ಮುಗಿಲೂರಿಗೊಂದು ಪಯಣ...
ಐಟಿ ಫೀಲ್ಡ್ ಅಂದ್ರೆ ಹಾಗೆ, ಕೆಲಸ ಕಮ್ಮಿ ಎಂಜೋಯ್ಮೆಂಟ್ ಜಾಸ್ತಿ. ವಾರಕ್ಕೊಂದು ಪಾರ್ಟಿ, ಮನಸ್ಸಾದಾಗ ಔಟಿಂಗ್ ನಡಿತ್ತಾನೇ ಇರುತ್ತೆ. ಇವೆಲ್ಲಾ ನಿರಂತರ ಕೆಲಸದ ಒತ್ತಡವನ್ನು ಹೊರಹಾಕಲಿಕ್ಕೆ ಅಂತ ಸಹಾ ಹೇಳ್ತಾರೆ.
ನಾನು ಕೂಡ ಮಂಗಳೂರಿನ ಒಂದು ದೊಡ್ಡ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಾ ಇರೋದು. ಅವತ್ತು ಶುಕ್ರವಾರ, ರಾತ್ರಿ ನಮ್ಮ ಮನೆಯಲ್ಲಿ ಗೆಳೆಯರೆಲ್ಲಾ ಸೇರಿದ್ವಿ. ಅದಕ್ಕೆ ಸರಿಯಾಗಿ ಅವತ್ತು ಮಂಗಳೂರಿನಲ್ಲಿ ಜೋರು ಮಳೆ ಬೇರೆ. ಎಲ್ಲರೂ ಒಳ್ಳೆಯ ಹುಡುಗರೇ, ಆದ್ದರಿಂದ ಮಿರಿಂಡ,ಥಮ್ಸಪ್, ಕೋಲಾ, ಕುರ್ ಕುರೆ, ಪೊಟೆಟೋ ಚಿಪ್ಸ್ ಹಾಗೆಯೇ ಸ್ವಲ್ಪ ಮಾತು ಬಿಟ್ರೆ ಬೇರೆ ಏನು ಇರಲಿಲ್ಲಾ. ಒಬೊಬ್ಬರೇ ತಮ್ಮ ಜೀವನದ ಕಹಿ-ಸಿಹಿ ಘಟನೆಗಳನ್ನು ಹಂಚಿಕೊಳ್ಳುತ್ತಾ ಇದ್ದರು. ಕೆಲವರು ಇನ್ನೊಬ್ಬರ ಕಾಲು ಏಳಿತಾ ಇದ್ದರೇ, ಕೆಲವರು ತಮ್ಮ ಡ್ರಿಮ್ಸ್, ಡ್ರಿಮ್ ಗರ್ಲ್ ಬಗ್ಗೆ ಹೇಳುತ್ತಾ ಇದ್ದರು. ಇವೆಲ್ಲವನ್ನು ಕೇಳಿಯೂ ಕೇಳದಂತೆ ಮಳೆ ತನ್ನಷ್ಟಕ್ಕೆ ತಾನು ಸುರಿಯುತ್ತಲಿತ್ತು.
4 ಬಾಟಲಿ ಮಿರಿಂಡ ಖಾಲಿಯಾಯ್ತು. ತಂದ ಚಿಪ್ಸ್ ಪ್ಯಾಕೆಟ್ ಗಳೆಲ್ಲಾ ಖಾಲಿಯಾಯ್ತು. ಡ್ಯಾನ್ಸ್ ಕೂಡ ಮಾಡಿಯಾಯ್ತು. ಅದಾಗಲೇ ಗಡಿಯಾರ 12:30 ತೋರಿಸಿತ್ತು. ಎಲ್ಲರೂ ಸುಸ್ತಾಗಿ ಕೂತಿರಬೇಕಾದ್ರೆ ಒಬ್ಬ ಫ್ರೆಂಡ್ " ಕಾರ್ ಇದೆ ಫ್ರೆಂಡ್ಸ್ ಯಾಕೆ ಎಲಾದ್ರೂ ಹೋಗಬಾರದು" ಅಂತಾ ಕೇಳಿದ. ಅದಕ್ಕೆ ಎಲ್ಲಿ ಹೊಗೋದು ಅಂತಾ ಎಲ್ಲಾ ಯೋಚನೆ ಮಾಡಿ. ಕೊನೆಗೆ ಒಮ್ಮತದಿಂದ ನಿರ್ಧಾರ ಮಾಡಿದ್ದು ಮಡಿಕೇರಿಯ ಮಂಡಲಪಟ್ಟಿ ಅಥವಾ ಗಾಳಿಪಟ ಚಿತ್ರದ ಮುಗಿಲಪೇಟೆ. ರಾತ್ರಿ 2:30 ಗಂಟೆಗೆ ಮಂಗಳೂರು ಬಿಡೋದು ಅಂತಾ ನಿರ್ಧಾರ ಮಾಡಿದ್ವಿ. ಉಳಿದ ಮಿರಿಂಡ ಬಾಟಲಿಗಳನ್ನು ಕಾರಿನ ಡಿಕ್ಕಿಗೆ ತುಂಬಿಕೊಂಡು. ಕಂಕನಾಡಿ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕ್ಕೊಂಡು ಹೊರಟಿತು ನಮ್ಮ ಪಯಣ ಮುಗಿಲೂರಿಗೆ...
ಮಂಗಳೂರಿನಿಂದ ಮಡಿಕೇರಿಗೆ 140km, 3.5 - 4 ಗಂಟೆಗಳ ಪಯಣ. ಗಟ್ಟಿಯಾಗಿ ಗಾಡಿಯಲ್ಲಿ ಹಾಡು ಹಾಕಿಕೊಂಡು, ಒಬ್ಬರನೊಬ್ಬರು ಕಾಲು ಏಳಿತಾ, ನಿದ್ದೆ ಮಾಡಿದವರಿಗೆ ತೊಂದರೆ ಕೊಡುತ್ತಾ, ಸಂಪಾಜೆ ಘಾಟಿಯಲ್ಲಿ,ಅಂಕು ಡೊಂಕಿನ ದಾರಿಯಲ್ಲಿ, ಜೋರಾದ ಮಳೆಯ ನಡುವೆ ಯಾವುದಾದ್ರು ಭೂತ ಕಾಣಿಸುತ್ತ ಅಂತಾ ಹುಡುಕುತ್ತಾ ನಮ್ಮ ಪಯಣ ಸಾಗಿತ್ತು. ದಾರಿಯಲ್ಲಿ ಬಿಳಿ ಬಟ್ಟೆ ಹೊದ್ದುಕೊಂಡು ಹೋಗುತ್ತ ಇದ್ದ ಒಬ್ಬ ಹುಚ್ಚಾ ಬಿಟ್ರೆ ಮತ್ಯಾವುದು ಭೂತ ಅವತ್ತು ಕಾಣಿಸಲಿಲ್ಲಾ. ನಾವು ಬರುತ್ತೀವಿ ಅಂತಾ ಗೋತಾಯ್ತೋ ಅಥವಾ ಮಡಿಕೇರಿ ಚಳಿಗೋ ಭೂತಗಳೆಲ್ಲಾ ಬೆಚ್ಚಗೆ ಹೊದಕೊಂಡು ಮಲಗಿದ್ದೋ ಕಾಣತ್ತೆ.
ಹೀಗೆ ಹೋಗುತ್ತ ಇರಬೇಕಾದ್ರೆ ಒಮಿಂದೊಮ್ಮೆಗೆ ಕಾರು ನಿಂತಿತು. ಯಾವ ಊರು ಗೋತ್ತಾಗಲಿಲ್ಲಾ. ಸುತ್ತಲೂ ದಟ್ಟವಾದ ಕಾಡು. ಆಗಷ್ಟೇ ಮಳೆ ನಿಂತು ಮೌನವಾದ ಆಕಾಶ. ದೂರದಲ್ಲಿ ಕಾಣ್ತಾ ಇದ್ದ ಒಂಟಿ ಮನೆ. ಒಂದು ಸಾರಿ ನಿದ್ರೆ ಜಾರಿದವರೆಲ್ಲ ದಡ ಬಡ ಎಚ್ಚರಾದರು. ಯಾವುದೇ ವಾಹನ ಸಂಚಾರವಿಲ್ಲದೆ ರಸ್ತೆ ನಿಶಬ್ಧವಾಗಿತ್ತು. ರಂಗಿತರಂಗ,ಲಾಸ್ಟ್ ಬಸ್,ಕರ್ವ ಚಿತ್ರಗಳು ಕಣ್ಣ ಮುಂದೆ ಬರಲಿಕ್ಕೆ ಆರಂಭವಾಯಿತು. ಅಷ್ಟರಲ್ಲಿ ಒಬ್ಬ ಫ್ರೆಂಡ್ "ನಾನು ಸ್ಟಾರ್ಟ್ ಮಾಡಿ ನೋಡ್ತಿನಿ " ಅಂತಾ ಡ್ರೈವರ್ ಸೀಟ್ ಮೇಲೆ ಕೂತಿದ್ದವನನ್ನು ಏಳಿಸಿ, ಏನೋ ಮಾಡಿ ಕಾರ್ ಸ್ಟಾರ್ಟ್ ಮಾಡಿದ. ಅಂತೂ ಅಲ್ಲಿಂದ ಹೊರಟ್ವಿ.
ಬೆಳಗಿನ ಜಾವ 4 ಗಂಟೆ, ನಿದ್ರಾ ದೇವಿ ಪವಡಿಸು ಮಗನೇ ಅಂತಾ ಕರಿತಾ ಇದ್ಲು, ಅಂತಹಾ ಸಮಯದಲ್ಲಿ ನಮ್ಮ ಅನ್ವೇಷಣೆ ಭೂತವನ್ನು ಬಿಟ್ಟು ಚಹಾ ಅಂಗಡಿಯ ಕಡೆಗೆ ತಿರುಗಿತು. ರಸ್ತೆಯ ಎರಡು ಬದಿಗಳಲ್ಲಿ ಚಹಾ ಅಂಗಡಿಯನ್ನು ಹುಡುಕುತ್ತಾ ನಮ್ಮ ಪಯಣ ಸಾಗುತ್ತಿರಬೇಕಾದ್ರೆ, ನಮಗಾಗಿ ಬಾಗಿಲು ತೆಗೆದನೋ ಏನೋ ಎಂಬಂತೆ ಒಂದು ಚಹಾ ಅಂಗಡಿ ಕಣ್ಣಿಗೆ ಬಿತ್ತು. ಬಿಸಿಯಾದ ಚಹಾ ಹೀರಿಕೊಂಡು ರಾತ್ರಿ 2:30 ಗಂಟೆಗೆ ಮನೆ ಬಿಡುವಷ್ಟು ಹಾಳಾದ್ವಲ್ಲಾ ಅಂತಾ ಯೋಚಿಸುತ್ತಾ ಮಡಿಕೇರಿ ಕಡೆಗೆ ಗಾಡಿ ಸಾಗಿತು.
ದಟ್ಟವಾಗಿ ಕವಿದಿದ್ದ ಮಡಿಕೇರಿಯ ಮಂಜು ನಮ್ಮನ್ನು ಮಡಿಕೇರಿಗೆ ಸ್ವಾಗತ ಮಾಡಿತು. ಕಾರ್ಯಪ್ಪ ಸರ್ಕಲ್ ನಲ್ಲಿರುವ ಹೋಟೆಲ್ ನಲ್ಲಿ ನಮ್ಮ ದೈನಂದಿನ ಕೆಲಸಗಳನ್ನು ಮುಗಿಸಿ, ತಿಂಡಿತಿಂದು ಮಂಡಲಪಟ್ಟಿ ಅಥವಾ ಇಲ್ಲಿನ ಜನರ ಮುಗಿಲಪೇಟೆ ಕಡೆಗೆ ನಮ್ಮ ಪಯಣ ಸಾಗಿತು. ಮಡಿಕೇರಿ ಸಿಟಿಯಿಂದ 3km ಸಾಗಿ, ಅಬ್ಬಿ ಫಾಲ್ಸ್ ಜಂಕ್ಷನ್ ಹತ್ತಿರ ಕಾರು ನಿಲ್ಲಿಸಿ, ಜೀಪಿನ ಮೂಲಕ 18km ದೂರ ಇರುವ ಮುಗಿಲಪೇಟೆಗೆ 8 ಗಂಟೆ ಸುಮಾರಿಗೆ ಹೊರಟ್ವಿ. ಸುತ್ತಲೂ ಹಸಿರಿನಿಂದ ತುಂಬಿಕೊಂಡ ಪ್ರಕೃತಿ, ಸಣ್ಣ ಪುಟ್ಟ ಮಳೆಗಾಲದ ಜಲಪಾತಗಳು,ಮೈದುಂಬಿ ಹರಿಯುತ್ತಿರುವ ನದಿಗಳು,ಇವುಗಳ ನಡುವೆ ಕಲ್ಲು ಮಣ್ಣಿನಿಂದ ತುಂಬಿದ,ಮಂಜು ಮುಸುಕಿದ ರಸ್ತೆಯಲ್ಲದ ರಸ್ತೆಯಲ್ಲಿ ನಮ್ಮ ಜೀಪ್ ಡ್ರೈವರ್ ಜೀಪನ್ನು ತೆಗೆದುಕೊಂಡು ಹೋಗುತ್ತ ಇದ್ರೆ ಜೀವವೇ ಬಾಯಿಗೆ ಬಂದ ಅನುಭವ. 8:40 ಸುಮಾರಿಗೆ ನಮ್ಮ ಜೀಪ್ ಮುಗಿಲಪೇಟೆಯ ತುತ್ತ ತುದಿ ತಲುಪಿತ್ತು."30 ನಿಮಿಷ ಕೊಡ್ತೀನಿ, ಅಷ್ಟರೊಳಗೆ ಸುತ್ತಾಡಿಕೊಂಡು ಬನ್ನಿ "ಅಂತಾ ಜೀಪ್ ಡ್ರೈವರ್ ಹೇಳ್ದ. ಅಷ್ಟರೊಳಗೆ ಬರೋಲ್ಲಾ ಅಂತಾ ನಮಗೂ ತಿಳಿದಿತ್ತು,ಅವನಿಗೂ ತಿಳಿದಿತ್ತು.
ಜೀಪ ನಿಂತ ಜಾಗದಿಂದ ಮೇಲೆ ಏರುತ್ತ ಇರಬೇಕಾದ್ರೆ ಸ್ವರ್ಗದ ಬಾಗಿಲಿನಿಂದ ಮೇಲೇರಿದ ಅನುಭವ. ಮಂಜಿನ ಹೊದಿಕೆಯನ್ನು ಹೊದ್ದಂತಹ ಮುಗಿಲುಪೇಟೆಯ ಶಿಖರಗಳು ಕಣ್ಣಿಗೆ ರಸದೌತಣವನ್ನು ನೀಡಿದ್ವು. ಪ್ರಕೃತಿಯ ವೈಭವವನ್ನು ಕಣ್ತುಂಬಿಕೊಂಡಂತಹಾ ನಮಗೆ ಅದನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲಾ. ಅಬ್ಬಾ ರಾತ್ರಿ ಪೂರ್ತಿ ನಿದ್ದೆ ಬಿಟ್ಟಿದಕ್ಕೂ ಸಾರ್ಥಕವಾಯಿತ್ತು ಅನ್ನೋ ಭಾವನೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗುತ್ತಿದ್ದ ಮಂಜು ನಮ್ಮ ಕಣ್ಣುಗಳನ್ನು ಪುಳಕಗೊಳಿಸಿತು. ನಮ್ಮ ಮೊಬೈಲ್ ಕಣ್ಣುಗಳಲ್ಲಿ ಆ ಕ್ಷಣಗಳನ್ನು ಸೆರೆಹಿಡಿದು, ಒಂದು ಗಂಟೆಗಳ ಕಾಲ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಂಡು ಜೀಪ್ ನಿಲ್ಲಿಸಿದ ಜಾಗಕ್ಕೆ ಬಂದ್ವೀ. "ಬೇಗ ಬನ್ನಿ ಸಾರ್, ಇವಾಗ್ಲೇ ಲೇಟ್ ಆಯ್ತು" ಅಂತಾ ನಮ್ಮ ಡ್ರೈವರ್ ನಮ್ಮನು ಜೀಪಿಗೆ ತುಂಬಿಕೊಂಡು ಮಡಿಕೇರಿ ಕಡೆಗೆ ಸಾಗಿದ. ನಾವು ಕೆಳಗಿಳಿಯಬೇಕಾದ್ರೆ ನಮಗೋಸ್ಕರನೇ ಸೃಷ್ಟಿಯಾಗಿತೇನೋ ಎಂಬಂತೆ ಕವಿದ ಮಂಜೆಲ್ಲಾ ಕರಗಿ,ಮುಗಿಲಪೇಟೆಯಲ್ಲಿ ಮಂಜಿಗೆ ಬರ ಸೃಷ್ಟಿಯಾಗಿತ್ತು. ಕಾರು ನಿಲ್ಲಿಸಿದ ಜಾಗಕ್ಕೆ ಬಂದು, ಮಂಗಳೂರಿನ ಕಡೆಗೆ ಪಯಣ ಸಾಗಿತು.
ಸಂಪೂರ್ಣವಾದ ನಮ್ಮ ಪಯಣ ಆನ್ ಪ್ಲಾನ್ನಡ್ ಆಗಿತ್ತು. ಪ್ಲಾನ್ ಮಾಡಿ ಮಾಡಿದ ಎಷ್ಟೋ ಕೆಲಸಗಳು ನಾವು ಅಂದುಕೊಂಡಂತೆ ಆಗುವುದಿಲ್ಲಾ. ಪ್ಲಾನ್ ಮಾಡದೆ ಇದ್ದಿದ್ದಕೇನೋ ಅದು ಅಷ್ಟು ಚೆನ್ನಾಗಿ ಆಗಿದ್ದು. ಒಟ್ಟಿನಲ್ಲಿ ಮುಗಿಲಪೇಟೆ ಹೋಗಲಿಕ್ಕೆ ಬೆಳಗಿನ ಜಾವ ಅತ್ಯಂತ ಪ್ರಶಸ್ತವಾದದ್ದು. ಒಮ್ಮೆಯಾದ್ರು ಶನಿವಾರ ಮತ್ತು ಭಾನುವಾರಗಳಲ್ಲಿ, ಆಗಸ್ಟ್ ನಿಂದ ಡಿಸೆಂಬರ್ ಒಳಗೆ ಭೇಟಿಕೊಡಿ. ಕೆಲಸದ ಒತ್ತಡದಿಂದ ಬೇಸತ್ತವರಿಗೆ,ಪ್ರೇಮ ಪಕ್ಷಿಗಳಿಗೆ, ಟೈಮ್ ಪಾಸ್ ಮಾಡಲು, ರಿಲೀಫ್ ಮಾಡಲು ಒಂದೊಳ್ಳೆ ಜಾಗ. ಒಟ್ಟಿನಲ್ಲಿ ನಮಗೆ ಮಂಜಿನೂರಿನಲ್ಲಿ ಪ್ರಕೃತಿಯ ಮೇಲೆ ಮೊಹಬ್ಬತ್ ಆಗಿದ್ದಂತೂ ಸುಳ್ಳಲ್ಲಾ...
-ಬರ್ವೆ.
Super bro..
ReplyDelete