ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆ.
೧೯೫೬ ರ ತನಕ ಸ್ವಾತಂತ್ರ್ಯ ರಾಜ್ಯವಾಗಿದ್ದ ಕೊಡಗು ನಂತರ ಮೈಸೂರು ರಾಜ್ಯದ ಭಾಗವಾಗಿ ಕೊಡಗು ಜಿಲ್ಲೆಯಾಯಿತು. ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ಎನ್ನುವ ಮೂರು ತಾಲ್ಲೂಕುಗಳನ್ನು ಇದು ಒಳಗೊಂಡಿದೆ. ಕನ್ನಡ, ಕೊಡವ, ತುಳು ಹಾಗೂ ಮಲಯಾಳಂ ಭಾಷಿಕರನ್ನು ಇಲ್ಲಿ ಹೆಚ್ಚಾಗಿ ನೋಡಬಹುದು. ವಾಯುವ್ಯದಲ್ಲಿ ದಕ್ಷಿಣ ಕನ್ನಡ, ಪಶ್ಚಿಮದಲ್ಲಿ ಕೇರಳದ ಕಾಸರಗೋಡು, ಉತ್ತರದಲ್ಲಿ ಹಾಸನ, ಪೂರ್ವದಲ್ಲಿ ಮೈಸೂರು, ನೈರುತ್ಯದಲ್ಲಿ ಕೇರಳದ ಕಣ್ಣೂರು, ದಕ್ಷಿಣದಲ್ಲಿ ವಯನ್ನನಾಡ್ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡು, ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಒಂದಾಗಿದೆ. ಕೊಡಗು ಜಿಲ್ಲೆಯ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಒಂದು ಪ್ರಮುಖ ಪಾತ್ರವನ್ನು ವಹಿಸಿದ್ದು ಭತ್ತ ಹಾಗೂ ಕಾಫಿ ಇಲ್ಲಿನ ಪ್ರಮುಖ ಬೆಳೆಗಳು.
ಕೊಡಗು ಇಲ್ಲಿನ ಕಾಫಿ ಹಾಗೂ ಇಲ್ಲಿನ ಜನರಿಗೆ ಪ್ರಖ್ಯಾತವಾಗಿದೆ. ಕೊಡವ ಭಾಷಿಗ ಕೊಡವರು ಇಲ್ಲಿನ ಮೂಲ ನಿವಾಸಿಗಳು. ಭಾರತದ ಸೇನಾ ವ್ಯವಸ್ಥೆಗೆ ಇವರ ಕೊಡುಗೆ ಅಪಾರವಾದದ್ದು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಕೊಡಗಿನವರು ಎನ್ನುವುದು ಕರ್ನಾಟಕದ ಹೆಮ್ಮೆ. ಹಿಂದೂ ಪುರಾಣದ ಪ್ರಕಾರ ಚಂದ್ರವಂಶಿಯ ಕ್ಷತ್ರಿಯ ಚಂದ್ರವರ್ಮ ಕೊಡವರ ಮೂಲ ಪುರುಷ. ಚಂದ್ರವರ್ಮನ ಹನ್ನೊಂದು ಮಕ್ಕಳಲ್ಲಿ ಮೊದಲನೆಯವನಾದ ದೇವಕಾಂತ ನಂತರದಲ್ಲಿ ರಾಜನಾಗುತ್ತಾನೆ. ಈ ಹನ್ನೊಂದು ಮಕ್ಕಳು ವಿದರ್ಭ ದೇಶದ ರಾಜಕುಮಾರಿಯನ್ನು ಮದುವೆಯಾಗಿ, ಕೊಡಗು ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿ ಕೊಡವ ಮನೆತನಗಳ ಹುಟ್ಟಿಗೆ ನಾಂದಿ ಹಾಡುತ್ತಾರೆ. ಕೆಳದಿ ಮನೆತನದ ಭಾಗವಾದ ಹಾಲೇರಿ ರಾಜರು ಕೊಡಗನ್ನು ೧೬೦೦ ರಿಂದ ೧೮೩೪ ತನಕ ರಾಜ್ಯಭಾರ ಮಾಡಿದರು. ನಂತರ ಬ್ರಿಟಿಷರು ಕೊಡಗನ್ನು ೧೮೩೪ ರಿಂದ ೧೯೪೭ ರ ತನಕ ರಾಜ್ಯಭಾರ ನಡೆಸಿದರು.
ತಮ್ಮ ವಿಶಿಷ್ಟ ವೇಷ ಭೂಷಣದಲ್ಲಿರುವ ಕೊಡವ ದಂಪತಿಗಳು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಜನರಲ್ ಕೆ.ಎಸ್. ತಿಮ್ಮಯ್ಯ
ಇನ್ನು ಕೊಡಗಿನ ಪ್ರಖ್ಯಾತ ತಿನಿಸುಗಳಲ್ಲಿ ಕಡಂಬುಟ್ಟು ಮತ್ತು ಪಾಂಡಿ ಕರಿ ಅತ್ಯಂತ ಪ್ರಮುಖವಾದದ್ದು. ‘ಕೈಲ್ ಮುರ್ತ’ ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದು. ಭತ್ತದ ಸಸಿಗಳನ್ನು ನೆಟ್ಟು ಮುಗಿಸಿದ ಮೇಲೆ ಸೆಪ್ಟೆಂಬರ್ ತಿಂಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಜನರು ತಮ್ಮ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ಕಾಪಾಡಿಕೊಳ್ಳಲು ಆಯುಧಗಳನ್ನು ತಯಾರಿಸುವುದನ್ನು ಈ ಹಬ್ಬ ಸಂಕೇತಿಸುತ್ತದೆ. ಹುತ್ತರಿ ಹಬ್ಬ ಅಥವಾ ಪುತ್ತರಿ ಹಬ್ಬ ಇಲ್ಲಿನ ಇನ್ನೊಂದು ಪ್ರಮುಖ ಹಬ್ಬ. ಭತ್ತದ ಗಿಡಗಳು ಬೆಳೆದು ಮೊದಲ ಭತ್ತ ಹುಟ್ಟಿದಾಗ, ನವೆಂಬರ್ ತಿಂಗಳ ಕೊನೆಯ ವಾರ ಅಥವಾ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ.
ಕಡಂಬುಟ್ಟು ಮತ್ತು ಪಾಂಡಿ ಕರಿ
ಪುತ್ತರಿ ಹಬ್ಬ
ತಲಕಾವೇರಿ
ನಾಗರಹೊಳೆ
ಕೊಡಗು ಜಿಲ್ಲೆಯನ್ನು ಬಣ್ಣಿಸುವಾಗ ಇಲ್ಲಿನ ಪ್ರವಾಸಿ ಕ್ಷೇತ್ರಗಳ ಬಗ್ಗೆ ಹೇಳದೆ ಇರಲು ಸಾಧ್ಯವಿಲ್ಲ. ಭಾರತದ ಅತ್ಯಂತ ಎತ್ತರದ ಪ್ರವಾಸಿ ಸ್ಥಳಗಳಲ್ಲಿ ಇದು ಒಂದು. ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳ. ನದಿ ತಟದಲ್ಲಿರುವ ಬ್ರಹ್ಮದೇವಸ್ಥಾನ ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲಿರುವ ಎರಡೇ ಎರಡು ಬ್ರಹ್ಮ ದೇವಸ್ಥಾನಗಳಲ್ಲಿ ಇದೂ ಒಂದು. ಇನ್ನು ಕಾವೇರಿ ಹಾಗೂ ಕನ್ನಿಕಾ ನದಿಗಳ ಸಂಗಮವೇ ಭಾಗಮಂಡಲ. ಸುಜ್ಯೋತಿ ನದಿಯೂ ಭೂಗತವಾಗಿ ಮೂರನೇ ನದಿಯಾಗಿ ಸಂಧಿಸುವುದರಿಂದ ಈ ಸ್ಥಳವನ್ನು ತ್ರಿವೇಣಿ ಸಂಗಮ ಎಂತಲೂ ಕರೆಯುತ್ತಾರೆ. ಇರುಪು ಜಲಪಾತ, ಚಾರಣಿಗರ ಸ್ವರ್ಗ ತಡಿಯಂಡಮೋಳ್ ಹಾಗೂ ಮುಗಿಲುಪೇಟೆ ಅಥವಾ ಮಂಡಲ ಪಟ್ಟಿ, ಚೇಲಾವರ ಜಲಪಾತ, ನಾಗರಹೊಳೆ ಅಭಯಾರಣ್ಯ ಮುಂತಾದವು ಕೊಡಗಿನ ಪ್ರೇಕ್ಷಣೀಯ ಸ್ಥಳಗಳು. ಮಡಿಕೇರಿ ಕೊಡಗಿನ ಜಿಲ್ಲಾ ಕೇಂದ್ರ. ರಾಜಾಸೀಟ್ ಹಾಗೂ ಕೊಟು ಪೊಳ್ಳೆ ಅಣೆಕಟ್ಟು ಸದಾ ಪ್ರವಾಸಿಗರಿಂದ ಕಂಗೊಳಿಸುತ್ತಿರುತ್ತದೆ. ಓಂಕಾರೇಶ್ವರ ದೇವಸ್ಥಾನ ಕೊಡಗಿನ ಪ್ರಖ್ಯಾತ ದೇವಾಲಯಗಳಲ್ಲಿ ಒಂದು ೧೮೨೦ ರಲ್ಲಿ ಎರಡನೇ ಲಿಂಗರಾಜೇಂದ್ರನಿಂದ ಇದು ಸ್ಥಾಪಿತವಾಯಿತು. ೧೮೫೯ ರಲ್ಲಿ ಮಡಿಕೇರಿ ಕೋಟೆಯೊಳಗೆ ನಿರ್ಮಿಸಲಾದ ಸೈಂಟ್ ಮಾರ್ಕ್ಸ್ ಚರ್ಚ್ ಪ್ರಮುಖವಾದದ್ದು. ಇನ್ನು ಆನೆಗಳನ್ನು ಹಿಡಿದು ಪಳಗಿಸುವಂತಹ ದುಬಾರೆ ಆನೆ ಕ್ಯಾಂಪ್ ದುಬಾರೆ ಅರಣ್ಯದಲ್ಲಿ, ಕಾವೇರಿ ನದಿಯ ತಟದಲ್ಲಿದೆ. ಇಲ್ಲಿನ ದೋಣಿ ರೈಡ್ ಪ್ರವಾಸಿಗರಿಗೆ ಅತ್ಯಂತ ಮಜಾ ನೀಡುವ ಕ್ರೀಡೆಗಳಲ್ಲಿ ಒಂದು. ಇನ್ನು ಕುಶಾಲನಗರದ ಬಳಿ ಇರುವ ಮಾನವ ನಿರ್ಮಿತ ದ್ವೀಪ ‘ನಿಸರ್ಗಧಾಮ’ ಪ್ರಮುಖ ಪಿಕನಿಕ್ ಸ್ಥಳಗಳಲ್ಲಿ ಒಂದು. ಹಾಗೆಯೇ ಬೈಲುಕುಪ್ಪೆಯ ಟಿಬೆಟಿಯನ್ ಬೌದ್ಧರ ಗೋಲ್ಡನ್ ಟೆಂಪಲ್ ಪ್ರಮುಖವಾದ ಪ್ರವಾಸಿ ಕ್ಷೇತ್ರ. ಇನ್ನು ಮಡಿಕೇರಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಅಬ್ಬಿಜಲಪಾತ ಹಾಗೂ ಇಪ್ಪತ್ತೈದು ಕಿಲೋಮೀಟರ್ ದೂರಲ್ಲಿರುವ ಮಲ್ಲಳ್ಳಿ ಜಲಪಾತ ಪ್ರಮುಖವಾದ ಜಲಪಾತಗಳು.
ದುಬಾರೆ
ರಾಜಾಸೀಟ್
ಗೋಲ್ಡನ್ ಟೆಂಪಲ್
ರಿವರ್ ರಾಫ್ಟಿಂಗ್
ಭಾರತದ ಸೇನಾ ವ್ಯವಸ್ಥೆ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವುದಲ್ಲದೆ, ವರ್ಷದ ಅತೀ ಹೆಚ್ಚು ದಿನಗಳು ಪ್ರವಾಸಿಗರಿಂದಲೇ ತುಂಬಿಕೊಂಡು ಪ್ರವಾಸಿಗರ ಸ್ವರ್ಗ ಎನಿಸಿಕೊಂಡಿದೆ.
ಆಧಾರ : ವಿಕಿ ಪೀಡಿಯಾ
ಲೇಖಕರು : ಗಣೇಶ ಬರ್ವೆ ಮಣೂರು.
Comments
Post a Comment