ಬಸ್ಸಿನ ಕೊನೆಯ ಸೀಟು...!!



ಮಲೆನಾಡ ಮಡಿಲಲ್ಲಿ ಒಂದು ಊರು, ಆ ಊರಿನಲ್ಲಿ ಈಗ್ಲೋ, ಆಗ್ಲೋ ಬೀಳು ಒಂದು ಬಸ್ ಸ್ಟಾಪ್. ದಿನಕ್ಕೆ ಒಂದೋ, ಎರಡೋ ಬಾರಿ ಬರುವ ಬಸ್ಸು. ಕಣ್ಣು ಮುಚ್ಚಿಕೊಂಡು ಸುರಿಯುತ್ತಿರುವ ಮಳೆ. ದಾರಿಯಲ್ಲಿ ಯಾರೋ ಹಸಿ ಹುಲ್ಲು ಸೈಕಲ್ ಕ್ಯಾರಿಯರ್ ಅಲ್ಲಿ ಇಟ್ಕೊಂಡು ಹೋಗ್ತಾ ಇದ್ರು. "ಯಜಮಾನ್ರೆ, ಇಲ್ಲಿ ಬಸ್ಸು ಅನ್ನುವಂಥದ್ದು ಏನಾದ್ರು ಬರುತ್ತಾ."  "ಎರಡು ಬಸ್ ಬತ್ತಾವೆ, ಅವರಿಗೆ ಟೇಮ್ ಇಲ್ಲ, ಏನೂ ಇಲ್ಲ. ಕೆಲವು ಸಾರಿ ಮರ ಬಿತ್ತು, ಬಸ್ ಹೊಂಡಕ್ಕೆ ಬಿತ್ತು ಅಂತ ಬರವೂ ಬರಲ್ಲ, ಏನೋ ಕಣಪ್ಪ ಬಂದ್ರೆ ನಿನ್ನ ಪುಣ್ಯ. ಮಳೆ ಬರಂಗ್ ಅದೇ, ಬಸ್ ಸ್ಟಾಂಡ್ ಬೇರೆ ಸೋರತ್ತದೆ, ಬನ್ನಿ ನಮ್ಮ ಮನೆ ಇಲ್ಲೇ ಇದೆ. ಬಸ್ ಬರೋ ತನಕ ಸ್ವಲ್ಪ ಆರಾಮ ಮಾಡಿ" ಆ ಯಜಮಾನರ ಮನೆಗೆ ಹೋಗಿ, ಒಳ್ಳೆ ಮಲ್ನಾಡ್ ಕಾಫಿ ಹೀರಿಕೊಂಡು ಕೂತ್ಕೊಂಡ್ ಇದ್ದೆ. ಅಷ್ಟರೊಳಗೆ ಎಲ್ಲಿಂದಲೋ ಬಸ್ನ ಹಾರ್ನ್ ಕೇಳಿಸಿತು. "ಬಸ್ ಬಂತು ಕಾಣುತ್ತೆ, ಹೋಗಪ್ಪಾ, ಬೇಗ ಹೋಗು ಬಸ್ಸ್ಟಾಂಡಲ್ಲಿ ಯಾರೂ ಇಲ್ಲ ಅಂದ್ರೆ ಹಂಗೆ ಹೊಂಟೋಗ್ತಾನೆ". ಎದ್ನೋ, ಬಿದ್ನೋ ಅಂತ ಓಡ್ಕೊಂಡು ಹೋಗಿ ಬಸ್ ಹತ್ಕೊಂಡೆ. ಆದ್ರೆ ಬಸ್ ತುಂಬಿತ್ತು. ನನಗೆ ಸಿಕ್ಕಿದ್ದು ಕೊನೆಯ ಸೀಟು.

ಕೊನೆಯ ಸೀಟಿನಲ್ಲಿ ಕೂತ ಮನಸ್ಸು ಆಲೋಚನೆಯಲ್ಲಿ ಮಗ್ನವಾಯಿತು. ಈ ಬಸ್ ಹತ್ತಬೇಕೋ, ಬೇಡವೋ ಅನ್ನುವ ಕನ್ ಫ್ಯೂಷನ್ ನಲ್ಲಿ ಇರುವವರಿಗೆ ಹೆಚ್ಚಾಗಿ ಸಿಗೋದೇ ಈ ಕೊನೆ ಸೀಟು. ಕೆಲವರು ಯಾಕಪ್ಪಾ ಹತ್ತಿದ್ದು ಅಂತ ಹತ್ತಿದ ಮೇಲ್ ವ್ಯಥೆಪಡುತ್ತಾರೆ. ಇನ್ನು ಕೆಲವರು ಕೊನೆ ಕ್ಷಣದಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಂಡೆ ಅಂತ ತೃಪ್ತರಾಗ್ತಾರೆ. ಇನ್ನು ಕೆಲವರು ಆಚೆ ಇಳಿಯಲಿಕ್ಕೂ ಆಗದೆ, ಬೇರೆ ಬಸ್ ಹತ್ತಲಿಕ್ಕೂ ಆಗದೆ, ಆ ಬಸ್ ನಲ್ಲೇ ತಮ್ಮ ಸಮಾಧಾನ ಕಂಡುಕೊಂಡಿರುತ್ತಾರೆ. ಪ್ರತಿಯೊಬ್ಬರ ಜೀವನದಲ್ಲೂ ತಾವು ಮಾಡಬಾರದಿತ್ತು ಅಂತ ಅಂದುಕೊಳ್ಳುವ ಒಂದು ತಪ್ಪಿರುತ್ತದೆ. ಹೆಚ್ಚಿನವರು ತಮ್ಮ ಲೈಫ್ ಅನ್ನು ರಿವೈಂಡ್ ಮಾಡಿ ಮತ್ತೆ ಹೊಸತಾಗಿ ಪ್ಲೇ ಮಾಡುವ ರಿಮೋಟ್ ಗಾಗಿ ಕಾಯ್ತಾ ಇರ್ತಾರೆ.

ನಾನೊಬ್ಬ ಡೈರೆಕ್ಟರ್, ಆಗುಂಬೆಯಿಂದ ಕೊಪ್ಪ ಹೋಗುವ ದಾರಿಯಲ್ಲಿ, ಒಂದು ಸಣ್ಣ ಊರಿನಲ್ಲಿ ಮುಂದಿನ ಚಿತ್ರದ ಶೂಟಿಂಗ್ನಲ್ಲಿ ಸ್ವಲ್ಪ ಬ್ಯುಸಿಯಾಗಿದ್ದೆ.  ರಾತ್ರಿ ಹನ್ನೊಂದು ಗಂಟೆ ಆಗಿತ್ತು ಅನಿಸುತ್ತೆ, ಶೂಟಿಂಗ್ ಪ್ಯಾಕಪ್ ಮಾಡಿ, ಡಿಸೆಂಬರ್ ತಿಂಗಳ ಮಧ್ಯವಾದ್ದರಿಂದ, ಚಳಿ ಬಾರಿನೇ ಜೋರಾಗಿತ್ತು. ಫೈರ್ ಕ್ಯಾಂಪ್ ಹಾಕಿಕೊಂಡು, ಫುಲ್ ಟೀಂ ಜೊತೆ ಮಾತುಕತೆ, ಹರಟೆಗಳಲ್ಲಿ ತಲ್ಲೀನನಾಗಿದ್ದೆ. ಅದೇ ಸಮಯಕ್ಕೆ ಮೊಬೈಲ್ಗೊಂದು ಮೆಸೇಜ್ ಬಂತು "ನಾನು ನಾಳೆ ಹೋಗ್ತಾ ಇದ್ದೇನೆ, ನಾಳೆ ರಾತ್ರಿ ಮಂಗಳೂರು ಏರ್ಪೋರ್ಟ್ ನಿಂದ ಹನ್ನೊಂದು ಗಂಟೆ ಫ್ಲೈಟ್, ಇನ್ನೂ ೨೪ ಗಂಟೆ ಇದೇ, ಯೋಜನೆ ಮಾಡಿ" ಅಂತ ಇತ್ತು. ನಾನು ಅದನ್ನು ಹಾಗೇ ಇಗ್ನೋರ್ ಮಾಡಿ ಹೋಗಿ ಮಲಗಿಕೊಂಡೆ. ಮುಂದಿನ ದಿನ ಎಂದಿನಂತೆ ಶೂಟಿಂಗ್ ಆರಂಭ ಆಯ್ತು. ಮಧ್ಯಾಹ್ನ ಮೂರು ಗಂಟೆಗೆ ಮತ್ತದೇ ನಂಬರ್ನಿಂದ ಮೆಸೇಜ್ ಬಂತು "ನಾನು ಹೋದ್ರೆ ಇನ್ಯಾವತ್ತೂ ಹಿಂದೆ ಬರಲ್ಲ. ಹೊರಡುವ ಕೊನೆಕ್ಷಣದ ತನಕ ನಿಮ್ಮ ಬರುವಿಕೆಯ ನಿರೀಕ್ಷೆಯಲ್ಲಿರುತ್ತೇನೆ." ಯಾಕೋ ಮನಸ್ಸು ಕಲಕಿತು. ತಪ್ಪು ಮಾಡ್ತಾ ಇದ್ದೇನೆ ಅನಿಸ್ತು. ಕೂಡ್ಲೆ ಶೂಟಿಂಗ್ ಪ್ಯಾಕಪ್ ಮಾಡಿಸಿ ಬಸ್ ಸ್ಟಾಪ್ ಹತ್ರ ಬಂದೇ. ಯಾವುದೋ ಒಂದು ಉಡುಪಿ ಬಸ್ ಸಿಕ್ತು. ಕೊನೇ ಸೀಟಲ್ ಕೂತ್ಕೊಂಡು ಹೋಗ್ತಾ ಇದ್ದೀನಿ.

ಬರಹಗಾರನಾದ ಆರಂಭದ ದಿನಗಳವು. ಕಾಲೇಜು ದಿನಗಳಲ್ಲಿ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಖುಷಿ ಕೊಡ್ತಾ ಇದ್ರೆ, ಬರಹಗಾರರಿಗೆ ತಮ್ಮ ಬರಹಕ್ಕೆ ಅಭಿಮಾನಿಗಳು ನೀಡುವ ಅಭಿಪ್ರಾಯವೇ ಅಂಕಗಳು ತಂದುಕೊಡುವ ಆನಂದವನ್ನು ನೀಡುತ್ತವೆ. ನನ್ನ ಪ್ರತಿಯೊಂದು ಬರಹಕ್ಕೂ ಒಂದು ಅನೌನ್ ನಂಬರಿಂದ ತುಂಬಾ ಪ್ರಶಂಸೆ ವ್ಯಕ್ತವಾಗುತ್ತಿತ್ತು. ಕೆಲವೊಮ್ಮೆ ಬರಹ ಪ್ರಕಟವಾದ ಸಂಜೆ ಇನ್ನೂ ಯಾಕೆ ಆ ನಂಬರ್ನಿಂದ ಪ್ರತಿಕ್ರಿಯೆ ಬರಲಿಲ್ಲ ಅಂತ ಕಾಯ್ತಾ ಇದ್ದಂತಹ ದಿನಗಳು ಇದ್ದವು. ಅವಳು ನೀಡುತ್ತಿದ್ದ ಅಭಿಪ್ರಾಯಗಳು ನನ್ನ ಯೋಚನಾ ಲಹರಿಯನ್ನು ಕೆಲವು ಸಾರಿ ಬದಲಾಯಿಸಿತ್ತು. ದಿನ ಕಳೆದಂತೆ ತಿಳಿದ ಆಶ್ಚರ್ಯಕರ ಸಂಗತಿಯೆಂದರೆ ಅವಳು ದೂರದ ಹಿಮಾಚಲ ಪ್ರದೇಶದವಳು, ಪ್ರಿಯಾ ಪಟಾಣಿಯ, ಮಣಿಪಾಲ್ನಲ್ಲಿ ಇಂಜಿನಿಯರಿಂಗ್ ಕಲಿಯಲು ಬಂದಿದ್ದಳು. ಕರ್ನಾಟಕಕ್ಕೆ ಬಂದು ಕನ್ನಡ ಕಲಿತು, ನನ್ನ ಬರಹವನ್ನು ಅರ್ಥ ಮಾಡಿಕೊಂಡು, ಅದಕ್ಕೆ ಅಭಿಪ್ರಾಯ ತಿಳಿಸುತ್ತಿದ್ದಳು ಎಂದು ತಿಳಿದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.

ದಿನ ಕಳೆದಂತೆ ನಮ್ಮ ನಡುವಿನ ಬಾಂಧವ್ಯ ಗಟ್ಟಿಯಾಗುತ್ತಾ ಸಾಗಿತು. ಒಂದು ದಿನ ಅವಳು ಕೇಳಿದ್ಲು "ಕಾಫಿಗೆ ಸಿಗ್ತೀರಾ..?" ಅಂತ. "ಆ ನೋಡುವ" ಅಂತ ಹೇಳಿದೆ. ನನ್ನ ತುಂಬಾ ಬಿಝಿಯಾದ ಲೈಫ್ ನಿಂದ ಅದರ ಬಗ್ಗೆ ಯಾವತ್ತೂ ನೋಡ್ಲೇ ಇಲ್ಲ. ಆದ್ರೆ ಅವತ್ತಿಂದ ಅವಳ ಮುಂದಿನ ಎಲ್ಲಾ ಮೆಸೇಜುಗಳಲ್ಲಿ "ಕಾಫಿ ಯಾವಾಗ..?" ಅಂತ ಕೊನೆಯಲ್ಲಿ ಬರೆಯುವುದನ್ನು ಬಿಡ್ತಿರಲಿಲ್ಲ. ಕರ್ನಾಟಕಕ್ಕೆ ಬಂದು, ಕನ್ನಡವನ್ನು ಕಲಿತು ನನ್ನ ಬರಕ್ಕೆ ಇಷ್ಟು ಪ್ರೀತಿ ತೋರಿಸಿದವಳಿಗೆ, ನನ್ನ ಒಂದು ಐದು ನಿಮಿಷ ಕೊಡುವುದರಲ್ಲಿ ತಪ್ಪೇನಿಲ್ಲ ಅನಿಸ್ತು. " ಛೇ ಅವತ್ತು ಅವಳನ್ನು ಮೀಟ್ ಆಗಬಹುದಿತ್ತು" ಅನ್ನುವ ವ್ಯಥೆ ಯೊಂದು ಮುಂದೆ ನನ್ನ ಕಾಡಬಾರದು ಎನ್ನುವ ನಿರ್ಧಾರ ಮಾಡ್ದೆ. ಮಂಗಳೂರಿಗೆ ಹೊರಟು ನಿಂತೆ.

ಮಂಗಳೂರು ಏರ್ಪೋರ್ಟ್ಗೆ ಬಂದ್ ಸೇರುವಾಗ ಸರಿಯಾಗಿ ರಾತ್ರಿ ಹತ್ತು ಕಾಲು. ಅವಳಿಗೆ ಆಕಾಶವೇ ಧರೆಗೆ ಬಂದ ಆನಂದ. ಕಾಫಿ ಸ್ವಲ್ಪ ಮಾತುಕತೆ ಜೊತೆ ಒಂದೊಳ್ಳೆ ಫ್ರೆಂಡನ್ನು ಬೀಳ್ಕೊಟ್ಟೆ.

ನಮ್ಮ ಅಹಂನಿಂದಾಗಿ, ಬೇರೆಯವರ ಮೇಲಿನ ಸಿಟ್ಟಿನಿಂದ ಕೆಲವು ಸಾರಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಬಿಝಿ ಲೈಫ್ ಸ್ಟೈಲ್ ನಿಂದ ಕೆಲವು ಕೆಲಸಗಳನ್ನು ಮಾಡಬೇಕೆನ್ನುವ ಮನಸ್ಸಿದ್ದರೂ ಮಾಡೋಕ್ ಸಮಯ ಇರುವುದಿಲ್ಲ. ಫಾರ್ವರ್ಡ್ ಮೂಡ್ ನಲ್ಲಿರುವ ಲೈಫ್ನಲ್ಲಿ, ರಿವೈಂಡ್ ಮಾಡುವ ರಿಮೋಟ್ ಯಾರಿಗೂ ಸಿಗಲ್ಲ. ಪ್ಲೇ ಮಾಡುವಾಗಲೇ ನೋಡ್ಕೊಂಡು ಮಾಡಿದ್ರೆ ಉತ್ತಮವಲ್ಲವೇ... ಯೋಚನೆ ಮಾಡಿ

- ಬರ್ವೆ

Comments

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ

ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)