ಕನಸಿನೂರಿನ ರಾಜಕುಮಾರಿ ಕಣ್ಣೆದುರು ಬಂದ ಸಮಯ...
ಸಾಫ್ಟವೇರ್ ಅನ್ನೋ ಜಗತ್ತು ಆರಂಭವಾದ ಮೇಲೆ, ವಾರಾಂತ್ಯ ಅನ್ನೋ ಪದ ತುಂಬಾ ಮಹತ್ವ ಪಡೆದುಕೊಂಡಿತು. ಮದುವೆ,ನಿಶ್ಚಿತಾರ್ಥ,ನಾಮಕರಣದಂತಹ ಸಮಾರಂಭಗಳಿಂದ ದೂರವಿದ್ದಂತಹ ಯುವಜನತೆ, ಸಾಫ್ಟವೇರ್ ವೃತ್ತಿಯ ಹಿಂಬಾಲಕರಾದ ಮೇಲೆ ಹೆಚ್ಚೆಚ್ಚು ಇಂತಹ ಸಮಾರಂಭಗಳಲ್ಲಿ ಕಾಣಸಿಗುತ್ತಿದ್ದಾರೆ. ಅವರಿಗೆ ಕೆಲಸದ ಜಂಜಡಗಳಿಂದ ಇಂತಹ ಕಾರ್ಯಕ್ರಮಗಳು ವಿರಾಮ ನೀಡುತ್ತಿವೆ.
ನಾನೂ ಒಬ್ಬ ಸಾಫ್ಟವೇರ್ ಇಂಜಿನಿಯರ್. ಪ್ರಥಮ್ ಅಂತಾ ನನ್ನ ಅಪ್ಪ ಅಮ್ಮ ಹೆಸರಿಟ್ಟಿದ್ದಾರೆ. ಆಕಸ್ಮಿಕಗಳು,ನಾವು ಎಣಿಸದೇ ಇರುವ ಘಟನೆಗಳು ನನ್ನ ಜೀವನದಲ್ಲೂ ನಡೆಯುತ್ತೆ ಅಂತಾ ನಾನು ಯೋಚಿಸಲೇ ಇರಲಿಲ್ಲ. ದೇವನೆಂದರೆ ಅವನೇ, ನಾವು ಐದು ರೀತಿಯಲ್ಲಿ ಚಿಂತಿಸಿದರೆ ಆರನೇ ರೀತಿಯಲ್ಲಿ ಅವನು ನಮ್ಮನು ಕರೆದುಕೊಂಡು ಹೋಗುತ್ತಾನೆ. ನನ್ನ ಅಮ್ಮನ ಮನೆಯಲ್ಲಿ ವಾರಾಂತ್ಯ ಸತ್ಯನಾರಾಯಣ ಕಥೆ ಪೂಜೆ ಇಟ್ಟುಕೊಂಡಿದ್ದರು. ನನಗೂ ಹೊಸ ವಾತಾವರಣ ಖುಷಿಕೊಡುತ್ತೆ ಅಂತಾ ಶುಕ್ರವಾರ ರಾತ್ರಿ ಹೊರಟು ನಿಂತೆ. ನನ್ನ ಅಮ್ಮನ ಮನೆ ಉಡುಪಿ ಜಿಲ್ಲೆಯ ಮಾಬುಕಳ ಅನ್ನೋ ಸಣ್ಣ ಗ್ರಾಮ. ಈ ಊರಿನ ಹೆಸರು ಕೇಳಿದ ತಕ್ಷಣ ನನ್ನ ಜೀವನದಲ್ಲಿ ನಡೆದ ಒಂದು ಘಟನೆ ನೆನಪಾಯಿತು-- ಅದು ನನ್ನ ಮನೆಯಲ್ಲಿ ನನ್ನ ಮದುವೆ ಪ್ರಸ್ತಾಪ ನಡೆಯುತ್ತಿದ್ದ ಸಮಯ. ನಾನು ಸಾಫ್ಟವೇರ್ ಇಂಜಿನಿಯರ್ ಆದ್ರೂ ಹುಡುಗಿ ತುಂಬಾ ಓದಿರಬೇಕು,ಕೆಲಸಕ್ಕೆ ಹೋಗಬೇಕು ಪಟ್ಟಣದವಳೇ ಆಗಿರಬೇಕು ಅನ್ನೋ ನಿಭಂಧನೆಗಳೇನು ಇರಲಿಲ್ಲ. ತುಂಬಾ ಓದದೇ ಇದ್ರೂ ಜನರ ಜೊತೆ ಬೆರೆಯೋದು ಹೇಗೆ ಅಂತಾ ಗೊತ್ತಿದ್ರೆ ಸಾಕು. ಹಳ್ಳಿಯವಳಾಗಿದ್ರೂ ಸಾಮಾನ್ಯ ಜ್ಞಾನ ಇದ್ರೆ ಸಾಕು. ಕೆಲಸಕ್ಕೆ ಹೋಗದಿದ್ರೂ ಪರವಾಗಿಲ್ಲ ಮನೆಕೆಲಸ ಗೊತ್ತಿದ್ರೆ ಸಾಕು. ವಿಶ್ವ ಸುಂದರಿ ಅಲ್ಲದಿದ್ದರೂ ಲಕ್ಷಣವಾಗಿದ್ರೆ ಸಾಕು. ಕರ್ಣನ ತಂಗಿ ಅಲ್ಲದಿದ್ರೂ ಸಹಾಯ ಮಾಡೋ ಮನಸ್ಸಿದ್ರೆ ಸಾಕು. ನನ್ನ ತಂದೆ ತಾಯಿಯನ್ನು ಸುಖವಾಗಿ ನೋಡಿಕೊಂಡು ಹೋಗುವ ಸಿಂಪಲ್ ಹುಡುಗಿಯ ಹುಡುಕಾಟದಲ್ಲಿ ನಾನಿದ್ದೆ. ನನ್ನ ಮನೆಯವರ ಕಡೆಯಿಂದ ಕೆಲವು ಹುಡುಗಿಯರ ಪ್ರಸ್ತಾಪಗಳು ಬರುತ್ತಾ ಇದ್ದವು.
ಹೀಗಿರಬೇಕಾದ್ರೆ ಒಂದು ದಿನಾ ನನ್ನ ಅಮ್ಮನ ಮನೆ ಕಡೆಯಿಂದ ಒಂದು ಮದುವೆ ಪ್ರಸ್ತಾಪ ಬಂತು. ಹುಡುಗಿ ಮನೆ ಇದ್ದಿದ್ದು ಇದೇ ಮಾಬುಕಳದಲ್ಲಿ. "ನೀನು ಹೋಗಿ ನೋಡಿಕೊಂಡು ಬಾ, ಹೇಗೂ ಶನಿವಾರ,ಭಾನುವಾರ ರಜೆ ಅಲ್ವಾ,ನೀನು ಒಪ್ಪಿದರೇ ನಮಗೂ ಒಪ್ಪಿಗೆ ಅಂತಾ" ನನ್ನ ಅಮ್ಮನ ಕಡೆಯಿಂದ ಹಸಿರು ನಿಶಾನೆ ಕೂಡ ಸಿಕ್ಕಿತ್ತು. ಹಾಗಾದ್ರೆ ತಡ ಮಾಡೋದು ಏಕೆ ಅಂತಾ, ಅವಳ ಬಗ್ಗೆ ಅಮ್ಮ ಹೇಳಿದ ಅಲ್ಪ ಸ್ವಲ್ಪ ವಿಷಯಗಳಿಂದ ನನ್ನ ಕಲ್ಪನಾ ಲೋಕದಲ್ಲಿ ಅವಳನ್ನು ಚಿತ್ರಿಸಿಕೊಂಡು, ಬೆಂಗಳೂರಿನಿಂದ ಉಡುಪಿಯ ಕಡೆಗೆ ಶುಕ್ರವಾರ ಸಂಜೆ ಹೋರಟು ನಿಂತೆ.
ಹುಡುಗಿ ವೃತ್ತಿಯಲ್ಲಿ ಪ್ರಾಧ್ಯಾಪಕಿ, ಓದಿರೋದು ಎಮ್.ಕಾಮ್ ಹೆಸರು ಅರ್ಚನಾ ಅಂತಾ. ನನ್ನ ಅಮ್ಮ ಪೋಟೋ ನೋಡಿ ಎಲ್ಲಾ ಅಮ್ಮಂದಿರು ಹೇಳೋ ತರಹ "ಹುಡುಗಿ ಮಹಾಲಕ್ಷ್ಮೀ ತರಹ ಇದ್ದಾಳೇ. ನನ್ನ ಸೊಸೆ ಆಗೋದಕ್ಕೆ ಹೇಳಿ ಮಾಡಿಸಿದವಳು". ಅಂದಾಗ್ಲೇ ನಿರ್ಧಾರ ಮಾಡ್ದೆ ಈ ಮಹಾಲಕ್ಷ್ಮೀಯನ್ನು ಪೋಟೋದಲ್ಲಿ ನೋಡೋದಕ್ಕಿಂತಾ ಎದುರಿನಿಂದ ದರ್ಶನ ಪಡೆಯೋದೆ ಒಳ್ಳೇದು ಅಂತಾ. ಈ ಸುಂದರಿಯ ನೆನಪಲ್ಲೇ ನಿದ್ರೆಗೆ ಜಾರಿದ ನಾನು ಬೆಳ್ಳಗ್ಗೆ ಕಂಡೆಕ್ಟರ್ ಮಾಬುಕಳ ಇಳಿದುಕೊಳ್ಳುವವರು ಯಾರ್ರೀ ಅಂದಾಗ್ಲೆ ಎಚ್ಚರವಾಗಿದ್ದು. ಮಾಬುಕಳ ಬಸ್ಟಾಪ್‍ನಲ್ಲಿ ಇಳಿದು ಅಲ್ಲಿಂದ ಸ್ವಲ್ಪ ದೂರ ಸೀತಾನದಿಯಲ್ಲಿ ದೋಣಿಯಲ್ಲಿ ಹೋದ್ರೆ ಸಿಗೋದೆ ನನ್ನ ಭಾವಿ ಮಾವನ ಮನೆ. ಸುತ್ತಲೂ ತೆಂಗಿನ ತೋಟ,ಮನೆ ಮುಂದೆ ಹರಿಯುವ ನದಿ,ಎರಡು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಇದ್ದರೂ, ವಿನಯ ಶೀಲರು, ಅಂತಸ್ತಿನ ಗರ್ವ ಒಂದು ಚೂರು ಇರಲಿಲ್ಲ. ಮನೆಗೆ ಕಾಲಿಟ್ಟ ಕೂಡಲೇ ಆದರ ಆತಿಥ್ಯಗಳು ಜೋರಾಗಿ ನಡೆಯಿತು. ಕರಾವಳಿ ಸ್ಪೆಷಲ್ ಕೊಟ್ಟೆ ಕಡಬು,ಪತ್ರೋಡಿ ಹೊಟ್ಟೆ ತಂಪು ಮಾಡಿದ್ರೂ, ಕಣ್ಣು ತಂಪು ಮಾಡೋ ದೇವಿ ದರ್ಶನ ಮಾತ್ರ ಆಗಿರಲಿಲ್ಲಾ. ಅವತ್ತೇನೋ ಅವಳ ಕಾಲೇಜಿನಲ್ಲಿ ಪರೀಕ್ಷೇ ಇದ್ದುದ್ದರಿಂದ ರಜೆ ಹಾಕಲಿಕ್ಕೆ ಆಗಲಿಲ್ಲವಂತೆ. ಬೆಳ್ಳಗ್ಗೆ ಬೇಗ ಕಾಲೇಜಿಗೆ ಹೊರಟು ಹೋಗಿದ್ಲು, "ಶನಿವಾರ ಒಪ್ಪತೇ ಮಧ್ಯಾಹ್ನದ ಗಟ್ಟಿಗೆ ಹೆಣ್ಣ ಮನಿಗ್ ಬತ್ತೆ" ಅಂತಾ ನನ್ನ ಮಾವ ಹೇಳಿದ ಮೇಲೆ ಸ್ವಲ್ಪ ಸಮಾದಾನ.
ಮಧ್ಯಾಹ್ನ ಊಟಕ್ಕೆ ಕೂತಿರಬೇಕಾದ್ರೆ, ಅಂಗಳದಲ್ಲಿ ಗಲ್ ಗಲ್ ಎಂಬ ಗೆಜ್ಜೆ ಶಬ್ದ ನನ್ನ ಎದೆ ಬಡಿತ ಜಾಸ್ತಿ ಮಾಡ್ತು. ಹೌದು ಬಂದಿದ್ದು ಅವಳೇ ನನ್ನ ಅಮ್ಮನ ಮಹಾಲಕ್ಮೀ, ನನ್ನ ಹೃದಯ ಸಿಂಹಾಸನವನ್ನು ಅಲಂಕರಿಸಬೇಕಿದ್ದ ಮಹಾರಾಣಿ. ಮೊದಲ ನೋಟದಲ್ಲೇ ನನ್ನ ಹೃದಯದ ಬ್ರೇಕ್ ಫೈಲ್ ಆಗಿ ಯರಾಬಿರ್ರೀ ಹೊಡೆದುಕೊಳ್ಳಲಿಕ್ಕೆ ಶುರುಮಾಡಿತು. ಸೀರೆಯಲ್ಲಿ ಬೇರೆ ಎದುರು ಬಂದಿದ್ಲು, ಬ್ರೇಕ್ ಫೈಲ್ ಜೊತೆ ಪಂಕ್ಚರ್ ಕೂಡ ಆಗಿ ಹೋಯ್ತು. ಅವಳ ತಂದೆ ಪರಿಚಯಿಸಿದಾಗ,ಅವಳ ಮುದ್ದಾದ ಹಲ್ಲುಗಳನ್ನು ತೋರಿಸಿ,ನಾಚಿಕೆಯಿಂದ ಅಡುಗೆ ಮನೆ ಕಡೆ ಹೋದ್ಲು. ಅವಳ ಅಮ್ಮನ ಒತ್ತಾಯಕ್ಕೆ ಪಾಯಸ ಬಡಿಸೋಕೆ ಬಂದಾಗ ಹತ್ತಿರದಿಂದ ಅವಳ ಮುಖ ನೋಡಿ ಪಾಯಸ ತಿಂದಿದ್ದೇ ನೆನಪು ಹೋಯ್ತು. ಊಟ ಆದ ಮೇಲೆ "ಹೆಣೆ ನಮ್ಮ ತೋಟ,ಗದ್ದೆ ಎಲ್ಲಾ ಸ್ವಲ್ಪ ತೋರಿಸಿಕೊಂಡು ಬಾ" ಅಂತಾ ನನ್ನ ಮಾವನ ಆಜ್ಞೆಯ ಬಳಿಕ,ನನ್ನ ಹುಡುಗಿ ಜೊತೆ ತೋಟದ ಕಡೆಗೆ ನನ್ನ ಪಯಣ ಸಾಗಿತು. ನಾನು ಸ್ವಲ್ಪ ವಾಚಾಳಿ ನಾನೇ ಮಾತು ಆರಂಭಿಸಿದೆ.ನನಗೊಂದು ಸಂಶಯ ಇತ್ತು,ಇಷ್ಟು ಚೆಂದ ಇರುವ ಹುಡುಗಿಗೆ ಬಾಯ್ ಫ್ರೇಂಡ್ ಇಲ್ಲದೇ ಇರುತ್ತಾನಾ ಅಂತಾ, ಕೇಳಿಯೇ ಬಿಟ್ಟೆ "ಯಾರನಾದ್ರೂ ಪ್ರೀತಿ ಮಾಡಿದ್ದಿರಾ" ಅಂತಾ. ಆದರೆ ಅವಳ ಉತ್ತರ ಮಾತ್ರ ಮಾವಿನ ಹಣ್ಣು ತಿಂದಷ್ಟೆ ರುಚಿ ಇತ್ತು ". ಇನ್ನು ಯಾರನ್ನು ಪ್ರೀತಿ ಮಾಡಿಲ್ಲಾ. ಮದುವೆ ಆದ ಮೇಲೆ ಗಂಡನನ್ನು ಪ್ರೀತಿಸ್ತಿನಿ" ಅನ್ನೋದಾಗಿತ್ತು. ನಂತರ ಅದೇ ಪ್ರಶ್ನೆಗೆ ಉತ್ತರ ಬರೆವ ಸರದಿ ನನ್ನದಾಗಿತ್ತು." ಕೆಲವರು ಇಷ್ಟ ಆಗಿದ್ದರು, ಆದ್ರೆ ಪ್ರೇಮ ನಿವೇದನೆ ಮಾತ್ರ ಮಾಡಲಿಲ್ಲಾ, ಮಾಡಲಿಕ್ಕೆ ಸಮಯ ಕೂಡ ಇರಲಿಲ್ಲ" ಅಂತಾ ಅಂದೆ.
ಹೀಗೇ ಅವಳ ಮನೆ ಬಗ್ಗೆ, ನನ್ನ ಮನೆ ಬಗ್ಗೆ ಮಾತುಕತೆ ನಡಿತು. ಅವಳ ಮೊದಲ ಉತ್ತರಕ್ಕೆ ನಾನು ಎರಡು ವಿಷಯ ನಿರ್ಧಾರ ಮಾಡಿದ್ದೆ. ಒಂದು ಮದುವೆ ಆಗೋದಾದ್ರೆ ಇವಳನ್ನೇ. ಇನ್ನೊಂದು ಇವಳು ಕೇಳೋ ಎಲ್ಲಾ ಪ್ರಶ್ನೆಗಳಿಗೆ ಸತ್ಯವಾಗಿ ಉತ್ತರ ಕೊಡಬೇಕು ಅಂತಾ. ಕೊನೆಯಲ್ಲಿ ಒಂದು ಪ್ರಶ್ನೆ ಕೇಳಿದ್ಲು, ಯಾವುದಾದರೂ ಅಭ್ಯಾಸ ಇದೆಯಾ ಅಂತಾ. ಅವಳು ಕಣ್ಣಲ್ಲಿ ಕಣ್ಣಿಟ್ಟು ಕೇಳುವಾಗ, ನನ್ನ ಮನಸ್ಸು ಸುಳ್ಳು ಹೇಳೋದಕ್ಕೆಒಪ್ಪಲಿಲ್ಲಾ. "ಹೌದು ದಿನಕ್ಕೆ ಒಂದು ಸಿಗರೇಟ್ ಸೇದುತ್ತೀನಿ,ತಿಂಗಳಿಗೆ ಒಂದು ಸಾರಿ ತೀರ್ಥ ಸೇವನೆ ಅಭ್ಯಾಸ ಉಂಟು" ಅಂತಾ ಹೇಳದೇ,"ಆದ್ರೆ ಮದುವೆ ಆದ ಮೇಲೆ ಇದನ್ನೆಲ್ಲಾ ಬಿಡುತ್ತೀನಿ" ಅನ್ನೋ ಸಮಜಾಯಿಷಿ ಅವಳಿಗೆ ಏಕೋ ಇಷ್ಟ ಆಗಲಿಲ್ಲಾ. ಸಾಕು ಮನೆಗೆ ಹೋಗೊಣ ಅಂತಾ ಕರೆದುಕೊಂಡು ಬಂದ್ಲು. ನಿಮ್ಮ ಮನೆಯವರ ಹತ್ರ ವಿಷಯ ತಿಳಿಸ್ತೀವಿ ಅಂತಾ ಅವರ ಅಪ್ಪ ಹೇಳಿದ್ರು. ರಾತ್ರಿ ಅವರ ಮನೆಯಲ್ಲೇ ಊಟ ಮಾಡಿ ಬೆಂಗಳೂರು ಬಸ್ಸು ಹತ್ತಿದೆ.ಒಂದು ವಾರ ಆದ ಮೇಲೆ ಉತ್ತರ ಬಂತು ಅವಳಿಗೆ ನಾನು ಇಷ್ಟ ಆಗಿರಲಿಲ್ಲಾ. ಆದ್ರೆ ಕಾರಣ ಮಾತ್ರ ಅವಳು ಯಾರಿಗೂ ಹೇಳಿರಲಿಲ್ಲಾ. ಅವತ್ತೇ ಗೊತ್ತಾಗಿದ್ದು ಹುಡುಗಿಯರ ಮುಂದೆ ಜಾಸ್ತಿ ಒಳ್ಳೆಯವನಾಗಬಾರದು ಅಂತಾ.
ಇದನ್ನು ಮೆಲಕು ಹಾಕುತ್ತಾ ನಿದ್ದೆ ಬಂದಿದ್ದೆ ಗೊತ್ತಾಗಲಿಲ್ಲಾ. ಮತ್ತೇ ಅದೇ "ಮಾಬುಕಳ,ಮಾಬುಕಳ" ಅನ್ನೋ ಕಂಡೆಕ್ಟರ ಧ್ವನಿ ಕೇಳಿ ಎಚ್ಚರ ಆಯಿತು. ಮತ್ತೇ ಅದೇ ಬಸ್ಟಾಂಡು,ಅದೇ ದೋಣಿ,ಆದರೆ ಮತ್ತೇ ಅದೇ ಮನೆಗೆ ಹೋಗ್ತಿನಿ ಅಂತಾ ಕನಸಲ್ಲೂ ಎಣಿಸಿರಲಿಲ್ಲಾ. ಆದರೆ ಹೋಗಿದ್ದು ಅಲ್ಲಿಗೆ.ಅವತ್ತು ಅಲ್ಲಿ ನಡೆದಿದ್ದು ಸತ್ಯನಾರಾಯಣಕಥೆ ಅಲ್ಲಾ.ನನ್ನ ಮದುವೆ ನಿಶ್ಚಿತ್ತಾರ್ಥ. ಹುಡುಗಿ ಬೇರೆ ಯಾರು ಅಲ್ಲಾ ಅವಳೇ, ನನ್ನ ಕನಸಿನ ರಾಣಿ. ಇದೆಲ್ಲಾ ಹೇಗಾಯ್ತು ಅಂತಾ ಯೋಚನೆ ಮಾಡುವುದರೊಳಗೆ ಬೆರಳಿಗೆ ಉಂಗುರ ಬಿದ್ದಿತ್ತು. ಜಾಸ್ತಿ ಯೋಚನೆ ಒಳ್ಳೆಯದಲ್ಲಾ ಅಂತಾ ಹಾರ ಹಾಕುವಾಗ ಅವಳೇ ಹೇಳಿದ್ಲು. ಆಮೇಲೆ ಗೊತ್ತಾಯ್ತು. ನಾನು ಬಂದು ಹೋದ ಮೇಲೆ ಅನೇಕ ಹುಡುಗರು ಅವಳನ್ನು ನೋಡಲಿಕ್ಕೆ ಬಂದಿದ್ದರಂತೆ, ಆದರೆ ಯಾರು ತಮ್ಮ ಬಗ್ಗೆ ಸತ್ಯವಾಗಿ ಎಲ್ಲವನ್ನು ಹೇಳಿಕೊಂಡ ಹಾಗೆ ಕಾಣಲಿಲ್ಲವಂತೆ. ಆ ಮೇಲೆ "ಹುಡುಗ ಏನೇ ಮಾಡಲಿ, ಎಲ್ಲವನ್ನು ನನ್ನ ಬಳಿ ಹೇಳಿಕೊಂಡ.ಇಂತಹವನನ್ನು ಮದುವೆ ಆದರೆ ನಿಜವಾಗಲೂ ಸುಖವಾಗಿ ಬಾಳ್ತಿನಿ" ಅಂತಾ ನಿರ್ಧಾರ ಮಾಡಿ. ನನ್ನ ಅಮ್ಮನ ಹತ್ತಿರ ನಡೆದ ವಿಷಯವನ್ನು ತಿಳಿಸಿ ಮದುವೆಗೆ ಒಪ್ಪಿಸಿದಳಂತೆ.
ಹೀಗೆ ನನ್ನ ಜೀವನದಲ್ಲಿ ಆಕಸ್ಮಿಕ ತಿರುವು ಸಿಕ್ಕಿತ್ತು. ನಾವು ಸತ್ಯವಾಗಿದ್ದರೆ ಏನು ಬೇಕಾದರೂ ಗೆಲ್ಲಬಹುದು ಅನ್ನೋದು ಒಂದು ಕಡೆ ಆದರೆ. ಪ್ರೀತಿ ಪಡೆಯುವುದಕ್ಕೊಸ್ಕರ ಪ್ರೀತಿಸುವವರಿಗೆ ಮೊಸ ಮಾಡಬಾರದು ಅನ್ನೋದು ಇನ್ನೊಂದು ಕಡೆ.
-ಬರ್ವೆ
Comments
Post a Comment