ಪರೀಕ್ಷೆ ಅನ್ನೋ ಭೂತಕ್ಕೆ ಅವರವರ ಮಂತ್ರವಾದ...!!!
ಒಂದು ಶಾಲಾ ಆವರಣದ ಗಣಪತಿ ದೇವಸ್ಥಾನ. ಅವತ್ತು ಬೆಳ್ಳಂಬೆಳ್ಳಗೆ ಹುಡುಗಿಯರನ್ನು ನೋಡಲಿಕ್ಕೆ ದೇವಸ್ಥಾನಕ್ಕೆ ಬರುವವರು ಸಹ ದೇವರನ್ನು ನೋಡಲಿಕ್ಕೆ ಬಂದಿದ್ದರು. ಯಾಕೆಂದರೆ ಆ ದಿನದಿಂದ ಪರೀಕ್ಷೆ ಆರಂಭವಾಗುವುದಿತ್ತು. ಎಲ್ಲರೂ ಬೇಡಿಕೊಂಡು ಹೋದ ಮೇಲೆ ಗಣಪತಿ ಮತ್ತು ಮೂಷಿಕನ ನಡುವೆ ಒಂದು ಸಣ್ಣ ಸಂವಾದ.
ಮೂಷಿಕ: ಅಯ್ಯಾ ಗಣರಾಯ.........ಎಲ್ಲರೂ ನಾನಾ ಬೇಡಿಕೆಗಳನ್ನು ನಿನ್ನ ಮುಂದಿಟ್ಟರು. ಕೆಲವರು ಉತ್ತೀರ್ಣನಾದರೆ ಸಾಕು ಅಂದರೆ ಇನ್ನೂ ಕೆಲವರು ನೂರಕ್ಕೆ ನೂರು ಬೇಕೆಂದು ಕೇಳಿಕೊಂಡರು ಇವರೆಲ್ಲರ ಬೇಡಿಕೆಗಳನ್ನು ಹೇಗೆ ನೆರವೇರಿಸುತ್ತಿಯ.
ಗಣಪತಿ: ಇವರೆಲ್ಲರ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಇರುವುದು ಒಂದೇ ಮಾರ್ಗ ಅದುವೇ ಪ್ರಶ್ನೆಪತ್ರಿಕೆಯನ್ನು ಸುಲಭವಾಗಿ ನೀಡುವುದು.
ಮೂಷಿಕ: ಪ್ರಶ್ನೆ ಪತ್ರಿಕೆಯನ್ನು ಸುಲಭವಾಗಿ ನೀಡಿದರೂ,ಕೆಲವರು ಅನುತ್ತೀರ್ಣರಾಗಲು ಕಾರಣವೇನು.
ಗಣಪತಿ: ಪ್ರಶ್ನೆ ಪತ್ರಿಕೆಗಳು ಎಲ್ಲರಿಗೂ ಸಮಾನವಾಗಿದ್ದರೂ ಅಂಕಗಳು ಅವರವರ ವಿಷಯ ಜ್ಞಾನ,ಅರ್ಥೈಸುವಿಕೆ,ಪರಿಶ್ರಮದ ಮೇಲೆ ನಿರ್ಧರಿತವಾಗಿರುತ್ತವೆ. ಒಳ್ಳೆಯ ರೀತಿಯಲ್ಲಿ ಪೂರ್ವ ತಯಾರಿ ಮಾಡಿದವನು ಒಳ್ಳೆಯ ಅಂಕಗಳನ್ನು ಪಡೆಯುತ್ತಾನೆ. ಏನನ್ನೂ ಮಾಡದವನಿಗೆ ಪ್ರಶ್ನೆ ಪತ್ರಿಕೆ ಸುಲಭ ಬಂದಿರುವುದೇ ತಿಳಿಯುವುದಿಲ್ಲ. ಜ್ಞಾನ ಸಂಪಾದನೆಗೆ ಮೆದುಳನ್ನು ನಾನು ನೀಡಿರುವಾಗ ಅದನ್ನು ಉಪಯೋಗಿಸದೇ ಕೇವಲ ನನ್ನ ಪಾದವನ್ನು ಹಿಡಿದುಕೊಂಡವನಿಗೆ ನಾನೇನು ಮಾಡಲು ಸಾಧ್ಯವಿಲ್ಲ.
ಅಷ್ಟರಲ್ಲಿ ಅರ್ಚಕರು ಬರುತ್ತಾರೆ ಇಬ್ಬರೂ ಸುಮ್ಮನಾಗುತ್ತಾರೆ.
ಈ ಕಥೆಯಿಂದ ತಿಳಿದು ಬರುವುದೇನೆಂದರೆ, ನಾವು ಏನೂ ಮಾಡದೇ ದೇವರು ಏನನ್ನೂ ಕೊಡಲಾರ. ನಮ್ಮ ಪ್ರಯತ್ನ 98% ಇದ್ದರೇ,ಇನ್ನು 2% ದೇವರಿಗೆ ಬಿಟ್ಟದ್ದು. ಪರೀಕ್ಷೆ ಸಮಯ ಅಂದ್ರೆ ಪ್ರತಿಯೊಬ್ಬರಲ್ಲೂ ಏನೋ ಒಂದು ಆತಂಕ. ಈ ಸಮಯದಲ್ಲಿ ಹುಟ್ಟುವ ನಂಬಿಕೆಗಳು ಅನೇಕ. ಎಲ್ಲಿ ಇವುಗಳನ್ನು ಪಾಲಿಸದಿದ್ದರೆ ಫೇಲಾಗುತ್ತೇನೋ ಅನ್ನೋ ಭಯದಿಂದ ಅವುಗಳನ್ನು ಹೆಚ್ಚಿನವರು ಪಾಲಿಸುತ್ತಾರೆ. ಇಂತಹ ಆಚರಣೆಗಳು ಕೇಳಲು ಹಾಸ್ಯಾಸ್ಪದವಾಗಿದ್ದರೂ. ಹೆಚ್ಚಿನವರು ಅದನ್ನು ರೂಢಿಸಿಕೊಂಡಿದ್ದಾರೆ. ನಾ ಕಂಡ ಅನೇಕ ಆಚರಣೆಗಳಲ್ಲಿ ಕೆಲವನ್ನು ನೋಡೋಣ ಬನ್ನಿ.
ಕೆಲವರು ಪರೀಕ್ಷೆ ಆರಂಭವಾದಾಗಿನಿಂದ ಅದು ಮುಗಿಯುವವರೆಗೂ ತಾವು ಧರಿಸುವ ಉಡುಪುಗಳನ್ನು(ಒಳ ಉಡುಪು ಸಹಿತ) ತೊಳೆಯುವುದಿಲ್ಲಾ ಹಾಗೂ ಅದನ್ನೇ ಧರಿಸುತ್ತಾರೆ ಯಾಕೆಂದರೆ ಅದು ಅವರಿಗೆ ಲಕ್ಕಿ ಡ್ರೆಸ್. ಇನ್ನೂ ಕೆಲವರಿಗೆ ಸ್ನಾನ ಮಾಡಿ ಹೊದರೆ ಪರೀಕ್ಷೆ ಚೆನ್ನಾಗಾದರೆ,ಕೆಲವರಿಗೆ ಸ್ನಾನ ಮಾಡದೇ ಹೊದರೆ ಪರೀಕ್ಷೆ ಚೆನ್ನಾಗಾಗುತ್ತೆ. ಕೆಲವರು ಎಲ್ಲಾ ಪರೀಕ್ಷೆಗಳನ್ನು ಒಂದೇ ಪೆನ್ನಿನಲ್ಲಿ ಬರೆಯುತ್ತಾರೆ ಅದು ಅವರ ಲಕ್ಕಿ ಪೆನ್, ಆದರೆ ರಿಫಿಲ್ ಹೊಸತಾಗಿರುವುದು ಅವರ ಗಮನಕ್ಕೆ ಬರುವುದಿಲ್ಲಾ. ಕೆಲವರಿಗೆ ನಿರ್ಧಿಷ್ಟ ಹುಡುಗ/ಹುಡುಗಿ ಲಕ್ಕಿ ಪರಸನ್ ಆಗಿದ್ದರೆ ಇನ್ನೂ ಕೆಲವರಿಗೆ ನಿರ್ಧಿಷ್ಟ ಹುಡುಗ/ಹುಡುಗಿ ಅನ್‍ಲಕ್ಕಿ ಆಗಿರುತ್ತಾರೆ. ಪರೀಕ್ಷೆಗೆ ಹೋಗುವ ಮುನ್ನ ಅಂತಹವರ ಮುಖವನ್ನು ನೋಡಿಕೊಂಡು/ನೋಡದೇ ಹೋಗುವುದನ್ನು ರೂಢಿಸಿಕೊಂಡಿರುತ್ತಾರೆ. ತಮಗೆ ನೆನಪಿನಲ್ಲಿ ಉಳಿಯದಿರುವಷ್ಟು ಹರಕೆಗಳನ್ನು ಹೊತ್ತುಕೊಳ್ಳುವವರು ಇದ್ದಾರೆ. ಪರೀಕ್ಷೆ ನಡೆಸುವ ಅಧ್ಯಾಪಕರನ್ನು ಲಕ್ಕಿ/ಅನ್‍ಲಕ್ಕಿ ಮಾಡಿಕೊಂಡವರು ಇದ್ದಾರೆ. ಪರೀಕ್ಷೆ ಬರೆಯುವ ಜಾಗದಲ್ಲಿ ಲೆಕ್ಕಾಚಾರ ಮಾಡುವವರಿದ್ದಾರೆ. ಹಾಲ್ ಟಿಕೆಟ್ ನಂಬರ್ ಹಾಗೂ ಪರೀಕ್ಷೆ ದಿನಾಂಕವನ್ನು ಕೂಡಿಸಿ ಲೆಕ್ಕಾಚಾರ ಹಾಕುವವರು ಇದ್ದಾರೆ. ಹೀಗೆ ಅವರವರ ಮಂತ್ರವನ್ನು ಪಠಿಸಿ ಪರೀಕ್ಷೆ ಅನ್ನೋ ಭೂತಕ್ಕೆ ಪರಿಹಾರ ಕಂಡುಕೊಳ್ಳುತ್ತಾರೆ.
ಯಾವತ್ತೋ ಒಂದು ಸಂಧರ್ಭದಲ್ಲಿ ನಡೆದ ಕಾಕತಾಳೀಯ ಘಟನೆಯನ್ನು ನಂಬಿಕೆಯನ್ನಾಗಿಸಿ. ಅದನ್ನೇ ಆಚರಿಸಿಕೊಂಡು ಬರುವ ಬದಲು. ಪರೀಕ್ಷೆಯ ಸಮಯದಲ್ಲಿ ಚೆನ್ನಾಗಿ ಪೂರ್ವ ತಯಾರಿಯನ್ನು ಮಾಡಿ. ಊಟ,ನಿದ್ದೆಯನ್ನು ಚೆನ್ನಾಗಿ ಮಾಡಿ. ಓದಿದ್ದನ್ನು ಪುನರ್ ಮನನ ಮಾಡಿಕೊಂಡು ಪರೀಕ್ಷೆಯನ್ನು ಬರೆದರೆ ಯಾವ ದೇವರು ಬಂದರೂ ನಿಮ್ಮನು ಅನುತ್ತೀರ್ಣ ಮಾಡಲು ಸಾಧ್ಯವಿಲ್ಲ.........
-ಬರ್ವೆ
Comments
Post a Comment