ಬೆಟ್ಟಗಳ ನಗರ ಚಾಮರಾಜನಗರ
ಕರ್ನಾಟಕದ ದಕ್ಷಿಣದ ತುದಿಯಲ್ಲಿರುವ ಜಿಲ್ಲೆಯೆ ಚಾಮರಾಜನಗರ. ಮೈಸೂರಿನ ರಾಜರಾಗಿದ್ದ ಒಂಬತ್ತನೆಯ ಚಾಮರಾಜ ಒಡೆಯರ್ ನಿಂದಾಗಿ ಈ ಜಿಲ್ಲೆಗೆ ಚಾಮರಾಜನಗರ ಎನ್ನುವ ಹೆಸರು ಬಂತು. ೧೯೯೮ ರಲ್ಲಿ ಮೈಸೂರು ಜಿಲ್ಲೆಯಿಂದ ಇದು ಪ್ರತ್ಯೇಕಗೊಂಡು ಸ್ವತಂತ್ರ ಜಿಲ್ಲೆಯಾಯಿತು. ಯಳಂದೂರು, ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ ಹಾಗೂ ಹನೂರು ಎಂಬ ತಾಲ್ಲೂಕುಗಳನ್ನು ಒಳಗೊಂಡಿದೆ.
ಚಾಮರಾಜೇಶ್ವರ ದೇವಸ್ಥಾನ
ಚಾಮರಾಜನಗರದ ಇತಿಹಾಸ ನೋಡುವುದಾದರೆ ಈ ಸ್ಥಳ ಮುಂಚೆ ಶ್ರೀಅರಿ ಕೊಟ್ಟಾರ ಎಂದು ಹೆಸರಾಗಿತ್ತು. ಮೈಸೂರಿನ ಅರಸರಾಗಿದ್ದ ಚಾಮರಾಜ ಒಡೆಯರ್ ಇಲ್ಲಿ ಜನಿಸಿದ್ದರಿಂದ ಈ ಸ್ಥಳವನ್ನು ಚಾಮರಾಜನಗರ ಎಂದು ಪುನರ್ ನಾಮಕರಣ ಮಾಡಲಾಯಿತು. ಹೊಯ್ಸಳರ ದೊರೆಯಾದ ಗಂಗರಾಜನ ಸೇನಾ ಪತಿಯಾದ ಪುನಿಸ ದಂಡನಾಯಕ ವಿಜಯ ಪಾರ್ಶ್ವನಾಥ ಬಸದಿಯನ್ನು ಇಲ್ಲಿ ೧೧೧7 ರಲ್ಲಿ ನಿರ್ಮಿಸಿದನು.
ಮಲೆ ಮಹದೇಶ್ವರ ಬೆಟ್ಟ
ಈ ಜಿಲ್ಲೆ ಪಶ್ಚಿಮದಲ್ಲಿ ಹಾಗೂ ಉತ್ತರದಲ್ಲಿ ಮೈಸೂರು, ಈಶಾನ್ಯದಲ್ಲಿ ಮಂಡ್ಯ ಮತ್ತು ರಾಮನಗರ, ಪೂರ್ವದಲ್ಲಿ ಧರ್ಮಪುರಿ ಜಿಲ್ಲೆ (ತಮಿಳುನಾಡು), ಆಗ್ನೇಯದಲ್ಲಿ ಸೇಲಂ ಮತ್ತು ಈರೋಡ್ ಜಿಲ್ಲೆ (ತಮಿಳುನಾಡು), ದಕ್ಷಿಣದಲ್ಲಿ ನೀಲಗಿರಿ ಜಿಲ್ಲೆ (ತಮಿಳುನಾಡು), ನೈಋತ್ಯದಲ್ಲಿ ವೈಯನಾಡ್ ಜಿಲ್ಲೆ (ಕೇರಳ) ದೊಂದಿಗೆ ತನ್ನ ಗಡಿ ಹಂಚಿಕೊಂಡಿದೆ. ಎನ್ಎಚ್ ೨೦೯ ಬೆಂಗಳೂರಿನಿಂದ ತಮಿಳುನಾಡನ್ನು ಸಂಪರ್ಕಿಸುವ ಹೆದ್ದಾರಿ ಈ ಜಿಲ್ಲೆಯ ಮೂಲಕ ಹಾದು ಹೋಗುತ್ತದೆ. ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಒಳಗೊಂಡಿರುವುದರಿಂದ ಈ ಜಿಲ್ಲೆ ಹತ್ತಿರ ಹತ್ತಿರ ಎಂಬತ್ತು ಎರಡು ಸಾವಿರ ಅರಣ್ಯವಾಸಿಗಳನ್ನು ಒಳಗೊಂಡಿದೆ. ಅದರಲ್ಲಿ ಸೋಲಿಗರು, ಯರವರು, ಜೇನುಕುರುಬರು, ಬೆಟ್ಟಕುರುಬರು, ಪ್ರಮುಖರು. ಕರ್ನಾಟಕದ ಒಂದು ಕಾಲದ ಅಪರಾಧ ಲೋಕದ ಅನಭಿಷಿಕ್ತ ದೊರೆ ಕಾಡುಗಳ್ಳ ವೀರಪ್ಪನ್ ಈ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದ ಎನ್ನುವುದನ್ನು ಉಲ್ಲೇಖಿಸಬಹುದಾಗಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಶಿವನಸಮುದ್ರ ಜಲಪಾತ
ಇನ್ನು ಈ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದಾದರೆ ಯಳಂದೂರು ತಾಲ್ಲೂಕಿನಲ್ಲಿರುವ ಬಿಳಿಗಿರಿರಂಗನ ಬೆಟ್ಟ. ಇದೊಂದು ರಕ್ಷಿತ ಅರಣ್ಯ ಪ್ರದೇಶ. ಇದನ್ನು ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ ವನ್ಯಜೀವಿ ಅಭಯಾರಣ್ಯ ಅಥವಾ ಬಿಆರ್ಟಿ ವನ್ಯಜೀವಿ ಅಭಯಾರಣ್ಯ ಎಂದು ಕರೆಯುತ್ತಾರೆ. ೨೦೧೧ ಇದನ್ನು ಹುಲಿ ರಕ್ಷಿತಾರಣ್ಯ ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ. ಇನ್ನು ಹನೂರು ತಾಲ್ಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನ ಶೈವರ ಪವಿತ್ರ ಸ್ಥಳಗಳಲ್ಲಿ ಒಂದು. ಲಕ್ಷಾಂತರ ಭಕ್ತರು ಕರ್ನಾಟಕ ಹಾಗೂ ತಮಿಳುನಾಡಿನಿಂದ ಇಲ್ಲಿಗೆ ಆಗಮಿಸುತ್ತಾರೆ. ಸಮುದ್ರದಿಂದ ಮೂರು ಸಾವಿರ ಅಡಿ ಎತ್ತರ ಇರುವ ಈ ಬೆಟ್ಟ ಭಕ್ತರನ್ನು ಅಷ್ಟೇ ಅಲ್ಲದೆ ನಿಸರ್ಗ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಕಾವೇರಿ ನದಿಯಿಂದ ಸೃಷ್ಟಿಯಾದ ಶಿವನಸಮುದ್ರ ಜಲಪಾತ ಇನ್ನೊಂದು ಪ್ರಮುಖ ಪ್ರೇಕ್ಷಣೀಯ ಸ್ಥಳ. ೧೯೦೨ ರಲ್ಲಿ ಸ್ಥಾಪನೆಯಾದ ವಿದ್ಯುತ್ ಉತ್ಪಾದನಾ ಕೇಂದ್ರ ಏಷ್ಯಾದಲ್ಲೇ ಪ್ರಥಮವಾದದ್ದು. ಶಿವನಸಮುದ್ರ ಜಲಪಾತ ಎರಡು ವಿಭಾಗಗಳಲ್ಲಿ ಒಂದನ್ನು ಗಗನಚುಕ್ಕಿ ಮತ್ತೊಂದನ್ನು ಭರಚುಕ್ಕಿ ಎಂದು ಕರೆಯುತ್ತಾರೆ. ಇನ್ನು ೧೯೭೪ ರಲ್ಲಿ ಸ್ಥಾಪಿತವಾದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ಪ್ರಮುಖವಾದದ್ದು. ಇದು ಒಂದು ಹುಲಿ ಸಂರಕ್ಷಿತ ಅರಣ್ಯವಾಗಿದೆ. ಒಂದು ಕಾಲದಲ್ಲಿ ಮೈಸೂರು ಮಹಾರಾಜರು ಬೇಟೆಯಾಡಲು ಈ ಪ್ರದೇಶವನ್ನು ಬಳಸುತ್ತಿದ್ದರು. ಇನ್ನು ಗುಂಡ್ಲುಪೇಟೆಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಇದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಒಳಪಟ್ಟಿದ್ದು, ಕಾಡು ಪ್ರಾಣಿಗಳನ್ನು ಹೆಚ್ಚಾಗಿ ನೋಡಬಹುದು. ಸಾವಿರದ ನಾನೂರು ಐವತ್ತು ಮೀಟರ್ ಎತ್ತರ ಇರುವ ಶಿಖರವನ್ನು ಮಂಜು ವರ್ಷದ ಅತಿ ಹೆಚ್ಚು ಭಾಗದಲ್ಲಿ ಆವರಿಸಿರುವುದರಿಂದ ಈ ಸ್ಥಳಕ್ಕೆ ಹಿಮವತ್ ಎಂದು ವೇಣುಗೋಪಾಲ ಕೃಷ್ಣನ ದೇವಳ ಇರುವುದರಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂದು ಹೆಸರು ಬಂದಿದೆ.
ಬಿಳಿಗಿರಿರಂಗನ ಬೆಟ್ಟ
ಬಂಡೀಪುರ
ಜಿಲ್ಲೆಯ ಅತಿ ಹೆಚ್ಚು ಭಾಗ ಅರಣ್ಯ ಪ್ರದೇಶಗಳನ್ನು ಒಳಗೊಂಡಿರುವುದರಿಂದ ನೈಸರ್ಗಿಕ ಸಮತೋಲನಕ್ಕೆ ತನ್ನ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ವಾತಾವರಣ ವಾಸಯೋಗ್ಯವಾಗಿರುವುದರಿಂದ ಜನಜೀವನ ಪ್ರಾಣಿ ಜೀವನ ಸುಖಕರವಾಗಿ ಮುಂದುವರಿಯುತ್ತಿದೆ.
ಆಧಾರ ವಿಕಿಪೀಡಿಯ
ಲೇಖಕರು : ಗಣೇಶ ಬರ್ವೆ ಮಣೂರು.
ಲೇಖಕರು : ಗಣೇಶ ಬರ್ವೆ ಮಣೂರು.
Comments
Post a Comment