ಸೀತಾವರಂಗ (ಒನ್ ವೀಕೆಂಡ್ ಬೈಕ್ ರೈಡ್).
ಯಾಕೋ ಲೈಫ್ ತುಂಬಾ ಅಂದ್ರೆ ತುಂಬಾ ಬೋರ್ ಹೊಡಿತಾ ಇದ್ದ ಕಾಲ ಅದು. ಹತ್ತಿರ ಇದ್ದ ಒಳ್ಳೆಯ ಫ್ರೆಂಡ್ಸ್ ಎಲ್ಲ ಊರು ಬಿಟ್ಟಿದ್ದರು. ಕೈಯಲ್ಲಿ ಮಾಡೋಕೆ ಹೇಳಿಕೊಳ್ಳುವ ಕೆಲಸ ಏನೂ ಇರಲಿಲ್ಲ. "ಲೈಫ್ ಈಸ್ ಬೋರಿಂಗ್" ಅಂತ ಸ್ಟೇಟಸ್ ಹಾಕಿಕೊಂಡು ಕೂತಿದ್ದೆ. ಯಾರೋ ಸ್ಟೇಟಸ್ ಗೆ ರಿಪ್ಲೈ ಕೊಟ್ಟು "ಎಲ್ಲಾದ್ರೂ ಹೋಗಿ ಬಂದ್ರಿ, ಚೇಂಜ್ ಸಿಗುತ್ತೆ" ಅಂದ್ರು. ನನಗೂ ಸರಿ ಅನಿಸ್ತು. ಆಗತಾನೇ ಹೊಸದಾಗಿ ಒಂದಾಗಿದ್ದ, ಒಂದೇ ರೀತಿ ಯೋಚನೆ ಹೊಂದಿದ್ದ ಹುಡುಗರ ಜೊತೆ ಶನಿವಾರ ಹೊರಡೋಕೆ ಪ್ಲಾನ್ ಮಾಡಿದ್ವಿ. ಹೆಚ್ಚಿನ ಹುಡುಗರ ಜೊತೆ ಬೈಕ್ ಇದ್ದ ಕಾರಣ ಈ ಸಾರಿ ಬೈಕ್ ರೈಡ್ ಮಾಡೋಣ ಅಂತ ನಿರ್ಧಾರ ಕೂಡ ಆಯ್ತು. ಆದ್ರೆ ಹೋಗೋದೆಲ್ಲಿಗೆ...? ಅನ್ನೋದೇ ದೊಡ್ಡ ಪ್ರಶ್ನೆ. ಬೈಕಲ್ಲಿ ಹೋಗೋದು ಅಂದ ತಕ್ಷಣ ಮನೆಯಲ್ಲಿ ಬೇರೆ "ಹೆಚ್ಚು ದೂರ ಹೋಗ್ಬೇಡಿ ಸಂಜೆಯೊಳಗೆ ಮನೆಗೆ ಬನ್ನಿ" ಅಂತ ಹೇಳಿದ್ರು. ತುಂಬಾ ಯೋಚನೆ ಮಾಡಿ, ಮಂಗಳೂರು ಆಸುಪಾಸಿನಲ್ಲಿರುವ ಪ್ರವಾಸಿ ಸ್ಥಳಗಳ ಪಟ್ಟಿ ಮಾಡಿ ಕೊನೆಗೆ ಯಾರೋ ಫ್ರೆಂಡ್ಸ್ ಹಾಕಿರುವ ಸ್ಟೇಟಸ್ ನಿಂದ ಮುಗುಳುನಗೆ ಚಿತ್ರದ ಮೂರನೇ ಲವ್ ಸ್ಟೋರಿ ಚಿತ್ರೀಕರಣ ನಡೆಸಿದ ವರಂಗ ಹತ್ತಿರದಲ್ಲೇ ಇರೋದು ತಿಳಿದು ಬಂತು. ಹಾಗೆಯೇ ಹೆಬ್ರಿ ಹತ್ತಿರದ ಸೀತಾ ಫಾಲ್ಸ್ ಅಥವಾ ಕೂಡ್ಲು ಫಾಲ್ಸ್ ಕೂಡ ಇದಕ್ಕೆ ಹತ್ತಿರ ಇರೋದು ತಿಳಿಯಿತು. ಇವೆರಡು ಸ್ಥಳಗಳಿಗೆ ಪ್ರವಾಸ ಮಾಡೋದು ಅಂತ ನಿರ್ಧಾರ ಮಾಡಿದ್ವಿ.
ಶನಿವಾರ ಬೆಳಗ್ಗೆ ಆರು ಮೂವತ್ತಕ್ಕೆ ಹೊರಟು, ಸೂರ್ಯ ನೆತ್ತಿ ಸುಡುವುದರೊಳಗೆ ಕೂಡ್ಲು ತೀರ್ಥದಲ್ಲಿ ಸ್ನಾನ ಮಾಡೋದು ನಮ್ಮ ಪ್ಲಾನ್ ಆಗಿತ್ತು. ಆದರೆ ಪ್ಲಾನ್ ಮಾಡಿದಂತೆ ಎಲ್ಲಾ ನಡೀಬೇಕಲ್ಲಾ..? ಹುಡುಗಿಯರು ಹೊರಡೋದು ಲೇಟ್ ಅನ್ನೋದು ವಾಡಿಕೆ, ಆದರೆ ಹುಡುಗರನ್ನು ಬೇಗ ಏಳಿಸೋದು ಕಷ್ಟ, ಎದ್ದ ಮೇಲೆ ತಲೆಬಿಸಿ ಇಲ್ಲ ಕೂಡಲೇ ರೆಡಿ ಆಗ್ತಾರೆ. ಅಂತೂ ಇಂತೂ ಎಂಟು ಗಂಟೆಗೆ ಫುಲ್ ಟ್ಯಾಂಕ್ ಮಾಡಿಕೊಂಡು ಮಂಗಳೂರು ಬಿಟ್ವಿ.
ಮಂಗಳೂರಿನಿಂದ ವರಂಗಕ್ಕೆ ಹೋಗಬೇಕಾದರೆ ಮೊದಲು ಕಾರ್ಕಳ ತಲುಪಬೇಕು. ಮಂಗಳೂರಿನಿಂದ ಕಾರ್ಕಳಕ್ಕೆ ಹೋಗಲಿಕ್ಕೆ ಮೂರು ಮಾರ್ಗಗಳಿವೆ ಒಂದು ಪಡಬಿದ್ರೆಯಾಗಿ, ಇನ್ನೊಂದು ಮೂಡುಬಿದಿರೆ ಮೇಲೆ ಮತ್ತೊಂದು ಕಟೀಲ್ ಮೇಲೆ. ನಾವು ರಾಷ್ಟ್ರೀಯ ಹೆದ್ದಾರಿ ಪಾಸಾಗಿ ಹೋಗುವ ಪಡುಬಿದ್ರೆ ಮಾರ್ಗವನ್ನು ಆಯ್ದುಕೊಂಡ್ವಿ. ಕಾರ್ಕಳದಿಂದ ಅಜೆಕಾರಾಗಿ ಹೆಬ್ರಿ ಸೇರುವ ಮಾರ್ಗದಲ್ಲಿ ಮೂವತ್ತಾರು ಕಿಲೋಮೀಟರ್ ಸಾಗಿದರೆ ಸಿಗುವುದೇ ವರಂಗ ಜೈನ ಬಸದಿ. ಮಂಗಳೂರಿನಿಂದ ಎಂಟು ಗಂಟೆಗೆ ಹೊರಟ ನಾವು ಪಡುಬಿದ್ರೆಯಲ್ಲಿ ಬೆಳಗಿನ ಉಪಾಹಾರ ಮಾಡುವ ನಿರ್ಧಾರ ಕೈಗೊಂಡ್ವಿ. ಆದ್ರೆ ಪಡುಬಿದ್ರೆ ತಲುಪಿದಾಗ ಯಾರ ಹೊಟ್ಟೆಯಲ್ಲಿ ಹುಳ ಓಡಾಡದ ಕಾರಣ ಉಪಾಹಾರದ ಪ್ಲಾನನ್ನು ಬೆಳ್ಮಣ್ಗೆ ಸ್ಥಳಾಂತರಿಸಬೇಕಾಯಿತು. ಬೆಳ್ಮಣ್ನ ಹೋಟೆಲ್ನಲ್ಲಿ ಬೆಳಗಿನ ಉಪಾಹಾರವನ್ನು ಗಡದ್ದಾಗಿ ಹೊಡೆದು, ತಟ್ಟೆ ಖಾಲಿ ಮಾಡುವಾಗ ಗಂಟೆ ಒಂಬತ್ತು ಮೂವತ್ತು ಆಗಿತ್ತು. ಒಬ್ಬರನ್ನೊಬ್ಬರು ಹಿಂದೆ ಹಾಕಿಕೊಳ್ಳುತ್ತಾ, ಮೊಬೈಲ್ಗಳಲ್ಲಿ ವಿಡಿಯೊ ಮಾಡುತ್ತಾ (ಹಿಂದೆ ಕೂತವರು), ವರಂಗದ ಬಾಗಿಲಿಗೆ ಬಂದಿಳಿಯುವಾಗ ಗಂಟೆ ಹತ್ತು ಹದಿನೈದು. ತಮ್ಮ ತಮ್ಮ ಬೈಕ್ಗಳನ್ನು ಪಾರ್ಕ್ ಮಾಡಿ ಕೆರೆ ಮಧ್ಯೆ ಇರುವ ವರಂಗ ಜೈನ ಬಸದಿಯನ್ನು ನೋಡಿದಾಗ ನೆನಪಾಗಿದ್ದು ಒಂದೇ "ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ, ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ". ಬಸದಿಯನ್ನು ನೋಡಲು ದೋಣಿಯಲ್ಲಿ ಸಾಗಬೇಕು ಪ್ರತಿ ತಲೆಗೆ ಹತ್ತು ರೂಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲೇ ಇದ್ದ ಹಿರಿಯರು ಮುಗುಳುನಗೆ ಚಿತ್ರವನ್ನು ಯಾವ ಯಾವ ಜಾಗದಲ್ಲಿ ಚಿತ್ರೀಕರಿಸಿದರು ಎನ್ನುವ ಮಾಹಿತಿಯನ್ನು ನೀಡಿದರು. ಒಂದು ದಡದಿಂದ ದೇವಸ್ಥಾನದವರೆಗಿನ ದೋಣಿಯ ಪಯಣ ಎಷ್ಟು ಭಯ ಹುಟ್ಟಿಸಿತ್ತು ಎಂದರೆ ಲೈಫ್ ಜಾಕೆಟ್ಗಳು ಬೇರೆ ಲಭ್ಯವಿರಲಿಲ್ಲ. ಕೆಲವು ಸಾರಿ ದೋಣಿ ಒಂದೇ ಕಡೆ ವಾಲಿ ಭಯ ಹುಟ್ಟಿಸುತ್ತಿತ್ತು. ಜೈನ ಬಸದಿಯ ದೇವರುಗಳಿಗೆ ನಮಸ್ಕರಿಸಿ, ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಹೋದ ದೋಣಿಯಲ್ಲೇ ಹಿಂದಿರುಗಿದ್ವಿ. ಇಂತಹ ಒಳ್ಳೆಯ ಸ್ಥಳವನ್ನು ಕರ್ನಾಟಕಕ್ಕೆ ಪರಿಚಯಿಸಿದ ಯೋಗರಾಜ್ ಭಟ್ಟರಿಗೆ ಜೈ ಹೇಳುತ್ತಾ ನಮ್ಮ ಸವಾರಿ ಸೀತಾ ಫಾಲ್ಸ್ ಕಡೆಗೆ ಸಾಗಿತು.
ವರಂಗದಿಂದ ಹೆಬ್ರಿ ಮಾರ್ಗದಲ್ಲಿ ಮುಂದೆ ಸಾಗಿ ಆಗುಂಬೆ ತಲುಪುವ ರಸ್ತೆಯಲ್ಲಿ ಬಲಕ್ಕೆ ಸಾಗಿದರೆ ಸೀತಾ ಫಾಲ್ಸ್ ಅಥವಾ ಕೂಡ್ಲು ಫಾಲ್ಸ್ ನ ಸ್ವಾಗತ ಕಮಾನು ಕಾಣ ಸಿಗುತ್ತದೆ. ಕಮಾನಿನಿಂದ ಸೀತಾ ಫಾಲ್ಸ್ ಗೆ ಕೇವಲ ಹದಿನಾಲ್ಕು ಕಿಲೋಮೀಟರ್ ಎಂದು ಅಲ್ಲೇ ಅಂಗಡಿಯವರು ಹೇಳಿದರು. "ಕೇವಲ ಹದಿನಾಲ್ಕು ಕಿಲೋಮೀಟರ್ ಅಲ್ವಾ, ಕಾಲು ಗಂಟೆಯೊಳಗೆ ತಲುಪುತ್ತೇವೆ" ಎಂದು ಹೇಳಿದಾಗ. ಅವರು "ಹೋಗಿ, ಹೋಗಿ, ಗೊತ್ತಾಗುತ್ತೆ" ಅಂತ ಮುಗುಳ್ ನಕ್ಕರು. ಅದಾಗಲೇ ಸೂರ್ಯ ನೆತ್ತಿ ಸುಡಲು ಅಣಿಯಾಗಿದ್ದ. ಹದಿನಾಲ್ಕು ಕಿಲೋಮೀಟರ್ ಗಳ ಪಯಣ ಆರಂಭಿಸಿದ ಕೆಲ ಹೊತ್ತಲ್ಲೇ ಅಂಗಡಿಯವರ ನಗುವಿನ ಒಳ ಅರ್ಥ ಅರಿವಾಯಿತು. ಮಂಗಳೂರಿನಿಂದ ಹೆಬ್ರಿ ವರೆಗಿನ ಪಯಣವೂ ಅಷ್ಟು ದುರ್ಗಮವಾಗಿರಲಿಲ್ಲ. ಕೆಲವು ಕಡೆ ಮಣ್ಣಿನ ರಸ್ತೆಗಳು, ಇನ್ನೂ ಕೆಲವು ಕಡೆ ರಸ್ತೆಗಳೇ ಮಾಯವಾಗಿದ್ದವು. ಕೆಲವು ಕಡೆ ಬೈಕ್ ಕಂಟ್ರೋಲ್ಗೆ ಸಿಗದ ಪ್ರಸಂಗಗಳು ನಡೆದು ಹೋಯ್ತು. ಅಂತೂ ಇಂತೂ "ಅಬ್ಬ ಬಂತಲ್ಲಾ" ಅಂತ ಸೀತಾ ಫಾಲ್ಸ್ನ ಪಾರ್ಕಿಂಗ್ ಸೇರಿದಾಗ ಎಲ್ಲರಿಗೂ ಒಂದು ರೀತಿಯ ನಿರಾಳ ಭಾವ. ಇಷ್ಟು ದುರ್ಗಮ ಹೆದ್ದಾರಿಯನ್ನು ಸಾಗಿ ಬಂದ ನಮಗೆ ಮಗದೊಂದು ಶಾಕ್ ಕಾದಿತ್ತು. ಅದೇನೆಂದರೆ ಪಾರ್ಕಿಂಗ್ ನಿಂದ ಒಂದು ವರೆ ಕಿಲೋಮೀಟರ್ ನಡೆದು ಸಾಗಬೇಕಿತ್ತು. ನಮ್ಮ ಬ್ಯಾಗ್ ಗಳನ್ನು ಸೆಕ್ಯುರಿಟಿ ಚೆಕ್ ಮಾಡಿಸಿ, ತೆಗೆದುಕೊಂಡು ಹೋಗುತ್ತಿರುವ ಪ್ಲಾಸ್ಟಿಕ್ ಪರಿಕರಗಳ ಲೆಕ್ಕ ನೀಡಿ, ತಲೆಗೆ ಎಪ್ಪತ್ತು ರೂಗಳ ಟಿಕೆಟ್ ಪಡೆದು, ಹನ್ನೆರಡು ಮೊವತ್ತರ ಸುಮಾರಿಗೆ "ಊಟವಾದರೂ ಮಾಡ್ಕೊಂಡು ಬರಬಹುದಿತ್ತು" ಎಂದು ಗೊಣಗುತ್ತಾ ನಮ್ಮ ಪಯಣ ಆರಂಭಿಸಿದ್ವಿ. ಹೊಟ್ಟೆಗೆ ಸರಿಯಾಗಿ ಊಟವಿಲ್ಲದಿದ್ದರು ನಮ್ಮ ಹುಮ್ಮಸ್ಸು ಕಮ್ಮಿ ಆಗಿರಲಿಲ್ಲ. ಹಾಡುತ್ತಾ ಕುಣಿಯುತ್ತಾ ಸೀತಾ ಉಗಮ ಸ್ಥಾನವನ್ನು ತಲುಪಿದ್ವಿ. ಸೀತೆಯ ಮಡಿಲಲ್ಲಿ, ತಂಪಾದ ನೀರಿನಲ್ಲಿ ಮಿಂದು ಪಯಣದ ಆಯಾಸವನ್ನು ದೂರವಾಗಿಸಿಕೊಂಡ್ವಿ. ಒಂದೇ ಧಾರೆಯಾಗಿ, ಆಕಾಶದಿಂದ ಧುಮ್ಮಿಕ್ಕುವ ಗಂಗೆಯ ರೀತಿ ಸೀತೆ ಭೂಮಿಗೆ ಸ್ಪರ್ಶಿಸುವುದನ್ನು ನೋಡುವುದೇ ಕಣ್ಣಿಗೆ ಆನಂದ. ಸೀತೆಯ ನೀರಿನಲ್ಲಿ ಕಾಲಿಗೆ ಚುಚ್ಚಿದ ಬಾಟಲಿ ಚೂರುಗಳು "ಇಷ್ಟು ಸೆಕ್ಯುರಿಟಿ ಚೆಕ್ ಗಳಿದ್ದರೂ ಬಾಟಲಿಗಳು ಹೇಗೆ ಒಳಗೆ ಬಂದವು..?" ಎನ್ನುವ ಯಕ್ಷ ಪ್ರಶ್ನೆ ನಮ್ಮ ತಲೆಯಲ್ಲಿ ಮೂಡಿಸಿತು. ಸಂಜೆ ನಾಲ್ಕು ಗಂಟೆ ಒಳಗಾಗಿ ಸೀತಾ ಫಾಲ್ಸ್ನಿಂದ ಪಾರ್ಕಿಂಗ್ ಸ್ಥಳಕ್ಕೆ ಹಿಂದಿರುಗಬೇಕೆಂದು ಪೊಲೀಸ್ ಆಜ್ಞೆಯಾಗಿತ್ತು, ಹಾಗೆ ಹಿಂದಿರುಗಿ ಬಂದ್ವಿ. ಪ್ರವಾಸಿಗರಿಗೆ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿತ್ತು.
ನಮ್ಮ ಸುತ್ತಮುತ್ತ ಇಂತಹ ಅನೇಕ ಪ್ರವಾಸಿ ಆಕರ್ಷಣಾ ಸ್ಥಳಗಳಿವೆ. ಅವುಗಳನ್ನು ಉತ್ತಮವಾದ ಸಂಪರ್ಕ ರಸ್ತೆ, ಪ್ರವಾಸಿಗರಿಗೆ ಅನುಕೂಲವಾಗುವಂತಹ ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ, ಊಟ ಉಪಹಾರದ ವ್ಯವಸ್ಥೆಯನ್ನು ಮಾಡಿ ಪ್ರವಾಸಿ ಸ್ಥಳಗಳಿಗೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವತ್ತ ಸರ್ಕಾರ ಗಮನ ಹರಿಸಬೇಕಾಗಿದೆ. ಅರಣ್ಯ ಇಲಾಖೆಯ ನಿರ್ಬಂಧವೋ ಅಥವಾ ಸ್ಥಳೀಯ ನಾಯಕರ ನಿರ್ಲಕ್ಷ್ಯವೋ ತಿಳಿದಿಲ್ಲ ಒಟ್ಟಿನಲ್ಲಿ ರಮಣೀಯ ಸ್ಥಳಗಳು ನಯನಾಕರ್ಷಕವಾಗಿದ್ದರೂ ಹೋಗಿ ಬರುವಷ್ಟರಲ್ಲಿ ಸಾಕೆನಿಸಿಬಿಡುತ್ತವೆ.
ಒಟ್ಟಿನಲ್ಲಿ ವಾರಾಂತ್ಯದಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ಸಂದರ್ಶಿಸಲು, ಸಂಜೆಯೊಳಗೆ ವಾಪಸಾಗಲು, ಒಂದೊಳ್ಳೆಯ ದಿನವನ್ನು ಕಳೆಯಲು ಮಂಗಳೂರಿನ ಆಸುಪಾಸಿನವರಿಗೆ ಇವೆರಡು ಸ್ಥಳಗಳು ತುಂಬಾ ಉತ್ತಮವಾಗಿದೆ. ಸಮಯ ಸಿಕ್ಕಾಗ, ಸಮಯವಿಲ್ಲದಿದ್ದರೂ ಸಮಯ ಮಾಡಿಕೊಂಡು ಒಂದು ಬಾರಿ ಭೇಟಿ ಕೊಡಿ.
-ಗಣೇಶ ಬರ್ವೆ ಮಣೂರು.
Sundaravagide baravanige
ReplyDeleteBaravanigeyu saralavagi tumba channagide 👌
ReplyDelete