ಅವಳ್ಯಾಕೆ ನಗಲಿಲ್ಲಾ, ನನ್ನ ಮುಖ ನೋಡಿ...!?
ಇಂಜಿನಿಯರಿಂಗ್ ಓದುತ್ತಿದ್ದ ದಿನಗಳವು, ಫಿಸಿಕ್ಸ್ ಮತ್ತು ಕೆಮೆಸ್ಟ್ರಿ ಸೈಕಲ್ ಸರಿಯಾಗಿ ತುಳಿದು EC ಬ್ರಾಂಚ್ಗೆ ಎಂಟ್ರಿ ಆಗಿತ್ತು. ನಾನೊಬ್ಬ ಕಾರ್ನರ್ ಹುಡುಗ, ನನ್ನಷ್ಟಕ್ಕೆ ನಾನು ಕಾಲೇಜಿಗೆ ಬರ್ತಾ ಇದ್ದೆ ಕಾರ್ನರ್ ಸೀಟ್ ನಲ್ಲಿ ಕುರ್ತಾ ಇದ್ದೇ , ಲೆಕ್ಚರ್ಸ್ ಗಳ ಪಾಠ ಇಷ್ಟ ಆದ್ರೆ ಕೇಳ್ತಾ ಇದ್ದೆ, ಇಲ್ಲದಿದ್ದರೆ ನನ್ನ ಕಲ್ಪನಾ ಲೋಕದಲ್ಲಿ ನನನ್ನು ನಾನು ಕಳೆದುಕೊಂಡು ಹಾಸ್ಟೆಲಿಗೆ ಹೋಗಿ ಬಿದ್ದುಕೊಳ್ಳುತ್ತ ಇದ್ದೇ. ಹನುಮಂತನ ವಂಶದವರು ನಾವು ಹಾಗಾಗಿ ಕಾಲೇಜು ಆರಂಭವಾಗಿ ಎರಡು ಸೆಂ ಕಳೆದ್ರು ಹುಡುಗರನ್ನು ಬಿಟ್ಟು ,ಹುಡುಗಿಯರ ಹತ್ರ ಅಷ್ಟಾಗಿ ಮಾತಾಡೋದು ಇರಲಿ, ಹುಡುಗಿಯರ ಕಡೆ ನೋಡೋದು ಕಮ್ಮಿ ಇತ್ತು . ಹುಟ್ಟಿನಿಂದ ಬಾಯ್ಸ್ ಸ್ಕೂಲ್ ನಲ್ಲಿ ಕಲಿತಿದ್ದಕ್ಕೆನೋ, ಗೊತ್ತಿಲ್ಲ ಹುಡುಗಿಯರ ಹತ್ತಿರ ಮಾತನಾಡಲಿಕ್ಕೆ ಸ್ವಲ್ಪ ಮುಜುಗರ ಜಾಸ್ತಿ .
ಹೀಗೆ ನಡೆತಿರಬೇಕಾದರೆ ಒಂದು ದಿನ ಮೇಡಂ ಕೇಳಿದ ಪ್ರಶ್ನೆಗೆ ಉತ್ತರ ಹೇಳಲಿಕ್ಕೆ, ಹುಡುಗಿಯರ ಕಡೆಯಿಂದ ಒಬ್ಬಳು ಎದ್ದು ನಿಂತ್ಲು . ಯಾರು ನೋಡೋಣ ಅಂತ ತಿರುಗಿದೆ, ಕತ್ತು ಉಳುಕಿತೋ ಏನೋ ಗೊತ್ತಿಲ್ಲ, ಹೇಳಿಕೇಳಿ ಕಾರ್ನರ್ ಸೀಟ್ ನೋಡಿ ನನ್ನ ಮಗಂದು ಈ ಕಡೆ ತಿರುಗಲೇ ಇಲ್ಲ, ನೋಡಿಕೊಂಡೇ ಕುಳಿತುಕೊಂಡೆ. ಅವತ್ತು ರಾತ್ರಿ ಯಾಕೋ ಜಾಸ್ತಿನೇ ನಿದ್ದೆ ಬರಲಿಲ್ಲ. ಮುಂದಿನ ದಿನದಿಂದ ಕಾಲೇಜಿಗೆ ಹೋಗಲಿಕ್ಕೆ ಯಾಕೋ ಜಾಸ್ತಿ ಖುಷಿ. ಹೇಗೆ ಹೇಗೋ ಹೋಗ್ತಾ ಇದ್ದವನು ಸ್ವಲ್ಪ ಸ್ಮಾರ್ಟ್ ಆಗಿ ಹೋಗ್ಲಿಕ್ಕೆ ಸ್ಟಾರ್ಟ್ ಮಾಡಿದೆ. ಎಲ್ಲಿ ಬಿದ್ದೆ ಅಂತಾ ಯೋಚನೆ ಮಾಡುವುದರೊಳಗೆ ಕಳ್ಳ ನನ್ನ ಮಕ್ಕಳು ನನ್ನ ಕಾಲುಗಳು ಅವಳನ್ನು ಹಿಂಬಾಲಿಸಲಿಕ್ಕೆ, ನನ್ನ ಕಣ್ಣುಗಳು ಅವಳನ್ನು ಹುಡುಕಲಿಕ್ಕೆ ಆರಂಭಸಿದ್ದವು.
ಅವಳ ಉದ್ದ ಜಡೆ, ಅವಳ ದುಂಡು ಮುಖ, ಅವಳ ಬೆಕ್ಕಿನ ಕಣ್ಣು, ಅವಳ ನಗು, ಅವಳಿಗಿದ್ದ ಜಂಭ ಎಲ್ಲಾ ಸೇರಿ ನನಗೆ ಮಾಟ ಮಾಡಿಸಿ ಬಿಟ್ಟಿದ್ದೋ ಕಾಣಿಸುತ್ತೆ. ನನಗಿಂತ ಸ್ವಲ್ಪ ಹೈಟ್ ಜಾಸ್ತಿ ಆದ್ರೂ ಪರ್ವಾಗಿಲ್ಲ ಅಂತ ನನ್ನ ಹೃದಯ ಸಿಗ್ನಲ್ ಟ್ರಾನ್ಸ್ಮಿಟ್ ಮಾಡಲಿಕ್ಕೆ ಆರಂಭ ಮಾಡಿತ್ತು . ಆದರೆ ಆ ಕಡೆಯಿಂದ ಯಾವುದೇ ಸಿಗ್ನಲ್ ಬಂದಿರಲಿಲ್ಲ, ಅಥವಾ ಸಿಗ್ನಲ್ ಸಿಕ್ಕಿದ್ರೂ ರಿಟರ್ನ್ಸ್ ಟ್ರಾನ್ಸ್ಮಿಟ್ ಮಾಡ್ತಾ ಇರಲಿಲ್ಲ ಏನೂ ಗೊತ್ತಿಲ್ಲ ಅವಳನ್ನೇ ಕೇಳಬೇಕು . ಆದ್ರೆ ಅವಳ ಜೊತೆ ಮಾತನಾಡಲಿಕ್ಕೆ ನಾನು ಸದಾ ಹಂಬಲಿಸುತ್ತಿದ್ದೆ .
ಅವ್ಳು ಕ್ಲಾಸಿಗೆ ಟಾಪರ್ ಆಗಿದ್ದಳು, ನಾವೇನು ಓದುವುದರಲ್ಲಿ ಕಮ್ಮಿ ಇರಲಿಲ್ಲ ಸರಿಯಾಗೇ ಸ್ಪರ್ಧೆ ಕೊಡ್ತಾ ಇದ್ದೆ . ಆದ್ರೆ ಮೀರಿಸಲಿಕ್ಕೆ ಆಗ್ತಾ ಇರಲಿಲ್ಲಾ. ಆದ್ರೂ ಅವಳೆದುರು ಕ್ಲಾಸಲ್ಲಿ ಶೋ ಆಫ್ಗಳು ನಡೀತಾನೇ ಇತ್ತು . ಥರ್ಡ್ ಸೇಮ್ ದು ಫೈನಲ್ ಲ್ಯಾಬ್ ಎಕ್ಸಾಮ್ ನಡೀತಾ ಇತ್ತು. ನನ್ನ ಲ್ಯಾಬ್ ಬ್ಯಾಚ್ನಲ್ಲಿ ಅವಳು ಕೂಡ ಇದ್ದಳು, ನನ್ ಪಕ್ಕದಲ್ಲಿ ನಿಂತಿದ್ಲು. ಅವಳು ನನ್ನ ಮುಖ ನೋಡಿ ಏನೋ ಹೇಳೋದಕ್ಕೆ ಹಂಬಲಿಸುತ್ತಾ ಇದ್ದಳು. ಆಚೆ ಇಚೆ ನೋಡಿ ಯಾರು ನೋಡ್ತಾ ಇಲ್ಲ ಅಂತ ಕನ್ಫರ್ಮ್ ಮಾಡಿಕೊಂಡು ನನ್ನ ಹತ್ತಿರ ಬಂದು "ಗಣೇಶ್ ನನ್ನ ಪ್ರೋಗ್ರಾಂನಲ್ಲಿ ಒಂದೇರಡು ಲೈನ್ ಮರ್ತಿದೀನಿ ಸ್ವಲ್ಪ ಹೆಲ್ಪ್ ಮಾಡ್ತೀಯಾ ಅಂತ ಕೇಳಿದ್ಲು". ಹುಡುಗೀಯರು ಕೇಳಿದ್ರೆ ನನ್ನದೆ ಮಿಡಿಯುತ್ತೆ, ಇನ್ನು ನಮ್ಮ ಹುಡುಗಿ ಕೇಳಿದ್ರೆ ಮಿಡಿಯದೆ ಇರುತ್ತಾ. ಪ್ರೋಗ್ರಾ ನಲ್ಲಿ ರಾಂಗ್ ಆಗಿದ್ದ ಲೈನ್ ಅನ್ನು ಸರಿ ಮಾಡಿಕೊಟ್ಟೆ. ಅವತ್ತು ಲ್ಯಾಬ್ನಿಂದ ಹೊರಗಡೆ ಬರುವಾಗ ಪ್ರೌಡ್ ಫೀಲಿಂಗ್ ನನ್ನಲ್ಲಿತ್ತು. ರೂಮಿಗೆ ಹೋಗಿ ರೂಮ್ ಮೆಟ್ ಹತ್ರ ಎಲ್ಲಾ ಹೇಳಿದೆ ಹಾಗೆ "ಅಷ್ಟು ಹೆಲ್ಪ್ ಮಾಡಿದಕ್ಕೆ ಒಂದು ಥಾಂಕ್ಸ್ ಹೇಳಲಿಲ್ಲ ಮಗಾ" ಅಂದೆ . ಅದಕ್ಕವನು "ಎಗ್ಸಾಮ್ ಅಲ್ವಾ, ಎಲ್ಲಾ ನೋಡ್ತಾರೆ ಅಂತ ಮನಸ್ಸಿನಲ್ಲಿ ಹೇಳಿಕೊಂಡಿರುತ್ತಾಳೇ ಬಿಡೋ "ಅಂದ . ನಾನು ಹಾಗೆ ಅಂದುಕೊಂಡೇ. ನಮ್ಮ ಹುಡುಗಿಯನ್ನು ಮಾತಾಡಿಸಿದ್ದು ಒಂದು ಖುಷಿ ಯಾದ್ರೆ, ಅವಳಿಗೆ ಸಹಾಯ ಮಾಡಿದ್ದು ಇನ್ನೊಂದು ಖುಷಿ ಆಗಿತ್ತು. ಅವಳ ಥ್ಯಾಂಕ್ಸ್ ಗೋಸ್ಕರ ನಾನು ಕಾಯ್ತಾ ಇದ್ದೆ ಇನ್ನೊಂದ್ ಸಾರಿ ಯಾವಾಗ ಮಾತಾಡೋದು ಅಂತ ನನ್ನ ಮನಸ್ಸು ಕೂಡ ಹಂಬಲಿಸುತ್ತಿತ್ತು .
ಹೀಗಿರಬೇಕಾದರೆ ಯುಗಾದಿ ಹಬ್ಬದ ಹಿಂದಿನ ದಿನ ಎಲ್ಲರೂ ಕ್ಲಾಸ್ಗಳಿಗೆ ಬಂಕ್ ಹಾಕಿ ಮನೆಗೆ ಹೊರಟ್ಟಿದ್ವಿ. ನಾನು ಮತ್ತು ನನ್ನ ಫ್ರೆಂಡ್ ಕೂಡ ನಮ್ಮ ಊರುಗಳಿಗೆ ಹೊರಟಿದ್ವು. ಇಬ್ಬರು ಬ್ಯಾಗ್ ಪ್ಯಾಕ್ ಮಾಡಿಕೊಂಡು, ರಿಕ್ಷಾ ಹಿಡಿದುಕೊಂಡು, ಬಸ್ಟ್ಯಾಂಡಿಗೆ ಬಂದು ನೋಡಿದ್ರೆ ಒಂದು ಆಶ್ಚರ್ಯ ಕಾದಿತ್ತು . ನನ್ನ ಹುಡುಗಿ ಕೂಡ ಬಸ್ ಸ್ಟಾಂಡ್ ನಲ್ಲಿ ಅವಳ ಫ್ರೆಂಡ್ ಜೊತೆ ನಿಂತಿದ್ಲು. ನನ್ನ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಆರಂಭವಾದವು .ಇವಳ್ಯಾಕೆ ಇಲ್ಲಿದ್ದಾಳೆ, ಇವಳು ನನ್ನ ಬಸ್ಸಿಗ್ಗೆ ಬರಬಹುದ, ಇವಳ ಊರು ಯಾವುದು, ನಮ್ಮ ಬಸ್ಸಿಗೆ ಬಂದ್ರೆ ಏನ್ ಮಾತಾಡೋದು ಅಂತ .
ಹೀಗೆ ನೂರಾರು ಪ್ರಶ್ನೆಗಳು ನನ್ನ ತಲೆಯಲ್ಲಿ ಓಡಾಡ್ತಾ ಇರಬೇಕಾದ್ರೆ, ಇದಕೆಲ್ಲಾ ಉತ್ತರದಂತೆ ನಮ್ಮೂರಿನ ಬಸ್ಸು, ಬಸ್ ನಿಲ್ದಾಣಕ್ಕೆ ಬಂದಿತ್ತು. ಅವಳು ನನ್ನಕ್ಕಿಂತ ಮುಂಚೆ ಬಸ್ ಹತ್ತಿ, ಸೀಟ್ ಹಿಡಿದು ಕೂತಿದ್ಲು. ಅವಳ ಹಿಂದಿನ ಸೀಟಿನಲ್ಲಿ ನಾನು ಮತ್ತೆ ನನ್ನ ಫ್ರೇಂಡ್ ಕೂಡ ಕೂತ್ವಿ. ಕಿಟಕಿ ಪಕ್ಕದ ಸೀಟು, ತಂಪಾದ ಗಾಳಿ,ನಮ್ಮ ಹುಡುಗಿ ತಲೆಗೆ ಹಾಕಿದ ಶಾಂಪೂ ಪರಿಮಳ, ಇಯರ್ ಫೋನ್ ನಲ್ಲಿ ಗುನುಗುತ್ತಿದ್ದ ಲವ್ ಸಾಂಗ್ ಎಲ್ಲಾ ಸೇರಿ ನನ್ನ ಹೃದಯದಲ್ಲಿ ಚಿಕ್ಕದಾಗಿ ಗಾಯ ಆಯ್ತು. ನನ್ನ ಫ್ರೇಂಡ್ಗೆ ಅವಳ ಪರಿಚಯ ಇದ್ದಿದ್ದರಿಂದ ಅವರ ನಡುವೆ ಮಾತುಕತೆ ನಡೀತಾ ಇತ್ತು, ನನ್ನ ಹೊಟ್ಟೆಯಲ್ಲಿ ಒಂದು ಚೂರು ಬೆಂಕಿ ಬಿದ್ದಿತ್ತು. ನನ್ನ ಕಡೆ ಒಂದು ಸ್ಟೈಲ್ ಎಸೆದ್ಲು ಆದ್ರೆ ಮಾತಾಡಲಿಲ್ಲ. ಅವಳೇ ಮಾತಾಡ್ತಳಾ ನೋಡೋಣ ಇಲದಿದ್ರೆ ಹೇಗಾದ್ರು ಮಾಡಿ ನಾನಾದ್ರು ಮಾತಾಡಬೇಕು ಅಂತಾ ಸಮಯಕೋಸ್ಕರ ಕಾದಿದ್ದೆ. ಬಸ್ಸು ರಸ್ತೆಯಲ್ಲಿನ ಹೊಂಡಗಳಲ್ಲಿ ಇಳಿದು, ಹಂಪುಗಳಲಿ ಏರಿ, ಕೆರೆ ಗದ್ದೆಗಳ ಅಂಚಿನ ಮೇಲೆ,ಕಿರಿದಾದ ರಸ್ತೆಗಳಲ್ಲಿ ತಾನೊಂದು ಪ್ರೇಮ ಕಥೆಗೆ ಸಾಕ್ಷಿಯಾಗುತ್ತಿದ್ದೇನೆ ಎನ್ನುವುದನ್ನು ಮರೆತು, ನಮ್ಮ ಊರಿಗೆ ನಮ್ಮನು ಕರೆದೊಯ್ಯುತಿತ್ತು.
ಈ ಮಾರುದದ್ದ ಮೌನ ಪಯಣಕ್ಕೆ ಬ್ರೇಕ್ ನೀಡಿದ್ದು ನನ್ನ ಗೆಳೆಯನ ಊರು. ನನ್ನ ಜೊತೆ ಬಂದಿದ್ದ ನನ್ನ ಗೆಳೆಯನ ಊರು ಬಂದಿದ್ದರಿಂದ ಅವನು ಅವಳ ಜೊತೆ ಮಾತಾಡೋದನ್ನು ಬಿಟ್ಟು ಇಳಿಯಬೇಕಾಯಿತು. ನನಗೆ ಯುಗಾದಿ ಹಬ್ಬದ ಪಾಯಸ ಹಿಂದಿನ ದಿನವೇ ಸಿಕ್ಕಿದ ಹಾಗಾಯಿತು. ಬಸ್ಸು ಕೂಡ ಆ ಊರಿನಲ್ಲಿ ಖಾಲಿಯಾಗಿದ್ದರಿಂದ, ಬಸ್ಸಿನ ಕಡೆಯ ಸೀಟುಗಳಲ್ಲಿ ಕುಳಿತ್ತಿದ್ದಂತಹ ನನ್ನ ಹುಡುಗಿ ಮತ್ತೆ ಅವಳ ಗೆಳತಿ ಮುಂದಿನ ಸೀಟುಗಳಿಗೆ ಹೋಗಿ ಕುಳಿತುಕೊಂಡರು. ಛೇ ಈ ಚಾನ್ಸ್ ಕೂಡ ಮಿಸ್ ಆಯ್ತಲ್ಲಾ ಅಂತಾ ನಾನು ಯೋಚಿಸುತ್ತಿರಬೇಕಾದ್ರೆ, ನನ್ನ ಹುಡುಗಿ ಹಿಂದೆ ತಿರುಗಿ "ಗಣೇಶ್, ಬಾ ಇಲ್ಲೊಂದ್ ಸೀಟ್ ಖಾಲಿ ಇದೆ" ಅಂತಾ. ಅವಳ ಪಕ್ಕದ ಸೀಟಿನಲ್ಲಿ ಕೂರುವಂತೆ ನನ್ನನು ಕರೆದ್ಲು. ನನ್ನ ಹೃದಯದಲ್ಲಿ ಬೇಸಿಗೆ ಕಾಲದಲ್ಲಿ ಹೋದ ಕರೆಂಟ್ ಬಂದ ಹಾಗಾಯ್ತು. ಇನ್ನೇನು ಮಾಡೋದು ಸಿಕ್ಕಿದ್ದೇ ಚಾನ್ಸು ಅಂತಾ ಹೋಗಿ ಅವಳ ಪಕ್ಕದಲ್ಲಿ ಕುಳಿತುಕೊಂಡೆ.
ಮಾರ್ಚ್ ತಿಂಗಳ ಬಿಸಿಲಿಗೋ ಅಥವಾ ದೇಹ ಹೀಟ್ ಆಯ್ತೋ ಗೊತ್ತಿಲ್ಲಾ ಮೈ ಏರ್ರಾ ಬಿರ್ರಿ ಬೆವರುತ್ತಿತ್ತು. ಅವಳ ಜೊತೆ ಕೂತಿದ್ದ ಪ್ರತಿಯೊಂದು ಕ್ಷಣದಲ್ಲೂ ಹೃದಯದ ಬಡಿತ ಗಡಿಯಾರದ ಟಿಕ್ ಟಿಕ್ ಶಬ್ದದ ತರಹ ಕಿವಿಗೆ ಕೇಳುತ್ತಿತ್ತು. ಆದರೆ ಇಡೀ ಪಯಣ ಬರೀ ಮೌನ, ಮೌನ, ಮೌನ. ಅದ್ಯಾಕೋ ಗೊತ್ತಿಲ್ಲಾ ಅವಳು ತುಟಿ ಬಿಚಲಿಲ್ಲಾ, ಎಷ್ಟೋ ದಿನಗಳಿಂದ ಮತನಾಡಬೇಕಂತಾ ಕಾಯುತ್ತಿದ್ದ ನನ್ನ ಗಂಟಲು ಅವತ್ತು ಒಣಗಿತ್ತು. ಹುಡುಗಿಯರ ಹತ್ತಿರ ಜಾಸ್ತಿ ಮತನಾಡದ ನನ್ನ ಬಾಯ್ಸ್ ಹೈ ಸ್ಕೂಲ್ ನೇಚರಗೋ ಏನೋ ಗೊತ್ತಿಲ್ಲಾ ಅವತ್ತು ನಾನು ಮೌನಿಯಾಗಿದ್ದೆ. ಅವಳ ಬಳಿ ಮಾತಾಡಲು ನಾನು ಹೆದರಿದೆ, ಕಿಟಕಿಯಲ್ಲಿ ಹೊರಗಿನ ಪ್ರಪಂಚವನ್ನು ನೋಡುವುದರಲ್ಲಿ ಕಳೆದುಹೋದೆ. ಅವಳು ಮಾತು ಆರಂಭ ಮಾಡಲಿ ಅಂತಾ ನಾನು ಕಾದೆ. ಅವಳು ಸಹ ಅದಕೋಸ್ಕರ ಕಾದಿರಬಹುದಾ ?, ಗೊತ್ತಿಲ್ಲಾ. ಹುಡುಗನಿಗೆ ಕೊಬ್ಬು ಜಾಸ್ತಿ ಅಂತಾ ಸಹಾ ಅವಳು ಎಣಿಸಿರಬಹುದು. ಆದರೆ ನಾವು ತುಂಬಾ ಪ್ರೀತಿಸುವವರ ಮುಂದೆ ನಾಲಗೆ ಹೊರಡಲ್ಲಾ ಅಂತಾ ಕೇಳಿದ್ದೆ. ಆದರೆ ಅನುಭವ ಆಗಿದ್ದು ಅವತ್ತೇ ಮೊದಲು. ಬಸ್ಸು " ಮಕ್ಕಳ್ರಾ, ಈ ವರ್ಷಕ್ಕೆ ನೀವು ಮಾತಾಡಲ್ಲಾ, ಇನ್ನು ಟೈಂ ಕೊಡಲಿಕ್ಕೆ ನನ್ನಿಂದ ಅಗೋಲ್ಲಾ" ಅಂತಾ, ಅವಳ ಊರಿನಲ್ಲಿ ಹೋಗಿ ನಿಂತುಕೊಂಡೇ ಬಿಡ್ತು. ಹೇಗಾದ್ರು ಮಾಡಿ ಮಾತಾಡಬೇಕು ಅನ್ನೋ ನನ್ನ ಒಳಗಿನ ಶಕ್ತಿ ನನ್ನನ್ನು ಬಡಿದೆಬ್ಬಿಸಿ ಕಾಲ ಮಿಂಚಿ ಹೋಗುತ್ತಿದೆ ಅನ್ನುವ ಸಂದೇಶವನ್ನು ಕೊಡ್ತು. "ನಿಮ್ಮ ಮನೆ ಈ ಊರಲೇ ಇರೋದ " ಅಂತ ಕೇಳಿದೆ. ಅದಕ್ಕವಳು " ಇಲ್ಲಾ, ಹಬ್ಬಕ್ಕೆ ನನ್ನ ಚಿಕ್ಕಮ್ಮನ ಮನೆಗೆ ಹೋಗುತ್ತಾ ಇದ್ದೀನಿ" ಅಂತಾ ಹೇಳಿದ್ಲು. "ಬೈ ಬೈ ಸಿಗೋಣ ಅಂತಾ" ಸ್ವಲ್ಪ ಸಿಟ್ಟಿನಿಂದ ಬಸ್ಸಿನಿಂದ ಇಳಿದು ಹೋದ್ಲು. ಅಲ್ಲಿಗೆ ಮೌನದ ಪಯಣ ತುಸು ಮಾತಿನೊಂದಿಗೆ ಅಂತ್ಯವಾಯಿತು.
ಏನಾಯಿತು ನನಗೆ, ಒಂದೊಳ್ಳೆಯ ಚಾನ್ಸ್ ಮಿಸ್ ಮಾಡಿಕೊಂಡನಲ್ಲಾ ಅನ್ನುವ ಕಸಿವಿಸಿ ಒಂದು ಕಡೆ ಆದರೆ, ಸ್ವಲ್ಪವಾದರೂ ಮತನಾಡಿದನಲ್ಲಾ ಅನ್ನುವ ಸಮಾಧಾನ ಇನ್ನೊಂದು ಕಡೆ. ಕಳ್ಳ ನನ್ನ ಮಗಂದ್ ಬಸ್ಸು ನನ್ನನ್ನು ಮನೆಗೆ ಸೇರಿಸಿ ಹೊರಟು ಹೋಯಿತು.
ಹಬ್ಬ ಕಳೆದು ಮತ್ತೆ ಕಾಲೇಜು ಆರಂಭವಾಯಿತು. ಅವಳು ಸಿಕ್ತಳಾ, ಅವಳು ಸಿಕ್ಕಿದ್ರೆ ಏನಾದ್ರು ಮಾತಾಡಬೇಕು, ಬಸ್ಸಿನಲ್ಲಾದ ಪರಿಚಯ ಮುಂದುವರಿಸಿಕೊಂಡು ಹೋಗಬೇಕು ಅಂತಾ ನನ್ನ ಕಣ್ಣುಗಳು ಅವಳನ್ನು ಹುಡುಕುತ್ತಿದ್ದವು. ಅದೇ ಸಮಯಕ್ಕೆ ಸರಿಯಾಗಿ ನಾನು ಹೋಗುತ್ತಿದ್ದ ದಾರಿಯಲ್ಲಿ ಅವಳು ಎದುರಾದ್ಲು, ಆದ್ರೆ ಆ ಭೇಟಿ ಕೂಡ ಮೌನದಲ್ಲೇ ಅಂತ್ಯವಾಯಿತು. ಅಮೇಲೇ ಕಾಲೇಜು ಮುಗಿಯುವ ತನಕ ನಾನೆಂದು ಅವಳ ಜೊತೆ ಮಾತಡಲಿಲ್ಲಾ. ಮಾತನಾಡಲು ಪ್ರಯತ್ನ ಕೂಡ ಮಾಡಲಿಲ್ಲಾ, ಯಾಕಂದ್ರೆ ನನ್ನ ಅವಳ ಕೊನೆಯ ಭೇಟಿಯಲ್ಲಿ ನನಗೆ ಕಾಡಿದ ಆ ಪ್ರಶ್ನೆ.
ಅವಳ್ಯಾಕೆ ನಗಲಿಲ್ಲಾ ನನ್ನ ಮುಖ ನೋಡಿ...?
ಉತ್ತರ ಸಿಗದ ಪ್ರಶ್ನೆಗಳೇ
ಲೈಫ್ ಅಲ್ಲಿ ನೂರು ನೂರು
ಹುಡುಕುತ್ತಾ ಹೋಗು ನೀ ಉತ್ತರವ
ಪ್ರಶ್ನೆಯೇ ಬದಲಾಗಿಹುದು.
-ಬರ್ವೆ
Bekkina kannu udda jade.. still thinking
ReplyDelete