ಲಾಕ್ ಡೌನ್ ಅಲ್ಲಿ ಸಿಕ್ಕ ಆ ಕೀಲಿ ಕೈ...!!


ಲಾಕ್ ಡೌನ್, ಲಾಕ್ ಡೌನ್, ಲಾಕ್ ಡೌನ್. ಎಲ್ಲಿ ಕೇಳಿದ್ರು ಇದೇ ಪದ. ಟಿವಿ ಹಾಕ್ಲಿ, ರೇಡಿಯೋ ಟ್ಯೂನ್ ಮಾಡ್ಲಿ, ಪೇಪರ್ ಪುಟ ತಿರುಗಿಸಿಲಿ, ವಾಟ್ಸಾಪ್ ಸ್ಕ್ರಾಲ್ ಮಾಡಿದ್ರೂ ಕೇಳ್ತಾ ಇದ್ದಿದ್ದು ಇದು ಒಂದೇ ಪದ. ಹೇಗಪ್ಪಾ ಮುಂದಿನ ದಿನಗಳು, ಬಸ್ಸಿನಲ್ಲಿ ಆಫೀಸ್ಗೆ ಹೋಗ್ಬೇಕಾದ್ರೆ ಯಾರ್, ಯಾರು ಎಲ್ಲೆಲ್ಲಿ ತಾಗಿಸುತ್ತಾರೋ ಅಂತ ಹೆದರಿಕೊಳ್ಳುವುದರೊಳಗೆ ಕಂಪೆನಿ ಕಂಪ್ಯೂಟರ್ ಸೆಂಟರ್ ಅನ್ನೇ ತಂದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಬಿಟ್ಟಿತ್ತು. "ವೇರ್ ಪ್ರೊಫೆಷನಲ್ ಲೈಫ್ ಮೀಟ್ಸ್ ಪರ್ಸನಲ್" ಅಂತ ಸ್ಟೇಟಸ್ ಹಾಕ್ಕೊಂಡು ಮನೆ ಅಂಗಳದಲ್ಲಿ ನಮ್ಮ ಪ್ರೋಗ್ರಾಮಿಂಗ್ ಅಂಗಡಿ ಓಪನ್ ಆಗೆ ಬಿಡ್ತು.

ಅಲ್ಲಿ ಅಷ್ಟು ಪಾಸಿಟಿವ್ ಪ್ರಕರಣಗಳು ದಾಖಲಾದವು, ಇಲ್ಲಿ ಇಷ್ಟು ಜನರು ಪ್ರಾಣ ಕಳೆದುಕೊಂಡರು, ಅದ್ಯಾವುದೋ ಸಪ್ತ ಸಾಗರದಾಚೆ ಕೋಟಿಗಟ್ಟಲೆ ಜನರು ಕೆಲಸ ಕಳೆದುಕೊಂಡರಂತೆ, ಕೆಲವರು ತಿನ್ಲಿಕ್ಕೆ ಇಲ್ಲದೇ, ಊರಿಗೆ ಹೋಗಲು ಆಗದೆ ನಿರಾಶ್ರಿತರಾಗಿದ್ದಾರೆ, ಎನ್ನುವ ಸುದ್ದಿಗಳು ಸದಾ ಕಂಪ್ಲೇಂಟ್ ಮಾಡುವ ನಮ್ಮ ಜೀವನದಲ್ಲೂ ದೇವರು ಇದ್ದಾನೆ ಅಂತ ಒಂದ್ ಸಾರಿ ಅನಿಸಿದ್ದು ಸುಳ್ಳಲ್ಲ.

ಕರೋನಾ ಅನ್ನುವ ಒಂದು ರೋಗ ಜನರು ಅನೇಕ ವರ್ಷಗಳಿಂದ ಅಸಾಧ್ಯ ಅಂದುಕೊಂಡಿದ್ದನ್ನು ಮಾಡಿಸಿಕೊಟ್ಟಿದೆ. ರಾತ್ರೋರಾತ್ರಿ ಅದೆಷ್ಟೋ ಕಂಪೆನಿಗಳು ತಮ್ಮ ಕಾರ್ಯ ನಿರ್ವಹಣೆಯನ್ನು ಕೆಲಸಗಾರರ ಮನೆಯ ಅಂಗಳಕ್ಕೆ ಸ್ಥಳಾಂತರಿಸಿವೆ. "ಆಫೀಸ್ನಲ್ಲೇ ಓತ್ಲಾ ಹೊಡಿತಾರೆ, ಇನ್ನು ಮನೆಯಲ್ಲಿ ಬಿಡ್ತಾರಾ" ಅನ್ನುವ ಬಾಸ್ ಗಳಿಗೆ ತಮ್ಮ ಸ್ವಸಾಮರ್ಥ್ಯವನ್ನು ತೋರ್ಪಡಿಸುವ ಸತ್ವ ಪರೀಕ್ಷೆ ಕೆಲಸಗಾರರಿಗೆ ಕರೋನಾ ನೀಡಿದೆ. ಸಿನಿಮಾ, ಹೋಟೆಲ್ ಅಂತ ಸುತ್ತಾಡಿಕೊಂಡು ಎಂಜಾಯ್ಮೆಂಟ್ ಮೂಡ್ ನಲ್ಲಿದ್ದವರು ಮನೆಯಲ್ಲಿದ್ದಾರೆ. ನಮ್ಮ ದಿನನಿತ್ಯದ ಜೀವನದಲ್ಲಿ ಅಗತ್ಯಕ್ಕಿಂತ, ತೋರ್ಪಡಿಕೆಗೆ ಹೆಚ್ಚಿನ ಹಣ ವ್ಯಯಿಸುತ್ತಿದ್ದೆವು ಎನ್ನುವುದನ್ನು ತಿಳಿ ಹೇಳುಲು ಕರೋನಾ ಬರಬೇಕಾಯಿತು. 

ಇದೆಲ್ಲಕ್ಕಿಂತ ಹೆಚ್ಚಾಗಿ "ಇದು ನನ್ನಿಂದ ಆಗೋಲ್ಲ", "ಆಫೀಸ್ನಿಂದ ಬರೋದೇ ಲೇಟಾಗುತ್ತೆ ಇನ್ನೆಲ್ಲಿ ಟೈಮ್..?", "ಸಿಗೋದೇ ಒಂದು ಭಾನುವಾರ, ಅದರಲ್ಲಿ ರೆಸ್ಟ್ ಮಾಡೋದೇ ಆಗುತ್ತೆ" ಅಂತ ಕಾರಣ ಕೊಡುತ್ತಿದ್ದ ಅನೇಕರಿಗೆ ತಮ್ಮೊಳಗಿರುವ, ತಮ್ಮನ್ನು ಕರೋನಾ ಪರಿಚಯಿಸಿದೆ. ಅಡುಗೆ ಮಾಡುವ ಹವ್ಯಾಸ ಇದ್ದವರು ಬಗೆಬಗೆಯ ಅಡುಗೆಗಳನ್ನು ಮಾಡಿ ವಾಟ್ಸಪ್ ಸ್ಟೇಟಸ್ ಹಾಕಿದರು. ಮನೆಯವರಿಗೆ ಟೈಮ್ ಕೊಡಕ್ಕೇ ಆಗದೇ ಇದ್ದವರು ಮನೆಯವರೊಂದಿಗೆ ಟೈಮ್ ಸ್ಪೆಂಡ್ ಮಾಡಿದ್ರು. ಕೆಲವರು ಎಂದೋ ಮರೆತಿದ್ದ ತಮ್ಮೊಳಗಿದ್ದ ಹಾಡುಗಾರನಿಗೆ ಜೀವ ನೀಡಿದರು. ಮೂಲೆಯಲ್ಲಿದ್ದ ಗಿಟಾರ್ ಮತ್ತೆ ಟ್ಯೂನ್ ಆಯ್ತು. ಮಗ ಸಂಧ್ಯಾವಂದನೆ ಮಾಡೋಲ್ಲ ಅನ್ನುವ ಪೋಷಕರ ಆರೋಪಗಳು ಸುಳ್ಳಾದವು. ಕೆಲಸ ಕಳೆದುಕೊಂಡು ಊರಿಗೆ ಬಂದವರು ಸ್ವಉದ್ಯೋಗ ಮಾಡುವುದರಲ್ಲಿ ಮಗ್ನರಾದರು. ಡಿಜಿಟಲ್ ಇಂಡಿಯಾದ ಕನಸಿಗೆ ಕರೋನಾ ಸ್ವಲ್ಪ ನೀರು ಗೊಬ್ಬರ ಜಾಸ್ತಿನೇ ಹಾಕ್ತು. ಅಜ್ಜಿ ಇಲ್ಲದ ಮನೆಗಳಲ್ಲಿ ಡಿಡಿ ಮಹಾಭಾರತ, ರಾಮಾಯಣ ಕಥೆ ಹೇಳಿತು. ಶಕ್ತಿಮಾನ್ ಮತ್ತೆ ಭಾನುವಾರ ಮಧ್ಯಾಹ್ನ ಹನ್ನೆರಡು ಗಂಟೆಯ ಬಾಲ್ಯಕ್ಕೆ ನಮ್ಮನ್ನು ಕರೆದುಕೊಂಡು ಹೋಯಿತು. ಊರು ಬಿಟ್ಟು ಹಾರಿದ್ದ ಅನೇಕರಿಗೆ ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿಯ ಅರ್ಥ ಮಾಡಿಸಿದೆ ಕರೋನಾ ...

ಒಟ್ಟಾರೆ ಲಾಕ್ ಡೌನ್, ನಾವು ನಾವಾಗ  ಬೇಕಿದ್ದ ನಮನ್ನು  ನಮಗೆ ಪರಿಚಯ ಮಾಡಿಸಿದೆ. ಏನ್ ಕೇಳಿದ್ರೂ "ಟೈಮ್ ಎಲ್ಲಿ..?" ಅನ್ನೋ ಅನೇಕರ ಪ್ರಶ್ನೆಗಳ ಕೀಲಿ ತೆರೆಸಿ ಕೊಟ್ಟಿದೆ ಈ ಲಾಕ್ ಡೌನ್. ವೈರಸ್ ಇಲ್ಲದ ಲಾಕ್ ಡೌನ್ ವರ್ಷನ್ ವರ್ಷಕ್ಕೊಮ್ಮೆ ಬರುತ್ತಾ ಇದ್ದರೆ ಅನೇಕರು ತಮ್ಮೊಳಗಿನ ಹಕ್ಕಿಯನ್ನು ಹಾರಿ ಬಿಡುವುದರಲ್ಲಿ ಸಂಶಯವಿಲ್ಲ.

-ಬರ್ವೆ.

Comments

Post a Comment

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ