀವೆಲ್ಲ ಅಂದ್ಕೊಳ್ತಾ ಇರಬೇಕಲ್ಲಾ. ಬನ್ನಿ ನಲವತ್ತೆಂಟು ಗಂಟೆ ಹಿಂದೆ ಹೋಗಿ ಈ ಕಥೆ ಆರಂಭಿಸೋಣ.
ಶುಕ್ರವಾರ ಸಂಜೆ ೪:೩೦ ನಮ್ಮ ಕಂಪೆನಿ ಕ್ಯಾಂಟಿನ್ ಅಲ್ಲಿ ಬಿಸಿ ಕಾಫಿ ಜೊತೆ ಗೊಳಿ ಬಜೆ ತಿನ್ನುತ್ತಾ, ನಾನು ನನ್ನ ಜೊತೆ ಕೆಲಸ ಮಾಡ್ತಾ ಇರುವ ಕೋಲ್ಕತ್ತಾ ಹುಡುಗ ಕುನಾಲ್, ಕರಾವಳಿಯವರಾದ ಸೂರಜ್ ಹಾಗೂ ಭವಿತ್, ಮೂರು ತಿಂಗಳಿಂದ ಮುಂದೆ ಹಾಕಿಕೊಳ್ಳುತ್ತಾ ಬಂದಿರುವ ಒಂದು ಪ್ಲಾನ್ ಅನ್ನು ಅವತ್ತು ನೆರವೇರಿಸಲಿಕ್ಕೆ ಮಾತಾಡ್ತಾ ಇದ್ವಿ. ಪ್ಲಾನ್ ಏನು ಅಂದ್ರೆ ಶೃಂಗೇರಿಯಲ್ಲಿ ಯಾರೂ ಇಲ್ಲದಿರುವ ನನ್ನ ಅಜ್ಜನ ಮನೆಗೆ ಹೋಗಿ, ಅಲ್ಲಿ ಸುತ್ತಮುತ್ತ ಇರುವ ಪ್ರವಾಸಿ ಸ್ಥಳಗಳನ್ನು ನೋಡಿಕೊಂಡು, ಎರಡು ದಿನ ಆರಾಮಾಗಿ ಇದ್ದು ಬರೋದು ಆಗಿತ್ತು. ಮಲೆನಾಡ ಚಳಿ ಬೇರೆ, ಜನವರಿ ತಿಂಗಳು ಬೇರೆ, ಮಂಜು ಕವಿದ ವಾತಾವರಣ ಇರುತ್ತೆ, ಎರಡು ದಿನ ಆಫೀಸಿನ ತಲೆಬಿಸಿ ಇಲ್ಲದೆ ಆರಾಮವಾಗಿ ಇದ್ದು ಬರೋಣ, ಭವಿತ್ ಕಾರಲ್ಲಿ ಇವತ್ತು ರಾತ್ರಿ ಕೆಲಸ ಮುಗ್ಸಿ ಹೊರಡೋಣ, ಅಂತ ಪ್ಲಾನ್ ಮಾಡಿ ಮುಗಿಸುವಾಗ ಗೋಳಿಬಜೆ ಖಾಲಿಯಾಗಿತ್ತು.
ಪ್ಲಾನ್ ಪ್ರಕಾರ ಹೊರಡಬೇಕಾಗಿದ್ದು ಆರು ಗಂಟೆಗೆ, ಆದ್ರೆ ಎಲ್ಲರೂ ಕೆಲಸ ಮುಗಿಸಿ, ಮನೆಗೆ ಹೋಗಿ, ಫ್ರೆಶ್ ಆಗಿ ಮಂಗಳೂರು ಬಿಡುವಾಗ ರಾತ್ರಿ ಎಂಟು ಮೂವತ್ತು ಆಗಿತ್ತು. ಮಂಗಳೂರಿನಿಂದ ನಾನು, ಭವಿತ್, ಕುನಾಲ್ ಹೊರಟು, ಪಡುಬಿದ್ರೆಯಲ್ಲಿ ಉಡುಪಿಯಿಂದ ಬಂದ ಸೂರಜ್ನನ್ನು ಕೂರಿಸಿಕೊಂಡು, ಫಾಸ್ಟ್ ಆಗಿ ಹೋದ್ರೆ ಯಾವ ಹಂಪ್ ಅಡ್ಡ ಬರುತ್ತೋ ಅಂತ ಹೆದರಿ ಕೊಳ್ಳುವಂತಹ, ಹಂಪುಗಳು ತುಂಬಿರುವ ಪಡುಬಿದ್ರೆ ಕಾರ್ಕಳ ನ್ಯಾಶನಲ್ ಹೈವೇಯಲ್ಲಿ ನಮ್ಮ ಪಯಣ ಸಾಗಿತ್ತು .
ಕಾರ್ಕಳದಲ್ಲಿ ಊಟ ಮಾಡಿ, ದಾರಿ ಖರ್ಚಿಗೆ ಪಾರ್ಸಲ್ ಕಟ್ಟಿಸಿಕೊಂಡು, ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಸಾಗಿದ್ವಿ. ಮುಳ್ಳೂರು ಕ್ರಾಸ್ ಹತ್ತಿರ ಬರುವಾಗ ರಾತ್ರಿ ೧೦:೩೦ ಆಗಿತ್ತು. ಅವಾಗ್ಲೇ ಮಲ್ನಾಡ್ ಚಳಿ ನಮಗೆ ಸ್ವಾಗತ ನೀಡಿತ್ತು . ಮುಳ್ಳೂರು ಕ್ರಾಸ್ ಅಲ್ಲಿ ಪೊಲೀಸ್ ಚೆಕ್ ಪೋಸ್ಟ್ ಇದೆ. ಇಲ್ಲಿಂದ ಮುಂದೆ ಘಾಟಿ ಆರಂಭವಾಗುತ್ತೆ. ಮುಳ್ಳೂರು ಕ್ರಾಸ್ ಚೆಕ್ ಪೋಸ್ಟ್ನಲ್ಲಿ ಮಲೆನಾಡ ಚಹಾ ಹೀರಿಕೊಂಡು ನಮ್ಮ ಪಯಣ ಘಾಟಿ ಹತ್ತಿತ್ತು. “ಕಾಡು ಪ್ರಾಣಿಗಳು ರಸ್ತೆ ದಾಟುತ್ತಿರುತ್ತವೆ” ಎನ್ನುವ ಬೋರ್ಡ್ ನೋಡಿ ಯಾವುದಾದರೂ ಪ್ರಾಣಿಗಳು ಸಿಗ್ತಾವ ಅಂತ ಆಚೆ ಇಚೆ ನೋಡ್ಕೊಂಡು, ಅವರವಾರ ಲವ್ ಸ್ಟೋರಿಗಳನ್ನು ಹೇಳ್ಕೊಂಡು, ನಿಶ್ಶಬ್ದವಾಗಿರುವ ಕೆರೆಕಟ್ಟೆ ಘಾಟಿಯಲ್ಲಿ ಜೋರಾಗಿ ಹಾಡು ಹಾಕಿಕೊಂಡು, ೧೧:೩೦ ರ ರಾತ್ರಿಗೆ ನಮ್ಮ ಕಾರು ಸಾಗ್ತಾ ಇತ್ತು. ನಮ್ಮ ಕಾರು ಶೃಂಗೇರಿ ತಲುಪುವಾಗ ಮಧ್ಯರಾತ್ರಿ ಹನ್ನೆರಡು ಗಂಟೆ. ಊರಿನ ಜನರೆಲ್ಲ ಮಲಗಿ, ಗ್ರಾಮ ಸಿಂಹಗಳು ತಮ್ಮ ಆರ್ಭಟವನ್ನು ಆರಂಭಿಸಿದ್ದವು. ಮನೆ ಮೇಲೆ ಬಾಡಿಗೆ ಇರುವವರು ಮನೆ ಬಾಗಿಲು ತೆಗೆದು, ಹಂಡೆಯಲ್ಲಿ ಬಿಸಿನೀರು ಕಾಯಿಸಿ ಇಟ್ಟಿದ್ರು. ಮಲೆನಾಡ ಚಳಿಗೆ ಬಿಸಿನೀರ ಸ್ನಾನ ಮಾಡುವ ಮಜಾನೇ ಬೇರೆ ಬಿಡಿ. ಎಲ್ಲರೂ ಒಂದು ರೌಂಡು ಫ್ರೆಶ್ ಆಗಿ ಊಟ ಮಾಡಿ ಮಲಗುವಾಗ ರಾತ್ರಿ ಮೂರು ಗಂಟೆ.
ಬೆಳಗ್ಗೆ ೦೭:೩೦ ಕ್ಕೆ ಕಣ್ಣು ಉಜ್ಜಿಕೊಂಡು ಎದ್ದು, ಶೃಂಗೇರಿ ಸಿಟಿಯಲ್ಲಿ ತಿಂಡಿ ಮಾಡಿ, ಮೊದಲು ಹೋಗಿದ್ದೇ ಶೃಂಗೇರಿಯಿಂದ ಎಂಟು ಕಿಲೋಮೀಟರ್ ದೂರ ಇರುವ ಸಿರಿಮನೆ ಜಲಪಾತ. ಕೊರೆಯುವ ನೀರಿಗೆ ಮೈಯೊಡ್ಡಿ ನಿಂತಾಗ ಆಗುವ ಆನಂದದಲ್ಲಿ ಮಲೆನಾಡ ಚಳಿ ಕೂಡ ನೆನಪಾಗಲಿಲ್ಲ. ಜಲಪಾತ ತುಂಬಾ ಸಣ್ಣದಾದರೂ ಮೇಲಿನಿಂದ ಬೀಳುವ ನೀರಿನಡಿ ನಿಂತಾಗ ಆಗುವ ಆನಂದ ಆಹ್ಲಾದಕರ. ಅದನ್ನು ಹೇಳುವುದಕ್ಕಿಂತ ಅಲ್ಲಿ ಹೋಗಿ ಅನುಭವಿಸುವುದೇ ಉತ್ತಮ.
ಸಿರಿಮನೆ ಜಲಪಾತ
ಅಲ್ಲಿಂದ ಮತ್ತೆ ನಮ್ಮ ಅಜ್ಜನ ಮನೆಗೆ ಬಂದು ಸ್ನಾನ ಮಾಡಿಕೊಂಡು, ಶಂಕರಾಚಾರ್ಯರಿಂದ ಪ್ರತಿಷ್ಠಾಪಿತವಾದ ನಾಲ್ಕು ಮಠಗಳಲ್ಲಿ ಒಂದಾದ ದಕ್ಷಿಣಾಮ್ನಾಯ ಶಾರದಾ ಪೀಠದಲ್ಲಿರುವ ಶ್ರೀ ಶಾರದಾಂಬೆಯ ದರ್ಶನಕ್ಕೆ ತೆರಳಿದೆವು. ಶಾರದೆಯ ದರ್ಶನ ಪಡೆದು, ನಮ್ಮ ನಮ್ಮ ಮನದ ಇಚ್ಛೆಗಳನ್ನು ಶಾರದೆಯ ಮುಂದಿರಿಸಿ ನೆರವೇರಿಸಮ್ಮ ಎಂದು ಕೇಳಿಕೊಳ್ಳುತ್ತಾ ಮಧ್ಯಾಹ್ನದ ಅನ್ನಪ್ರಸಾದವನ್ನು ಸ್ವೀಕರಿಸಿ ಅಲ್ಲಿಂದ ಹೊರಟೆವು.
ಶೃಂಗೇರಿ ಶ್ರೀ ವಿದ್ಯಾಶಂಕರ ದೇವಸ್ಥಾನ
ನಂತರ ನಮ್ಮ ಪಯಣ ಸಾಗಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹತ್ತಿರ ಇರುವ ಕುಂದಾದ್ರಿಗೆ. ನೆಲದಿಂದ ೨೭೦೦ ಮೀಟರ್ ಎತ್ತರ ಇರುವ ಶಿಖರ ಕುಂದಾದ್ರಿ. ಇದೊಂದು ಜೈನರ ಪವಿತ್ರ ಸ್ಥಳವೂ ಹೌದು. ಈ ಶಿಖರದ ಮೇಲಿನಿಂದ ಮಲೆನಾಡನ್ನು ನೋಡುವ ಸೊಬಗೇ ಬೇರೆ. ಮೋಡಗಳಿಗೆ ಮುತ್ತಿಡುವ ಅನುಭವ. ಇಲ್ಲಿನ ತಂಪಾದ ಗಾಳಿಗೆ ಮೈಯೊಡ್ಡಿ ನಿಂತು ಮಂತ್ರ ಮುಗ್ಧವಾದೆವು. ಅದಾಗಲೇ ಸೂರ್ಯ ಪಡುವಣದತ್ತ ಮುಖ ಮಾಡಿದ್ದ. ಸೂರ್ಯಾಸ್ತಮಾನ ವೀಕ್ಷಣೆಗೆ ಆಗುಂಬೆಯ ಸನ್ಸೆಟ್ ಪಾಯಿಂಟ್ ಅತ್ತ ನಮ್ಮ ಪಯಣ ಸಾಗಿತು. ಅಲ್ಲಿ ಸುತ್ತಮುತ್ತ ಇರುವ ನಮ್ಮ ಪೂರ್ವಜರ ಬಳಗವನ್ನು ಮಾತನಾಡಿಸಿಕೊಂಡು, ಸೂರ್ಯಾಸ್ತಮಾನ ವೀಕ್ಷಣಾ ಸ್ಥಳಕ್ಕೆ ಬರುವಾಗ, ಸೂರ್ಯ ಅಂದಿನ ಕೆಲಸವನ್ನು ಮುಗಿಸಿ ಹೊರಡಲು ಅನುವಾಗಿದ್ದ. ಆಗುಂಬೆಯಲ್ಲಿ ನಿಂತು ಸೂರ್ಯಾಸ್ತಮಾನದ ಆನಂದ ಸವಿಯುವುದೇ ಕಣ್ಣಿಗೆ ಹಬ್ಬ. ಮೋಡ ಗಳಿಲ್ಲದಿದ್ದರೆ ಅಂದು ನೀವೇ ಪುಣ್ಯವಂತರು. ಮೂರರಿಂದ ನಾಲ್ಕು ರೀತಿಯ ತನ್ನ ಆಕಾರವನ್ನು ಸೂರ್ಯ ನಿಮಗೆ ತೋರ್ಪಡಿಸುತ್ತಾನೆ.
ಕುಂದಾದ್ರಿ ಮೇಲಿನ ವಿಹಂಗಮ ನೋಟ.
ಅಲ್ಲಿಂದ ಹೊರಡಲು ಅನುವಾದಾಗ “ಬರುವಾಗ ಮಾತನಾಡಿಸಿದಿರಿ, ಆದರೆ ಹೋಗುವಾಗ ಯಾಕೆ ಹೇಳಲಿಲ್ಲ” ಅಂತ ಕೋಪದಿಂದ ನಮ್ಮ ಪೂರ್ವಜರು (ಮಂಗಗಳು) ನನ್ನ ಕಾಲು ಹಿಡಿದುಕೊಂಡು ಗಟ್ಟಿಯಾಗಿ ಕಚ್ಚಿ ಬಿಡ್ತು. ನಾನು ಹೇಗೋ ಮಾಡಿ ತಪ್ಪಿಸಿಕೊಂಡು ಓಡಿದೆ, ಕೂಡಲೇ ಆ ಮಂಗ ತನ್ನ ಪಕ್ಕದಲ್ಲಿರುವ ಕುನಾಲ್ ನ ಕಾಲನ್ನು ಹಿಡಿದುಕೊಂಡು ಕಚ್ಚಿತು. ನಾವು ಕನಸಲ್ಲೂ ಎಣಿಸಿರದ ಘಟನೆ ಒಂದು ನಡೆದು ಹೋಯ್ತು. ನಮ್ಮ ಕಾರಿನ ಹತ್ತಿರ ಬಂದು, ಕಚ್ಚಿದ ಜಾಗವನ್ನು ಚೆನ್ನಾಗಿ ತೊಳೆದು ಕೊಳ್ಳುತ್ತಾ, ಶೃಂಗೇರಿ ಹೋಗಿ ಡಾಕ್ಟರ್ಗೆ ತೋರಿಸೋಣ ಎಂದು ಯೋಚಿಸಿದ್ವಿ. ಆಗುಂಬೆಯ ಸೂರ್ಯಾಸ್ತಮಾನ ಹತ್ತಿರ ಒಂದು ಬೋಂಡಾ ಬಜ್ಜಿ ಅಂಗಡಿ ಉಂಟು. ಅಲ್ಲಿ ತಿಂದ ಆಂಬೊಡೆ, ಮೆಣಸಿನಕಾಯಿ ಬಜ್ಜಿ, ಚುರುಮುರಿ ಮಂಗ ಕಚ್ಚಿದ ನೋವನ್ನು ಮರೆಸಿತು. ಶೃಂಗೇರಿಗೆ ಬರುವಾಗ ರಾತ್ರಿ ಆಗಿದ್ದರಿಂದ ಅಲ್ಲಿನ ಡಾಕ್ಟರ್ ಶಾಪ್ ಗಳು ಬಾಗಿಲು ಹಾಕಿದ್ದವು. ಮಂಗಗಳಿಂದ ಬರುವ ಕಾಯಿಲೆಗಳ ಪಟ್ಟಿಯಲ್ಲಿ ನಮ್ಮ ತಲೆ ಓಡ್ತಾ ಇತ್ತು. ಬೆಳಗ್ಗೆದ್ದು ನೋಡೋಣ ಅಂತ ಅವತ್ತು ಎಲ್ಲರೂ ನಿದ್ರೆಗೆ ಜಾರಿದ್ವಿ.
ಆಗುಂಬೆ.
ಬೆಳಗ್ಗೆ ಶೃಂಗೇರಿಯ ಶಾರದಾಂಬೆ ಮಠದ ಹತ್ತಿರವಿರುವ ಹೊಳ್ಳ ಟಿಫಿನ್ ಸೆಂಟರ್ ನ ರುಚಿಯಾದ ಇಡ್ಲಿ, ವಡೆ, ಪೂರಿ ನಮ್ಮ ಹಸಿವು ತಣಿಸಿದವು. ಅಲ್ಲಿಂದ ಆಗುಂಬೆ-ಉಡುಪಿ ಮಾರ್ಗವಾಗಿ ಮಂಗಳೂರಿನ ಕಡೆ ನಮ್ಮ ಪಯಣ ಸಾಗಿತು. ಆಗುಂಬೆ ಘಾಟಿ ಇಳಿದ ಕೂಡಲೇ ಸಿಗುವ ಸೋಮೇಶ್ವರ, ನೀರು ದೋಸೆಗೆ ತುಂಬಾ ಪ್ರಸಿದ್ಧಿ. ಅದನ್ನು ಕೂಡ ಬಿಡದೆ ನಮ್ಮ ಹೊಟ್ಟೆಗೆ ಹಾಕಿಕೊಂಡ್ವಿ. ಏತನ್ಮಧ್ಯೆ ಮಂಗ ಕಚ್ಚಿದ ವಿಷಯ ನಮ್ಮ ಸ್ಮೃತಿಪಟಲದಲ್ಲಿ ಮಾಸಿಹೋಗಿತ್ತು. ದಾರಿಯಲ್ಲಿ ಯಾವುದೋ ಮಂಗನನ್ನು ನೋಡಿ ಮತ್ತೆ ಅದು ನೆನಪಾಗಿ ಮಂಗಳೂರಿನ ಡಾಕ್ಟರ್ ನಲ್ಲಿ ತೋರಿಸೋಣ ಎಂಬ ನಿರ್ಧಾರಕ್ಕೆ ಬಂದ್ವಿ. ಅದೂ ಅಲ್ಲದೇ ನಮ್ಮ ಗ್ರೂಪಿನಲ್ಲಿ ಯಾವನೋ ಒಬ್ಬ ಮಂಗ ಕಚ್ಚಿ ಇಪ್ಪತ್ತ್ನಾಲ್ಕು ಗಂಟೆ ಮುಂಚೆ ಟಿಟಿ ಇಂಜೆಕ್ಷನ್ ತೆಗೆದುಕೊಳ್ಳಬೇಕು ಅಂತ ಹುಳ ಬಿಟ್ಟಿದ್ದ.
ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಹೋಗಿ ಮಂಗ ಕಚ್ಚಿದೆ ಅಂತ ಹೇಳಿದಾಗ ಅಲ್ಲಿನ ಡಾಕ್ಟರ್ ಗಳು ಒಂದು ಸಾರಿ ಕಕ್ಕಾ ಬಿಕ್ಕಿ ಆದರೂ. ಮಂಗ ಕಚ್ಚಿದ ಮಾನವರು ಅಲ್ಲಿನ ಡಾಕ್ಟರ್ಗಳ ಬಾಯಿಗೆ ಆಹಾರ ಆಗಿದ್ವಿ. ಸುಂದರವಾದ ಲೇಡಿ ಡಾಕ್ಟರ್ ಕೈ ಹಿಡಿದು ಇಂಜೆಕ್ಷನ್ ನೀಡುವಾಗ “ಥ್ಯಾಂಕ್ಸ್ ಮಂಗಣ್ಣ” ಅನಿಸ್ತು. ಕೊನೆಗೆ ನಾಲ್ಕು ಇಂಜೆಕ್ಷನ್ ತೆಗೆದುಕೊಳ್ಳುವಾಗ “ಸಿಕ್ಕು ಮಗನೇ ನೋಡಿಕೊಳ್ತೀನಿ” ಅಂದುಕೊಂಡೆ.
ಲೇಖಕರು : ಗಣೇಶ ಬರ್ವೆ ಮಣೂರು.
Comments
Post a Comment