ಪ್ರಮೇಯ... (ಕರೆಯೇ ಕೋಗಿಲೆ ಮಾಧವನ ...)

 ಪ್ರಮೇಯ...

(ಕರೆಯೇ ಕೋಗಿಲೆ ಮಾಧವನ ...)

ಪಾಠ - ೧




ಪ್ರತಿಸಾರಿ ಬೆಟ್ಟ ಹತ್ತಬೇಕಾದರೂ ಅನ್ಸೋದು "ಅಯ್ಯೋ ಎಷ್ಟು ಮೆಟ್ಟಿಲು ಇದೆ.. ಯಾವಾಗ ಮುಗಿಯುತ್ತೆ..?" ಅಂತ. ಆದರೆ ಇವತ್ತ್ಯಾಕೋ ಬೆಟ್ಟ ಹತ್ತಿದ್ದು ಗೊತ್ತಾಗಲಿಲ್ಲ. ಇವತ್ತಿನ ದಿನದ ಅವಸರದಲ್ಲಿ  ನಿನ್ನೆ ರಾತ್ರಿಯನ್ನು ಕಳೆದುಕೊಂಡಿದ್ದೆ. ಫಿಂಗರ್ ಕ್ರಾಸ್ಸ್ಡ್ ಸ್ಥಿತಿ ಅಂದ್ರೆ ಏನು ಅಂತ ನಿನ್ನೆ ಗೊತ್ತಾಯ್ತು. ಕಾಯೋದ್ರಲ್ಲಿ ಇರುವ ಸುಖ ನನಗೆ ಖುಷಿ ನೀಡಿತ್ತು. ಜೀವನ ಅಂದ್ರೆ ಬರೀ ದುಃಖಗಳನ್ನು ಕಂಡವಳಿಗೆ ಅವತ್ತು ಏನೋ ಸುಖದ ಮುನ್ಸೂಚನೆ ನೀಡಿತ್ತು. ಕಣ್ಮುಚ್ಚಿ ದೇವರಮುಂದೆ ನಿಂತುಕೊಂಡು "ಒಳ್ಳೇದ್ ಮಾಡಪ್ಪ" ಅಂತ ಕೇಳ್ಕೊಂಡೆ... ಕ್ಷಣಕ್ಷಣಕ್ಕೂ ಎದೆಬಡಿತ ಜೋರಾಗುತ್ತಿತ್ತು. ಆದರೆ ನನಗೆ ಕಾಡ್ತಾ ಇದ್ದಿದ್ದು ಒಂದೇ ಪ್ರಶ್ನೆ ಅವನು ಬರ್ತಾನಾ..? 

ಅವತ್ತು ಜೋರ್ ಮಳೆ. ಸಂಜೆ ಹೊತ್ತಿನ ಲಾಸ್ಟ್ ಪಿರೆಡ್ ನಾನು ಪಾಠ ಮಾಡಬೇಕಿತ್ತು. ಬೇರೆ ಟೀಚರ್ಗಳು "7ನೇ ಕ್ಲಾಸ್ ಮಕ್ಕಳು ಬಹಳ ಲೂಟಿ, ಪಾಠ ಮಾಡಕ್ಕೆ ಬಿಡಲ್ಲ, ಕೋತಿಗಳು" ಅಂತ ಬೈತಾ ಇದ್ರು. ಆದರೆ ನನ್ನ ತರಗತಿಯಲ್ಲಿ ಮಕ್ಕಳು ತುಟಿ ಬಿಚ್ಚುತ್ತಿರಲಿಲ್ಲಾ. ಲಾಸ್ಟ್ ಪಿರೇಡ್, ಗಣಿತ ಪಾಠ ಬೇರೆ, ಆದ್ರೂ ಮಕ್ಕಳನ್ನು ಪಾಠದ ಕಡೆಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಒಂದು ನನ್ನ ಹತ್ತಿರ ಇತ್ತು. ಇನ್ನೇನು ಶಾಲೆ ಬಿಡಲಿಕ್ಕೆ ಐದು ನಿಮಿಷ ಇರಬೇಕಾದ್ರೆ ಕಿಟಕಿಯಲ್ಲಿ ಯಾರೋ ಇಣುಕುತ್ತಾ ಇದ್ದರು. ಮಳೆ ಜಾಸ್ತಿ ಆಯ್ತು ಅಲ್ವಾ, ಮಕ್ಕಳನ್ನು ಕರೆದುಕೊಂಡು ಹೋಗಲಿಕ್ಕೆ ಯಾರೋ ಮನೆಯವರು ಬಂದಿರಬಹುದು ಅಂತ ಅಷ್ಟು ಗಮನ ಹರಿಸಲಿಲ್ಲ. ಬೆಲ್ ಹೊಡಿತು, ತರಗತಿ ಮುಗಿತು. "ಕೊಟ್ಟಿರೋ ಹೋಂವರ್ಕ್ ಎಲ್ಲಾ ಮಾಡ್ಕೊಂಡ್ ಬನ್ನಿ, ನಾಳೆ ನೋಡುತ್ತೇನೆ..". ಕ್ಲಾಸ್ ಮುಗಿಸಿಕೊಂಡು ಇನ್ನೇನು ಸ್ಟಾಪ್ ರೂಮ್ ಕಡೆ ಹೋಗಬೇಕಾದ್ರೆ.

ಅವನು : ಹೇ... ಪ್ರಮೇಯ ಅಲ್ವಾ...?

ಯಾರಪ್ಪ ಅಂತ ಹಿಂತಿರುಗಿ ನೋಡಿದರೆ. ಎತ್ತರವಾದ ನಿಲುವು, ಮುಖದ ತುಂಬಾ ಗಡ್ಡ, ಮಗುವನ್ನೆತ್ತಿಕೊಂಡು ಯಾರು ನಿಂತಿದ್ದರು. 


ಪ್ರಮೇಯ : ಹೌದು... ನೀವು ಯಾರು ಅಂತ ಗೊತ್ತಾಗ್ಲಿಲ್ಲ. 

ಅವನು : ನಾನ್ ಸ್ವರಾಗ್, ಹಾಸನ ಕಾಲೇಜ್,  ಕಂಪ್ಯೂಟರ್ ಸೈನ್ಸ್ , 2015 ಬ್ಯಾಚ್... ನೆನಪಾಯ್ತಾ 

ಪ್ರಮೇಯ : ಹೇ.. ಸಾರಿ ಗಡ್ಡ ಇತ್ತಲ್ಲಾ ..ಸಡನ್ ಆಗಿ  ಗೊತ್ತಾಗಿಲ್ಲ... ನೀನೇನ್ ಇಲ್ಲಿ 

ಅವನು : ಏನಿಲ್ಲ... ಮಗುನ ಕರೆದುಕೊಂಡು ಹೋಗ್ಲಿಕ್ಕೆ ಬಂದಿದ್ದೆ... ಇವನು ಇಲ್ಲೇ ಓದ್ತಾ ಇರೋದು... 5th ಸ್ಟ್ಯಾಂಡರ್ಡ್.. ಮಳೆ ಬೇರೆ ಜೋರಾಯ್ತಲ್ಲಾ ..ಹಾಗೆ.

ಪ್ರಮೇಯ : ಒಹ್ ..ಇವನು ನಿಮ್ಮ ಹುಡುಗನ... ನಿನ್ನ ತರನೇ ಬಿಡು... ತಂಟೆ ಅಂದರೆ ಇಡೀ ಕ್ಲಾಸ್ಗೆ ಒಬ್ಬನೇ ಸಾಕು... ನನಗೆ ಬುಡ್ಡಿ ಮೇಡಂ ಅಂತಾನೆ. 

ಹುಡುಗ : ನಾನ್ನಲ್ಲಾ ಟೀಚರ್ ಅದು...ಅಶೋಕ ಹಾಗೆ ಕರ್ದಿರೋದು.. ನೀವು ಏನೆಲ್ಲಾ ಹೇಳಬಿಡಬೇಡಿ. ಮನೇಲಿ ಕಡೆಗೆ  ಹಾಕ್ಕೊಂಡು ರುಬ್ಬುತ್ತಾರೆ.

ಪ್ರಮೇಯ : ನೀನು ತಿಂದು ಇವಾಗ ಅಶೋಕನ ಮೂತಿಗೆ ಒರಿಸ್ತೀಯ...

ಹುಡುಗ : ಸಾರಿ ಮೇಡಂ 

ಅವನು : ಒಹೋ ...ಸಾರ್ ತಾವ್  ಇಷ್ಟೆಲ್ಲಾ ಮಾಡ್ತೀರಾ...ಇರಿ  ಅಮ್ಮನತ್ರ ಹೇಳ್ತೀನಿ...

             ಮತ್ತೆ ಪ್ರಮೇಯ ಹೇಗೆಲ್ಲಾ ಆಗುತಿದ್ದೆ.

ಪ್ರಮೇಯ : ನಂದೇನು... ಶಾಲೆ, ಮನೆ, ಮಕ್ಕಳು... ಅಷ್ಟೇ. ಮಕ್ಕಳ ಜೊತೆ ನಾನು ಮಕ್ಕಳಾಗಿದ್ದೀನಿ. 

ಅವನು : ಶಾಲೆ ಮುಗಿತಲ್ಲ ಬಾ ನಮ್ಮ ಜೊತೆ... ಡ್ರಾಪ್ ಮಾಡ್ತೀನಿ. 

ಪ್ರಮೇಯ : ಹೇ.. ಬೇಡ ನಿಮಗ್ಯಾಕೆ ತೊಂದ್ರೆ. ಮಳೆ ಬಿಟ್ಮೇಲೆ ನಾನೇ ನೆಡೆದುಕೊಂಡು ಹೋಗುತ್ತೇನೆ. ಇಲ್ಲೇ  ಅಡಿಕೆ ಮಂಡಿ ಪಕ್ಕದ್ ರೋಡಲ್ಲಿ ಒಂದರ್ಧ ಕಿಲೋಮೀಟರ್ ಹೋದರೆ ಮನೆ. 

ಅವನು : ನಮ್ಮದು ಅಲ್ಲೇ ಮುಂದೆ ಎಸ್ಟೇಟ್ ಇರೋದು.. ಹೋಗೋ ದಾರಿ... ಬಾ.. ಹಾಗೆ ಬಿಟ್ಟು ಹೋಗ್ತೀನಿ.. 

ಪ್ರಮೇಯ :  ಓಕೆ ಸರಿ ಹಾಗಾದ್ರೆ, ಒಂದ್ ಹತ್ತು ನಿಮಿಷ ಟೈಮ್ ಕೊಡು ಬರ್ತೀನಿ.


ಸ್ಟಾಫ್ ರೂಮಿಗೆ ಹೋಗಿ ಬುಕ್ಸ್ ಎಲ್ಲಾ ಟೇಬಲ್ ನಲ್ಲಿ ಇಟ್ಟು, ಲಾಕ್ ಮಾಡಿ ಬ್ಯಾಗ್ ಮತ್ತೆ ಛತ್ರಿ ತಗೊಂಡು ಹೊರಟೆ.

ಹೊರಗಡೆ ಬಂದು ನೋಡಿದ್ರೆ ಅವನು ಅವಾಗ್ಲೇ ಜೀಪ್ನಲ್ಲಿ  ಕಾಯುತ್ತಿದ್ದ. ಮಳೆ ಹೊಡೆಯುವ ರಭಸ ಹೇಗಿತ್ತೆಂದರೆ ಇವತ್ತು ಬಿಡುವ ಲಕ್ಷಣ ಕಾಣ್ತಾ ಇರಲಿಲ್ಲ.


ಸ್ವರಾಗ್ : ಪ್ರಮೇಯ... ಇಲ್ಲಿ.. ಕಮ್... ಬೇಗ ಬಾ...

ಪ್ರಮೇಯ : ಹಾ... ಬಂದೆ 


ಸೀರೆ ಒದ್ದೆಯಾಗದೆ ಇರುವ ಹಾಗೆ ಮಳೆಯಲ್ಲಿ ನಡೆಯೋದು ತುಂಬಾ ಕಷ್ಟ.. ಆದ್ರೂ ಓಡಿಕೊಂಡು ಹೋಗಿ ಜೀಪ್ ಹತ್ತಿ ಕೂತ್ಕೊಂಡೆ. ಜೀಪು ಮನೆ ಕಡೆಗೆ ಹೊರಟಿತು...

ಸ್ವಲ್ಪ ಮುಂದೆ ಹೋಗಬೇಕಾದರೆ ನಮ್ಮ ಸಮಾಜ ವಿಜ್ಞಾನ ಸರ್ ಬೈಕ್ ಅಡ್ಡ ಹಾಕೊಂಡು ನಿಂತಿದ್ದರು.


ಸರ್ : ಏನ್ ಮೇಡಂ ಯಾರೋ ಹೊಸಬರು ಸಿಕ್ಕಿರೋ ಹಾಗಿದೆ. 

ಪ್ರಮೇಯ : ನನ್ನ ಹಳೆಯ ಕ್ಲಾಸ್ಮೇಟ್..

ಸರ್ : ಹುಷಾರು... ಈಗಿನ ಕಾಲದ ಹುಡುಗರು ಸರಿ ಇಲ್ಲ (ಬೈಕ್ ಆಕ್ಸಿಲರೇಟಾರ್ ಯಾಕೊ ಜಾಸ್ತಿ ಆಯಿತು)..

ಪ್ರಮೇಯ : ಥ್ಯಾಂಕ್ಸ್ 

ಸರ್ : ನಾಳೆ ಗೊತ್ತಲ್ವಾ.. ವಾರ್ಷಿಕೋತ್ಸವಕ್ಕೆ ಮಕ್ಕಳಿಗೆ ಡ್ಯಾನ್ಸ್ ಎಲ್ಲಾ ಹೇಳಿಕೊಡಬೇಕು, ಸ್ವಲ್ಪ ಬೇಗ ಬನ್ನಿ 

ಪ್ರಮೇಯ : ಹಾ ಗೊತ್ತು.. 

ಸರ್ : ಬೇಕಾದರೆ ನಾನೇ ಬಂದು ಕರೆದುಕೊಂಡು ಬರುತ್ತೇನೆ.

ಪ್ರಮೇಯ : ಅಷ್ಟೆಲ್ಲ ತೊಂದರೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.. ನನ್ನ ಕಾಲ್ ಇನ್ನು ಗಟ್ಟಿ ಇದೆ. 


ಸರ್  ಬೈಕ್ ತಿರುಗಿಸಿಕೊಂಡು ಹೋದರು... ಸಿಟ್ಟುಬಂತು ಕಾಣುತ್ತೆ.. 


ಸ್ವರಾಗ್ : ಯಾರ್ ಪ್ರಮೇಯ ಅದು..

ಪ್ರಮೇಯ : ನಮ್ಮ ಶಾಲೆಯಲೇ ಟೀಚಿಂಗ್ ಮಾಡುತ್ತಾರೆ.. ಎಲ್ಲಾ ದಾರಿ ಮೇಲೆ ಹೇಳಬೇಕು... ಶಾಲೆಯಲ್ಲಿ ಅಷ್ಟು ಹೊತ್ತು ಇರ್ತೀನಿ ಮಾತಾಡಕ್ಕೆ ಆಗಲ್ವಾ.

ಸ್ವರಾಗ್ : ಒಹ್ .. ಸರಿ ಹೋಗೋಣ್ವಾ..? 

ಪ್ರಮೇಯ : ಓಕೆ... ಹೊರಡೋಣ 


ದಾರಿಯುದ್ದಕ್ಕೂ ಕಾಲೇಜಿನ ಹಳೆ ದಿನಗಳ ನೆನಪು. ಅವನು ಆ ಕಂಪನಿಯಲ್ಲಿ ಇದ್ದಾನಂತೆ, ಅವಳಿಗೆ ಮದುವೆ ಆಯಿತಂತೆ, ಅವನಿಗೆ ಅಷ್ಟು ಮಕ್ಕಳಂತೆ. ಬಹಳ ದಿನಗಳಿಂದ ನಗು ಮರೆತಿದ್ದ ನನ್ನ ಮುಖದಲ್ಲಿ ಅಂದು ಕಾಲೇಜು ದಿನಗಳ ನಗು ಅರಳಿತ್ತು. 

ಸಡನ್ನಾಗಿ ಫೋನ್ ರಿಂಗಣಿಸಿತು.. ನೋಡಿದ್ರೆ ಅಮ್ಮನ ಫೋನ್.


ಪ್ರಮೇಯ : ಹಲೋ 

ಅಮ್ಮ : ಎಷ್ಟು ಸಾರಿನೇ ಫೋನ್ ಮಾಡೋದು... ಕಾಲ್ ರಿಸೀವ್ ಮಾಡೋಕಾಗಲ್ವಾ 

ಪ್ರಮೇಯ : ಅಮ್ಮ ನಾನ್ ಹೇಳಿಲ್ವಾ... ಕ್ಲಾಸ್ನಲ್ಲಿ ಇರಬೇಕಾದರೆ ನನಗೆ ಫೋನ್ ರಿಸೀವ್ ಮಾಡಕ್ ಆಗಲ್ಲ. ನೀನು ಮಾಡಬೇಕಾದರೆ ಫೋನ್ ಸ್ಟಾಫ್ ರೂಮಿನಲ್ಲಿ ಇಟ್ಟು ಪಾಠ ಮಾಡಕ್ಕೆ ಹೋಗಿದ್ದೆ.

ಅಮ್ಮ : ಸರಿ ಆ ಹುಡುಗನ ಜೊತೆ ಮಾತಾಡಿದ್ಯಾ...? ಏನ್ ಹೇಳ್ದಾ..? ಹುಡುಗ ಇಷ್ಟ ಆದ್ನಾ..?

ಪ್ರಮೇಯ : ಅಮ್ಮ ನಾನು ಸ್ವಲ್ಪ ಹೊರಗಡೆ ಇದ್ದೀನಿ... ನಿನಗೆ ಆಮೇಲೆ ಕಾಲ್ ಮಾಡ್ತೀನಿ.

ಅಮ್ಮ : ಎಲಿದ್ಯೇ... ಈ ಮಳೇಲಿ...

ಪ್ರಮೇಯ : ಆಮೇಲೆ ಮಾಡ್ತೀನಿ ಅಂತ ಹೇಳಿದ್ನಲ್ಲ. ಇಡ್ತಿಯಾ ಸುಮ್ಮನೆ..


ಕಾಲ್ ಕಟ್ ಮಾಡಿದೆ.. ಅಷ್ಟರಲ್ಲಿ ನಾನು ಉಳಿದುಕೊಂಡ ಪಿಜಿ ಬಂತು. 


ಪ್ರಮೇಯ : ಇಲ್ಲೇ ನಿಲ್ಸಿ ಸ್ವರಾಗ್...

ಸ್ವರಾಗ್ : ಇಲ್ಲೇ ಇರೋದಾ.. ನನ್ನ ಎಸ್ಟೇಟ್ ಇಲ್ಲೇ ಒಂದರ್ಧ ಕಿಲೋಮೀಟರು... ಬಾ ಬಿಡುವಾದಾಗ.. 

ಪ್ರಮೇಯ : ನಿನ್ನ ವೈಫ್ ಏನ್ ಮಾಡ್ಕೊಂಡಿರೋದು... 

ಸ್ವರಾಗ್ : ಅವಳು ಏನು ಮಾಡ್ತಾ ಇಲ್ಲ. ಮನೆಯಲ್ಲೇ ಇರ್ತಾಳೆ.. ಶನಿವಾರ-ಭಾನುವಾರ ಫ್ರೀ ಇರತ್ತಲ್ಲ ಬಂದು ಹೋಗು ಒಂದು ಸಾರಿ... ಕಾಲ್ ಮಾಡು ನಾನೇ ಜೀಪ್ ತಗೊಂಡು ಬರುತ್ತೇನೆ. 

ಪ್ರಮೇಯ : ಆಯ್ತು... ಗೊತ್ತಿಲ್ಲದ ಊರಿನಲ್ಲಿ ನಮ್ಮೋರು ಸಿಗೋದೆ ದೊಡ್ಡ ಖುಷಿ, ಖಂಡಿತ ಬರ್ತೀನಿ 

ಸ್ವರಾಗ್ : ಪ್ರಮೇಯ ನಿನ್ನ ನಂಬರ್ 

ಪ್ರಮೇಯ : 8217620030

ಸ್ವರಾಗ್ : ಓಕೆ ಬಾಯ್ ಬಾಯ್... 

ಪ್ರಮೇಯ : ಬಾಯ್ ..ಅಂಡ್ ಥ್ಯಾಂಕ್ಸ್ ಫಾರ್ ದಿ ಡ್ರಾಪ್..


ಜೀಪ್ ಹಾಗೆ ಪಾಸಾಯಿತು... ಮಳೆ ಕೂಡ ನಿಂತಿತ್ತು. ನನ್ನ ರೂಮಿಗೆ ಹೋಗಿ ಪ್ರೆಶ್ ಆಗಿ ಬಂದೆ. ಪಿಜಿ ಆಂಟಿ ಕಾಫಿ ಸ್ನಾಕ್ಸ್ ಮಾಡಿದ್ರು. ತಿನ್ಕೊಂಡ್ ಕೂತಿದ್ದೆ ಅಷ್ಟರಲ್ಲಿ ಮತ್ತೆ ಅಮ್ಮನ ಫೋನ್ ಬಂತು.


ಪ್ರಮೇಯ : ಹಲೋ ಅಮ್ಮ 

ಅಮ್ಮ : ರೂಮಿಗೆ ಬಂದ್ಯಾ ..?

ಪ್ರಮೇಯ : ಹಾ ಅಮ್ಮ ಬಂದೆ 

ಅಮ್ಮ : ಅದೇನೋ ಆಮೇಲೆ ಹೇಳ್ತೀನಿ ಅಂದ್ಯಲ್ಲ... ಏನ್ ಅನ್ಸುತ್ತೆ ಹುಡುಗನ ಬಗ್ಗೆ... 

ಪ್ರಮೇಯ : ಬೆಳಿಗ್ಗೆ ಮಾತಾಡಿದೆ.. ಆದರೆ ಯಾಕೋ ಫಿಫ್ಟಿ ಫಿಫ್ಟಿ. ಅವನ ಡ್ರೀಮ್ ಬೇರೆ, ನನ್ನ ಆಸೆಗಳೇ ಬೇರೆ. ಅವನು ಅಮೆರಿಕಕ್ಕೆ ಹೋಗಿ ಸಕ್ಕತ್ ದುಡ್ಡು ಮಾಡೋ ಗಿರಾಕಿ, ನಂಗೆ ನಮ್ಮೂರಲ್ಲೇ ಇದ್ದು ನಮ್ಮ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಏನಾದರೂ ಸಾಧನೆ ಮಾಡಬೇಕು ಅಂತ ಇದೆ.

ಅಮ್ಮ : ಅದೆಲ್ಲಾ ಮುಂದೆ ನೋಡಬಹುದು. ಅಮೆರಿಕಕ್ಕೆ ಹೋದರೆ ಒಂದು ನಾಲ್ಕೈದು ವರ್ಷ ಆಮೇಲೆ ಇಂಡಿಯಾಕ್ಕೆ ಬರಲೇಬೇಕು. ಆಮೇಲೆ ನಿನ್ನ ಆಸೆ ಬಗ್ಗೆ ನೋಡಿದ್ರೆ ಆಯ್ತು. 

ಪ್ರಮೇಯ : ಸುಮ್ಮನೆ ಇರಮ್ಮ.. ಅಂತಹಾ ದುಡ್ಡು ಮಾಡೋ ಹುಚ್ಚು ಹಿಡಿದಿರೋರು ಮತ್ತೆ ಇಂಡಿಯಾಕ್ಕೆ ಎಲ್ಲಿ ಬರುತ್ತಾರೆ. 

ಅಮ್ಮ : ನೀನು ರಗಳೆ ಮಾಡದೆ ಒಪ್ಕೋ, ಜಾತಕನು ಚೆನ್ನಾಗಿ ಬರುತ್ತೆ. ಅವರು ನಮಗಿಂತ ಎಲ್ಲಾದ್ರಲ್ಲೂ ಚೆನ್ನಾಗಿದ್ದಾರೆ. ನಿನ್ನ ಜಾತಕದಲ್ಲಿ ಕುಜ ದೋಷ ಇದೆಯಂತೆ, ನರಸಿಂಹ ಭಟ್ರು ಹೇಳ್ತಾಯಿದ್ರು. ಆದಷ್ಟು ಬೇಗ ಜಾತಕ ಕೂಡಿದ ಕೂಡಲೇ ಮದುವೆ ಮಾಡೋದು ಒಳ್ಳೇದು ಅಂತ. ವಯಸ್ಸು ಬೇರೆ 28 ಅಗ್ತಾ ಬಂತು ಇನ್ಯಾರೇ ಸಿಕ್ತಾರೆ ನಿನಗೆ. 

ಪ್ರಮೇಯ : ಅಮ್ಮ ಸುಮ್ಮನೆ ಒತ್ತಾಯ ಮಾಡಬೇಡ ಇಷ್ಟ ಇಲ್ದೇ ಇರೋನ ಜೊತೆ ಬಾಳೋಕೆ ನನಗೂ ಇಷ್ಟ ಇಲ್ಲ. 


ಫೋನ್ ಕಟ್ ಮಾಡಿದೆ.... 


ದಿನಬೆಳಗಾದ್ರೆ "ಅವನ ಜೊತೆ ಮಾತಾಡು... ಇವನನ್ನ ಭೇಟಿಯಾಗಲಿಕ್ಕೆ ಹೋಗು". ಊರಿಗೆ ಹೋದರೆ "ಇವತ್ತು ಹುಡುಗನ ಕಡೆಯವರು ಬರ್ತಾರೆ ಚೆನ್ನಾಗಿ ರೆಡಿ ಆಗು" ಇದೆ ಆಗ್ಬಿಟ್ಟಿದೆ. ಓದು ಮುಗಿತಾ ಇದ್ದಹಾಗೆ ನನಗೆ ವರಾನ್ವೇಷಣೆ ಆರಂಭವಾಗಿದೆ. ಇಲ್ಲಿತನಕ 100ರ ಮೇಲೆ ಹುಡುಗರನ್ನು ನೋಡಿ ಬಿಟ್ಟಿರಬೇಕು. ನನ್ನ ಫೋಟೋ ನೋಡಿ ಒಪ್ಪಿಕೊಳ್ಳುವವರು, ನನ್ನ ಜಾತಕದ ದೋಷ ನೋಡಿ ಓಡಿ ಹೋಗ್ತಾರೆ. ಎಲ್ಲಾ ಓಕೆ ಆದಾಗ ನನ್ನ ಮನಸ್ಸು ಹಿಂದೇಟು ಹಾಕುತ್ತೆ. ನನ್ನ ಮನಸ್ಸಿನ ಬೇಡಿಕೆಗಳಿಗೆ ಯಾರು ನೀರೆರೆಯಲ್ಲ. ಮನೆಯವರಿಗೆ ಅವರ ಸರಿಗೆನ ಕೆಂಡವನ್ನು ಒಗೆಯುವ ತವಕ. ಆದರೆ ನನ್ನ ಕನಸಿನ ರಾಜಕುಮಾರ ಸಿಕ್ತಾನ..? ದಿನಾ ದೇವರ ಬಳಿ ನನ್ನ ಪ್ರಾರ್ಥನೆ ಒಂದೇ "ಮನಸ್ಸಿಗೆ ಒಪ್ಪುವ, ಮನೆಗೊಪ್ಪುವ ವರ, ಆದಷ್ಟು ಬೇಗ ಸಿಗಲೆಂದು" ಸಂಜೆ ಹೊತ್ತು ಕೆಲಸದಿಂದ ಬಂದು ಕಾಫಿ ಕುಡಿತಾ ಕಿಟಕಿ ನೋಡಿದರೆ ಮಳೆಹನಿಯ ಸರಳಿನಲ್ಲಿ ನಾನು ಬಂದಿಯೇ ಎನಿಸುತ್ತದೆ. ಆದರೆ ಕೆಲವೇ ಸಮಯದಲ್ಲಿ ಮಳೆ ನಿಂತು ಸ್ವಚ್ಛಂದವಾಗುವ ಆಕಾಶ ನಿನಗೂ ಹಾರುವ ದಿನ ಬರುತ್ತದೆ ಎನ್ನುತ್ತಿದೆ.


ಸಂತೆಯ ಮಧ್ಯದಿ ನಿನಗಾಗಿ ಕಾದಿರುವೆ

ಎಲ್ಲಿರುವೆ ಎಲ್ಲಿರುವೆ ಓ ಸಖಾ 

ಕನಸಲ್ಲು ಕಾಣುತ್ತಿಲ್ಲ... ಕಣ್ಣೆದುರು ಸುಳಿಯುತ್ತಿಲ್ಲ 

ನೀನಿರುವ ನಾಳೆಗೆ ಅರಳಲು ಕಾದಿರುವ ಹೂವು ನಾನು..


ಮುಂದುವರೆಯುತ್ತದೆ....


-ಬರ್ವೆ

Comments

Post a Comment

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ

ಲಾಕ್ ಡೌನ್ ಅಲ್ಲಿ ಸಿಕ್ಕ ಆ ಕೀಲಿ ಕೈ...!!