ಜೀವನಕ್ಕೊಂದು 'ಕಿಕ್' ಬೇಕು... ಆದರೆ ಅಪರಿಮಿತ ನೆಮ್ಮದಿಯ ರಹಸ್ಯವೇನು..!?
ಸಿನಿಮಾದಲ್ಲೊಂದು
ಪ್ರಸಿದ್ಧ ಡೈಲಾಗ್ ಇದೆ—"ಲೈಫ್‌ನಲ್ಲಿ ಒಂದು ಕಿಕ್ ಇರ‍್ಬೇಕು ಬಾಸ್!"
ಈ ಮಾತನ್ನು ನಾವು
ಸಾಮಾನ್ಯವಾಗಿ ಲಘುವಾಗಿ ತಗೆದುಕೊಳ್ಳುತ್ತೇವೆ. ಆದರೆ ನಮ್ಮ ಸುತ್ತಮುತ್ತಲಿನ ಸಮಾಜವನ್ನು,
ದಿನನಿತ್ಯ ಓಡಾಡುವ ಜನರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಯಾವುದೋ ಒಂದು 'ಕಿಕ್'
ಅಥವಾ 'ನಶೆ'ಯ
ಬೆನ್ನತ್ತಿ ಓಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇಲ್ಲಿ 'ನಶೆ'
ಅಂದ ತಕ್ಷಣ ಕೇವಲ ಮದ್ಯಪಾನವೋ ಅಥವಾ ಕೆಟ್ಟ ಚಟಗಳೋ ಮಾತ್ರವಲ್ಲ, ಮನುಷ್ಯ ಸಂತೋಷವನ್ನು ಅನುಭವಿಸಲು ಕಂಡುಕೊಳ್ಳುವ ಗೀಳುಗಳು!
ಸ್ವಲ್ಪ ಆಳವಾಗಿ
ನೋಡಿದರೆ, ಈ ಜಗತ್ತಿನಲ್ಲಿ ಸಂತೋಷ ಅಥವಾ ಕಿಕ್ ಹುಡುಕುವ ಜನರನ್ನು ಮುಖ್ಯವಾಗಿ ಮೂರು ವರ್ಗಗಳಾಗಿ
ವಿಂಗಡಿಸಬಹುದು.
೧.
ವಸ್ತುಗಳ ಬೆನ್ನತ್ತಿದ ಕ್ಷಣಿಕ ಸುಖದ ನಶೆ!
ಮೊದಲನೆಯ ವರ್ಗ -
ನಮ್ಮ ಸುತ್ತ ಮುತ್ತ ಹೆಚ್ಚಾಗಿ ಕಾಣಸಿಗುವ ಭೌತಿಕ ಸುಖದ ಆರಾಧಕರು. ಇವರಿಗೆ ಹೊಸ ವಸ್ತುಗಳನ್ನು
ಕೊಳ್ಳುವುದರಲ್ಲೇ ಒಂದು ರೀತಿಯ ಕಿಕ್. ಮಾರುಕಟ್ಟೆಗೆ ಹೊಸ ಮೊಬೈಲ್ ಬಂತಾ? ಸಾಲ ಮಾಡಿಯಾದರೂ ಅದನ್ನು ಕೊಳ್ಳಬೇಕು. ವೀಕೆಂಡ್ ಬಂತಾ? ಯಾವುದಾದರೂ ದುಬಾರಿ ಹೋಟೆಲ್, ಪಬ್ ಅಥವಾ ಮಾಲ್‌ಗೆ
ಹೋಗಿ ಸಾವಿರಾರು ರೂಪಾಯಿ ಉಡಾಯಿಸಿ ಬರಬೇಕು. ಹೊಸ ಬಟ್ಟೆಗಳು, ಕೈಗಡಿಯಾರಗಳು,
ಗ್ಯಾಜೆಟ್‌ಗಳು... ಹೀಗೆ ಶಾಪಿಂಗ್ ಮಾಡುವುದರಲ್ಲೇ ಇವರ ದಿನ ಕಳೆಯುತ್ತದೆ.
ಆದರೆ ಈ ನಶೆಯ
ಆಯಸ್ಸು ಎಷ್ಟು ಗೊತ್ತಾ? ಕೇವಲ ಎರಡು ಅಥವಾ ಮೂರು ದಿನಗಳು! ಹೊಸ ವಸ್ತು
ಕೈಗೆ ಬಂದಾಗ ಸಿಗುವ ಆ ರೋಮಾಂಚನ, ನಾಲ್ಕನೇ ದಿನಕ್ಕೆ ಮಾಮೂಲಿಯಾಗಿ ಬಿಡುತ್ತದೆ.
ನಂತರ ಮನಸ್ಸು ಖಾಲಿಯಾಗಿ, ಮತ್ತೆ ಹೊಸದೊಂದು ವಸ್ತುವಿಗಾಗಿ ಹಪಹಪಿಸಲು
ಶುರುಮಾಡುತ್ತದೆ. ಇದು ಬಾಯಾರಿದಾಗ ಸಮುದ್ರದ ನೀರನ್ನು ಕುಡಿದ ಹಾಗೆ, ಕುಡಿದಷ್ಟೂ
ಬಾಯಾರಿಕೆ ಜಾಸ್ತಿಯಾಗುತ್ತದೆಯೇ ಹೊರತು, ಎಂದಿಗೂ ತಣಿಯುವುದಿಲ್ಲ.
ಈ ತರಹದ ಜನರ
ಮನಸ್ಥಿತಿ ಹೇಗಿರುತ್ತೆ ಅಂದರೆ, ವೀಕೆಂಡ್ ಅಲ್ಲಿ ಒಂದು ಊಟ ಆದರೂ ಹೊರಗಡೆ
ಮಾಡಬೇಕು, ಬಿಗ್ ಬಿಲಿಯನ್ ಡೇ , ಗ್ರೇಟ್ ಇಂಡಿಯನ್ ಸೇಲ್ ಗಳಲ್ಲಿ ಏನಾದರೂ ಒಂದು
ಹೊಸ ವಸ್ತು ಮನೆಗೆ ತರಬೇಕು. ಅವರು ಯಾವತ್ತೂ ಮುಂದೆ ಯಾವ ಹೊಟೇಲ್ ಅನ್ನು ಟ್ರೈ ಮಾಡೋದು,
ಯಾವ ಹೊಸ ಗ್ಯಾಜೆಟ್ ಅನ್ ಬಾಕ್ಸ್ ಮಾಡೋದು ಅಂದುಕೊಳ್ಳುತ್ತಾ, ಅವರ ಸೋಷಲ್ ಮೀಡಿಯಾ, ಯೂಟ್ಯೂಬ್ನಲ್ಲೂ ಅದೇ ವಿಡಿಯೋ ನೋಡ್ತಾ
ಇರುತ್ತಾರೆ. ಸೋಷಲ್ ಮೀಡಿಯಾ ಅಲ್ಗೋರಿತಂ ಅದಕ್ಕೆ ಸರಿಯಾಗಿ, ಅದೇ
ತರಹದ ವಿಡಿಯೋ ತೋರಿಸ್ತಾವೇ.
ಇದೇ ಸಾಲಿಗೆ ಸೇರುವ ಇನ್ನೊಂದು ವಿಷಯ ಏನೆಂದರೆ ಇತ್ತೀಚಿನ
ಕಾಲದಲ್ಲಿ ಹೆಚ್ಚಾಗುತ್ತಿರುವ ವಿವಾಹೇತರ ಅಕ್ರಮ ಸಂಬಂಧಗಳು. ಮದುವೆಯಲ್ಲಿ ಸುಖ ಸಿಗತ್ತೆ ಅಂತಾ
ಮದುವೆ ಆಗ್ತಾರೆ , ಆಮೇಲೆ ಮಕ್ಕಳು ಆದಮೇಲೆ ಖುಷಿ ಆಗಿರಬಹುದು ಅಂತಾ
ಮಕ್ಕಳು ಮಾಡಿಕೊಳ್ತಾರೆ , ಆಮೇಲೆ ಅಲ್ಲೂ ಸುಖ ಸಿಗದೇ, ಡೇಟಿಂಗ್ ಆಪ್ ಅಥವಾ ತಮ್ಮ ತೆರನಾದ ಸಂತೋಷ ಅರಸುವ ಆಫೀಸ್ ಸಹ ಕೆಲಸಗಾರರ ಜೊತೆ
ಆಪ್ತರಾಗುತ್ತಾರೆ.
೨.
ಸಾಧನೆ, ಸ್ಥಾನಮಾನ ಮತ್ತು ಚಪ್ಪಾಳೆಯ ಗೀಳು!
ಇನ್ನು ಎರಡನೆಯ ವರ್ಗ—ಸಾಧನೆ
ಮತ್ತು ಮಾನ್ಯತೆಯ ಕಿಕ್‌ನಲ್ಲಿ ತೇಲುವವರು. ಇವರು ಮೊದಲನೇ ವರ್ಗದವರಿಗಿಂತ ಹೆಚ್ಚು
ಶ್ರಮಜೀವಿಗಳು. ಶಾಲಾ ದಿನಗಳಲ್ಲಿ ಯಾವಾಗಲೂ ತಾನೇ 'ಫಸ್ಟ್
ರ‍್ಯಾಂಕ್' ಬರಬೇಕು ಅನ್ನುವ ಹಠ. ಇಂಜಿನಿಯರಿಂಗ್ ಅಥವಾ
ಡಿಗ್ರಿ ಮುಗಿದ ಮೇಲೆ, "ನನ್ನ ಗೆಳೆಯನಿಗಿಂತ ನನಗೇ ಹೆಚ್ಚು ಪ್ಯಾಕೇಜ್
ಬರಬೇಕು", "ಒಳ್ಳೆಯ ಮಲ್ಟಿನ್ಯಾಷನಲ್ ಕಂಪನಿಗೆ ಸ್ವಿಚ್
ಆಗಬೇಕು" ಎನ್ನುವ ಆಸೆ.
ಇದೇ ಸಾಲಿನಲ್ಲಿ
ಸಿನಿಮಾ ನಟರು ಮತ್ತು ರಾಜಕಾರಣಿಗಳು ಬರುತ್ತಾರೆ. ಒಬ್ಬ ನಟನಿಗೆ ತನ್ನ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಬೇಕು, ಜನ
ತನ್ನನ್ನು ನೋಡಿ ಶಿಳ್ಳೆ ಹೊಡೆಯಬೇಕು, ಅನ್ನುವುದೇ ದೊಡ್ಡ ಕಿಕ್. ಒಬ್ಬ ರಾಜಕಾರಣಿಗೆ
ಅಧಿಕಾರ, ವೇದಿಕೆಯ ಮೇಲೆ ಸಿಗುವ ಗೌರವ ಮತ್ತು ಜನರ ಜಯಕಾರವೇ ದೊಡ್ಡ ನಶೆ. ಇವರು ನಾಲ್ಕು
ಜನಕ್ಕೆ ಒಳ್ಳೆಯದನ್ನು ಮಾಡುವ ಮೂಲಕವೂ ಗುರುತಿಸಿಕೊಳ್ಳಲು ಬಯಸುತ್ತಾರೆ.
ಖಂಡಿತವಾಗಿಯೂ ಇದು
ಕೆಟ್ಟದ್ದಲ್ಲ, ಸಮಾಜದ ಮುನ್ನಡೆಗೆ ಇಂತಹ ಸಾಧನೆಯ ತುಡಿತ ಬೇಕು. ಆದರೆ ಇಲ್ಲೊಂದು ಅಪಾಯವಿದೆ. ಈ
ನಶೆ ಮನುಷ್ಯನನ್ನು ಒಂದು ಕ್ಷಣವೂ ವಿರಮಿಸಲು ಬಿಡುವುದಿಲ್ಲ. ಒಂದು ಸಿನಿಮಾ ಸೋತರೆ ನಟ
ಖಿನ್ನತೆಗೆ ಜಾರುತ್ತಾನೆ, ಅಧಿಕಾರ ತಪ್ಪಿದರೆ ರಾಜಕಾರಣಿ ನಲುಗುತ್ತಾನೆ,
ಆಫೀಸ್‌ನಲ್ಲಿ ಪ್ರಮೋಷನ್ ತಪ್ಪಿದರೆ ಉದ್ಯೋಗಿ ಕೊರಗುತ್ತಾನೆ. ಇಲ್ಲಿ ನಮ್ಮ
ನೆಮ್ಮದಿ ಸಂಪೂರ್ಣವಾಗಿ ಹೊರಗಿನ ಫಲಿತಾಂಶ ಮತ್ತು ಇತರರ ಮೆಚ್ಚುಗೆಯ ಮೇಲೆ
ಅವಲಂಬಿತವಾಗಿರುತ್ತದೆ.
ಯಾರಾದರೂ ದಿನಕ್ಕೆ
೧೦ -೧೨ ಸಿಗರೇಟ್ ಸೇದುತ್ತಾ ಇದ್ದಾರೆ ಅಥವಾ ದಿನಾ ಕುಡಿತಾರೆ ಅಂದರೆ, ಅವರು ಮೇಲೆ ಹೇಳಿದ
ಎರಡರಲ್ಲಿ ಒಂದು ನಶೆಯ ಹಿಂದೆ ಹೋಗಿ ಸೋತು, ಈ ನಶೆ ಮಾಡ್ತಾ ಇರ್ತಾರೆ.
೩.
ಅಂತರಂಗದ ಶಾಂತಿ ಮತ್ತು ಧ್ಯಾನದ ಆನಂದ!
ಮೂರನೆಯ ವರ್ಗ—ಋಷಿಮುನಿಗಳು,
ಸಂತರ ಸಾಲಿಗೆ ಸೇರುವವರು. ಇವರು ಭೌತಿಕ ವಸ್ತುಗಳಿಗಾಗಲೀ ಅಥವಾ ಜನರ
ಚಪ್ಪಾಳೆಗಾಗಲೀ ಆಸೆಪಡುವವರಲ್ಲ. ಭಗವಂತನ ನಾಮಸ್ಮರಣೆ, ಸತ್ಚಿಂತನೆ,
ಪ್ರಾರ್ಥನೆ ಮತ್ತು ಧ್ಯಾನದಲ್ಲಿಯೇ ಅಪಾರವಾದ, ಎಂದೂ
ಮುಗಿಯದ ಆನಂದವನ್ನು ಕಾಣುವವರು. ಹೊರಗಿನ ಪ್ರಪಂಚದಲ್ಲಿ ಬಿರುಗಾಳಿಯೇ ಎದ್ದರೂ ಇವರ ಅಂತರಂಗ ಸದಾ
ಪ್ರಶಾಂತ ಸರೋವರದಂತಿರುತ್ತದೆ.
ಇಲ್ಲಿ ನಾವು
ತಿಳಿದುಕೊಳ್ಳಬೇಕಾದ ಒಂದು ಮುಖ್ಯ ವಿಚಾರವಿದೆ—ಈ ಶಾಶ್ವತ ಆನಂದವನ್ನು ಪಡೆಯಲು ನಾವೆಲ್ಲರೂ ಸಂಸಾರ
ಬಿಟ್ಟು ಕಾಡಿಗೆ ಹೋಗಬೇಕಿಲ್ಲ, ಅಥವಾ ಕೇಸರಿ ವಸ್ತ್ರ ಧರಿಸಿ
ಸನ್ಯಾಸಿಗಳಾಗಬೇಕಿಲ್ಲ!
ಹಾಗಾದರೆ ನಾವು
ಕಲಿಯಬೇಕಿರುವುದು ಏನು...?
ನಾವು ಪ್ರತಿದಿನ
ಬಾಹ್ಯ ವಸ್ತುಗಳಲ್ಲಿ, ದುಬಾರಿ ಶಾಪಿಂಗ್‌ನಲ್ಲಿ, ಪರರ ಮೆಚ್ಚುಗೆಯಲ್ಲಿ ಸಂತೋಷವನ್ನು ಹುಡುಕಿ ನಮ್ಮ ಶಕ್ತಿ, ಸಮಯ ಮತ್ತು ಹಣವನ್ನು ಪೋಲು ಮಾಡುತ್ತಿದ್ದೇವೆ. ಆದರೆ ನಿಜವಾದ, ಎಂದಿಗೂ ಬತ್ತದ ಸಂತೋಷದ ಸೆಲೆ ಇರುವುದು ನಮ್ಮೊಳಗೇ!
ದಿನದ ಇಪ್ಪತ್ನಾಲ್ಕು
ಗಂಟೆಗಳಲ್ಲಿ ಕೇವಲ ಹತ್ತು-ಹದಿನೈದು ನಿಮಿಷ ಕಣ್ಣು ಮುಚ್ಚಿ ಪ್ರಶಾಂತವಾಗಿ ಕುಳಿತುಕೊಳ್ಳುವ
ಅಭ್ಯಾಸ ಮಾಡಿಕೊಳ್ಳಿ (ಧ್ಯಾನ). ದಿನಾ ಒಂದು ಘಂಟೆ ವಾಕಿಂಗ್ ಹೋಗೋದು ಆಗಿರಬಹುದು , ಜಿಮ್
ಹೋಗೋದು ಆಗಿರಬಹುದು, ನಿಮ್ಮ
ಆನಂದಕ್ಕೆ ಮಾಡಿ, ಬೇರೆಯವರನ್ನು ಮೆಚ್ಚಿಸಲಿಕ್ಕೆ ಮಾಡ್ಬೇಡಿ. ಸತ್
ಚಿಂತನೆಯ ಪುಸ್ತಕಗಳನ್ನು ಓದಿ. ಯಾರೋ ಒಬ್ಬರು, ಏನೋ ಮಾಡಿ
ಇನ್ಸ್ಟಾಗ್ರಾಂ ಅಲ್ಲಿ ಪೋಸ್ಟ್ ಹಾಕಿದರು ಅಂತಾ ನೀವು ಅದನ್ನು ಮಾಡಬೇಕು ಅಂತಾ ಇಲ್ಲಾ. ನಿಮ್ಮ ಸಾಮರ್ಥ್ಯ
ಏನು ಅನ್ನುವುದು ನಿಮಗೆ ತಿಳಿದಿರಲಿ. ಯಾವುದೇ ಕೆಲ್ಸ ಮಾಡುವಾಗ ಅದರಿಂದ ನನಗೆ ಏನೋ ಒಂದು
ಸಿಗತ್ತೆ, ಸಿಗಲೇ ಬೇಕು ಅನ್ನುವ ಮನೋಭಾವ ಇಟ್ಟುಕೊಳ್ಳಬೇಡಿ. ನಮ್ಮ ಬಳಿ ಏನಿದೆಯೋ ಅದಕ್ಕೆ
ಕೃತಜ್ಞತೆ ಸಲ್ಲಿಸುತ್ತಾ, "ಇಷ್ಟಿದೆ, ಸಾಕು"
ಎನ್ನುವ ತೃಪ್ತಿಯ ಭಾವವನ್ನು ಬೆಳೆಸಿಕೊಳ್ಳಿ. ನಿಸ್ವಾರ್ಥವಾಗಿ ನಾಲ್ಕು ಜನರಿಗೆ ಸಹಾಯ ಮಾಡಿ
ನೋಡಿ, ಆ ಕ್ಷಣದಲ್ಲಿ ಸಿಗುವ ಆತ್ಮತೃಪ್ತಿ ಜಗತ್ತಿನ ಯಾವ ಹೊಸ ಐಫೋನ್ ಕೊಂಡಾಗಲೂ
ಸಿಗಲಾರದು. ನಿಮ್ಮ ಸುತ್ತ ಮುತ್ತಲಿನವರ ಬಳಿ ಚೆನ್ನಾಗಿರಿ , ಆತ್ಮೀಯರನ್ನು
ಚೆನ್ನಾಗಿ ನೋಡಿಕೊಳ್ಳಿ. ಎಲ್ಲರ ಜೀವನವೂ ಸಿನಿಮಾ ಪರದೆಯ ಮೇಲೆ ತೋರಿದಂತೆ ವೈಭವಯುತವಾಗಿ ಇರಬೇಕು
ಅಂತೇನಿಲ್ಲ. ನಾವು ನಮ್ಮ ಜೊತೆ ಇರುವವರು ಆನಂದವಾಗಿ ಇದ್ರೆ ಅದೇ ಪರಮಸುಖ ಅಲ್ವಾ..?
ಹೊರಗಿನ ವಸ್ತುಗಳಿಂದ
ಸಿಗುವ 'ಕಿಕ್' ಬಲೂನಿನ ಗಾಳಿಯಂತೆ—ಕ್ಷಣಿಕ ಮತ್ತು ಅಷ್ಟೇ ಬೇಗ
ಖಾಲಿಯಾಗುವಂಥದ್ದು. ಆದರೆ ಅಂತರಂಗದ ಅರಿವು, ಸರಳತೆ ಮತ್ತು
ಧ್ಯಾನದಿಂದ ಸಿಗುವ 'ಕಿಕ್' ಸದಾ
ನಮ್ಮ ಬೆನ್ನಿಗಿರುವ ನಂದಾದೀವಿಗೆಯಂತೆ.
ಯೋಚಿಸಿ ನೋಡಿ
ಗೆಳೆಯರೇ... ಇಂದು ನಿಮ್ಮನ್ನು ಮುನ್ನಡೆಸುತ್ತಿರುವ ಆ 'ಕಿಕ್'
ಯಾವುದು?

Comments
Post a Comment