ಯಾವ ಮೋಹನ ಮುರಳಿ ಕರೆಯಿತೋ...
ಭವ್ಯ ಭಾರತದ,ಕರ್ನಾಟಕ ರಾಜ್ಯದ,ಮಲೆನಾಡ ತಪ್ಪಲಿನಲ್ಲಿ "ಬೆಳಗನೂರು" ಎಂಬ ಒಂದು ಊರು. ಹೆಸರಿನಲ್ಲಿ ಬೆಳಕಿದ್ರೂ ಈ ಊರಿನಲ್ಲಿ ವಿದ್ಯುತ್ ಸಂಪರ್ಕ ಇನ್ನೂ ಕಾಲಿಡಲಿಲ್ಲ. ಇಂತಹ ಗ್ರಾಮದಲ್ಲಿ ಸಂಪತ್ ಎನ್ನುವ ಹುಡುಗ ತನ್ನ ಕುಟುಂಬದೊಂದಿಗೆ ವಾಸವಾಗಿರುತ್ತಾನೆ. ಪಿಯುಸಿ ತನಕ ಊರಿನಲ್ಲೇ ಕಲಿತು, ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ದೂರದ ಬೆಂಗಳೂರಿಗೆ ತೆರಳುತ್ತಾನೆ. ಬೆಂಗಳೂರಿನಲ್ಲಿ ಆಧುನಿಕ ಜೀವನದ ಪರಿಚಯವಾಗುತ್ತದೆ. ತುಂಬಾ ಮುಂದುವರಿದ ಆ ಜೀವನ ಶೈಲಿಯ ಮುಂದೆ ವಿದ್ಯುತ್,ದೂರದರ್ಶನ,ಕಂಪ್ಯೂಟರ್,ಮೊಬೈಲ್,ಇಂಟರ್ನೆಟ್,ವಾಹನ ವ್ಯವಸ್ಥೆ ಇಲ್ಲದ ಅವನ ಊರು ಬೇಡವೆನಿಸುತ್ತದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸದ ನಂತರ ವಿದೇಶಿ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು. ಮನೆಯವರ ವಿರೋಧದ ನಡುವೆಯೂ ವಿದೇಶಿ ವಿಮಾನವೇರುತ್ತಾನೆ.
ಸಕಲ ಸಂಪದ್ಬರಿತವಾದ ಆ ದೇಶ ಮೊದಮೊದಲಿಗೆ ಮೃಷ್ಟಾನ್ನ ಭೋಜನವನ್ನು ಉಣ ಬಡಿಸುತ್ತೆ. ಅವರು ನೀಡುವ ಡೋಲರ್ ರೂಪದ ಸಂಬಳ, ಇಲ್ಲಿನ ಸಂಬಳಕ್ಕಿಂತ ಮಿಗಿಲೆನಿಸುತ್ತೆ. ಹೀಗೇ ಐದು ವರ್ಷಗಳು ಉರುಳುತ್ತೆ. ಅಲ್ಲಿನ ಗ್ರೀನ್‍ಕಾರ್ಡ ಅವನಿಗೆ ದೊರೆಯುತ್ತೆ. ಅಲ್ಲೇ ತನ್ನ ಜೀವನವನ್ನು ಮುಂದುವರಿಸಲಿಕ್ಕೆ ನಿರ್ಧಾರ ಮಾಡ್ತಾನೆ.
ಹೀಗೇ ದಿನ ಕಳಿತ್ತಿರಬೇಕಾದ್ರೆ ಒಂದು ದಿನಾ ಫೇಸ್‍ಬುಕ್‍ನಲ್ಲಿ ಅವನ ಗೆಳೆಯ ಹಾಕಿದ ಪೋಟೋಗಳನ್ನು ನೋಡ್ತಾನೆ. ಅದರಲ್ಲಿ ಅವನ ಊರಿಗೆ ವಿದ್ಯುತ್ ಬಂದಿರುವಂತಹದ್ದು,ಆ ಊರಿನ ಜಾತ್ರೆ,ಟಾರ್ ರಸ್ತೆ, ಆಸ್ಪತ್ರೆ, ನದಿ, ಹಳ್ಳ, ತೋಟ, ಗದ್ದೆ, ದೇವಸ್ಥಾನ ಇವೆಲ್ಲವು ಇರುತ್ತದೆ. ಬಿಡುವಿಲ್ಲದ ಅವನ ಕೆಲಸದ ಜಂಜಡದಲ್ಲಿ ತಾನು ಏನನ್ನೋ ಕಳೆದುಕೊಳ್ಳುತ್ತಿದ್ದೇನೆ ಎಂದು ಅನಿಸುತ್ತದೆ. ಹಬ್ಬದ ಸಮಯದಲ್ಲಿ ಅಮ್ಮ ಮಾಡುತಿದ್ದ ಪಾಯಸದ ಊಟ. ಚಿಕ್ಕವನಿದ್ದಾಗ ದೇವಸ್ಥಾನಕ್ಕೆ ಹೋಗಿ ಗಂಟೆ ಹೊಡೆಯಲು ಕಷ್ಟಪಟ್ಟಾಗ ಅಪ್ಪ ಎತ್ತಿಹಿಡಿದು ಗಂಟೆ ಹೊಡೆಸಿದ್ದು. ಮಾವಿನ ಮರಕ್ಕೆ ಕಲ್ಲು ಹೊಡೆದು ಬೀಳಿಸುತ್ತಿದ್ದ ಮಾವಿನ ಹಣ್ಣುಗಳು. ಭಾನುವಾರ ಗೆಳೆಯರೊಂದಿಗೆ ಹಳ್ಳದಲ್ಲಿ ಈಜಾಡಿದ್ದು, ಅಪ್ಪ ತಂದುಕೊಟ್ಟ ಸೈಕಲ್‍ನಲ್ಲಿ ಗೆಳೆಯರೊಂದಿಗೆ ರೇಸ್
ಮಾಡಿದ್ದು. ನೀರಿನಲ್ಲಿ ಬಿಡುತ್ತಿದ್ದ ಅಮ್ಮ ಮಾಡಿಕೊಟ್ಟ ಪೇಪರ್ ದೋಣಿ. ರಾತ್ರಿ ಹೊತ್ತು ಎಲ್ಲ ಸೇರಿ ಮಾಡುತಿದ್ದ ಬೆಳದಿಂಗಳೂಟ. ಸಂಜೆ ಹೊತ್ತು ಗೆಳೆಯರೊಂದಿಗೆ ಆಡುತಿದ್ದ ಕ್ರಿಕೆಟ್ ಆಟ. ಹೀಗೇ ಅನೇಕ. ಯಾಂತ್ರಿಕ ಜೀವನದ ಬೆನ್ನು ಹಿಡಿದು ತಾನು ಎಲ್ಲೋ ಪ್ರೀತಿಯನ್ನು ಕಳೆದುಕೊಂಡಿದ್ದೇನೆ ಅಂತಾ ಅವನಿಗನಿಸುತ್ತದೆ. ತನ್ನವರೊಂದಿಗಿದ್ದು,ತನ್ನವರಿಗೆ ಏನಾದ್ರೂ ಮಾಡೋಣ ಅಂತಾ ಸ್ವಲ್ಪವೂ ತಡಮಾಡದೇ ಭಾರತಕ್ಕೆ ಹಿಂದಿರುಗುತ್ತಾನೆ. ತಾನು ವಿದೇಶದಲ್ಲಿ ದುಡಿದದ್ದನೆಲ್ಲಾ ಹಾಕಿ ಸೋಲಾರ್ ಪವರ್ ಪ್ಲಾಂಟ್‍ನ್ನು ಆರಂಭಿಸಿ. ವಿದ್ಯುತ್ ಸಂಪರ್ಕವಿಲ್ಲದ ಅನೇಕ ಹಳ್ಳಿಗಳಿಗೆ ಬೆಳಕಾಗುತ್ತಾನೆ.
"ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸೀ" ಹೀಗೆ ಅಂತ್ಯವಾಗುವ ರಾಮಾಯಣದ ಒಂದು ಶ್ಲೋಕ. ರಾಮ ಲಂಕೆಯ ವೈಭವವನ್ನು ನೋಡಿ ಅಲ್ಲೇ ಉಳಿದು ಬಿಟ್ಟಿದರೇ, ಇವತ್ತಿನ ದಿನಾ ರಾಮಾಯಣದ ಅಂತ್ಯವೇ ಬೇರೆಯಾಗಿರುತ್ತಿತ್ತು. ಅಥವಾ ಶ್ರೀರಾಮ ಲಂಕೆಯ ದೇವರಾಗಿರುತ್ತಿದ್ದ. ಪ್ರತಿಯೊಬ್ಬರಿಗೂ ತನ್ನ ದೇಶ,ಭಾಷೆ,ಹುಟ್ಟಿದ ಊರು,ಕಲಿತ ಶಾಲೆ,ತನ್ನ ಜನ ಅಂದರೆ ಮನಸ್ಸಿನ ಅಂತರಾಳದಲ್ಲಿ ಏನೋ ಒಂದು ಸಂತೋಷ. ಅದು ಹೇಳಲಾಗದ ಸುಮಧುರ ಭಾವನೆ. ವ್ಯಾಪಾರಿಗಳಾಗಿ ಬಂದ ವಿದೇಶಿಯರೇ ನಮ್ಮ ದೇಶ ಬಿಟ್ಟು ಹೋಗಲು ನಾನೂರು ವರ್ಷ ತೆಗೆದುಕೊಂಡರು. ಏಳು ಐಐಟಿ ಮತ್ತು ಒಂದು ಐಐಎಸ್ಸಿ ಹೊಂದಿರುವ ನಮ್ಮೀ ದೇಶದಲ್ಲಿ ನಮ್ಮನು ಕಾಡುವ ಪ್ರಶ್ನೆ ಇಂತಹ ಪ್ರತಿಭಾನ್ವಿತರನ್ನು ಹುಟ್ಟು ಹಾಕಿಯೂ ಸಹ ನಮ್ಮ ದೇಶ ಏಕೆ ಹೀಗಿದೆ. ನಮ್ಮ ದೇಶದಲ್ಲಿ ಪ್ರತಿಷ್ಟಿತ ಶಿಕ್ಷಣವನ್ನು ಪಡೆದು ಡಾಲರ್ ರೂಪದ ಸಂಬಳದ ವ್ಯಾಮೋಹಕ್ಕಾಗಿ ಅದೆಷ್ಟೋ ಪ್ರತಿಭಾನ್ವಿತರು ಬೇರೆ ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈಗಿನ ತಂದೆ ತಾಯಿಗಳಿಗೆ ತಮ್ಮ ಮಗ ಅಥವಾ ಮಗಳು ಹೊರ ದೇಶದಲ್ಲಿ ಇದ್ದಾರೆ ಅಂತಾ ಹೇಳಿಕೊಂಡು ತಿರುಗುವುದು ಒಂದು ಹೆಮ್ಮೆಯಾಗಿದೆ. ಆದರೆ ಕೊನೆಗೆ ಇವರಿಗೆ ವೃದ್ಧಾಶ್ರಮವೇ ಗೂಡಾಗುತ್ತದೆ. ನಾನು ನನ್ನದು ಎಂಬ ಸ್ವಾರ್ಥವನ್ನು ಬಿಟ್ಟು. ನಾವು ನಮ್ಮವರು ನಮ್ಮ ದೇಶ,ನಮ್ಮ ಜನ ಅವರಿಗೆ ಏನಾದ್ರೂ ಒಳ್ಳೇದು ಮಾಡಬೇಕು ಎಂಬ ಉದಾರ ಮನಸ್ಸಿನ ಪ್ರಜೆಗಳು ಈ ದೇಶಕ್ಕೆ ಬೇಕು. ಕೆಲಸ ಕೇಳುವುದಕ್ಕಿಂತ, ಕೆಲಸವನ್ನು ಸೃಷ್ಟಿಮಾಡುವುದು ದೊಡ್ಡದಂತೆ.
ಪ್ರಪಂಚದ ನಾನಾ ಕಡೆಯಲ್ಲಿ ನೆಲೆಸಿರುವ ಅಥವಾ ಈಗ ಕಲಿಯುತ್ತಿದ್ದು ಮುಂದೆ ವಿದೇಶಕ್ಕೆ ಹಾರುವ ಯೋಚನೆಯಲ್ಲಿರುವ ವಿದ್ಯಾರ್ಥಿಗಳು ನಾನು ದೇಶಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಒಂದು ಸಂಕಲ್ಪ ಮಾಡಿದರೆ ಸಾಕು ನಮ್ಮ ದೇಶ ಸೂಪರ್ ಪವರ್ ಆಗುವುದರಲ್ಲಿ ಸಂಶಯವಿಲ್ಲ. ಬನ್ನಿ ತಾಯಿಯೊಂದಿಗೆ ತಾಯಿನಾಡಿನಲ್ಲಿದ್ದು ಸ್ವರ್ಗ ಸುಖವನ್ನು ಅನುಭವಿಸೋಣ.........
-ಬರ್ವೆ
Comments
Post a Comment