ಮುಸ್ಸಂಜೆಯಲ್ಲಿ ಮೊಹಬ್ಬತ್ 2 (ಮಂಜಿನೂರಿನಲ್ಲೊಂದು ಲವ್ ಸ್ಟೋರಿ)


          ಶೆಟ್ರ ಅಂಗಡಿಯಲ್ಲಿ ಇನ್ನೂ ಯಾವುದಾದರೂ ಹುಡುಗಿ ಬೆಂಕಿಪಟ್ಟಣ ಬಿಟ್ಟು ಹೋಗ್ತಾಳಾ ಅಂತಾ ಕಾದು ಕಾದು ಸಾಕಾಯ್ತು. ಪಟ್ಟಣದ ಜಂಜಡಗಳಿಂದ ರೋಸಿ ಹೋಗಿದ್ದ ಮನಸ್ಸಿಗೆ ಸ್ವಲ್ಪ ಮುದ ಕೊಡೋಣ ಅಂತ ಹೊಗಿದ್ದೇ ನನ್ನ ತಾತನ ಊರು, ಮಲೆನಾಡಿನ ಹೆಬ್ಬಾಗಿಲು ಅಂತ ಪ್ರಸಿದ್ಧವಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ. ಸದಾ ಮಂಜು ಮುಸುಕಿರುವ ದಾರಿ, ಒಂಟಿ ಮನೆ,ಎಲ್ಲಿ ನೋಡಿದರೂ ಹಸಿರು,ಹೊರಗೆ ಹೋಗಲಾರದಷ್ಟು ಸುರಿವ ಜಡಿ ಮಳೆ,ಮೈ ಕೊರೆವ ಚಳಿ,ಮಲೆನಾಡ ಊಟ ಇವೆಲ್ಲವುಗಳನ್ನು ಸವಿಯುತ್ತಾ ಮನಸ್ಸು ಮಳೆ ಬಂದು ನಿಂತಿರುವ ಹೊಳೆ ತರಹ ಪ್ರಶಾಂತವಾಗಿತ್ತು. ಮನೆಗೆ ಬಂದು ಒಂದುವಾರ ಆದರೂ ಮನೆಬಿಟ್ಟು ಹೊರಗೇ ಹೋಗಿರಲಿಲ್ಲ. ಅಜ್ಜಿ ಮಾಡಿಕೊಟ್ಟ ತಿಂಡಿಗಳನ್ನು ತಿನ್ನುತ್ತಾ,ಒಲೆ ಮುಂದೆ ಚಳಿ ಕಾಯಿಸಿಕೊಂಡು,ಮಾವಿನ ಹಣ್ಣು,ಹಲಸಿನ ಹಣ್ಣು ಸವಿಯುತ್ತಾ ಅಲ್ಲೇ ಇದ್ದು ಬಿಟ್ಟಿದ್ದೆ.

          ಆದ್ರೆ ಅವತ್ತ್ಯಾಕೋ ಮನಸ್ಸಿಗೆ ಬೇಜಾನ್ ಬೇಜಾರ್ ಹೊಡಿತ್ತಿತ್ತು. ಎಲ್ಲಾದರೂ ಸುತ್ತಾಡಿಕೊಂಡು ಬರೋಣ ಅಂತಾ,ಮುಸ್ಸಂಜೆಯಲ್ಲಿ ಅಜ್ಜನ ಕೊಡೆ ಹಿಡಿದುಕೊಂಡು ಆ ಮಳೆಯಲ್ಲೇ ನೆಡೆದುಕೊಂಡು ಹೋದೆ. ಏನಾದರೂ ಕೆಲಸ ಮಾಡೋ ಮೊದಲು ದೇವರಿಗೆ ನಮಸ್ಕಾರ ಮಾಡಬೇಕಂತೆ. ಅದಕ್ಕೆ ದೇವರನ್ನು ಸ್ವಲ್ಪ ಮಾತನಾಡಿಸೋಣ ಅಂತಾ ಆ ಊರಿನ ದೇವಾಲಯಕ್ಕೆ ನಡೆದೇ ಬಿಟ್ಟೆ. ಆದ್ರೆ ದೇವರನ್ನು ನೋಡಲಿಕ್ಕೆ ಹೋದ ನನಗೆ ದೇವಸ್ಥಾನದಲ್ಲಿ ದೇವತೆ ದರ್ಶನ ಆಗಿತ್ತು. ಹುಡುಕಿ ಎಣಿಸಿದರೂ ನೂರು ಜನ ಸಿಕ್ಕದೇ ಇರೋ ಈ ಊರಲ್ಲೂ ನನಗೆ ಲವ್ ಆಗತ್ತೇ ಅಂತಾ ಎಣಿಸೇ ಇರಲಿಲ್ಲ. ಅವಳು ಹಾಕಿದ ಆ ಡ್ರೆಸ್ಸು,ಅವಳ ನಗು,ಊದ್ದ ಜಡೆ,ಒಂದು ಚೂರೂ  ಮೇಕಪ್ಪ ಇಲ್ಲದೇ ಮುದ್ದು ಮುದ್ದಾಗಿ ಕಾಣ್ತಾ ಇದ್ದ ಅವಳ ಮುಖ, ಇವೆಲ್ಲದರ ಎದುರು ನಮ್ಮ ಸಿಟಿ ಹುಡುಗಿಯರನ್ನು ನಿವ್ಹಾಳ್ಸಿ ಬಿಸಾಡಿದಹಾಗಿತ್ತು. ಅವಳ ಅಂದವಾದ ಮದರಂಗಿ ಹಾಕಿದ ಕಾಲಿನಿಂದ ಹೆಜ್ಜೆ ಮೇಲೆ ಹೆಜ್ಜೆ ಇಟ್ಟುಕೊಂಡು ದೇವಸ್ಥಾನಕ್ಕೆ ಸುತ್ತು ಹಾಕ್ತಾ ಇದ್ರೆ. ನಾನೂ ಅವಳ ಹಿಂದೆ ಹೊರಟು ಬಿಟ್ಟಿದ್ದೆ. ಎಷ್ಟು ಸುತ್ತು ಹಾಕಿದನೋ ನನಗೆ ಗೊತ್ತಿಲ್ಲ ಆದ್ರೆ ಹಾರ್ಟ ಮಾತ್ರ ಅವಳ ಹಿಂದೆ ಗಿರಕಿ ಹೊಡಿತ್ತಿತ್ತು. ಇವಳನಾದ್ರೂ ನನಗೆ ದಯಪಾಲಿಸಪ್ಪ ಅಂತಾ ದೇವರನ್ನು ಕೇಳಿಕೊಂಡು ಮನೆ ಕಡೆಗೆ ಹೊರಟೆ. ಈ ಮಳೆಗೂ ಪ್ರೀತಿಗೂ ಏನೋ ನಂಟಿದೆ ಇರಬೇಕು,ಮಳೆಯಲ್ಲಿ ನೆನೆಯೋಣ ಅನ್ನಿಸ್ತು. ನೆನೆದುಕೊಂಡೇ ಮನೆಗೆ ಹೋದೆ.ಅವತ್ತು ರಾತ್ರಿ ಕಣ್ಣು ಮುಚ್ಚಿದ್ರೆ ಕಣ್ಣು ತುಂಬಾ ಅವಳೇ ತುಂಬಿ ಹೋಗಿ ಬಿಟ್ಟಿದ್ಲು. ಮಳೆಯಲ್ಲಿ ನೆನೆಯುವಷ್ಟು ಕೆಟ್ಟು ಹೋದನಲ್ಲಾ ಅನ್ನೋ ಯೋಚನೆಯಲ್ಲೇ ಅವತ್ತು ನಿದ್ರೆಗೆ ಜಾರಿದೆ.

          ಮರುದಿನದಿಂದ ಸಂಜೆ ಹೊತ್ತು ಅಜ್ಜನ ಕೊಡೆ ಜೊತೆ ಯತ್ತಾವತ್ತಾಗಿ ದೇವಸ್ಥಾನಕ್ಕೆ ಹೊಗೋ  ಕಾರ್ಯಕ್ರಮ ಫಿಕ್ಸ್ ಆಯ್ತು. ದಿನಾ ಸಂಜೆ ಹೂವು ತಕ್ಕೊಂಡು ದೇವಸ್ಥಾನಕ್ಕೆ ಬರತ್ತಿದ್ಲು. ದೇವರಿಗೆ ಸುತ್ತು ಹಾಕಿ ನಮಸ್ಕಾರ ಮಾಡಿ ಗುಬ್ಬಚ್ಚಿ ತರಹ ಗೂಡು ಸೇರ್ತಾ ಇದ್ಲು. ನನ್ನ ಕಡೆ ನೋಡೊದಿರಲಿ ಅವಳ ಉಸಿರು ಸಹ ತಾಗ್ತಾ ಇರಲಿಲ್ಲ. ಹೀಗೆ ದೇವಸ್ಥಾನದ ಮೆಟ್ಟಿಲು ಕಾಯೋದು ನಡೀತಾನೆ ಇತ್ತು. ಹೀಗಿರಬೇಕಾದ್ರೆ ಒಂದು ದಿನಾ ಆ ದೇವರಿಗೆ ನಾನು ಹಾಕಿದ ನಮಸ್ಕಾರ ತಲುಪಿತ್ತಿರಬೇಕು. ಅವತ್ತು ದೇವಸ್ಥಾನದಲ್ಲಿ ದೀಪಾರಾದನೆ, ನನ್ನ ಅಜ್ಜಿ ಜೊತೆ, ನಾನು ಮನೆ ಬಿಟ್ಟಿದ್ದೆ. ಆದ್ರೆ ಅವತ್ತು ಅವಳು ದೇವಸ್ಥಾನದ ಸುತ್ತಿನಲ್ಲಿರಲಿಲ್ಲ ಬದಲಾಗಿ ವೋಲಗ ಮಂಟಪದಲ್ಲಿ ಅವಳ ಭರತನಾಟ್ಯ ಕಾರ್ಯಕ್ರಮ ಇತ್ತು. ಅವಳ ಡ್ಯಾನ್ಸ ನೋಡಿ ಜ್ವರ ಬಂದ ಹಾರ್ಟಿಗೆ ಐಸಕ್ರೀಮ್ ತಿನ್ನಿಸಿದ ಹಾಗಾಯ್ತು. ಡ್ಯಾನ್ಸ ಮುಗಿದ ಮೇಲೆ ನನ್ನ ಅಜ್ಜಿ ಜೊತೆ ಅವಳು ಮತ್ತು ಅವಳ ಅಮ್ಮ ಮಾತನಾಡಿಕೊಳ್ಳುತ್ತಿರುವುದು ನೋಡ್ದೆ, ಓಡಿ ಹೋಗಿ ಅಜ್ಜಿ ಪಕ್ಕದಲ್ಲಿ ನಿಂತುಕೊಂಡೆ. ಅಜ್ಜಿ ನನ್ನನ್ನು ಅವರಿಗೆ ಪರಿಚಯ ಮಾಡಿಕೊಟ್ಲು. ಅವಳ ಹೆಸರು ರೇಖಾ ಅಂತಾ, ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲೇ ಅವರ ಮನೆ ಇರೋದಂತಾ ಅಜ್ಜಿಯಿಂದ ಗೋತ್ತಾಯ್ತು. ಅವಳು ಹೋಗುವಾಗ ಕಣ್ಣಿನಲ್ಲೇ ಮಾತನಾಡಿಸಿ ಮುಖದಲ್ಲಿ ನಗು ಚೆಲ್ಲಿ ಹೊರಟು ಹೋದ್ಲು. "ಅಬ್ಬಾ ದೇವಸ್ಥಾನಕ್ಕೆ ಸುತ್ತು ಹಾಕಿದಕ್ಕೂ ಸಾರ್ಥಕವಾಯ್ತು" ಅಂದುಕೊಂಡೆ.

          ಮರುದಿನಾ ಮತ್ತೇ ಅದೇ ದೇವಸ್ಥಾನ, ಅದೇ ಹುಡುಗಿ. ದೇವಸ್ಥಾನದಲ್ಲಿ ನನ್ನನ್ನು ನೋಡಿ ಒಂದು ನಗು ಬಿಸಾಕಿದ್ಲು. ಮಾತನಾಡಿಸೋಣ ಅನ್ನುವಷ್ಟರಲ್ಲಿ ದೇವಸ್ಥಾನದ ಹೊರಗಡೆ ಬಂದು ಅವಳ ಮನೆದು ಏನೋ ಪೂಜೆ ಇತ್ತಂತೆ ಎಲ್ಲರಿಗೂ ಪ್ರಸಾದ ಕೊಡುತ್ತಾ ಇದ್ಲು. ನಾನು ಲೈನ್‍ನಲ್ಲಿ ನಿಂತುಕೊಂಡೆ,ನಾನು ಕೊನೆಯವನಾಗಿದ್ದಕೋ ಏನೋ ನನಗ್ಯಾಕೋ ಸ್ವಲ್ಪ ಜಾಸ್ತಿನೇ ಬಡಿಸಿದ್ಲು."ನೀವೆ ಮಾಡಿದ್ದ" ಅಂತಾ ಕೇಳ್ದೆ " ಹೌದು ನೀವು ಬೇರೆ ಊರಿನವರಲ್ಲಾ ಅದಕ್ಕೆ ಸ್ವಲ್ಪ ಜಾಸ್ತಿ ಹಾಕ್ದೆ,ಟೇಸ್ಟ ನೋಡಿ" ಅಂದ್ಲು. ಇನ್ನೂ ಏನಾದರೂ ಮಾತಾಡೋಣ ಅನ್ನುವಷ್ಟರಲ್ಲಿ "ಲೇಟ್ ಆಯ್ತು ಯಾರೋ ಮನೆಗೆ ಬರ್ತಾರೆ" ಅಂತಾ ಹೊರಟು ನಿಂತ್ಲು. ಆದರೆ ಮಳೆರಾಯ ಅಷ್ಟರಲ್ಲಾಗಲ್ಲೇ ಪ್ರತ್ಯಕ್ಷ ಆಗಿ ಬಿಟ್ಟಿದ್ದ. ಅವತ್ತು ನನ್ನ ದಿನ ಭವಿಷ್ಯದಲ್ಲಿ "ಹುಡುಗಿಯಿಂದ ಶುಭವಾರ್ತೆ ಅಂತಾ ಬರೆದಿತ್ತು" ಕಾಣುತ್ತೆ. ಅವಳು ಕೊಡೆ ಮರೆತು ಬಂದಿದ್ಲು. ಅವಳೇನೋ ತರಾತುರಿಯಲ್ಲಿದ್ಲು. ಸಿಕ್ಕಿದೇ ಚಾನ್ಸು ಅಂತಾ, ನಮ್ಮ ಅಜ್ಜನ ಕೊಡೆ ತಕ್ಕೊಂಡು "ನಿಮ್ಮ ಮನೆವರೆಗೆ ಬಿಡ್ತೀನಿ, ಬರ್ತೀರಾ" ಕೇಳ್ದೆ."ಹಾ" ಅಂತಾ ಕೊಡೆ ಒಳಗೆ ಬಂದ್ಲು. ಗದ್ದೆ ಅಂಚಿನಲ್ಲಿ ನೆಡೆದುಕೊಂಡು ಹೋಗಬೇಕಾದ್ರೆ ಬೀಳಲಿಕಾದ್ಲು. ಅವಳ ಕೈ ಎಳೆದು ಹಿಡಿದುಕೊಂಡೆ."ಏನ್ರೀ ನನ್ನನ್ನು ಬೀಳಿಸಿ ಬಿಟ್ಟು, ನೀವೆ ಬೀಳಲಿಕಾದ್ರಲ್ಲಾ" ಅಂದೇ. ಅವಳಿಗೆ ಅರ್ಥ ಆಗಿರಲಿಕ್ಕಿಲ್ಲ. "ನೀವು, ನಿನ್ನೆ ನನ್ನನು ನೋಡಿದಾಗಿನಿಂದ ಈ ಕೂಲ್ ವಾತಾವರಣದಲ್ಲೂ ಮುಖದಲ್ಲಿ ಮೊಡವೆ ಏಳಲಿಕ್ಕೆ ಶುರುವಾಗಿದೆ, ಏನಾದ್ರೂ ಕಣ್ಣು ಹಾಕಿದ್ರಾ" ಕೇಳ್ದೆ. "ಇಲ್ಲಪ್ಪಾ ನಾನು ಅಂತಾ ಹುಡುಗಿ ಅಲ್ಲಾ " ಅಂತಾ ಮುದ್ದು ಮುದ್ದಾಗಿ ಹೇಳಿಬಿಟ್ಲು. "ನಿಮ್ಮನ್ನು ಮೊದಲು ದೇವಸ್ಥಾನದಲ್ಲಿ ನೋಡಿದಾಗ ಪ್ರೀತಿ ಎಂಬ ಜ್ವರ ಶುರುವಾಯ್ತು. ನಿಮ್ಮ ನಗು,ಡ್ಯಾನ್ಸು,ಉದ್ದ ಜಡೆ,ನಿಮ್ಮ ಮುಖ,ನೀವು ಮಾಡಿಕೊಟ್ಟ ಪ್ರಸಾದ ಎಲ್ಲ ಆ ಜ್ವರವನ್ನು ಒಂದು, ಒಂದೇ ಡಿಗ್ರಿ ಜಾಸ್ತಿ ಮಾಡ್ತಾ ಹೋಯ್ತು. ಆಸ್ಪತ್ರೆಗೆ ಸೇರಿಸೋ ರೇಂಜಿಗೆ ಏರಿ ಬಿಟ್ಟಿದೆ,ಒಂದು ಅವಕಾಶ ಕೊಡಿ ಜೀವನ ಪೂರ್ತಿ ಕೊಡೆ ಹಿಡಿದುಕೊಂಡು ಇದ್ದು ಬಿಡ್ತೀನಿ " ಅಂದೆ. ಅದಕ್ಕವಳು "ಜೀವನದಲ್ಲಿ ನಮಗೆ ಬೇಕಾಗಿದ್ದು ಸರಿಯಾದ ಕಾಲಕ್ಕೆ ಸಿಕ್ಕಿದರೇ ಯಾರೂ ದೇವಸ್ಥಾನಕ್ಕೆ ಸುತ್ತು ತೆಗೀತಾ ಇರಲಿಲ್ಲ ಇರಬೇಕು. ಹೆತ್ತವರು ಅಂತಾ ಇದ್ದ ಮೇಲೆ ಅವರ ಮನಸ್ಸು ನೋಯಿಸುವುದು ತಪ್ಪಾಗುತ್ತೆ..." ಇನ್ನೂ ಏನೋ ಹೇಳಬೇಕಂತಾ ಇದ್ಲು, ಅಷ್ಟರಲ್ಲಿ ಅವಳ ಮನೆ ಬಂತು ಯಾರೋ ಒಬ್ಬ ಹುಡುಗ "ಎಷ್ಟೋತ್ತಿಂದ ಕಾಯ್ತಾ ಇದ್ದೇನೆ,ಈಗ ಬರ್ತಾ ಇದ್ದಿಯಾ" ಅಂತಾ ಅವಳನ್ನು ಕರೆದುಕೊಂಡು ಹೋಗಲಿಕ್ಕೆ ಬಂದ. "ಆಯ್ತು, ನಾನು ನಾಳೆ ಸಿಕ್ತೇನೆ"ಅಂತಾ ಹೊರಟು ಹೋದ್ಲು. "ಜೀವನಾ,ಗೀವನಾ" ಅಂತಾ ಏನೋ ದೊಡ್ಡ ದೊಡ್ಡ ಮಾತಾಡಿದ್ಲು. ನನಗ್ಯಾವುದೂ ಅರ್ಥ ಆಗಿಲ್ಲಾ,ಅರ್ಥ ಆಗೋ ವಯಸ್ಸೂ ಅಲ್ಲಾ ನೋಡಿ. ಸೀದಾ ಮನೆಗೆ ಬಂದೆ. ಸ್ವಲ್ಪ ಪ್ರಸಾದ ಅಜ್ಜಿಗೆ ಕೊಟ್ಟೆ.ಯಾರದ್ದು ಕೇಳಿದ್ರೂ. ರೇಖಾನ ಮನೆದು ಏನೋ ಪೂಜೆ ಇತ್ತಂತೆ, ಅವಳು ಕೊಟ್ಲು ಅಂದೆ.ಅದಕ್ಕೆ ಅಜ್ಜಿ ."ಹೌದು ಒಳ್ಳೇ ಹುಡುಗ ಗಂಡ ಆಗಿ ಸಿಕ್ಕಿದ್ರೆ ದೇವರಿಗೆ ಪೂಜೆ ಮಾಡಿಸ್ತೀನಿ ಅಂತಾ ಹೇಳಿಕೊಂಡಿದ್ಲು ಇರಬೇಕು,ಹೋದವಾರ ಅವಳ ನಿಶ್ಚಿತ್ತಾರ್ಥ ಆಯ್ತು" ಅಂದಾಗ ನನ್ನ ಎದೆಗೆ ಸಿಡಿಲು,ಗುಡುಗು ಎರಡು ಒಟ್ಟಿಗೆ ಹೋಡಿತು. ಮದರಂಗಿ ಹಾಕಿದ ಕಾಲು ನೋಡಿಯೂ ನನಗೆ ಅರ್ಥ ಆಗಿಲ್ಲ.

          ಮಾರನೇ ದಿನಾ ಎದ್ದವನೇ,ಊರಲ್ಲಿ ಏನೋ ಕೆಲಸ ಬಂದಿದೆ ಅಂತಾ ಅಜ್ಜಿಗೆ ಹೇಳಿ ಹೊರಟು ಬಿಟ್ಟೇ. ದಾರಿಯಲ್ಲಿ ಹೋಗಬೇಕಾದ್ರೆ ಅವಳು ಮತ್ತು ಅವಳ ಮದುವೆ ಆಗೋ ಹುಡುಗ ಖುಷಿಯಿಂದ ಬೈಕನಲ್ಲಿ ಹೋಗ್ತಾ ಇರೋದು ನೋಡ್ದೆ. ಸಾಕು, ಪ್ರೀತ್ಸೋ ಹೃದಯಕ್ಕೆ ತಾನು ಪ್ರೀತಿ ಮಾಡೋ ಹೃದಯ ಖುಷಿಯಿಂದ ಇದ್ರೆ ಅಷ್ಟೇ ಸಾಕಲ್ವಾ...........

-ಬರ್ವೆ


Comments

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ

ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)