ಸಾಮಾಜಿಕ ಜೀವನದ ಪಾಸ್‍ವರ್ಡ ಮರೆತ ಯುವಜನತೆ...!!!
ತಂತ್ರಜ್ಞಾನದ ಅಭಿವೃದ್ಧಿ ಅನ್ನುವುದು ಒಂದು ನೋಟದಲ್ಲಿ ಒಳ್ಳೆಯದಾದರೆ. ಇನ್ನೊಂದು ನೋಟದಲ್ಲಿ ಮಾರಕ. ಕೆಲವು ವೇಗವಾಗಿ ಹಾಗೂ ದೊಡ್ಡದಾಗಿ ಬೆಳೆದಿರುವ ತಂತ್ರಜ್ಞಾನಗಳಲ್ಲಿ ಮೊಬೈಲ್ ತಂತ್ರಜ್ಞಾನ ಸಹ ಒಂದು. ಮೊಬೈಲ್ ಪೋನ್ ಪ್ರಪಂಚದಲ್ಲಿ ಅಂಡ್ರಾಯ್ಡ್ ಟಚ್‍ಸ್ಕ್ರೀನ್ ಮೊಬೈಲ್‍ಗಳ ಆಗಮನ ಇತ್ತಿಚೆಗೆ ಆಗಿದ್ದಾದರೂ, ಅದು ಚಾಚಿರುವ ನಾಲಗೆ ತುಂಬಾ ವಿಸ್ತಾರವಾದದ್ದು. ಪ್ರಾಥಮಿಕ ಶಾಲೆಗೆ ಹೊಗೋ ಮಕ್ಕಳಿಂದ ಹಿಡಿದು ಕೋಲು ಹಿಡಿದುಕೊಂಡು ನಡೆಯೋ ಮುದಕರು ತನಕ ಎಲ್ಲರನ್ನು ತಲೆಕೆಡಿಸಿರೋ ಪ್ರಸಿದ್ಧ ಸೊಷಿಯಲ್ ನೆಟವರ್ಕಿಂಗ್ ಸೈಟ್‍ಗಳಲ್ಲಿ ಫೇಸ್ಬುಕ್,ವಾಟ್ಸಆಫ್,ಸ್ಕೈಪ್,ಹೈಕ್
ಮುಂತಾದವುಗಳು ಪ್ರಸಿದ್ದವಾದವು. ಒಬ್ಬ ಮನುಷ್ಯ ಬೆಳಗ್ಗೆ ಏಳುವುದಕ್ಕಿಂತ ಮುಂಚೆ ಮತ್ತು ರಾತ್ರಿ ಮಲಗಿ ಆದ ಮೇಲೂ ಎಚ್ಚರದಿಂದ ಇರುತ್ತಾನೆ ಎಂದರೆ ಅವನು ಗ್ಯಾರೆಂಟಿ ಇವುಗಳಲ್ಲಿ ಯಾವುದಾದರೊಂದು ಸೈಟ್‍ಗಳ ಸದಸ್ಯನಾಗಿರುತ್ತಾನೆ ಅಂತ ಅರ್ಥ. ಪಕ್ಕದ ಮನೆಯಲ್ಲಿ ಗಲಾಟೆ ಆಗ್ತಾ ಇದ್ರೆ,ನಮ್ಮ ಮನೆಯಲ್ಲೂ ಇಂಥಹದ್ದೊಂದು ನಡೆಯಬಹುದು ಅಂಥಾ ವಿಚಾರ ಮಾಡುವ ಬದಲು, ಅದನ್ನು ಧಾರಾವಾಹಿ ತರಹ ನೋಡೋ ನಮ್ಮ ಜನರಿಗೆ ಹೇಳಿ ಮಾಡಿಸಿದ್ದು ಈ ಸೈಟ್‍ಗಳು. ಗೊತ್ತಿರುವ ಫ್ರೇಂಡ್ ದಿನಾ ಮೆಸೇಜ್ ಮಾಡ್ತಾ ಇದ್ರೂ ಒಂದು ಮೆಸೇಜ್ಗೂ ರೀಪ್ಲೆ ಕೊಡೊದಿಲ್ಲಾ ಆದ್ರೆ ಗೋತ್ತಿಲ್ಲದೇ ಇರೋ ನಂಬರಿಂದ ಒಂದು ಮೆಸೇಜ್ ಬಂದ್ರೆ ಸಾಕು,ಯಾರು ನೀವೂ? ಯಾವ ಊರು? ನನ್ನ ಪರಿಚಯ ಉಂಟಾ? ಅಂತಾ ನೂರಾರು ಮೆಸೇಜ್ ಕಳಿಸ್ತೀವಿ. ಇರುವುದೆಲ್ಲವ ಬಿಟ್ಟು,ಇಲ್ಲದುದರೆಡೆಗೆ ತುಡಿವುದೇ ಜೀವನ ಅನ್ನೋ ಮಾತ್ತನು ನಮ್ಮ ಯುವಜನತೆ ಸ್ವಲ್ಪ ಜಾಸ್ತಿಯಾಗಿ ಅರ್ಥ ಮಾಡಿಕೊಂಡಿರುವ ಹಾಗೆ ಕಾಣ್ತಿದೆ. ಈಗಿನ ಜನರೇಶನ್ಗೆ ಪರಿಚಯ ಇರುವವರ ಬದಲು,ಪರಿಚಯ ಇಲ್ಲದೇ ಇರುವವರ ಬಗ್ಗೆ ತಿಳಿದುಕೊಳ್ಳಲಿಕ್ಕೆ ತುಂಬಾ ಉತ್ಸಾಹ. ಇದನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡವನು ಮಾರ್ಕ ಜುಕರ್ ಬರ್ಗ ಅನ್ನೋ ಮಹಾನ್ ಮಾಂತ್ರಿಕ. ಫೇಸ್‍ಬುಕ್ ಅಷ್ಟು ದೊಡ್ಡದಾಗಿ ಬೆಳೆಯಲಿಕ್ಕೆ ಮುಖ್ಯ ಕಾರಣವೇ. ಪರಿಚಯ ಇಲ್ಲದವರನ್ನೂ ತನ್ನ ಫ್ರೇಂಡ್ ಲಿಸ್ಟಗೆ ಸೇರಿಸಿಕೊಳ್ಳಲಿಕ್ಕೆ ಅದು ನೀಡಿರುವ ಅವಕಾಶ. ಈ ಇಂಟರ್ನೆಟ್ ಪ್ರಪಂಚದಲ್ಲಿ ಅತ್ಯಂತ ಹೆಚ್ಚುಕಾಲ ಕಳೆಯುತ್ತಿರುವವರಲ್ಲಿ ಯುವ ಜನತೆಯೇ ಹೆಚ್ಚು. ಈಗಿನ ಕಾಲದ ಮಕ್ಕಳು ವೋಟರ್ ಐಡಿ ಮಾಡೋ ಮುಂಚೆ ಫೇಸ್‍ಬುಕ್ ಐಡಿ ಮಾಡ್ತಾರೆ.
ಈ ಸೋಶಿಯಲ್ ನೆಟವರ್ಕಿಂಗ್ ಸೈಟ್‍ಗಳಲ್ಲಿ ಪ್ರತಿದಿನಾ ಹೊಸ ಹೊಸ ಪ್ರೇಮಕಥೆಗಳು ಹುಟ್ಟುತ್ತಾ ಇರುತ್ತವೆ, ಸಾಯ್ತಾ ಇರುತ್ತವೆ. ಹಾಯ್ ನಿಂದ ಸ್ಟಾರ್ಟ ಆಗುವ ಪ್ರೇಮಕಥೆಗಳು ಕೆಲವು ಸಾರಿ ಮದುವೆ ಮಂಟಪದಲ್ಲಿ ಕೊನೆ ಆಗಿದ್ದರೆ. ಇನ್ನೂ ಕೆಲವು ಸಾರಿ ಪೋಲಿಸ್ ಸ್ಟೇಷನ್‍ನಲ್ಲಿ ಕೊನೆ ಆಗಿದ್ದೂ ಇದೆ. ನನ್ನ ಫ್ರೇಂಡ್ ಒಂದು ಮಾತು ಹೇಳ್ತಾ ಇದ್ದ ಫೇಸ್‍ಬುಕ್‍ನಲ್ಲಿ ಗೊತ್ತಿಲ್ಲದೇ ಇರೋ ಹುಡುಗಿಯರಿಗೆ, ಗೊತ್ತಿರುವ ಹುಡುಗರಿಗೆ ಫ್ರೇಂಡ್‍ರಿಕ್ವೆಸ್ಟ್ ಕಳಿಸಬೇಕಂತೆ.
ಅತೀಯಾಗಿ ಬೆಳೆಯುತ್ತಿರುವ ಸಾಮಾಜಿಕ ಜಾಲತಾಣಗಳ ಹುಚ್ಚಿನಿಂದ ಯುವ ಜನತೆ ಎಲ್ಲೋ ಕಳೆದು ಹೋಗ್ತಾ ಇದೆ. ಆಟದ ಮೈದಾನಗಳಲ್ಲಿ ಮಕ್ಕಳನ್ನು ಕಾಣ್ತಾ ಇಲ್ಲಾ. ಬಸ್ಸಿನಲ್ಲಿರಲಿ, ಚಿತ್ರಮಂದಿರದಲ್ಲಿರಲಿ, ತರಗತಿಯಲ್ಲಿರಲಿ ತಲೆಬಗ್ಗಿಸಿಕೊಂಡಿರುವವರನ್ನು ಜಾಸ್ತಿ ಕಾಣ್ತಾ ಇದ್ದೇವೆ. ಫೇಸ್‍ಬುಕ್‍ನಲ್ಲಿ ಮದರ್ ಡೇ ದಿನಾ ತಾಯಿ ಪೋಟೋ ಹಾಕಿ "ಐ ಲವ್ ಯು ಮಾಮ್" ಅಂತಾ ಸ್ಟೇಟಸ್ ಅಪ್‍ಡೇಟ್ ಮಾಡ್ತಾರೆ ಆದ್ರೇ ಮನೆಯಲ್ಲಿ ತಂದೆ ತಾಯಿಗೆ ಗೌರವ ಕೊಡುವುದಿಲ್ಲಾ. ಪ್ರೀತಿ ವಿಷಯದಲ್ಲಿ ವಂಚನೆಗಳು ದಿನಾ ದಿನಾ ನಡೀತಾನೆ ಇರುತ್ತವೆ. ಸಾಮಾಜಿಕ ಜಾಲತಾಣಗಳ ಪರಿವೇ ಇಲ್ಲದ ಪೋಷಕರಿಗೆ ಮಕ್ಕಳು ಕಣ್ಣಿಗೆ ಮಣ್ಣು ಎರೆಚ್ಚುತ್ತಾ ಇರುತ್ತಾರೆ. ಯಾವುದಾದರು ಸ್ಥಳಕ್ಕೆ ಮನೆಯವರ ಜೊತೆ ಹೋದ್ರೆ ಪೋಟೋ ತೆಗೆಯೋದರಲ್ಲಿ, ಸ್ಟೇಟಸ್ ಅಪಡೇಟ್ ಮಾಡೋದರಲ್ಲೇ ಬ್ಯುಸಿಯಾಗಿರುತ್ತಾರೆ. ಮನೆಯವರನ್ನೇ ಅಪರಿಚಿತರ ಹಾಗೆ ಕಾಣ್ತಾರೆ, ಈಗಿನ ಯುವಜನತೆಗೆ ಮಾತು ಮರೆತು ಹೋಗಿದೆ,ಕೈ ಬೆರಳಲ್ಲೇ ಮಾತನಾಡಲಿಕ್ಕೆ ಆರಂಭಿಸಿದ್ದಾರೆ.
ಹಾಗಂತಾ ಈ ಸಾಮಾಜಿಕ ಜಾಲತಾಣಗಳು ಕೇವಲ ಕೆಡುಕೇ ಅಂತಾ ಅಲ್ಲ. ಇವುಗಳಿಂದ ಒಳ್ಳೆಯದೂ ಇದೇ. ಪ್ರಪಂಚದ ನಾನಾ ಮೂಲೆಗಳಲ್ಲಿ ನಡೆಯುವ ವಿಷಯಗಳು ಅತ್ಯಂತ ವೇಗವಾಗಿ ನಮ್ಮ ಕೈ ಸೇರುತ್ತವೆ. ನಾನಾ ಕಡೆಗಳಲ್ಲಿ ನೆಲೆಸಿರುವ ನಮ್ಮವರೊಂದಿಗೆ ತುಂಬಾ ವೇಗವಾಗಿ ಸಂಪರ್ಕ ಬೆಳೆಸಬಹುದು. ಉತ್ತಮವಾದ ಫೇಜ್‍ಗಳನ್ನು ಲೈಕ್ ಮಾಡುವುದರಿಂದ, ಆ ಫೇಜ್ಗಳು ಹಾಕುವ ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳಬಹುದು.
ಅತಿಯಾದರೆ ಅಮೃತವು ವಿಷ ಅಂತೆ. ಹಾಗಾಗಿ ಇವುಗಳನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸಿದರೆ ಉತ್ತಮ. ಪ್ರತಿಯೊಬ್ಬರಿಗೂ ಇಂಟರ್ನೆಟ್ ಪ್ರಪಂಚವಲ್ಲದೇ ಹೊರಗಡೆ ಒಂದು ಸುಂದರವಾದ ಪ್ರಪಂಚವಿದೆ. ಆ ಪ್ರಪಂಚದ ಪಾಸವರ್ಡ ತಿಳಿದುಕೊಂಡು ಅಲ್ಲಿಯೂ ಸ್ವಲ್ಪ ಹೊತ್ತು ಕಾಲ ಕಳೆಯೊದರ ಬಗ್ಗೆ ಯೋಚನೆಮಾಡಿ....
-ಬರ್ವೆ
Comments
Post a Comment