ನೀ ಬರದ ಹಾದಿಯಲಿ ಒಬ್ಬನೇ ಸಾಗಿರುವೆ...

         
          ನಮಸ್ಕಾರ ನನ್ನ ಹೆಸರು ಸುಹಾಸ್ ಅಂತಾ ನಾನು ಹೇಳಲಿಕ್ಕೆ ಹೊರಟಿರೋದು ನನ್ನ ಲೈಫ್ ಅಲ್ಲಿ ಹೀಗೆ ಬಂದು ಹಾಗೆ ಹೋದ ಒಂದು ಸಣ್ಣದಾದ, ಸುಂದರವಾದ ಲವ್ ಸ್ಟೋರಿ ಅಲ್ಲಾ ಅಲ್ಲಾ ಲೈಫ್ ಸ್ಟೋರಿ. ಅವತ್ಯಾಕೋ ಆಫೀಸಿನಲ್ಲಿ ಕೈ ತುಂಬಾ ಕೆಲಸಗಳು ಇದ್ರು ಮಾಡಲಿಕ್ಕೆ ಮನಸ್ಸು ಇರಲಿಲ್ಲಾ. ಮನಸ್ಸಿನಲ್ಲಿ ಏನೋ ತಳ-ಮಳ,ಇನ್ನೂ ಕಾಲ ಮಿಂಚಿಲ್ಲ ಅನ್ನೋ ಭಾವನೆ. ಸಂಜೆ ಆಗೋ ತನಕ ಕಾದು,ಮನಸ್ಸನು ಸ್ವಲ್ಪ ಶಾಂತ ಮಾಡಿಕೊಳ್ಳೋಣ ಆಂತಾ ಸಮುದ್ರದ ಕಡೆಗೆ ಹೋದೆ. ಯಾಕಂದ್ರೇ ನಾಳೆ ನನ್ನ ಹುಡುಗಿ ಮದುವೆ ಆದ್ರೆ ಹುಡುಗ ಮಾತ್ರ ನಾನಲ್ಲ.

          ನಾನು ಮತ್ತು ಅವಳು ಒಂದೇ ಕಂಪೆನಿಯಲ್ಲಿ ಕೆಲಸ ಮಾಡ್ತಾ ಇರೋದು. ಸ್ನೇಹ ಮೊದಲಿನಿಂದಲೂ ಇಬ್ಬರ ನಡುವೆ ಇತ್ತು. ಆದ್ರೆ ಅದು ಪ್ರೀತಿಗೆ ತಿರುಗಿದ್ದೇ ಒಂದು ಅದ್ಭುತ. ಶುಕ್ರವಾರ ಸಂಜೆ ಅಮ್ಮನ ನೆನಪಾಗುತ್ತೆ ಅಂತಾ ಮನೆಗೆ ಹೋಗ್ತಾ ಇದ್ದವಳು. ತಿರುಗಿ ಬರುತ್ತಾ ಇದ್ದಿದ್ದು ಸೋಮವಾರ ಬೆಳಗ್ಗೆ. ಅವಳು ಬರುತ್ತಿದ್ದ ರೈಲು ಬೆಳ್ಳಂಬೆಳ್ಳಗೆ 4 ಗಂಟೆಗೆ ಸ್ಟೇಷನ್ಗೆ ಬರುತ್ತಾ ಇತ್ತು. ಪಾಪ ಅವ್ಳೊಬ್ಬಳಿಗೆ ಅವಳ ಪಿಜಿಗೆ ಹೋಗಲಿಕ್ಕೆ ಭಯ. ಹಾಗಾಗಿ ನನಗೆ ಹಿಂದಿನ ದಿನವೇ ಪೋನ್ ಮಾಡಿ ಸ್ಟೇಷನ್ಗೆ ಬರಲಿಕ್ಕೆ ಸಂಕೋಚ ಆದ್ರು ಹೇಳ್ತಾ ಇದ್ಲು. ನಾನು ಬೆಳ್ಳಗೆ 3 ಗಂಟೆಗೆ ಎದ್ದು ಹೋಗ್ತಾ ಇದ್ದೆ. ನನ್ನ ಜೊತೆ ಒಂದು ಬೀದಿ ನಾಯಿ ಕೂಡ ಬರುತ್ತಿತ್ತು ಅದಕ್ಕೆ ಬಿಸ್ಕೆಟ್. ಹಾಕ್ಕೊಂಡು ಇರುತ್ತಿದ್ದೆ. ಟ್ರೈನ್ ಬಂದ ಮೇಲೆ ಇಬ್ಬರೂ ಮಾತಾಡಿಕೊಂಡು ಅವಳ ಪಿಜಿ ತನಕ ಹೋಗ್ತಾ ಇದ್ವಿ. ಹೀಗೆ ತುಂಬಾ ವಾರಗಳ ಕಾಲ ನಡಿತು. ಒಂದು ದಿನಾ ನನ್ನ ರೂಮ್ ಮೇಟ್ ಕೇಳಿಯೇ ಬಿಟ್ಟ, ಅಲ್ಲಾ ಒಂದು ಹುಡುಗಿ ಕರೆದ್ಲು ಅಂತಾ ಬೆಳ್ಳಗಿನ ಜಾವದ ಒಳ್ಳೆಯ ನಿದ್ದೆ ಬಿಟ್ಟು ಹೋಗ್ತಿ ಅಲ್ಲಾ, ಅವಳು ನಿನಗೆ ಏನು ಅಂತಾ. ಹೌದು, ನಾನು ಯೋಚನೆಗೆ ಕುಳಿತೆ, ಅವಳು ನನಗೆ ಏನು?

          ಇಬ್ಬರ ನಡುವೆ ಇದ್ದ ಸ್ನೇಹ, ಪ್ರೀತಿಗೆ ಯಾವಾಗ ತಿರುಗಿತೋ ಗೊತ್ತಾಗಲಿಲ್ಲಾ. ಬರುತ್ತಾ ಬರುತ್ತಾ ಅವಳ ಜೊತೆ ತುಂಬಾ ಸಮಯ ಕಳೆಯೊದಕ್ಕೆ ಶುರುಮಾಡಿದೆ. ಅವಳ ಜೊತೆ ಮಾತನಾಡಲಿಕ್ಕೆ ನನ್ನ ಮನಸ್ಸು ಕಾಯ್ತಾ ಇತ್ತು. ಅವಳ ಮುದ್ದಾದ ನಗು ನನ್ನನ್ನು ಕೊಲ್ತಾ ಇತ್ತು. ಅದು ಅವಳಿಗು ತಿಳಿತ್ತಿತ್ತು ಅನಿಸುತ್ತೆ ಆದ್ರೂ ಏನೂ ಹೇಳ್ತಾ ಇರಲಿಲ್ಲಾ. ಬಹುಷಃ ಅವಳಿಗೂ ನನ್ನ ಮೇಲೆ ಅದೇ ರೀತಿ ಇದ್ದಿರಬಹುದೋ ಏನೋ. ಈ ಹುಡುಗಿಯರು ತುಂಬಾ ಚಾಲಾಕಿಗಳು ಕಂಡ್ರಿ, ಅವರ ಮನಸ್ಸಿನಲ್ಲಿ ಏನಿದೆ ಅಂತಾ ತಿಳಿದುಕೊಳ್ಳೋದು ತುಂಬಾ ಕಷ್ಟ. ಏಲ್ಲಾ ಹುಡುಗರು ಬಯಸೋದು ತಾನು ಇಷ್ಟ ಪಟ್ಟಿರೋ ಹುಡುಗಿ ತಾನಾಗೇ ಬಂದು ಪ್ರೇಮ ನಿವೇದನೆ ಮಾಡಲಿ ಅಂತಾ. ಆದರೆ ಅಲ್ಲಿ ತನಕ ತಮ್ಮ ಮನದ ಭಾವನೆಗಳನ್ನು ಹಿಡಿದು ಇಟ್ಟುಕೊಳ್ಳಲಿಕ್ಕೆ ಯಾವ ಹುಡುಗನು ತಯಾರಿರೋಲ್ಲಾ. ನಾನು ಕೂಡ ನನ್ನ ಮನಸ್ಸಿನಲ್ಲಿರೋದನ್ನು ಅವಳ ಹತ್ರ ಹೇಳೋದಕ್ಕೆ ಸರಿಯಾದ ಸಮಯಕ್ಕಾಗಿ ಕಾಯ್ತಾ ಇದ್ದೆ.
       
          ಒಂದು ದಿನಾ ನಾನು ಮತ್ತು ಅವಳು ಮಾತನಾಡುತ್ತಿರಬೇಕಾದ್ರೆ ಒಂದು ದುಂಬಿ ಅವಳಿಗೆ ಬೆಂಬಿಡದೇ ಸುತ್ತಾಡುತ್ತಾ ಇತ್ತು. ನಾನು ಅದೇ ಸಮಯವನ್ನು ಬಳಸಿಕೊಂಡು "ನಾನು, ಇದೇ ತರಹ ಜೀವನ ಪೂರ್ತಿ ನಿನ್ನ ಸುತ್ತಾ ಸುತ್ತುತ್ತಾ ಇರಬೇಕು" ಅಂತಾ ಹೇಳಿಯೇ ಬಿಟ್ಟೆ, ಏನು ಹೇಳ್ತಾಳೋ ಅನ್ನೋ ಭಯ ಆದ್ರೆ ಅವಳು ಏನೂ ಹೇಳದೇ ಹೋದ್ಲು. ಮರುದಿನಾ ಆಫೀಸ್ಗೆ ಹೋಗಲಿಕ್ಕೆ ಏನೋ ಭಯ. ಏನಾಗತೋ ಏನೋ ಅನ್ನೋ ಆತಂಕ. ಆದ್ರೆ ಅವಳ ಉತ್ತರವೇ ಬೇರೆ ಆಗಿತ್ತು. ಅವಳು ಹೇಳಿದ್ಲು "ನನಗೆ ನೀನಂದ್ರೆ ಇಷ್ಟಾನೇ, ಆದ್ರೆ ನಮ್ಮ ಮದುವೆ ಸಾಧ್ಯ ಇಲ್ಲಾ, ಯಾಕಂದ್ರೇ ಪ್ರೀತಿ ಅನ್ನೋ ವಿಷಯದಲ್ಲಿ ನಮ್ಮ ಮನೆಯವರ ಮನಸ್ಸನ್ನು ನೋವಿಸಲಿಕ್ಕೆ ನನಗೆ ಇಷ್ಟ ಇಲ್ಲಾ ನಿನಗೆ ನನ್ನಕ್ಕಿಂತ ಒಳ್ಳೇ ಹುಡುಗಿ ಸಿಕ್ತಾಳೆ ಚಿಂತೆಮಾಡಬೇಡ" ಅಂದಳು.

          ಇವಳೇ ಹೋದ ಮೇಲೆ ಇನ್ಯಾವ ಹುಡುಗಿ ಸಿಕ್ಕರೆಷ್ಟು, ಬಿಟ್ಟರೆಷ್ಟು ಮದುವೆಗೆ ಹುಡುಗನಿಗೆ ಉದ್ಯೋಗ ಇದ್ಯಾ, ಚೆಂದ ಇದಾನಾ, ಲೈಪ್ ನಲ್ಲಿ ಸೆಟಲ್ ಆಗಿದಾನಾ ನೋಡ್ತಾರೆ. ಆದ್ರೆ ಇವೆಲ್ಲಾ ನನಗಿದ್ರು ನನ್ನ ಹುಡುಗಿ ನನಗೆ ಸಿಕ್ಕಲಿಲ್ಲಾ. ಮನಸ್ಸು ಮಾಡಿದ್ರೆ ಅವಳ ಮನೆಯವರನ್ನು ಒಪ್ಪಿಸೋದು ಅವಳಿಗೆನು ಕಷ್ಟ ಇರಲಿಲ್ಲಾ. ಆದ್ರೆ ಅವಳು ಮನಸ್ಸು ಮಾಡಲಿಲ್ಲಾ, ಅವಳು ಮನೆಯವರು ತೋರಿಸಿದ ಹುಡುಗನನ್ನೇ ಮದುವೆ ಆಗೋದು ಅಂತಾ ನಿರ್ಧಾರ ಮಾಡಿ ಬಿಟ್ಟಿದ್ಲು. ಅವಳದ್ದು ತಪ್ಪಿದೆ ಅಂತಾ ನಾನೇನು ಹೇಳ್ತಾ ಇಲ್ಲಾ. ಒಟ್ಟಿನಲ್ಲಿ ನನ್ನ ಹಣೆಲೀ ಅವಳ ಹೆಸರು ಬರೀಲಿಲ್ಲಾ ಅಷ್ಟೇ. ನಾಳೆ ಮದುವೆಗೆ ಕರೆದಿದ್ದಾಳೆ, ಆದ್ರೆ ನನ್ನ ಜಾಗದಲ್ಲಿ ಬೇರೆಯವನನ್ನು ನೋಡೋಕೆ ಇಷ್ಟ ಪಡೋ ಅಷ್ಟು ಒಳ್ಳೆ ಹುಡುಗ ನಾನಲ್ಲಾ.


-ಬರ್ವೆ


Comments

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ

ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)