ಕಲರ್ ಪುಲ್ ಕನಸು...

       
          ಮಕ್ಕಳೇ ಕನಸು ಕಾಣೀ ಅಂತಾ ಹೇಳಿದವರು ಭಾರತ ರತ್ನ ಅಬ್ದುಲ್ ಕಲಾಂ ಅವರು. ಕನಸು ಯಾರು ನೋಡಲ್ಲಾ ಹೇಳಿ, ಪ್ರತಿಯೊಬ್ಬರು ಕನಸು ಕಾಣ್ತಾರೆ. ಭಿಕ್ಷುಕನಿಗೆ ಹಣವಂತನಾಗುವ ಕನಸು. ಹಣವಂತನಿಗೆ ಇನ್ನೂ ಹೆಚ್ಚು ಹಣಗಳಿಸುವ ಕನಸು. ಮಕ್ಕಳಿದ್ದಾಗ ಆಟಿಕೆಯ ಕನಸು. ಶಾಲಾ ಕಾಲೇಜು ದಿನಗಳಲ್ಲಿ ಉತ್ತಮ ಅಂಕಗಳಿಸುವ ಕನಸು. ಹಾಗೆಯೇ ಕನಸಿನ ಹುಡುಗಿ/ಹುಡುಗನ ಕನಸು. ಕಾಲೇಜು ಮುಗಿದ ಮೇಲೆ ಒಳ್ಳೆಯ ಉದ್ಯೋಗದ ಕನಸು. ಉದ್ಯೋಗ ದೊರಕಿದ ಮೇಲೆ ಮದುವೆ,ಮನೆ,ಕಾರಿನ ಕನಸು. ಆಮೇಲೆ ತಮಗೆ ಹುಟ್ಟುವ ಮಕ್ಕಳ ಭವಿಷ್ಯದ ಕನಸು. ಹೀಗೆ ಕನಸುಗಳಿಗೆ ಮಿತಿ ಇಲ್ಲ. ಯಾಕಂದ್ರೆ ಕನಸು ಕಾಣಲಿಕ್ಕೆ ದುಡ್ಡು ಕೊಡಬೇಕಿಲ್ಲ ನೋಡಿ.

          ಯೌವನದಲ್ಲಿ ಹುಟ್ಟುವ ಕನಸುಗಳು ತುಂಬಾ ಸುಂದರವಾಗಿರುತ್ತೆ. ಯಾವುದೇ ತಲೆ ಬಿಸಿ ಇಲ್ಲದೇ ಜವಾಬ್ದಾರಿಗಳಿಲ್ಲದೇ ನಮ್ಮ ಕನಸಿನ ಲೋಕದಲ್ಲಿ ವಿಹರಿಸುತ್ತಾ ಇರಬಹುದು. ಈ ಕಾಲದಲ್ಲಿ ಬೀಳುವ ಕನಸುಗಳು ನಮ್ಮ ಜೀವನವನ್ನು ಸಹಾ ರೂಪಿಸುತ್ತವೆ. ಒಂದು ಉತ್ತಮ ಭವಿಷ್ಯದ ಕನಸನ್ನು ಕಂಡು ಅದನ್ನು ಈಡೇರಿಸಿಕೊಳ್ಳಲಿಕ್ಕೆ ಭದ್ರ ಬುನಾದಿ ಹಾಕಲು ಯೌವನ ಸಕಾಲ. ಯೌವನದಲ್ಲಿ ಮುಖ್ಯವಾಗಿ ಎರಡು ತರಹದ ಕನಸುಗಳನ್ನು ಎಲ್ಲರೂ ನೋಡ್ತಾರೆ. ಒಂದು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಇನ್ನೊಂದು ತಮ್ಮ ಲೈಪ್ ಪಾರ್ಟನರ್ ಬಗ್ಗೆ. ಒಂದು ಎತ್ತರದ ಸ್ಥಾನಕ್ಕೆ ಹೋಗಬೇಕು,ತುಂಬಾ ಹಣ ಮಾಡಬೇಕು,ಕೀರ್ತಿಗಳಿಸಬೇಕು ಅನ್ನೋದು ಒಂದು ರೀತಿ ಆದರೆ. ಮದುವೆ ಆಗೋ ಹುಡುಗ/ಹುಡುಗಿ ಇದೇ ತರಹ ಇರಬೇಕು ಅನ್ನೋದು ಒಂದು ಕಡೆ.

         ಕನಸನ್ನು ಎಲ್ಲರೂ ಕಾಣ್ತಾರೆ, ಆದರೆ ಕನಸಿನ ಲೋಕಕ್ಕೆ ಏಣಿಯನ್ನು ಹಾಕಿ ಅಲ್ಲಿಗೆ ತಲುಪುವವರು ತುಂಬಾ ಕಡಿಮೆ. ಯೌವನದಲ್ಲಿ ಕಂಡ ಎಲ್ಲಾ ಕನಸುಗಳು ಈಡೇರುವುದಿಲ್ಲಾ ಯಾಕಂದರೆ ನಾವು ಈ ಸಮಯದಲ್ಲಿ ತುಂಬಾ ಕನಸುಗಳನ್ನು ಕಾಣ್ತೀವಿ. ಒಬ್ಬ ಕ್ರಿಕೆಟರನ್ನು ನೋಡ್ತಿವಿ ಅವನಂತಾಗಬೇಕು ಅನ್ನಿಸುತ್ತೆ. ಒಬ್ಬ ಹಾಡುಗಾರನನ್ನು ನೋಡಿದಾಗ ಅವನಂತಾಗಬೇಕು ಅನಿಸುತ್ತೆ. ಚಲನಚಿತ್ರದಲ್ಲಿ ಹೀರೋಗಳನ್ನು ನೋಡಿದಾಗ ಅವರಂತೆ ಆಗಬೇಕು ಅನ್ನೋ ಕನಸು ಹೀಗೆ ನಾನಾ ಕನಸುಗಳನ್ನು ಕಾಣ್ತೇವೆ. ಹೆಚ್ಚಿನ ಕನಸುಗಳು ರಾತ್ರಿ ಕಂಡು ಬೆಳ್ಳಗ್ಗೆ ಮರೆತ ಹಾಗೆ ಆಗುತ್ತೆ. ಅಬ್ದುಲ್ ಕಲಾಂ ಅವರು ಇನ್ನೊಂದು ಮಾತು ಹೇಳಿದ್ದಾರೆ "ಕನಸುಗಳು ಎಂದರೆ ರಾತ್ರಿ ನೋಡಿ ಬೆಳ್ಳಗ್ಗೆ ಮರೆಯುವಂತಹದ್ದಲ್ಲಾ,ಅವುಗಳು ನಿಮ್ಮ ನಿದ್ದೆ ಕೆಡಿಸಬೇಕು"

          ಒಂದು ನಿರ್ಧಿಷ್ಟ ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪಲಿಕ್ಕೆ ಟೊಂಕ ಕಟ್ಟಿ ನಿಂತುಕೊಳ್ಳುವವರು ಒಂದು ಕಡೆ ಆದರೆ. ಸುಂದರವಾದ ಕನಸುಗಳನ್ನು ಹೊತ್ತು ಸಹ ಮನೆಯವರ ಅಥವಾ ಇನ್ಯಾರದ್ದೋ ಒತ್ತಡಕ್ಕೆ ಮಣಿದು ಬೇರೆಯೇ ಕೆಲಸದಲ್ಲಿ ಮನಸ್ಸಿಲ್ಲದಿದ್ದರು ಅದರಲ್ಲಿ ತೊಡಗಿಸಿಕೊಳ್ಳುವವರು ಒಂದು ಕಡೆ. ನಾನು, ನನ್ನ ಮನೆ,ನನ್ನ ಸಂಸಾರ ಎನ್ನುವ ಬದಲು ನಮ್ಮ ನಾಡಿನ ಏಳಿಗೆಯ ಬಗ್ಗೆ ಕನಸನ್ನು ಕಾಣುವ ಯುವಕರು ಈ ದೇಶಕ್ಕೆ ಬೇಕಾಗಿದ್ದಾರೆ. ಜನಸಂಖ್ಯೆಯಲ್ಲಿ ಅತೀ ಹೆಚ್ಚಿರುವ ಯುವ ಸಮುದಾಯ ಭವ್ಯ ಭಾರತದ ನಿರ್ಮಾಣದ ಕನಸನ್ನು ನೋಡಿದರೆ. ಗಾಂಧೀಜಿಯ ರಾಮ ರಾಜ್ಯದ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ. ಯಾವತ್ತು ದುರ್ಗಮವಾದ ದಾರಿ ಸುಂದರವಾದ ಜಲಪಾತಕ್ಕೋ,ಶಿಖರಕ್ಕೋ ಕರೆದುಕೊಂಡು ಹೋಗುತ್ತೆ,ಹಾಗೆಯೇ ಕನಸುಗಳ ಈಡೇರಿಕೆಯಲ್ಲಿ ಕಷ್ಟಗಳು ಎದುರಾಗಬಹುದು. ಆದರೆ ಅದು ನನಸಾದಾಗ ಆಗುವ ಸಂತೋಷ

ಸುಮಧುರ.........


-ಬರ್ವೆ

Comments

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ

ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)