"ತಂದೆ ಎನ್ನುವ ಪದವಿ" ಗಂಡು ಮಕ್ಕಳ ಕಣ್ಣಲ್ಲಿ...!!
"ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೀ" ಎನ್ನುವ ಮಾತಿಗನುಸಾರವಾಗಿ, ನಮ್ಮ ಸಮಾಜದಲ್ಲಿ ತಾಯಿಗೆ ಒಂದು ಉತ್ತಮವಾದ ಸ್ಥಾನಮಾನವನ್ನು ಕಲ್ಪಿಸಿದ್ದೇವೆ. ಆದರೆ ತಂದೆಗೆ ತಾಯಿಯಷ್ಟು ಮಹತ್ವವನ್ನು ನಮ್ಮ ಸಮಾಜ ಕೊಟ್ಟಂತೆ ಕಾಣುತ್ತಿಲ್ಲಾ. ಅದರಲ್ಲೂ ಗಂಡು ಮಕ್ಕಳಿಗೆ ತಂದೆ ಒಬ್ಬ ವಿಲನ್. ತಂದೆ ಅನ್ನುವುದು ಒಂದು ಅಧಿಕಾರ,ಅದೊಂದು ಪದವಿ,ಅದೊಂದು ಜವಾಬ್ಧಾರಿ. ಒಂದು ಒಳ್ಳೆಯ ಗಂಡು ಮಗನಾಗಿ ತಂದೆ ಬಗ್ಗೆ ಹೇಳುವ ಒಂದು ಸಣ್ಣ ಪ್ರಯತ್ನ.
ತಂದೆ ಎನ್ನುವ ಪದ,ಮಗುವಿನ ಜನನದೊಂದಿಗೆ ಜನ್ಮ ತಾಳುತ್ತೆ. ಅದರ ಜೊತೆ ಒಂದು ಜೀವದ ಜವಾಬ್ಧಾರಿಯೂ ಆ ಪದವಿಯ ಮೇಲೆ ಬೀಳುತ್ತೆ. ಆ ಕ್ಷಣದಲ್ಲಿ ತಂದೆಗೆ ಮಗನಾಗಿದ್ದವನು ತನ್ನ ಮಗುವಿಗೆ ತಂದೆ ಆಗುತ್ತಾನೆ. ಇಷ್ಟು ದಿನಗಳ ಕಾಲ ತಾನು ನಿಂತು ವೀಕ್ಷಿಸುತ್ತಿದ್ದಂತಹ ಸ್ಥಾನದಲ್ಲಿ ಕೂರುವ ಸರದಿ ಇವನದ್ದಾಗಿರುತ್ತದೆ. ಅದರಲ್ಲೂ ಹೆಣ್ಣು ಮಗು ಹುಟ್ಟಿತು ಅಂತಾ ಬೇಜಾರು ಮಾಡಿಕೊಳ್ಳುವವರು ಒಂದು ಕಡೆ ಆದರೆ, "ಮಗು ಯಾವುದಾದರೂ ಆಗಲಿ, ಹೆಂಡತಿ ಮಗು ಚೆನ್ನಾಗಿದ್ದರೆ ಸಾಕು" ಅಂತಾ ಸಂತೋಷ ಪಡುವವರು ಒಂದು ಕಡೆ. ಹಾಗೆಯೇ "ನನಗೆ ತಂದೆ ಆಗುವ ಭಾಗ್ಯ ಯಾವಾಗ ಕರುಣಿಸುತ್ತಿಯಪ್ಪ" ಅಂತಾ ದೇವರ ಬಳಿ ಬೇಡಿಕೊಳ್ಳುವವರೂ ಒಂದು ಕಡೆ.
"ಬೇಜವ್ಧಾರಿ ಹುಡುಗ,ಸಮಯಕ್ಕೆ ಸರಿಯಾಗಿ ಮನೆಗೆ ಬರುವುದಿಲ್ಲಾ", ಅಂತೆಲ್ಲಾ ಬೈಯಿಸಿಕೊಳ್ಳುತ್ತಿದ್ದವನಿಗೆ, ಮದುವೆ ಆದ ಮೇಲೆ ಒಂದು ಲಗಾಮು ಬಿದ್ದಿರುತ್ತದೆ, ಆ ಲಗಾಮು ಇನ್ನಷ್ಟು ಬಿಗಿ ಆಗುವುದು ಒಂದು ಮಗು ಹುಟ್ಟಿದ ಮೇಲೆ. ತನ್ನ ದುಡಿಮೆಯ ಸಂಪೂರ್ಣವನ್ನು ತಾನೇ ಅನುಭವಿಸುತ್ತಿದ್ದವನಿಗೆ, ಈಗ ಅದನ್ನು ಇನ್ನೂ ಎರಡು ಜೀವಗಳೊಂದಿಗೆ ಹಂಚಿಕೊಳ್ಳುವ ಕರ್ತವ್ಯ ಅವನದ್ದಾಗಿರುತ್ತದೆ.
ತನ್ನ ಪತ್ನಿ ಗರ್ಭಧರಿಸಿದ ಮೊದಲ ದಿನದಿಂದ ಒಬ್ಬ ಪುರುಷ ತಾನು ಅಪ್ಪನಾದ ಸಂತೋಷವನ್ನು ಅನುಭವಿಸಲು ಆರಂಭಿಸುತ್ತಾನೆ. ಮಗು ಮೊದಲ ಬಾರಿ ಹೊಟ್ಟೆಯ ಒಳಗಡೆ ಒದ್ದಾಗ, ಆಸ್ಪತ್ರೆಯಲ್ಲಿ ನರ್ಸ ಬಂದು "ನಿಮಗೆ ಗಂಡು/ಹೆಣ್ಣು ಮಗು ಆಗಿದೆ" ಎಂದು ಹೇಳಿದಾಗ, ಮಗು ಬಾಯಿತುಂಬಾ "ಅಪ್ಪಾ" ಅಂತಾ ಕರೆದಾಗ, ಚವಲ, ನಾಮಕರಣ, ಉಪನಯನ ದಂತಹ ಸಂಸ್ಕಾರಗಳನ್ನು ನೆರವೇರಿಸಿದಾಗ, ತಂದೆಯ ಸಂತಸ ಇಮ್ಮಡಿಗೊಳ್ಳುತ್ತಾ ಹೋಗುತ್ತದೆ. ತನ್ನ ಮಗು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಕಡೆಗೆ ಸಾಗಿದಾಗ, ಜೀವನದಲ್ಲಿ ಒಳ್ಳೆಯ ಸಾಧನೆಯನ್ನು ಮಾಡಿದಾಗ ತಂದೆಯ ಸಂತೋಷಕ್ಕೆ ಪಾರವೇ ಇರುವುದಿಲ್ಲಾ.
ಆದರೆ ಮಕ್ಕಳ ಸ್ಥಾನದಲ್ಲಿ ನಿಂತು ನೋಡಿದಾಗ, ಹೆಣ್ಣು ಮಕ್ಕಳಿಗೆ ತಂದೆ ಒಬ್ಬ ಹೀರೋ ಆದರೆ, ಗಂಡು ಮಕ್ಕಳಿಗೆ ಅವನೊಬ್ಬ ವಿಲನ್. ಶಾಲೆಯಲ್ಲಿ ಚೆನ್ನಾಗಿ ಓದದೇ ಇದ್ದರೇ, ಬೈಗುಳ. ಕಡಿಮೆ ಅಂಕ ಗಳಿಸಿದರೆ, ಹೊಡೆತ ತಪ್ಪಿದ್ದಲ್ಲ. ಸ್ನೇಹಿತರೊಂದಿಗೆ ತಿರುಗಾಡಿಕೊಂಡು, ಆಟವಾಡಿಕೊಂಡು ತಡವಾಗಿ ಬಂದರೆ, ಪಕ್ಕದ ಮನೆಯವರಿಗೆ ಅವತ್ತು ಬಿಟ್ಟಿ ಮನರಂಜನೆ. ಅದರಲ್ಲೂ ಸಿಗರೇಟ್ ಸೇದುವಾಗ, ಹೆಂಡ ಕುಡಿಯುವಾಗ ಸಿಕ್ಕಿ ಬಿದ್ದರೆ ಅವತ್ತು ಊರೆಲ್ಲಾ ಸಮಾರಾಧನೆ. ಎಲ್ಲಿ ಏನೇ ತಪ್ಪು ಮಾಡಿದರೂ ಅದು ಅಪ್ಪನ ಕಿವಿಗೆ ಹೋಗ್ತಾನೆ ಇತ್ತು. "ಪಾಪ, ಅವನು ಇನ್ನು ಹಾಗೆ ಮಾಡುವುದಿಲ್ಲಾ" ಅಂತಾ ಅಮ್ಮನ ಸಮಜಾಯಿಷಿ. "ನಿನ್ನಿಂದ ಅವನು ಹಾಳಾಗ್ತಾ ಇದ್ದಾನೆ" ಅಂತಾ ಅಮ್ಮನಿಗೆ ಒಂದಿಷ್ಟು ಬೈಗುಳ. ಪ್ರೀತಿ,ಪ್ರೇಮದ ವಿಷಯದಲ್ಲಂತೂ ತಂದೆಯೇ ದೊಡ್ಡ ವಿರೋಧಿ. ತಂದೆಯಾದವನು ಮೊದಲು ಮಗನಾಗಿ ನಂತರ ತಂದೆಯಾದ್ದರಿಂದ, ತಾನು ಮಾಡಿದ ತಪ್ಪನ್ನು ತನ್ನ ಮಗ ಮಾಡದೆ ಇರಲಿ ಎನ್ನುವ ಕಾರಣಕ್ಕೆ, ಮಗನ ಪ್ರತಿಯೊಂದು ತಪ್ಪಿನಲ್ಲೂ ಸರಿದಾರಿಗೆ ತರುವ ಪ್ರಯತ್ನವನ್ನು ಮಾಡುತ್ತಾನೆ. ಆದರೆ ಮಗನಾಗಿದ್ದವನಿಗೆ ಆ ಕ್ಷಣಕ್ಕೆ ಅದು ತಪ್ಪೆನಿಸಿದ್ದರು ಮುಂದೆ ತಾನು ತಂದೆ ಆದಾಗ, ತನ್ನ ತಂದೆಯ ನಡೆ ಸರಿಯೆನಿಸುತ್ತದೆ.
ತಾ ಕಂಡ ಕನಸನ್ನು ತನ್ನ ಮಕ್ಕಳ ಮೂಲಕ ನನಸಾಗಿಸಲು ತಂದೆ ಆದವನು ಪ್ರಯತ್ನಿಸುತ್ತಾನೆ. ಆದರೆ ಕನಸನ್ನು ನನಸು ಮಾಡುವ ದಾರಿಯಲ್ಲಿ ಮಕ್ಕಳ ಮೇಲೆ ಹೇರಿಕೆ ಸಲ್ಲದು.
ನನ್ನ ಅಪ್ಪ ನನಗೆ ಬೇಕೆನಿಸಿದಾಗ,ಬೇಕಾದಷ್ಟು ಹಣ ನೀಡಲಿಲ್ಲಾ.ಹಬ್ಬಗಳಲ್ಲಿ ಹೊಸ ಬಟ್ಟೆ,ಪಟಾಕಿ,ಸಿಹಿತಿಂಡಿ ಕೊಡಿಸಲಿಲ್ಲಾ. ನನ್ನ ಗೆಳೆಯನ ಅಪ್ಪ ಅವನಿಗೆ ಸೈಕಲ್ ಕೊಡಿಸಿದ್ದಾರೆ,ನನಗೆ ಆ ಭಾಗ್ಯವಿಲ್ಲಾ. ಒಳ್ಳೆಯ ಶಾಲೆಗೆ ನನ್ನನ್ನು ಸೇರಿಸಲಿಲ್ಲಾ. ಅರಮನೆಯಲ್ಲಿ ನನ್ನನ್ನು ಬೆಳೆಸಲಿಲ್ಲಾ. ಒಂದು ಒಳ್ಳೆಯ ಶೂ,ಆಟಿಕೆ ಕೊಡಿಸಲಿಲ್ಲಾ. ಇನ್ನೂ ಅದೆಷ್ಟೋ ಆರೋಪಗಳನ್ನು ನಮ್ಮ ತಂದೆಯ ಮೇಲೆ ಮಕ್ಕಳಿದ್ದಾಗ ಮಾಡಿರುತ್ತೇವೆ. ಆದರೆ ತಂದೆ ಆಗಿರುವವನು ತಾನು ಮಗುವಾಗಿದ್ದಾಗ ಅನುಭವಿಸಿದ್ದಕ್ಕಿಂತಲೂ ಒಳ್ಳೆಯ ಜೀವನವನ್ನು ತನ್ನ ಮಕ್ಕಳಿಗೆ ಕಟ್ಟಿಕೊಡಲು ಪ್ರಯತ್ನಿಸಿರುತ್ತಾನೆ. ಇಷ್ಟೆಲ್ಲಾ ಆರೋಪಗಳನ್ನು ಮಾಡಿದ ನಾವು ನಮ್ಮ ತಂದೆ ಎಂದಾದರೂ ಹೊಸ ಬಟ್ಟೆ ಹಾಕಿಕೊಂಡಿದ್ದಾರಾ,ಹೊಸ ಶೂ ಹಾಕಿಕೊಂಡಿದ್ದಾರಾ,ನಮ್ಮ ತಂದೆಯ ದಿನದ ಆದಾಯ ಎಷ್ಟು ಎಂದು ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುವುದಿಲ್ಲಾ. ನಮ್ಮ ಆಸೆಗಳನ್ನು ಪೂರೈಸುವ ಸಲುವಾಗಿ ಎಷ್ಟು ಜನರ ಹತ್ತಿರ ಕೈ ಚಾಚಿರಬಹುದು,ಎಷ್ಟು ಗಂಟೆಗಳ ಕಾಲ ಜಾಸ್ತಿ ಕೆಲಸ ಮಾಡಿರಬಹುದು,ಎಷ್ಟು ಜನರ ಹತ್ತಿರ ಸಾಲ ಕೇಳಿರಬಹುದು,ಇದ್ಯಾವುದು ನಮಗೆ ಗೊತ್ತಾಗುವುದಿಲ್ಲಾ. ಆತ ಗೊತ್ತು ಪಡಿಸುವುದು ಇಲ್ಲಾ. ಇವಾಗ ನಮ್ಮ ತಂದೆಗಿಂತ ಎರಡು,ಮೂರು ಪಟ್ಟು ಜಾಸ್ತಿ ಸಂಬಳ ಪಡೆಯುತ್ತಿದ್ದರು ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹೆಣಗುತೇವೆ.
ತಂದೆ ಬೈದರು ಎನ್ನುವ ಸಣ್ಣ ವಿಷಯಕ್ಕೆ ಜಗಳವಾಡಿಕೊಂಡು,ಮನೆ ಬಿಟ್ಟಂತಹ ಅನೇಕ ಮಕ್ಕಳನ್ನು ನೋಡಬಹುದು. ಆದರೆ ನಂತರ ಆ ಜೀವಕ್ಕೆ ಆಗುವ ನೋವು,ಸಂಕಟ ಯಾರಿಗೂ ತೋರುವುದಿಲ್ಲಾ.
ತಂದೆ ಆದವನ್ನು ಮಕ್ಕಳಿಗೆ ಮಾದರಿ ಆಗಿರಬೇಕು. ಕೆಲವು ವಿಷಯಗಳನ್ನು ತಂದೆಯಿಂದ ಕಲಿಯಬೇಕಾದರೆ,ತಂದೆಯಿಂದ ಕಲಿಯಬಾರದ ವಿಷಯಗಳು ಇರುತ್ತವೆ. ಕುಡುಕ,ಜೂಜು ಕೊರ,ಬೇಜವ್ಧಾರಿಯಾದ,ಅನ್ಯ ಸ್ತ್ರೀ ಸಂಗ ಮಾಡುವ ಅಪ್ಪನಿಂದ, ಮುಂದೆ ತಾನು ಈ ತರಹ ಆಗಬಾರದು ಅನ್ನುವುದನ್ನು ಮಕ್ಕಳು ಕಲಿಯಬೇಕಾಗುತ್ತದೆ.
ವೃದ್ಧಾಶ್ರಮಗಳು ಜಾಸ್ತಿ ಆಗಿರುವ ಈ ಕಾಲದಲ್ಲಿ,ಮಕ್ಕಳು ಬೆಳೆದು ದೊಡ್ಡವರಾದ ಮೇಲೆ, ತಂದೆ ತಾಯಿಗಳನ್ನು ಮೂಲೆಗುಂಪು ಮಾಡುವುದನ್ನು ನೋಡಬಹುದು. ನಮ್ಮನ್ನು ಭೂಮಿಗೆ ತಂದು, ನಮ್ಮ ಯಶಸ್ಸಿಗೆ ಕಾರಣರಾದ ಆ ಜೀವಗಳು ಸತ್ತ ಮೇಲೆ ಪಿಂಡ ಹಾಕಿ ಸಮಾರಾಧನೆ ಮಾಡುವ ಬದಲು, ಇರುವ ತನಕ ನಮ್ಮ ಜೊತೆಗೆ ಇರಿಸಿಕೊಂಡು, ಮನಸ್ಸಿಗೆ ಸಂತೋಷವನ್ನು ನೀಡುವುದು ಕೋಟಿ ಪುಣ್ಯಗಳನ್ನು ಪಡೆದ ಹಾಗೆ...
ನೈಜ ಜೀವನದಲ್ಲಿ ಐ ಲವ್ ಯು ಅಪ್ಪ ಅಂತ ಹೇಳೋದಕ್ಕೆ ಕಷ್ಟ ಆಗಬಹುದು, ಮನಸ್ಸಿನಲಾದ್ರು ಹೇಳಿಕೊಳೋಣ "ಐ ಲವ್ ಯು ಅಪ್ಪ ,ಯು ಆರ್ ಮೈ ಹೀರೋ "
ನೈಜ ಜೀವನದಲ್ಲಿ ಐ ಲವ್ ಯು ಅಪ್ಪ ಅಂತ ಹೇಳೋದಕ್ಕೆ ಕಷ್ಟ ಆಗಬಹುದು, ಮನಸ್ಸಿನಲಾದ್ರು ಹೇಳಿಕೊಳೋಣ "ಐ ಲವ್ ಯು ಅಪ್ಪ ,ಯು ಆರ್ ಮೈ ಹೀರೋ "
-ಬರ್ವೆ
Nice one, buddy.. Keep going..
ReplyDelete