70 ವರ್ಷ ತುಂಬಿದ ಸ್ವತಂತ್ರ ಭಾರತೀಯ.
ಭಾರತ ಸ್ವಾತಂತ್ರ್ಯವನ್ನು ಪಡೆದು ಇಲ್ಲಿಗೆ ಎಪ್ಪತ್ತು ವರ್ಷ ತುಂಬಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆವಾಗ ದೇಶ ಎಲ್ಲಿತ್ತು, ಇವಾಗ ಎಲ್ಲಿ ಬಂದು ನಿಂತಿದೆ ಎನ್ನುವುದು ಮುಖ್ಯವಾದ ವಿಷಯ. 1947 ಆಗಸ್ಟ್ 14 ರ ಮಧ್ಯರಾತ್ರಿ ಅನೇಕ ದೇಶಪ್ರೇಮಿಗಳ ಪ್ರಾಣ ತ್ಯಾಗದಿಂದ , ಹಿಂಸೆ ಮತ್ತು ಅಹಿಂಸಾತ್ಮಕ ಚಳವಳಿಗಳಿಂದ ನಮ್ಮ ದೇಶ ಸ್ವತಂತ್ರ ಭಾರತವಾಯಿತು. ಅಬ್ಬ ಬ್ರಿಟಿಷರ ಕಾಲ ಕಳೆದಾಯಿತು ಅನ್ನುವಷ್ಟರಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂಬ ರಾಕ್ಷಸರ ಉದಯ . ಈ ಚಂಡ ಮುಂಡರ ಅಟ್ಟಹಾಸದ ನಡುವಲ್ಲಿ ಭಾರತಾಂಬೆ ಅಭಿವೃದ್ಧಿಯ ಪಥದತ್ತ ಸಿಂಹವನ್ನೇರಿ ತನ್ನ ನಡೆ ಆರಂಭಿಸಿದಳು. ತನ್ನ ಮೊದಲನೆಯ ಹೆಜ್ಜೆ ಪೂರ್ಣಗೊಳಿಸುವಷ್ಟರಲ್ಲಿ ರಾಮರಾಜ್ಯದ ಕನಸನ್ನು ಹೊತ್ತ, ಸ್ವಾತಂತ್ರ್ಯದ ರೂವಾರಿ ಗಾಂಧೀಜಿಯ ಅಗಲುವಿಕೆ ಆಘಾತವನ್ನೇ ನೀಡಿತು. ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಯುದ್ಧ , ತುರ್ತು ಪರಿಸ್ಥಿತಿ, ರಾಜಕೀಯ ಅಸಮತೋಲನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಿರಸ್ಕಾರ, ಭಯೋತ್ಪಾದಕರ ದಾಳಿ ಹೀಗೆ ಪ್ರತಿಯೊಂದು ಹೆಜ್ಜೆಯಲ್ಲೂ ಏಳು ಬೀಳುಗಳನ್ನು ಕಂಡು ಎಪ್ಪತ್ತು ಹೆಜ್ಜೆಗಳನ್ನು ಪೂರ್ಣಗೊಳಿಸಿದೆ .
ಭಾರತದ ರಾಜಕೀಯ ವ್ಯವಸ್ಥೆ ಎನ್ನುವುದು ಭಾರತಾಂಬೆಯ ಸಿಂಹವಾಹನದಂತೆ. ಭಾರತ ಎಪ್ಪತ್ತು ವರ್ಷದಲ್ಲಿ ಅನೇಕ ನೀಚ,ಅತೀನೀಚ,ಉಚ್ಚ ರಾಜಕಾರಣಿಗಳನ್ನು ಕಂಡಿದೆ. ಮತದಾನ ಎಂದರೆ ಒಳ್ಳೆಯವರ ಆಯ್ಕೆಯ ಬದಲು, ಇರುವವರಲ್ಲಿ ಒಳ್ಳೆಯವರು ಯಾರು ಎಂದು ಹುಡುಕುವ ಕಾಲ ಬಂದಿದೆ. ರಾಜಕಾರಣ ದುಡ್ಡು ಮಾಡುವ ಫ್ಯಾಕ್ಟರಿ ಯಾಗಿದೆ. ಪ್ರಜೆಗಳ ತಲೆಗೆ ತುಪ್ಪ ಸವರಿ, ಜಾತಿ ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದು, ಐದು ವರ್ಷ ಎಸಿ ರೂಮಿನಲ್ಲಿ ಕೂತುಕೊಂಡು ಬೆಣ್ಣೆ ತಿಂದು, ತಮ್ಮ ಹತ್ತು ತಲೆಮಾರಿಗಾಗುವಷ್ಟು ದುಡ್ಡು ಮಾಡಿಕೊಂಡು, ಮುಂದಿನ ಚುನಾವಣೆಯಲ್ಲಿ ಅದನ್ನೇ ಜನರಿಗೇ ಹಂಚಿ ಮತ್ತೆ ಐದು ವರ್ಷ ಅನಾಚಾರ ಮಾಡಲಿಕ್ಕೆ ಬಂತ್ತಾ ಸ್ವಾತಂತ್ರ್ಯ ಅನ್ನಿಸುತ್ತೆ . ಆದರೆ ನಮ್ಮ ದೇಶದ ಅದೃಷ್ಟವೆಂಬಂತೆ ಸದ್ಯ ಭಾರತಾಂಬೆ ನರೇಂದ್ರ ಮೋದಿ ಎಂಬ ಸಿಂಹ ವಾಹನಳಾಗಿದ್ದಾಳೆ, ಆ ಸಿಂಹ ಇನ್ನೂ ಹೆಚ್ಚು ಕಾಲ ಘರ್ಜಿಸಲಿ ಅನ್ನೋದೊಂದು ಆಶಯ.
ಇನ್ನು ಶಿಕ್ಷಣ ಕ್ಷೇತ್ರಕ್ಕೆ ಬಂದರೆ ಶಾಲಾ ಕಾಲೇಜುಗಳು ಶಿಕ್ಷಣವನ್ನು ಮಾರುವ ವ್ಯಾಪಾರ ಕೇಂದ್ರಗಳಾಗಿವೆ. ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಬದಲು ದುಡ್ಡು ಮಾಡುವ, ನಿದ್ದೆ ಮಾಡುವ, ದುಡ್ಡು ಕೊಟ್ಟು ಕೊಂಡುಕೊಳ್ಳುವ ಕೆಲಸವಾಗಿದೆ. ಮೀಸಲಾತಿ ಎನ್ನುವುದು ಧರ್ಮ, ಜಾತಿ, ಉಪಜಾತಿಯ ಮೇಲೆ ಆಧಾರಿತವಾಗಿದೆ. ಬ್ರಾಹ್ಮಣ ನಾದವನ್ನು ಎಷ್ಟೇ ಬಡವನಾದರೂ ಅವನು ಸರ್ಕಾರದ ಕಣ್ಣಿನಲ್ಲಿ ಶ್ರೀಮಂತ. ಅದೇ ಒಬ್ಬ ಕೆಳ ಜಾತಿಯವನ್ನು ಏಳು ಅಂತಸ್ತಿನ ಕಟ್ಟಡದ ಒಡೆಯನಾಗಿದ್ದರು ಸರ್ಕಾರದ ಕಣ್ಣಲ್ಲಿ ಅವನು ಬಡವ. ಇದು ನಮ್ಮ ಸರ್ಕಾರದ ಜಾಣ ಕುರುಡು. ನ್ಯಾಯ ಹುಡುಕಿ ನ್ಯಾಯಾಲಯದ ಕಡೆ ಹೋದರೆ ಅಲ್ಲೂ ಕುರುಡು ಕಾಂಚಾಣದ ರುದ್ರತಾಂಡವ. ಅಪರಾಧಿಗಳು ಸಮಾಜದಲ್ಲಿ ಎಂತಹ ವ್ಯಕ್ತಿ ಎನ್ನುವುದರ ಮೇಲೆ ತೀರ್ಪು ನಿರ್ಧಾರವಾಗುತ್ತದೆ. ಮಹಾನ್ ರಾಜಕಾರಣಿ, ಮಹಾನ್ ನಟ ತಪ್ಪು ಎಸಗಿದ್ದರೂ ಅವನು ನಿರಪರಾಧಿ ಆಗುತ್ತಾನೆ. ಏನೂ ಮಾಡದೆ ಬಡವ ಪ್ರಜೆ ಅಪರಾಧಿ ಆಗುತ್ತಾನೆ. ಮಾಧ್ಯಮ ಕ್ಷೇತ್ರ ಎನ್ನುವುದು ತಮಗೆ ಬೇಕಾದವರನ್ನು ಗದ್ದುಗೆಗೆ ಏರಿಸುವ, ಬೇಡದವರ ಬಗ್ಗೆ ಸುಳ್ಳು ವಾರ್ತೆ ಸೃಷ್ಟಿ ಮಾಡುವ ಕಸದ ತೊಟ್ಟಿಯಾಗಿದೆ. ಮಾಧ್ಯಮ ಪದದ ಅರ್ಥವನ್ನೇ ಮರೆತಂತಿದೆ. ಬಡವನಾಗಿದ್ದವನ್ನು ಬಡವನಾಗಿ ಸಾಯುತ್ತ ಇದ್ದಾನೆ, ಶ್ರೀಮಂತರನ್ನು ಹಣದಲ್ಲಿ ಸುಡುತ್ತಾ ಇದ್ದಾರೆ .
ಯುವಕರು ಫೇಸ್ಬುಕ್, ವಾಟ್ಸಪ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಒಂದು ಮೆಸೇಜ್ ತುಂಬಾ ಕಾಡಿತ್ತು. ಅದೇನೆಂದರೆ ಬ್ರಿಟಿಷರು ಭಾರತದಲ್ಲಿ ಇದ್ದ ಕಾಲದಲ್ಲಿ ವಾಟ್ಸ್ಆಪ್ ಇರಲಿಲ್ಲ,ಇಲ್ಲಾ ಅಂದ್ರೆ ಬ್ರಿಟಿಷರಿಗೆ ಮುಟ್ಟುವ ತನಕ ಶೇರ್ ಮಾಡಿ ಅಂತ ಫೋರ್ವಾರ್ಡ್ ಮಾಡ್ತಾ ಕೂರ್ತಾ ಇದ್ದರು. ಅನೇಕ ಯುವಕರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಏಕೆಂದರೆ ಅದು ಹೊಲಸು ಎನ್ನುವ ಭಾವನೆ. ಪ್ರಪಂಚದ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ, ಚೀನಾಕ್ಕೆ ಹೋಲಿಸಿದರೆ ಯುವಕರ ಸಂಖ್ಯೆ ಅಧಿಕವಾಗಿದೆ. ಭಾರತದ ಅಭಿವೃದ್ಧಿಗೆ ಅವರು ಕೈ ಜೋಡಿಸಬೇಕಾದರೆ ಮೊದಲು ಇವರ ಕೈಯಲ್ಲಿರುವ ಮೊಬೈಲ್ ಕೆಳಗಿಡಬೇಕು .
ಡಿಜಿಟಲ್ ಇಂಡಿಯಾ ಎನ್ನುವುದು ಒಂದು ಉತ್ತಮ ಕಲ್ಪನೆ ಆದರೆ ಅದು ಶಿಕ್ಷಣ ಎನ್ನುವ ತಳಹದಿಯ ಮೇಲೆ ಅವಲಂಬಿತವಾಗಿದೆ. ಭಾರತ ಹಳ್ಳಿಗಳ ದೇಶ ಹಳ್ಳಿಗರಿಗೆ ಮೊಬೈಲ್ ಉಪಯೋಗಿಸುವ ಮೊದಲು ಇದಕ್ಕೆ ಅಗತ್ಯವಾದಂತಹ ಶಿಕ್ಷಣ ಅವರಲ್ಲಿರಬೇಕು.
ಹಾಗಂಥ ಅಭಿವೃದ್ಧಿಯೇ ಆಗಲಿಲ್ಲಾ ಅಂತ ಅಲ್ಲ. ವೈಜ್ಞಾನಿಕವಾಗಿ ಭಾರತ ತುಂಬಾ ಮುಂದುವರಿದಿದೆ. ಅಂತರಿಕ್ಷ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಹೊಂದಿದೆ. ಸಾಫ್ಟ್ವೇರ್ ರಫ್ತಿನಲ್ಲಿ ಪ್ರಪಂಚದಲ್ಲಿ ಅತ್ಯುತ್ತಮ ಸ್ಥಾನದಲ್ಲಿದೆ, ಅಂತಾರಾಷ್ಟ್ರೀಯ ಸಂಬಂಧ ವೃದ್ಧಿಯಾಗಿದೆ,ರಕ್ಷಣಾ ವಿಭಾಗದಲ್ಲಿ ಎಂತಹ ವೈರಿಯನ್ನು ಎದುರಿಸುವಷ್ಟು ಸದೃಢವಾಗಿದೆ.
ಹೊರಗಿನ ವೈರಿಗಳನ್ನು ಎದುರಿಸಲು ಭಾರತ ಎಷ್ಟೇ ಸದೃಢವಾಗಿದ್ದರೂ, ಆಂತರಿಕ ವೈರತ್ವ ಎನ್ನುವುದು ಅನಾದಿ ಕಾಲದಿಂದಲೂ ಭಾರತಕ್ಕೆ ಮುಳುವಾಗಿದೆ. ಪ್ರಾಣದ ಹಂಗನ್ನು ತೊರೆದು ನಮ್ಮನ್ನು ಕಾಪಾಡುತ್ತಿರುವ ಸೈನಿಕರಿಗೆ ನಾವೇ ಕಲ್ಲು ಹೊಡೆಯುತ್ತಿದ್ದೇವೆ. ಕೋಟಿ ಕೋಟಿ ನುಂಗಿ ಜೈಲಿಗೆ ಹೋಗಿ ಬಂದವನು ಮುಖ್ಯಮಂತ್ರಿ ಆಗ್ತಾನೆ ಮೂರನೇ ಕ್ಲಾಸ್ ಓದಿದವನು ಶಿಕ್ಷಣ ಮಂತ್ರಿ ಆಗುತ್ತಾನೆ.
ನಮ್ಮ ದೇಶದಲ್ಲಿ ಏನಾದರೂ ಪಡೆದುಕೊಳ್ಳಬೇಕಾದರೆ ಎರಡೇ ಮಾರ್ಗ. ಒಂದು ಜ್ಞಾನದ ಮಾರ್ಗ, ಇನ್ನೊಂದು ದುಡ್ಡಿನ ಮಾರ್ಗ. ವೈದ್ಯಕೀಯ, ಎಂಜಿನಿಯರಿಂಗ್ ಸೀಟು ಬೇಕಾದ್ರೆ ಒಂದು ಓದಬೇಕು, ಇಲ್ಲ ಅಪ್ಪನ ಹತ್ತಿರ ಮೂಟೆಗಟ್ಟಲೆ ದುಡ್ಡಿರಬೇಕು. ದುಡ್ಡು ಕೊಟ್ಟು ಸೀಟ್ ಪಡೆದು ಐದು ವರ್ಷ ಮಜಾ ಮಾಡಿ, ಅವನೊಬ್ಬ ಡಾಕ್ಟರ್ ಎಂಜಿನಿಯರ್ ಆದ್ರೆ ಏನು ಮಾಡಬಲ್ಲ ಎನ್ನುವ ಕಲ್ಪನೆ ಇಲ್ಲದಾಗಿದೆ. ಕಾಲೇಜಿಗೆ ಹೋದ ಮನೆಯ ಮಗಳು ಸುರಕ್ಷಿತವಾಗಿ ಹಿಂದಿರುಗಲಿ ಎಂದು ಬೇಡಿಕೊಳ್ಳುವ ಕಾಲ ಬಂದಿದೆ.
ಆಗಸ್ಟ್ ನಲ್ಲಿ ರಾಷ್ಟ್ರ ಪ್ರಜ್ಞೆ ಹಾಗೂ ನವೆಂಬರಿನಲ್ಲಿ ರಾಜ್ಯ ಪ್ರಜ್ಞೆ ಜಾಗ್ರತವಾಗುವುದಲ್ಲಾ ಅದು ವರ್ಷವಿಡೀ ನಮ್ಮಲ್ಲಿ ಜಾಗ್ರತವಾಗಿರಬೇಕು. ಆಗಸ್ಟ್ ಹದಿನೈದರಂದು ಧ್ವಜ ಹಾರಿಸಿ,ಲಡ್ಡು ತಿಂದು ಕರವಸ್ತ್ರದಲ್ಲಿ ಮುಖ ವರೆಸಿಕೊಳ್ಳುವದಕ್ಕಷ್ಟೇ ಸ್ವಾತಂತ್ರ್ಯ ದಿನಾಚರಣೆ ಸೀಮಿತವಾಗದೇ ಇರಲಿ. ಅತ್ಯಂತ ಉತ್ಸಾಹಿ, ಶಕ್ತಿಶಾಲಿ ಯುವಕರ ಪಡೆ ಭಾರತದಲ್ಲಿದೆ. ಧರ್ಮದ ಹೆಸರಿನಲ್ಲಿ ವಿಷ ಬೀಜವನ್ನು ಅವರ ಮನಸ್ಸಲ್ಲಿ ಬಿತ್ತಿ, ಹಿಂಸಾತ್ಮಕವಾದ ಕೃತ್ಯಗಳಿಗೆ ಅವರು ಉಪಯೋಗವಾಗುತ್ತ ಇದೆ. ಅವರನ್ನು ಸರಿದಾರಿಗೆ ಕೊಂಡೊಯ್ಯುವ ಮಾರ್ಗದರ್ಶನ ಅಗತ್ಯವಾಗಿದೆ. ಸರ್ಕಾರ ಎನ್ನುವುದು ಭಾರತದ ಅಭಿವೃದ್ಧಿಯ ರಥದ ಕುದುರೆಯಂತೆ . ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತೊಲಗಬೇಕು, ಯುವಕರ ಸಂಖ್ಯೆ ಹೆಚ್ಚಾಗಬೇಕು, ಚುನಾವಣೆಗಳಲ್ಲಿ ದುಡ್ಡಿನ ಮುಖ ನೋಡದೆ ಉತ್ತಮ ಅಭ್ಯರ್ಥಿಗೆ ಮತ ನೀಡಬೇಕು, ಇದಕ್ಕೆ ಶಿಕ್ಷಣ ಅತ್ಯಗತ್ಯ .
ಒಟ್ಟಿನಲ್ಲಿ ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗಬೇಕು, ಭಾರತದ ಜನರು ಸುಶಿಕ್ಷಿತರಾಗಬೇಕು. ನಾನು, ತನ್ನದು ಎನ್ನುವ ಬದಲು ನಮ್ಮದು ಎನ್ನಬೇಕು. ಅಭಿವೃದ್ಧಿಯ ಪಥದತ್ತ ದೇಶವನ್ನು ಕೊಂಡೊಯ್ಯಲು ಕಟಿ ಬದ್ಧರಾಗೋಣ ಪ್ರಜಾಶಕ್ತಿಯ ಉದಯಕ್ಕೆ ನಾಂದಿ ಹಾಡೋಣ .
ಸರ್ವರಿಗೂ ಎಪ್ಪತ್ತೊಂದನೆಯ ಸ್ವಾತಂತ್ರ್ಯೋತ್ಸವದ ಶುಭಾಶಯಗಳು
ಜೈ ಹಿಂದ್
-ಬರ್ವೆ
Comments
Post a Comment