ಮುಸ್ಸಂಜೆಯಲ್ಲಿ ಮೊಹಬ್ಬತ್
ಪ್ರೀತಿ ಬೇಕಾದಾಗ ಬರೋದಿಲ್ಲಾ, ಬೇಡ ಅಂದಾಗ ಹೊಗೋದಿಲ್ಲಾ. ಅದು ಒಂತರಾ ಮಳೆ ತರಹ, ಆ ಮಳೆಯಲ್ಲಿ ನೆನದಷ್ಟು ಸುಖ ಜಾಸ್ತಿ. ದಿನಾ ಸಂಜೆ ವಾಕಿಂಗ್ ಹೋಗಿ,ಬರುವಾಗ ಹಾಲು ತರೋದು ನನ್ನ ನಿತ್ಯದ ದಿನಚರಿಗಳಲ್ಲಿ ಒಂದು. ತಂಪಾದ ಗಾಳಿ, ಮುಳುಗೋ ಸೂರ್ಯನ ಮಂದ ಬೆಳಕು, ಸಾಲಾಗಿ ಹಾರುತ್ತಾ ಗೂಡು ಸೇರೋ ಹಕ್ಕಿಗಳು ಇವುಗಳನ್ನು ಸವಿಯುತ್ತಾ. ಫ್ರೇಂಡ್ಸ್ ಯಾರಾದ್ರೂ ಸಿಕ್ಕಿದ್ರೆ ಒಂದೆರಡು ಮಾತಾಡಿಕೊಂಡು ಮನೆ ಸೇರಿದ್ರೆ. ಏನೋ ಒಂದು ರಿಫ್ರೇಶ್ ಆದ ಅನುಭವ.
ಹೀಗೆ ನಡಿತಾ ಇರಬೇಕಾದ್ರೆ ಒಂದು ದಿನಾ ಒಂದು ವಿಸ್ಮಯ ನಡಿತು. ಸುಮ್ಮನೆ ಟೈಮ್‍ಪಾಸ್‍ಗಾಗಿ ಮಾಡೋ ಲವ್‍ನಲ್ಲಿ ಆಸಕ್ತಿ ಇಲ್ಲದ ನನಗೆ. ನನ್ನ ಲವ್‍ಸ್ಟೋರಿ ಇದೇ ತರಹ ಇರಬೇಕು. ನನ್ನ ಹುಡುಗಿ ಹೀಗೆ ಇರಬೇಕು ಅನೋ ಕಲ್ಪನೆ ಇತ್ತು. ಹೀಗೆ ವಾಕಿಂಗ್ ಹೋಗ್ತಾ ಇರಬೇಕಾದ್ರೆ ಒಂದು ಮನೆ ಮಹಡಿ ಮೇಲೆ ಒಂದು ಹುಡುಗಿಯನ್ನು ನೋಡದೆ ನನ್ನ ಕಲ್ಪನೆಯಲ್ಲಿ ಹುಡುಗಿ ಹೇಗಿರಬೇಕಂತಾ ಇತೋ ಅದೇ ತರಹ ಅವಳಿದ್ಲು. ಅವಳು ಅದೇನ್ನನೋ ಓದುತ್ತಾ ಆ ಕಡೆಯಿಂದ ಈ ಕಡೆ ಓಡಾಡ್ತ ಇದ್ಲು. ನನ್ನ ಕಡೆ ಕುಡಿನೋಟವನ್ನು ಬೀರಿ,ಮುಂಗುರುಳನ್ನು ಸರಿಸಿದ್ಲು,ಅಷ್ಟು ಸಾಕಾಗಿತ್ತು, ಹಾರ್ಟ ಹೊಂಡ ತೋಡಿ ಕಾಯ್ತಾ ಇತ್ತು, ಅವಳು ಬಂದು ದೂಕಿದ್ಲು ಅಷ್ಟೇ. ಅವತ್ತು ರಾತ್ರಿ ಮಲಗಿದಾಗ ನಿದ್ದೇ ಬರೋತನಕ ಅವಳದ್ದೇ ಧ್ಯಾನ. "ಅಲ್ಲಾ ದಿನಾ ಅದೇ ದಾರಿಯಾಗಿ ಹೋಗ್ತಿದ್ದೆ ಎಲ್ಲಿದ್ಲು ಇಷ್ಟು ದಿನಾ ಆ ಚೆಲುವೆ ' ಅನ್ನೋ ಯೋಚನೆ ಹಾಗೇ ನಿದ್ದೇ ಬಂದು ಬೆಳಗಾಯ್ತು. "ಅಬ್ಬಾ ನಿದ್ದೇ ಬರದೇ ಇರುವಷ್ಟು, ಆಳಕ್ಕೆ ಬೀಳಲಿಲ್ಲಾ ". ಅಂತಾ ಸ್ವಲ್ಪ ಸಮಾಧಾನ. ಅದಾದ ಮೇಲೆ ದಿನಾ ಅವಳ ಮನೆಕಡೆ ಕರೆಕ್ಟ ಟೈಮ್ಗೆ ಹಾಜರಿರ್ತಾ ಇದ್ದೇ.
ಅವಳು ದಿನಾ ಅಲ್ಲೇ ಓದುತ್ತಾ ಇರತ್ತಿದ್ಲು. ಅವಳನ್ನೇ ನೋಡುತ್ತಾ ಇರೋದು, ಅವಳು ನನ್ನ ಕಡೆ ನೋಡಿದಾಗ ಬೇರೆ ಕಡೆ ನೋಡೊದು ನಡಿತಾನೇ ಇತ್ತು. ಹೇಗಾದ್ರೂ ಮಾಡಿ ಅವಳನ್ನು ಮಾತನಾಡಿಸಬೇಕು ಅಂತಾ ಕಾಯ್ತಾ ಇದ್ದೇ. ಒಂದು ದಿನಾ ಆ ದೇವರಿಗೆ ನನ್ನ ಗೋಳು ಅರ್ಥ ಆಯ್ತಿರಬೇಕು ಅದಕ್ಕೊಂದು ದಾರಿ ತೋರಿಸಿಯೇ ಬಿಟ್ಟ. ನಾನು ಶೆಟ್ರ ಅಂಗಡಿಯಲ್ಲಿ ಹಾಲು ತಕ್ಕೊಳ್ಳುವಾಗ ಅವಳೂ ಅಲ್ಲಿಗೆ ಬಂದ್ಲು. ನನ್ನ ಮುಖ ನೋಡಿದ್ಲು ಏನು ಎಕ್ಸಪ್ರೇಶನ್ ಕೊಡಬೇಕಂತಾ ನನಗೂ ಗೊತ್ತಾಗಲಿಲ್ಲ, ಅವಳಿಗೂ ಗೊತ್ತಾಗಲಿಲ್ಲ ಅನಿಸುತ್ತೆ. ಶೆಟ್ರ ಅಂಗಡಿಯಲ್ಲಿ ಸಾಮಾನು ತಕ್ಕೊಂಡು ತಿರುಗಿ ನೋಡದೇ ಹೋಗೇ ಬಿಟ್ಲು. ನಾನು ಒಂದು ಒಳ್ಳೇ ಚಾನ್ಸು ಮಿಸ್ ಆಯ್ತಲಾ ಅನ್ಕೋಬೇಕಾದ್ರೆ, ಶೆಟ್ರು ಅವಳು ಬೆಂಕಿಪಟ್ಟಣ ತಕ್ಕೊಂಡು ಅಲ್ಲೇ ಬಿಟ್ಟೋದ ವಿಷಯ ಹೇಳಿದಾಗ ನನಗೆ ಮನಸ್ಸಲ್ಲಿ ಲಡ್ಡು ಅಲ್ಲ ಒಂದು ದೊಡ್ಡ ಕೋನ್ ಐಸ್ಕ್ರೀಮ್ ಬಿದ್ದಿತ್ತು. "ನೀನು ಅದೇ ದಾರಿಯಾಗಿ ಹೋಗ್ತಿಯಲ್ಲ ಅವಳಿಗೆ ಕೊಟ್ಟು ಹೋಗು" ಅಂದಾಗ ಕೋನ್ ಐಸ್ಕ್ರೀಮ್ ಬಾಯಲ್ಲಿಟ್ಟಾಂಗಾಯ್ತು. ಅವಳ ಹಿಂದೇ ಹೋದೆ. ಹೇಗೆ ಮಾತನಾಡಿಸೋದು ಅಂತಾನೇ ಗೋತ್ತಾಗಲಿಲ್ಲ. "ಹಲ್ಲೋ ಎಕ್ಸಕ್ಯೂಸ್ ಮಿ" ಅಂದೆ. ಅಲ್ಲೇ ನಿಂತೋಳು ಹಿಂದೆ ತಿರುಗಿ "ಏನ್ರೀ ಅಂದ್ಲು", "ನಿಮ್ಮ ಬೆಂಕಿಪಟ್ಟಣ ಶೆಟ್ರ ಅಂಗಡಿಯಲ್ಲಿ ಬಿಟ್ಟು ಬಂದಿದ್ರಲ್ಲಾ ತಗೊಳ್ಳಿ ಅಂದೆ". ಅದಕ್ಕವಳು "ಅಯ್ಯೋ ಬರೋ ಅವಸರದಾಗ ಮರತೆ ಹೋತು ಥ್ಯಾಂಕ್ಸ್ ರೀ ಅಂದಳು". ನಾನು "ಮುಂದ" ಅಂದೇ. ಅವಳಿಗೆ ಅರ್ಥ ಆಗಿರಬೇಕು ಇವ ಬೆಂಕಿಪಟ್ಟಣ ಕೊಡೋಕೆ ಮಾತ್ರ ಬಂದವ ಅಲ್ಲಾ. ಬೆಂಕಿ ಕಡ್ಡಿ ಜೋಡಿಸಿ ಗೆರೆ ಎಳೆಯವ ಅಂತಾ. ಸುಮ್ಮನೆ ಮುಗ್ಳನಕ್ಕು ಅವಳ ಪರಿಚಯ ಮಾಡಿಕೊಂಡ್ಳು. ನಾನು ನನ್ನ ಪರಿಚಯ ಮಾಡಿಕೊಂಡೆ. ದೂರದಲ್ಲಿ ಇದ್ದ ಅವಳ ಮನೆ ಎಷ್ಟು ಬೇಗ ಬಂತು ಅನ್ನಿಸಿಬಿಡ್ತು. ಮಾತಾಡ್ತಾ, ಮಾತಾಡ್ತಾ ಮಾತಿನ ಮಧ್ಯೆ ಬಾಯ್ ಹೇಳಿ ಮನೆ ಸೇರಿಕೊಂಡ್ಲು. ಅವತ್ತು ರಾತ್ರಿ ಸ್ವಲ್ಪ ಜಾಸ್ತಿನೇ ನಿದ್ರೆ ಬರಲಿಲ್ಲ.
ಹಿಂದಿನ ದಿನ ನಡೆದ ಘಟನೆಯನ್ನು ಮೆಲಕು ಹಾಕುತ್ತಾ ಅದೇ ದಾರಿಯಲ್ಲಿ ಹೋಗ್ತಾ ಇದ್ದೇ. ಆದ್ರೆ ಅವಳು ಮಹಡಿ ಮೇಲಿರಲಿಲ್ಲ. "ಒಳಗಿರಬಹುದು ಬರುವಾಗ ನೋಡಿದ್ರಾಯ್ತು" ಅಂತ ಅಂಗಡಿಗೆ ಹೋದೆ. ಅಂಗಡಿಯಲ್ಲಿ ಸುಮ್ಮನೆ ಹೀಗೆ ವಿಚಾರಿಸಿದಾಗ ಒಂದು ಆಘಾತ ಕಾದಿತ್ತು. ಅವಳು ದೂರದ ಹುಬ್ಬಳ್ಳಿಯವಳು. ಯಾವುದೋ ಪ್ರವೇಶ ಪರೀಕ್ಷೇ ಬರೆಯುವುದಕ್ಕಾಗಿ ಬೆಂಗಳೂರಿಗೆ ಅವಳ ಸಂಬಂಧಿಕರ ಮನೆಗೆ ಬಂದಿದ್ಲು, ಎಂಬ ವಿಚಾರ ಗೊತ್ತಾಯಿತು. ಈ ವಿಚಾರ ಯಾಕೆ ನನಗೆ ನಿನ್ನೆ ಹೇಳಲಿಲ್ಲ ಅಂತ ಯೋಚನೆಯಾಯ್ತು.
ಈವಾಗಲೂ ಆ ದಾರಿಯಲ್ಲಿ ವಾಕಿಂಗ್ ಹೋಗ್ತಾ ಇರ್ತೇನೆ, ಬೇರೆ ಯಾವುದಾದರೂ ಹುಡುಗಿ ಬೆಂಕಿಪಟ್ಟಣ ಬಿಟ್ಟು ಹೋಗ್ತಾಳಾ ನೋಡಲಿಕ್ಕೆ. ನೋಡಿದವರೆಲ್ಲ ಇಷ್ಟ ಆಗುದಿಲ್ಲ, ಇಷ್ಟ ಆಗೋರೆಲ್ಲ ಮನಸ್ಸಿಗೆ ಹತ್ತಿರ ಆಗೋದಿಲ್ಲ, ಮನಸ್ಸಿಗೆ ಹತ್ತಿರ ಆದೋರನ್ನೆಲ್ಲ ಪ್ರೀತಿ ಮಾಡಬೇಕು ಅನ್ನಿಸ್ಸುವುದಿಲ್ಲ. ಕೆಲವರು ಮನಸ್ಸಿಗೆ ಹತ್ತಿರ ಆಗಿ ಪ್ರೀತಿ ಮಾಡಬೇಕು ಅನ್ನೋವಾಗ ದೂರ ಆಗ್ತಾರೆ......
-ಬರ್ವೆ
Comments
Post a Comment